ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಕಲಿಕೆ ಕಷ್ಟವಲ್ಲ: ಹಿಂಜರಿಯದೆ ಸರಳವಾಗಿ ಮಾತನಾಡಲು ಇಲ್ಲಿವೆ ಟಿಪ್ಸ್‌...

Last Updated 1 ಜನವರಿ 2020, 5:35 IST
ಅಕ್ಷರ ಗಾತ್ರ

ನಾವು ಪ್ರತಿನಿತ್ಯ ಹಲವಾರು ಸನ್ನಿವೇಶಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಬೇಕಾದ ಸಂದರ್ಭಗಳು ಬರುತ್ತವೆ. ಆಗ ಕೆಲವರಿಗೆ ಸರಾಗವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಲು ಹಿಂಜರಿಕೆ ಉಂಟಾಗಬಹುದು. ಆದರೆ ಎಲ್ಲ ಭಾಷೆಗಳಂತೆ ಇದೂ ಸಹ ಒಂದು ಭಾಷೆ. ಹೀಗಾಗಿ ಈ ಭಾಷೆಯಲ್ಲಿ ಕೂಡ ತೊಡಕಾಗದಂತೆ ಮಾತನಾಡಬಹುದು.

ನಮ್ಮ ಹಳ್ಳಿಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಎಲ್ಲ ರೀತಿಯ ಬುದ್ಧಿವಂತಿಕೆ, ಆಳವಾದ ವಿಷಯದ ಜ್ಞಾನ ಇದ್ದರೂ, ಎಷ್ಟೋ ಬಾರಿ, ಕೇವಲ ಇಂಗ್ಲಿಷ್ ಭಾಷೆಯಲ್ಲಿ ವಿಷಯಗಳನ್ನು ತಿಳಿಸಲು ಇರುವ ತೊಡಕಿನಿಂದ ಅವರು ಮುಖ್ಯವಾಹಿನಿಗೆ ಬರಲು ಕಷ್ಟಪಡುತ್ತಿರುತ್ತಾರೆ. ಆದರೆ, ಇಂಗ್ಲಿಷ್‌ನಲ್ಲಿ ಮಾತನಾಡುವುದು ನಿಜವಾಗಿಯೂ ಅಷ್ಟು ಕಷ್ಟವೇ? ಕ್ಲಿಷ್ಟವೇ?

ಇಂಗ್ಲಿಷ್ ಭಾಷಾ ಕಲಿಕೆಯು ನಿಜವಾಗಿಯೂ ಕಷ್ಟವಲ್ಲ. ಇಂಗ್ಲಿಷ್ ಭಾಷೆಯನ್ನು ಸರಿಯಾಗಿ ಕಲಿಯಬೇಕೆಂದರೆ..

-ಓದಬೇಕು

-ಬರೆಯಬೇಕು

-ಮಾತನಾಡಬೇಕು

-ಕೇಳಬೇಕು

ಓದಬೇಕು

ಸಾಧ್ಯವಾದಾಗಲೆಲ್ಲಾ ಇಂಗ್ಲಿಷ್ ಪುಸ್ತಕಗಳನ್ನೋ, ವಾರ್ತಾ ಪತ್ರಿಕೆಗಳನ್ನೋ ಓದಿ. ಇದರಿಂದ ಹೊಸ ಪದಗಳ ಪರಿಚಯವಾಗುತ್ತದೆ. ಬೇರೆ ಬೇರೆ ಸನ್ನಿವೇಶಗಳಲ್ಲಿ ಅವುಗಳ ಉಪಯೋಗಗಳನ್ನು ಹೇಗೆ ಮಾಡಬೇಕು ಎಂದು ತಿಳಿಯುತ್ತದೆ. ಓದುವಾಗ ಸಾಧ್ಯವಾದಲ್ಲಿ ಜೋರಾಗಿ ಓದಿ, ಆಗ ಅವುಗಳ ಸರಿಯಾದ ಉಚ್ಚಾರಣೆಯು ಸುಲಭವಾಗುತ್ತದೆ.

ಬರೆಯಬೇಕು

ಸಾಧ್ಯವಾದಾಗಲೆಲ್ಲಾ ಇಂಗ್ಲಿಷ್‌ನಲ್ಲಿ ಬರೆಯಿರಿ. ಬರೆದಾಗ, ಸರಿಯಾದ ರೀತಿಯ ವಾಕ್ಯ ಸಂರಚನೆ ಹಾಗೂ ವ್ಯಾಕರಣದ ಅಂಶಗಳು ತಿಳಿಯುತ್ತವೆ. ಆತ್ಮವಿಶ್ವಾಸವೂ ಹೆಚ್ಚುತ್ತದೆ.

ಕೇಳಬೇಕು

ಕೇಳಿಸಿಕೊಳ್ಳುವುದು ಒಂದು ಕಲೆ. ಸಾಧ್ಯವಿದ್ದಾಗಲೆಲ್ಲಾ ಇಂಗ್ಲಿಷ್‌ ಅನ್ನು ಸರಿಯಾಗಿ ಕೇಳಿಸಿಕೊಳ್ಳಿ. ಇದರಿಂದ ಪದಗಳ ಉಪಯೋಗ, ವಾಕ್ಯರಚನೆ, ವ್ಯಾಕರಣ, ಉಚ್ಚಾರಣೆ ಎಲ್ಲವೂ ತಿಳಿಯುತ್ತವೆ. ಕೇಳಿಸಿಕೊಂಡ ವಿಷಯಗಳನ್ನು ಮನಸ್ಸಿನಲ್ಲಿ ಇಂಗ್ಲಿಷ್‌ನಲ್ಲೇ ಮನನ ಮಾಡಿಕೊಳ್ಳಲು ಪ್ರಯತ್ನಿಸಿ.

ಮಾತನಾಡಬೇಕು

ಯಾವುದೇ ಭಾಷೆಯಲ್ಲಿ ಮಾತನಾಡಲು ಕಲಿಯಬೇಕೆಂದರೆ, ಮಾತನಾಡಲು ಪ್ರಾರಂಭಿಸಬೇಕು! ಮಾತನಾಡಲು ಪ್ರಯತ್ನಿಸಬೇಕು.

ನೀವು ಸರಿಯಾಗಿ ಪ್ರಯತ್ನಿಸಿದರೆ ಕೇವಲ ಹತ್ತು ದಿನಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಬಹುದು!

ಸರಳವಾಗಿ ಮಾತನಾಡಲು ಕಲಿಯಲು ಈ ಕೆಳಗಿನ ವಿಷಯಗಳನ್ನು ಗಮನಿಸಿ:

ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದನ್ನು ಹಲವಾರು ಭಾಷಾ ಆಟಗಳ ಸಹಾಯದಿಂದ ಕಲಿಯಬಹುದು.

ಎಲ್ಲಕ್ಕಿಂತ ಮೊದಲು, ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ವಿಷಯವನ್ನು ಸರಳವಾಗಿ ತೆಗೆದುಕೊಳ್ಳಿ. ಆತ್ಮವಿಶ್ವಾಸದಿಂದ ಮಾತನಾಡಿ. ಹಲವಾರು ಜನರಿಗೆ, ನಾವು ತಪ್ಪಾಗಿ ಮಾತನಾಡಿದರೆ ಯಾರಾದರೂ ನಗಬಹುದು, ತಪ್ಪು ತಿಳಿಯಬಹುದು ಎಂಬ ಹಿಂಜರಿಕೆಯೇ ಇಂಗ್ಲಿಷ್‌ನಲ್ಲಿ ಮಾತನಾಡುವುದಕ್ಕೆ ತೊಡಕಾಗುತ್ತದೆ. ಈ ಹಿಂಜರಿಕೆಯಿಂದ ಹೊರಬರಬೇಕೆಂದರೆ, ನೀವು ಕೇವಲ ಮೂರು- ನಾಲ್ಕು ವರ್ಷದ ಮಗುವೆಂದು ಭಾವಿಸಿ! ಹೊಸ ಭಾಷೆಯನ್ನು ಕಲಿಯುವಾಗ ಮಕ್ಕಳಿಗೆ ಯಾವ ಹಿಂಜರಿಕೆಯೂ ಇರುವುದಿಲ್ಲ ಅಲ್ಲವೇ? ಹಾಗೆಯೇ ನೀವೂ ಹಿಂಜರಿಕೆಯಿಂದ ಹೊರಬನ್ನಿ, ಬೇರೆಯವರು ನಗುವುದಕ್ಕೆ ಮೊದಲು ನೀವೇ ನಕ್ಕುಬಿಡಿ. ನೀವು ಇಂಗ್ಲಿಷ್‌ನಲ್ಲಿ ಮಾತನಾಡಲು ಕಲಿಯುತ್ತಿದ್ದೀರೆಂದು ಮೊದಲೇ ಬೇರೆಯವರಿಗೆ ಹೇಳಿಬಿಡಿ! ಅವರೂ ನಿಮಗೆ ಸಹಾಯ ಮಾಡಬಹುದು.

ನಿಮಗೇ ತಿಳಿಯದಂತೆ ಇಂಗ್ಲಿಷ್‌ನ ಹಲವಾರು ಪದಗಳನ್ನು ನೀವು ದಿನನಿತ್ಯ ಉಪಯೋಗಿಸುತ್ತಿರುತ್ತೀರಿ! ಆರಂಭದಲ್ಲಿ ಮಾತನಾಡಲು ಅಷ್ಟೇ ಪದಗಳು ಸಾಕಾಗಬಹುದಲ್ಲವೇ! ಈ ಕೆಲವು ಪದಗಳ ಸಹಾಯದಿಂದ ಮಾತನಾಡಲು ಪ್ರಾರಂಭಿಸಿ. ವ್ಯಾಕರಣ ಮತ್ತಿತರ ವಿಷಯಗಳನ್ನು ಮೊದ-ಮೊದಲು ಕಲಿಯದಿದ್ದರೂ ಪರವಾಗಿಲ್ಲ.

ನೀವು ಇಂಗ್ಲಿಷ್‌ನಲ್ಲಿ ಮಾತನಾಡುವಾಗ, ನಿಮ್ಮ ಆಂಗಿಕ ಅಭಿನಯದಿಂದ ಎದುರಿನವರಿಗೆ ನೀವು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೀರಿ ಎಂದು ತಿಳಿಸಲು ಯತ್ನಿಸಿ. ಹಾಗೆಯೇ, ಬೇರೆಯವರು ಇಂಗ್ಲಿಷ್‌ನಲ್ಲಿ ಮಾತನಾಡುವಾಗ, ಅವರ ಅಭಿನಯವನ್ನು ಗಮನಿಸಿ ಅವರು ಏನು ಹೇಳುತ್ತಿದ್ದಾರೆಂದು ತಿಳಿಯಲು ಪ್ರಯತ್ನಿಸಿ.

ಪ್ರತಿದಿನ ಕನಿಷ್ಠ ಎರಡು ಹೊಸ ಪದಗಳನ್ನು ಕಲಿಯಿರಿ ಹಾಗೂ ಅವುಗಳನ್ನು ಸಾಧ್ಯವಾದಷ್ಟೂ ಹೆಚ್ಚು ಬಾರಿ ಉಪಯೋಗಿಸಿ. ಹೀಗೆ ಕೇವಲ ಒಂದು ತಿಂಗಳಲ್ಲಿ ಅರವತ್ತು ಹೊಸಪದಗಳನ್ನು ಕಲಿತಿರಿ ಅಲ್ಲವೇ?

ನೀವು ಒಬ್ಬರೇ ಇದ್ದಾಗ ಕನ್ನಡಿಯ ಮುಂದೆ ನಿಂತು ಇಂಗ್ಲಿಷ್‌ನಲ್ಲಿ ಮಾತನಾಡಿ. ಇದು ನಿಜವಾಗಿಯೂ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ.

ಯಾವುದೇ ವಿಷಯದ ಬಗ್ಗೆ ಇಂಗ್ಲಿಷ್‌ನಲ್ಲೇ ಯೋಚಿಸಲು ಪ್ರಯತ್ನಿಸಿ.

(ಲೇಖಕರು ನಿರ್ದೇಶಕರು, ಸ್ಮಾರ್ಟ್‌ ಸೆರೆಬ್ರಮ್ ಬೆಂಗಳೂರು)

***

ಪ್ರಾರಂಭದಲ್ಲಿ ಸರಿಯಾದ ವಾಕ್ಯ ರಚನೆಯು ಗೊತ್ತಾಗದಿದ್ದರೆ ಬಹಳ ಯೋಚಿಸಬೇಡಿ. ಕನ್ನಡ-ಇಂಗ್ಲಿಷ್ ಸೇರಿಸಿ ಕಂಗ್ಲಿಷ್‌ನಲ್ಲಿ ಮಾತನಾಡಿ. ನಂತರ ಇಂಗ್ಲಿಷ್ ತಾನೇ ತಾನಾಗಿ ಬರುತ್ತದೆ. ನಾವು ಶಾಲೆಯಲ್ಲಿದ್ದಾಗ ನಮ್ಮ ಗುರುಗಳು ಪ್ರಾರಂಭದಲ್ಲಿ ನಮಗೆ ಹೀಗೇ ಕಲಿಸಿದ್ದರು. ನಾವು ಮಾತನಾಡುತ್ತಿದ್ದ ಕಂಗ್ಲಿಷ್‌ನ ಒಂದು ಉದಾಹರಣೆ ಹೀಗಿತ್ತು – ಯೆಸ್ಟರ್ಡೆ ನೈಟು ರೈನೇ ರೈನು ವಾಟರ‍್ರೇ ವಾಟರ‍್ರು ! ರೋಡ್ ಫುಲ್ ವಾಟರ‍್ರೇ! ಎಲ್ಲರೂ ನಗಲಿ ನೀವೂ ನಕ್ಕು ಬಿಡಿ. ಆದರೆ ಹೀಗೆ ಪ್ರಾರಂಭಿಸಿದ ನಂತರ, ಸರಿಯಾದ ವಾಕ್ಯರಚನೆಯ ಬಗ್ಗೆ ಹಂತ-ಹಂತವಾಗಿ ಗಮನ ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT