ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಬೇಡ, ಬಿ.ಎ. ಪದವಿಗೂ ಭಾಗ್ಯವುಂಟು!

Last Updated 13 ನವೆಂಬರ್ 2018, 19:30 IST
ಅಕ್ಷರ ಗಾತ್ರ

ದೇಶದ ಪ್ರಗತಿಗೂ ವಿಜ್ಞಾನಕ್ಕೂ ವಾಣಿಜ್ಯಕ್ಕೂ ಸಂಬಂಧವಿದೆ ಎಂಬ ಸಾಮಾನ್ಯ ಗ್ರಹಿಕೆಯಿದೆಯಷ್ಟೆ. ಶಿಕ್ಷಣವೂ ಪ್ರಗತಿಗೆ ಮೂಲ ಎಂಬ ಅಭಿಪ್ರಾಯ ಗಟ್ಟಿಯಾದಾಗ ಸಹಜವಾಗಿಯೇ ವಿಜ್ಞಾನ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದ ಪದವಿಗಳು ಹೆಚ್ಚು ಬೇಡಿಕೆಗೆ ಬರುವಂತಾದವು. ತಾಂತ್ರಿಕ ವಿಭಾಗಗಳು ಪ್ರಾಮುಖ್ಯ ಪಡೆದವು.

ಎಂಜಿನಿಯರಿಂಗ್, ವೈದ್ಯಕೀಯ, ವಾಣಿಜ್ಯೋದ್ಯಮದಂತಹ ಕೋರ್ಸುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಿತು. ಇದಕ್ಕೆ ಸಮಾನಂತರವಾಗಿ ವಿಜ್ಞಾನೇತರ ಕೋರ್ಸುಗಳಿಗೆ ಅಥವಾ ಶಿಸ್ತುಗಳಿಗೆ, ಉದಾಹರಣೆಗೆ ಚರಿತ್ರೆ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ದೇಶೀಭಾಷೆಗಳು – ಇತ್ಯಾದಿಗಳಿಗೆ ಬೇಡಿಕೆ ಕುಸಿಯತೊಡಗಿತು.

2000 ಇಸವಿಯ ಸಮಯಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯು ಪಿ.ಯು.ಸಿ. ಅಥವಾ ಅದಕ್ಕೆ ಸಮಾನಾಂತರವಾದ ಹನ್ನೆರಡನೇ ತರಗತಿಯಲ್ಲಿ ಉತ್ತೀರ್ಣನಾದ ನಂತರ ಇದ್ದದ್ದು ಎರಡೇ ವಿಭಾಗಗಳು – ಎಂಜಿನಿಯರಿಂಗ್ ಅಥವಾ ಮೆಡಿಕಲ್‌. ವಿಪರ್ಯಾಸವೆಂದರೆ ಈ ತರಹದ ಬೆಳವಣಿಗೆಯಲ್ಲಿ ವಿಷಯಗಳ ಬಗ್ಗೆ ವಿದ್ಯಾರ್ಥಿಯ ಒಲವು, ಯೋಗ್ಯತೆಯನ್ನು ಕುರಿತು ಎಲ್ಲೂ ಆಸ್ಪದವಿರಲಿಲ್ಲ. ಪಿ.ಯು.ಸಿ. ನಂತರ ತಾಂತ್ರಿಕ ಕೋರ್ಸುಗಳಿಗೆ ಹೋಗುವುದು ಒಂದು ಯಾಂತ್ರಿಕ ಕ್ರಿಯೆಯಾಗಿ ಮಾರ್ಪಾಟಾಯಿತು.

ತೊಂಬತ್ತರ ದಶಕದಲ್ಲಿ, ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಈ ಯಾಂತ್ರಿಕ ಪ್ರಕ್ರಿಯೆ ಮತ್ತಷ್ಟು ತೀವ್ರವಾಯಿತು. ಉದಾಹರಣೆಗೆ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಮತ್ತಾವುದೇ ವಿಭಾಗಗಳಿಂತ ಹೆಚ್ಚು ಪ್ರರ್ವಧಮಾನ ಸ್ಥಿತಿಯಲ್ಲಿದ್ದದ್ದು ಮಾಹಿತಿ ತಂತ್ರಜ್ಞಾನ ಅಥವಾ ಇನ್‌ಫರ್‌ಮೇಷನ್‌ ಟೆಕ್ನಾಲಜಿಗೆ ಸಂಬಂಧಿಸಿದ ಕೋರ್ಸುಗಳ ಈ ತರದ ಪ್ರಕ್ರಿಯೆ ಕ್ರಮೇಣವಾಗಿ 21ನೇ ಶತಮಾನದ ಹೊತ್ತಿಗೆ ಬದಲಾಗಲು ಪ್ರಾರಂಭವಾಯಿತು. ಮೊದಲನೆಯದಾಗಿ, ‘ಬೇರೆ ರೀತಿಯ ಶಿಸ್ತುಗಳಿವೆ, ವಿಭಾಗಗಳಿವೆ’ – ಎಂಬ ಅರಿವು ಮತ್ತು ‘ಇವು ಕೂಡ ತಾಂತ್ರಿಕ ಕೋರ್ಸುಗಳಷ್ಟೇ ಲಾಭದಾಯಕ, ಇವುಗಳಿಂದ ವೃತ್ತಿಗಳಿಗೆ ಸಾಧ್ಯ’ ಎಂಬ ವಿಶ್ವಾಸ ಹರಡತೊಡಗಿತು. ಇದಕ್ಕೆ ಮುಖ್ಯ ಕಾರಣ ಜಾಗತೀಕರಣ ಮತ್ತು ಉದಾರೀಕರಣ. ಇವೆರಡರ ಪ್ರಮುಖ ಕೊಡುಗೆಗಳೆಂದರೆ ತಾಂತ್ರಿಕ ಶಿಕ್ಷಣದಾಚೆಗೂ ವೃತ್ತಿ ಅವಕಾಶಗಳನ್ನು ಒದಗಿಸಿದ್ದು. ಅಷ್ಟೇ ಅಲ್ಲದೆ ಹತ್ತು ಹಲವಾರು ರೀತಿಯ ಉದ್ಯೋಗಗಳನ್ನು ಕಲ್ಪಿಸಿದ್ದು. ಉದಾಹರಣೆಗೆ ಚಿಕ್ಕ ಮತ್ತು ಬೃಹತ್ ವ್ಯಾಪಾರಗಳು, ಜಾಹೀರಾತು, ಸಂವಹನ ಮಾಧ್ಯಮ, ಜಾಹೀರಾತುಗಳಿಗೆ ಬೇಕಾದ ಸಂಗೀತ, ವಸ್ತ್ರವಿನ್ಯಾಸ ಇತ್ಯಾದಿಗಳೆಲ್ಲ ಹೊಸ ದಾರಿಗಳನ್ನು ಕಲ್ಪಿಸಿದವು.

ಇವುಗಳಿಗೆ ಸಂಬಂಧಪಟ್ಟ ಪೂರಕ ಬೆಳವಣಿಗೆ ಎಂದರೆ, ಮೊದಲನೆಯದಾಗಿ ಬಹುತೇಕವಾಗಿ ಇವುಗಳಿಗೆ ಇಂತಹುದೇ ಎಂಬ ನಿರ್ದಿಷ್ಟ ಪದವಿ ಆಧಾರಿತ ಕೋರ್ಸುಗಳಿಲ್ಲ. ಎರಡನೆಯದಾಗಿ ಹಾಗೊಂದು ಪಕ್ಷ ಇದಾಗ್ಯೂ, ಉದಾಹರಣೆಗೆ ವಸ್ತ್ರವಿನ್ಯಾಸಕ್ಕೆ ಫ್ಯಾಷನ್ ಡಿಸೈನಿಂಗ್, ಸಂವಹನಕ್ಕೆ ಜರ್ನಲಿಸಂ ಅಥವಾ ಮೀಡಿಯಾ ಸ್ಟಡೀಸ್‌ನಂತಹ ಶಿಸ್ತುಗಳಲ್ಲಿ ಇದ್ದರೂ, ಪುನಃ ಕಡೇ ಪಕ್ಷ 3ರಿಂದ 4 ತಿಂಗಳ ಕಾಲ ತರಬೇತಿಯನ್ನೂ ಕೊಡಿಸಲಾಗುತ್ತದೆ.

ಮತ್ತೊಂದು ಬದಲಾವಣೆ ಎಂದರೆ 1990 ದಶಕದ ನಂತರ ಬಹುತೇಕ ಎಲ್ಲ ವೃತ್ತಿರಂಗಗಳಲ್ಲೂ ತಾಂತ್ರಿಕ ಹಾಗೂ ತಾಂತ್ರಿಕವಲ್ಲದ ಎರಡು ತರಹದ ಉದ್ಯೋಗಶಾಖೆಗಳು ಬಂದವು. ತಾಂತ್ರಿಕವಾದ್ದದ್ದಕ್ಕೆ ಸಂಬಂಧಪಟ್ಟ ಪದವಿಗಳಿದ್ದರೆ, ತಾಂತ್ರಿಕವಲ್ಲದ್ದಕ್ಕೆ ಬಹು ಮುಖ್ಯವಾಗಿ ಬೇಕಾಗಿರುವುದು, ಸ್ಪಷ್ಟವಾಗಿ ಬರೆಯುವ ಕಲೆ ಹಾಗೂ ಮಾತನಾಡುವ ಚಾತುರ್ಯ – ರೈಟಿಂಗ್ ಮತ್ತು ಕಮ್ಯೂನಿಕೇಷನ್ ಸ್ಕಿಲ್‌. ಈ ಅವಶ್ಯಕತೆಗಳಿಗೆ ಯಾವ ಪದವಿ ಕೋರ್ಸುಗಳೂ ಜೋಡಣೆಯಾಗಿಲ್ಲ. ಹಾಗಿದ್ದಾಗ ಯಾವ ಶೈಕ್ಷಣಿಕ ವಿಭಾಗಗಳು, ಕೋರ್ಸುಗಳು ಇವನ್ನು ಪೂರೈಸುತ್ತವೆಯೋ ಅವುಗಳಿಗೆ ಬೇಡಿಕೆ ಹುಟ್ಟಿವೆ. ಆ ತರಹದ ಕೋರ್ಸುಗಳ ಕಡೆ ಕಣ್ಣು ಕಡೆ ಕಣ್ಣು ಹಾಯಿಸಿದರೆ ಆಶ್ಚರ್ಯವಾಗುತ್ತದೆ.

ಸಾಮಾನ್ಯವಾಗಿ ಬಿ.ಎ., ಬಿ.ಎಸ್‌ಸಿ. ಪದವಿಗಳು ಈ ಪಟ್ಟಿಯಲ್ಲಿ ಸೇರುತ್ತವೆ. ಮುಖ್ಯವಾಗಿ ಬಿ.ಎ. ಕೋರ್ಸ್‌ಗಳ ಜೀವಾಳವೇ ಬರೆಯುವ, ಮಾತನಾಡುವ, ತಾರ್ಕಿಕವಾಗಿ ಯೋಚನೆ ಮಾಡುವ ಸಾಮಾಜಿಕ, ರಾಜಕೀಯ ಪರಿಸರದ ಬಗ್ಗೆ ಅರಿವು ಮೂಡಿಸುವಂತಹದ್ದು. ಹೀಗಿದ್ದಾಗ ಇಂತಹ ಪದವೀಧರರಿಗೆ ಯಾವ ರೀತಿಯ ಉದ್ಯೋಗವಕಾಶಗಳಿವೆ ಎಂದು ಗಮನಿಸಿದರೆ ಹತ್ತು ಹಲವಾರು ಕ್ಷೇತ್ರಗಳು ಆಗುತ್ತವೆ. ಇವುಗಳನ್ನು ಸೂಲ್ಥವಾಗಿ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಇನ್ನಿತರ ಕ್ಷೇತ್ರಗಳು ಎಂದು ವಿಭಾಗಿಸಬಹುದು. ಶೈಕ್ಷಣಿಕ ವಿಭಾಗದಲ್ಲಿ ಸರಿ ಸುಮಾರು ಪರಿಚಯವಿರುವ ಉದ್ಯೋಗವೆಂದರೆ ಬೋಧನೆ ಮತ್ತು ಸಂಶೋಧನೆ.

ಬೋಧಕರಾಗುವುದಕ್ಕೆ ಆಯಾ ಶಿಸ್ತುಗಳಲ್ಲಿ ಸ್ನಾತಕೋತ್ತರ ಪದವಿ ಬೇಕಾಗುತ್ತದೆ. ಕೆಲವೊಮ್ಮೆ ಮತ್ತು ಕೆಲವು ವಿಶ್ವವಿದ್ಯಾಲಯಗಳಲ್ಲಿ ಆ ಶಿಸ್ತಿನಿಂದ ಬಂದಿರದಿದ್ದರೂ, ಸ್ನಾತಕೋತ್ತರ ಪದವಿಗೆ ಅವಕಾಶ ಉಂಟು. ಉದಾಹರಣೆಗೆ ನ್ಯಾಷನಲ್ ಮ್ಯೂಸಿಯಂ, ಇನ್ಸ್‌ಟಿಟ್ಯೂಟ್ ಹಿಸ್ಟರಿ ಆಫ್ ಆರ್ಟ್ ಎಂಬ ಕೋರ್ಸಿಗೆ ಬಿ.ಎ.ಯ ಬೇರೆ ಯಾವುದೇ ವಿಭಾಗದಿಂದ ಬಂದಿದ್ದರೂ ಅವಕಾಶವಿದೆ. ಮೌಖಿಕ ಇತಿಹಾಸ ಸಂರಕ್ಷಣೆ, ಮ್ಯೂಸಿಮಾಲಜಿ ಇತ್ಯಾದಿ ಸ್ನಾತಕೋತ್ತರ ಪದವಿಗಳಿಗೆ ಸಾಕಷ್ಟು ಉದ್ಯೋಗವಕಾಶಗಳು ಲಭ್ಯವಿವೆ. ಉದಾಹರಣೆಗೆ ಮೌಖಿಕ ಚರಿತ್ರೆಯನ್ನು ದಾಖಲಿಸಿ ಕೊಡುತ್ತವೆ. ಇಂತಹ ಸಂಸ್ಥೆಗಳಲ್ಲಿ ಆರ್ಟ್ ಪದವಿಧರಿಗೆ ಬೇಡಿಕೆ ಇದೆ. ಹಾಗೆಯೇ ‘ಥಿಂಕ್‌ ಟ್ಯಾಂಕ್‌’ ಸಂಸ್ಥೆಗಳು ಸರ್ಕಾರಕ್ಕೆ ನೀತಿಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತವೆ. ಇಂತಹ ಸಂಸ್ಥೆಗಳಲ್ಲಿ ಭಾರಿ ಬೇಡಿಕೆಯಲ್ಲಿರುವುದು – ಚರಿತ್ರೆ, ರಾಜಕೀಯ, ಆರ್ಥಿಕ ಹಾಗೂ ಸಮಾಜಶಾಸ್ತ್ರ ಪದವಿಧರರು. ಆಡಳಿತಾತ್ಮಕವಾಗಿ ಸರ್ಕಾರದ ವತಿಯಿಂದ ನಡೆಯಲ್ಪಡುವ ಕೇಂದ್ರ ಹಾಗೂ ರಾಜ್ಯ ಸಾರ್ವಜನಿಕ ಸೇವಾ ಆಯೋಗ ಪರೀಕ್ಷೆಗಳಿಗೆ ಕಲಾವಿಭಾಗದ ಪದವೀಧರರಿಗೆ ಸ್ಥಾನ ಇದೆ.

ಇವುಗಳಲ್ಲದೆ ಸಂವಹನ ಮಾಧ್ಯಮಗಳಲ್ಲಿ ಮುದ್ರಣಮಾಧ್ಯಮ, ವಿದ್ಯುನ್ಮಾನ ಮಾಧ್ಯಮ – ಪ್ರಿಂಟ್‌, ಎಲೆಕ್ಟ್ರಾನಿಕ್‌ ಹಾಗೂ ಆನ್‌ಲೈನ್ ಮೀಡಿಯಾಗಳಲ್ಲಿ ಬಹುತೇಕವಾಗಿ ಬಿ.ಎ. ವಿಭಾಗದ ಪದವೀಧರರಿಗೆ ಸ್ಥಾನವಿದೆ. ಜಾಹೀರಾತು ಕ್ಷೇತ್ರದಲ್ಲಿ ಕಾಫಿ ರೈಟಿಂಗ್, ಕಂಟೆಂಟ್ ರೈಟಿಂಗ್‌ ಮತ್ತು ಜಿಂಗಲ್ಸ್‌ಗಳಲ್ಲಿ ಕಲಾಪದವೀಧರರಿಗೆ ಸುಲಭ ಸಾಧ್ಯದಲ್ಲಿ ಸಿಗುವ ಅವಕಾಶಗಳು. ಆತಿಥ್ಯ – ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಉಸ್ತುವಾರಿ, ಫ್ರಂಟ್ ಡೆಸ್ಕ್ ವ್ಯವಸ್ಥಾಪಕರಾಗಿ ಅವಕಾಶಗಳು ಬಹಳ. ಪ್ರವಾಸೋದ್ಯಮದಲ್ಲಿ ಪರಂಪರೆ ಸಂರಕ್ಷಕರಾಗಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಬಹುದು. ಸ್ವಯಂಪ್ರೇರಿತ ಸಂಸ್ಥೆಗಳಲ್ಲಿ ಕಲಾವಿದ್ಯಾರ್ಥಿಗಳಿಗೂ ಸಾಕಷ್ಟು ಸ್ಥಳಾವಕಾಶವಿದೆ. ಫ್ಯಾಷನ್ ಉದ್ದಿಮೆಯಲ್ಲಿ ವಸ್ತ್ರ ಒಡವೆ ಇತರ ವಿನ್ಯಾಸಗಳಲ್ಲಿ ಸಲಹೆಗಾರರಾಗುವುದಕ್ಕೆ ಅವಕಾಶವಿದೆ. ಸಿನಿಮಾ ಮತ್ತು ಸಾಕ್ಷ್ಯಚಿತ್ರ ತಯಾರಿಕೆಗಳಲ್ಲಿ ತಾಂತ್ರಿಕ ವರ್ಗಗಳಲ್ಲಿ ಉದಾಹರಣೆ ಪ್ರೊಡಕ್ಷನ್ ಅಸಿಸ್ಟೆಂಟ್, ಸೆಟ್ ಅಸಿಸ್ಟೆಂಟ್‌, ಸಂಶೋಧನಾ ಸಹಾಯಕರಾಗುವ ಅವಕಾಶವಿದೆ. ಕಾರ್ಪೋರೇಟ್ ಸಂಸ್ಥೆಗಳಲ್ಲಿ ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಕೆಲಸ ನಿರ್ವಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT