ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ‌ದ ಬಗ್ಗೆ ಬೇಡ ಅಸಡ್ಡೆ

Last Updated 20 ನವೆಂಬರ್ 2018, 19:30 IST
ಅಕ್ಷರ ಗಾತ್ರ

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ಇತ್ತೀಚಿನ ದಶಕಗಳಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ. ನೀಲ್ ಆಮ್ಸ್‌ಸ್ಟ್ರಾಂಗ್‌ 1969ರ ಜುಲೈ 21ರಂದು ಚಂದ್ರನ ಮೇಲೆ ಹೆಜ್ಜೆ ಇಟ್ಟಲ್ಲಿಂದ ಇತ್ತೀಚಿನ ಮಂಗಳನ ಸಂಶೋಧನೆಯವರೆಗಿನ ವಿದ್ಯಮಾನಗಳು ಮಾನವನ ಕುತೂಹಲದ ಸಾಹಸೀಬುದ್ಧಿಗೆ, ತಂತ್ರಜ್ಞಾನ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.

ಗ್ರೆಗರ್ ಮೆಂಡಲ್‌ನ ತಳಿಶಾಸ್ತ್ರ ಸಂಶೋಧನೆಗಳ ಹಂತದಿಂದ ತೀರ ಇತ್ತೀಚಿನ ಕ್ಲೋನಿಂಗ್ ತಂತ್ರಜ್ಞಾನದವರೆಗೆ ಜೀವವಿಜ್ಞಾನ ಕ್ಷೇತ್ರ ಅಭಿವೃದ್ಧಿ ಸಾಧಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರತಿ ಮಜಲುಗಳ ಉನ್ನತಿಯ ಹಿನ್ನೆಲೆಯಲ್ಲಿ ಅಗಾಧ ಪ್ರಮಾಣದ ಮೂಲಭೂತ ವಿಜ್ಞಾನ (fundamental/basic science) ಸಂಶೋಧನೆಯ ಸಾರ ಅಡಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿನ ಉನ್ನತಿ ಸಾಧ್ಯವಾಗುವುದು ಮೂಲಭೂತ ವಿಜ್ಞಾನದ ಸಾಧನೆಯ ಹಿನ್ನೆಲೆಯಲ್ಲಿ. ಮೂಲಭೂತ ವಿಜ್ಞಾನಕ್ಕೆ ಪ್ರಾಶಸ್ತ್ಯ ಕೊಡದ ಯಾವ ಸಮಾಜವೂ ವಿಜ್ಞಾನಕ್ಷೇತ್ರದಲ್ಲಿ ಬೌದ್ಧಿಕ ಪ್ರಗತಿ ಸಾಧಿಸುವುದು ಅಸಾಧ್ಯ. ತಂತ್ರಜ್ಞಾನ ಎರವಲು ಪಡೆಯಲು ಬಂದೀತು, ಆದರೆ ಮೂಲಭೂತ ವಿಜ್ಞಾನದ ಸಂಶೋಧನೆಗಳು ಹಾಗಲ್ಲ. ತಂತ್ರಜ್ಞಾನದ ಮೂಲವನ್ನೇ ಕಡೆಗಣಿಸಿ, ಅಭಿವೃದ್ಧಿ ಸಾಧಿಸುತ್ತೇವೆ ಎಂಬುದು ಸಾಧ್ಯವಾಗದ್ದು. ಈ ದೃಷ್ಟಿಕೋನದಲ್ಲಿ, ಮೂಲಭೂತ ವಿಜ್ಞಾನಕ್ಕೆ ಯಾವತ್ತೂ ಅದರದ್ದೇ ಮಹತ್ವವಿದೆ, ಸ್ಥಾನವಿದೆ.

ತಂತ್ರಜ್ಞಾನದ ಅನುಷ್ಠಾನವೇ ದೇಶದ ಅಭಿವೃದ್ಧಿಗೆ ನಾಂದಿ ಎಂಬ ಭ್ರಮೆಯಲ್ಲಿರುವ ನಾವು, ಮೂಲಭೂತ ವಿಜ್ಞಾನವನ್ನು ಕಡೆಗಣಿಸುತ್ತಲೇ ಬಂದಿದ್ದೇವೆ ಎಂಬುದು ವಾಸ್ತವ. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ಸ್ವಾತಂತ್ರ್ಯ ನಂತರ ದೇಶದ ಆಡಳಿತಗಳು ಪ್ರತಿ ವರ್ಷ ಮೂಲಭೂತ ಸಂಶೋಧನೆಗೆ ಸಾಕಷ್ಟು ಹಣವನ್ನು ವ್ಯಯಿಸುತ್ತ ಬಂದಿವೆಯಾದರೂ, ವ್ಯಯಿಸಿದ ಹಣಕ್ಕೆ ತಕ್ಕ ಪ್ರತಿಫಲ ಸಿಗದ ಸ್ಥಿತಿ ನಮ್ಮದು. ಅದಕ್ಕೆ ಕಾರಣಗಳು ಅನೇಕ.

ನಮ್ಮ ದೇಶದ ಸುಮಾರು 750ಕ್ಕೂ ಅಧಿಕ ವಿಶ್ವವಿದ್ಯಾಲಯಗಳಲ್ಲಿ, ಸಹಸ್ರಾರು ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೂಲಭೂತ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಯಾವ ಸಾಧನೆಯೂ ಆಗದಿರುವುದಕ್ಕೆ ಕಾರಣವನ್ನು, ಸಂಶೋಧನಾ ಪ್ರಾಧ್ಯಾಪಕರ, ಶಿಷ್ಯವರ್ಗದ ವ್ಯಕ್ತಿಗತ ಪ್ರಾಮಾಣಿಕತೆಯಲ್ಲಿಯೂ ಹುಡುಕಬಹುದು. ಸಂಶೋಧನಾ ವೃತ್ತಿ, ಪ್ರತಿ ತಿಂಗಳೂ ಅಪಾರ ಆದಾಯದ ಮೂಲವೆಂದು ಪರಿಗಣಿಸುವ ಪರಿಪಾಠ ಬೆಳೆದಿರುವುದು, ಸಂಶೋಧನಾ ಮನೋಧರ್ಮದ ‘ಅರ್ಹತೆ’ ಇಲ್ಲದ ವ್ಯಕ್ತಿಗಳು ಪ್ರಾಧ್ಯಾಪಕರಾಗುತ್ತಿರುವುದು ಸಮಸ್ಯೆ ಹೆಚ್ಚಲು ಕಾರಣ.

ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವಿಯ ಅಧ್ಯಯನಕ್ಕೆ ಆಯ್ಕೆಗೊಳ್ಳದ ವಿದ್ಯಾರ್ಥಿಸಮೂಹಕ್ಕೆ ಸಂಶೋಧನಾ ಕ್ಷೇತ್ರವೂ ಒಂದು ಆಯ್ಕೆಯಾಗಿ ಪರಿಣಮಿಸಿರುವುದು ಇನ್ನೊಂದು ಸಮಸ್ಯೆ. ಕಡಿಮೆ ಅಂಕ ಪಡೆದ, ವಿಷಯ ಜ್ಞಾನದಲ್ಲಿ ಸಮರ್ಥರಲ್ಲದವರು ಮೂಲಭೂತ ವಿಜ್ಞಾನಕ್ಷೇತ್ರಕ್ಕೆ ಅಡಿಯಿಟ್ಟು, ಅವರೇ ಮುಂದೆ ಸಂಶೋಧನಾ ಪ್ರಾಧ್ಯಾಪಕರಾಗಿ ಮುಂದುವರೆಯುತ್ತಿರುವುದು ಕಳವಳಕಾರಿ ವಿದ್ಯಮಾನ. ಇಂಥವರಿಂದ ಯಾವ ತೆರನ ಮೌಲಿಕ ಸಂಶೋಧನೆಯನ್ನು ಅಪೇಕ್ಷಿಸಲು ಬಂದೀತು?

ಸರ್ಕಾರದಿಂದ ಸಮಯಕ್ಕೆ ಸರಿಯಾಗಿ ಬಿಡುಗಡೆಗೊಳ್ಳದ ಸಂಶೋಧನಾ ಅನುದಾನ ಮತ್ತು ಅನುದಾನದ ಲಭ್ಯತೆ ಅನುಸರಿಸಿ ಸಂಶೋಧನಾ ಪಥವನ್ನೇ ಬದಲಿಸುವ ಪರಿಪಾಠ ಹೊಂದಿರುವವರಿಗೇನೂ ಕೊರತೆಯಿಲ್ಲ. ಅತಿ ಹೆಚ್ಚು ಸಂಶೋಧನಾ ಲೇಖನವನ್ನು ಕನಿಷ್ಠ ಅವಧಿಯಲ್ಲಿ ಪ್ರಕಟಿಸಿ ಪ್ರಚಾರ ಗಿಟ್ಟಿಸುವ, ಪ್ರಶಸ್ತಿ ಬಾಚುವ ಧಾವಂತ ಹೊಂದಿರುವ ಅಪ್ರಾಮಾಣಿಕ ಪ್ರಾಧ್ಯಾಪಕ-ಶಿಷ್ಯ ವರ್ಗ ಪ್ರಸ್ತುತಪಡಿಸುವ ಸಂಶೋಧನಾ ವಿವರಗಳ ವಿಶ್ವಾಸಾರ್ಹತೆ ಯಾವತ್ತೂ ಪ್ರಶ್ನಾರ್ಹವೆ.

ಶಿಕ್ಷಣರಂಗದ ಉನ್ನತ ಆಡಳಿತಾತ್ಮಕ ಹುದ್ದೆ ಹೊಂದುವ ಆಸೆ, ಶೈಕ್ಷಣಿಕ ಆಡಳಿತದ ಭ್ರಷ್ಟಾಚಾರ, ನೈತಿಕ ಮೌಲ್ಯಗಳ ಅಧಃಪತನ, ಇವೇ ಮುಂತಾದ ಇತರ ಸಂಗತಿಗಳು ನಮ್ಮ ದೇಶದ ಶಿಕ್ಷಣ-ಸಂಶೋಧನಾ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಇಂದಿನ ಸ್ಥಿತಿಗೆ ಕಾರಣ. ಎಲ್ಲಿಂದಲೋ ಎರವಲು ಪಡೆದ ವಿಚಾರಗಳಲ್ಲಿಯೇ ಹೆಚ್ಚಿನವರು ಸಂಶೋಧನೆ ನಡೆಸುವ ಪ್ರವೃತ್ತಿ ಗಾಢವಾಗಿ ಕಾಣುತ್ತದೆ.

ಮೂಲಭೂತ ವಿಜ್ಞಾನ ಸಂಶೋಧನೆ ಮತ್ತು ತಿಳಿವಳಿಕೆಯ ಸಮಾಜನಿರ್ಮಾಣ ನಮ್ಮ ದೇಶದ ಅತಿ ಅಗತ್ಯಗಳಲ್ಲಿ ಒಂದು ಎಂದು ನಮಗೆ ಅನ್ನಿಸದೆ ಇದ್ದುದು ಆಶ್ಚರ್ಯದ ಸಂಗತಿ. ಮೂಲಭೂತ ವಿಜ್ಞಾನ ಸಂಶೋಧನೆ ಮತ್ತು ಸಂಬಂಧಿತ ಚಟುವಟಿಕೆಗಳು ತತ್‌ಕ್ಷಣದ, ನೇರ ಲಾಭ ತಾರದಿದ್ದೀತು; ಆದರೆ ಅದರ ಫಲ ಮುಂದಣ ಯುಗದುದ್ದಕ್ಕೂ ಲಭಿಸುವಂಥದ್ದು. ಆರ್ಥಿಕ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂಬ ಧೋರಣೆಯ ಆಡಳಿತಗಳಿಗೆ, ಸಮಾಜದ ಧೋರಣೆಗಳಿಗೆ ಮೂಲಭೂತ ವಿಜ್ಞಾನ ಎಂದಿಗೂ ಗೌಣವೇ. ಅಂಥವರಿಗೆ, ಅಂಥ ಆಡಳಿತಗಳಿಗೆ ಮೂಲಭೂತ ವಿಜ್ಞಾನದ ಅಗತ್ಯ ಮನದಟ್ಟಾದೀತೆ?

ಹೊಸ ಕಪ್ಪೆ, ಸರೀಸೃಪ, ಮೃದ್ವಂಗಿ, ಏಡಿ ಮುಂತಾದ ಜೀವಿಗಳ ಆವಿಷ್ಕಾರ, ಪಶ್ಚಿಮ ಘಟ್ಟದ ಅಳಿದುಳಿದ ಸಿಂಗಳೀಕಗಳ ಆಹಾರಕ್ರಮದ ಸಂಶೋಧನೆ, ಕರಾವಳಿಯ ನೆಲಪಾತಳಿಯಲ್ಲಿ ಸಹಸ್ರಾರು ವರ್ಷಗಳ ಹಿಂದೆ ಹುಗಿದುಹೋದ ಅಪೂರ್ವ ಮೃದ್ವಂಗಿಗಳ ಪಳೆಯುಳಿಕೆಗಳ ಹುಡುಕಾಟ, ನಮ್ಮಲ್ಲಿನ ‘ಯಾಣ’ದ ಶಿಖರಗಳ ಕಲ್ಲಿನ ಸಂಯೋಜನೆಯ ಅಧ್ಯಯನ, ಮಿಲಿಯ ವರ್ಷಗಳ ಹಿಂದಿನ ಮಳೆಕಾಡುಗಳ ನಿಗೂಢ ಜಗತ್ತಿನ ಅನಾವರಣ, ಅರಬ್ಬೀ ಸಮುದ್ರದಲ್ಲಿ ಕ್ಷಣಕ್ಷಣಕ್ಕೂ ಏಳುವ ಅಲೆಗಳ ಅಧ್ಯಯನ, ನಾಡಿನ ಪಾಳುಬಿದ್ದ ಪುರಾತನ ದೇವಳಗಳ ಗೋಡೆಯ ಮೇಲಿನ ಭಿತ್ತಿಚಿತ್ರಗಳಲ್ಲಿ ಬಳಸಿದ ಬಣ್ಣಗಳ ರಾಸಾಯನಿಕ ಸಂಯೋಜನೆ ಕುರಿತ ಅಧ್ಯಯನ, ಉತ್ತರ ಕರ್ನಾಟಕದ ಕುರುಚಲು ಕಾಡಿನ ಅಪೂರ್ವ ಪಕ್ಷಿಪ್ರಪಂಚ ಮತ್ತದರ ಧ್ವನಿ ಕುರಿತ ಸಂಶೋಧನೆ, ಥಾರ್ ಮರುಭೂಮಿಯ ಸರೀಸೃಪಸಂಸಾರ, ಸುಂದರಬನದ ಕಾಂಡ್ಲಕಾಡಿನ ಏಡಿಗಳ ಸಮೂಹ, ಇವೆಲ್ಲವೂ ಗೌಣವೇ. ಇಂಥ ಸಂಶೋಧನೆ, ಅಧ್ಯಯನದಿಂದ ನಿನಗೆಷ್ಟು ಲಾಭ ಬಂದೀತು, ತನಗೆಷ್ಟು ಪಾಲು ದೊರೆತೀತು – ಎಂದು ಲೆಕ್ಕ ಹಾಕುವವರೇ ಹೆಚ್ಚು.

ಮೂಲಭೂತ ವಿಜ್ಞಾನ ಸಂಶೋಧನೆಯ ಸಂಸ್ಕೃತಿಯನ್ನು ಬೆಳೆಸಲು ಸಮಾಜ, ಶಿಕ್ಷಣಸಂಸ್ಥೆಗಳು, ಪ್ರಾಧ್ಯಾಪಕರು, ಮತ್ತು ಆಡಳಿತಗಳು ಅವಿರತವಾಗಿ ಶ್ರಮ ವಹಿಸಬೇಕಾದ ಅಗತ್ಯವಿದೆ. ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ನಿಸರ್ಗದ ಕುರಿತು, ವಿಶ್ವದ ಅಗಾಧತೆಯ-ನಿಗೂಢತೆಯ ಕುರಿತು ಆಸಕ್ತಿ ಕೆರಳಿಸುವಂಥ ಶಿಕ್ಷಣ ನೀಡುವಲ್ಲಿ ನಾವು ವಿಫಲರಾಗಿದ್ದೇವೆ. ಜಗತ್ತನ್ನೇ ಕುತೂಹಲದಿಂದ ಕಣ್ತೆರೆದು ನೋಡದ ವಿದ್ಯಾರ್ಥಿ ತನ್ನ ಮುಂದಣ ಜೀವನದಲ್ಲಿ ಸೃಜನಾತ್ಮಕವಾಗಿ ಸಂಶೋಧನಾ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಲು ಬಂದೀತೆ? ಜ್ಞಾನಾಧಾರಿತ ಸಮಾಜದ ಮೂಲಸ್ವರೂಪದ ಪರಿಕಲ್ಪನೆಯೇ ಇಲ್ಲದ ಸಮೂಹಕ್ಕೆ, ಮೂಲಭೂತ ವಿಜ್ಞಾನ ಪಾಠ ಮಾಡಲು ಹೊರಟರೆ, ಅದರಿಂದಾಗುವ ಲಾಭ ಏನು ಎನ್ನುವ ಪ್ರಶ್ನೆ ಬರುತ್ತದೆ.

ವಿಜ್ಞಾನ ಶಿಕ್ಷಣದಿಂದ ತಂತ್ರಜ್ಞರನ್ನು (technical personnel) ತರಬೇತುಗೊಳಿಸುವುದು ಸುಲಭ, ಆದರೆ, ಸಂಶೋಧಕ / ವಿಜ್ಞಾನಿಯನ್ನು (researcher/scientist) ರೂಪಿಸುವುದು ಅತೀವ ಕಷ್ಟದ್ದು. ಸೃಜನಾತ್ಮಕ ಮನಸ್ಸಿನ, ಬೌದ್ಧಿಕ ಪ್ರಗತಿಗೆ ಹಾತೊರೆಯುವ ಯುವಜನತೆಯನ್ನು ಗುರುತಿಸಿ, ಪ್ರೇರೇಪಿಸುವ, ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಸಾಧಿಸುವಂಥ ಶೈಕ್ಷಣಿಕ ವಾತಾವರಣ ರೂಪಿಸಬೇಕಿದೆ.

ಮೂಲಭೂತ ವಿಜ್ಞಾನ ಕ್ಷೇತ್ರವನ್ನು ಹೆಚ್ಚು ಆಕರ್ಷಣೀಯವೂ ಮತ್ತು ಉದ್ಯೋಗದ ದೃಷ್ಟಿಕೋನದಲ್ಲಿ ಹೆಚ್ಚು ಸುರಕ್ಷಿತ ಎಂಬಂಥ ವಾತಾವರಣ ದೇಶದಲ್ಲಿ ಸೃಷ್ಟಿಯಾಗದ ಹೊರತು, ಸೃಜನಶೀಲ ಮನಸ್ಸಿನ ಯುವ ಜನಾಂಗ ಸಂಶೋಧನೆಯಲ್ಲಿ ಆಸಕ್ತಿ ವಹಿಸದು. ಮೂಲಭೂತ ವಿಜ್ಞಾನದ ಕುರಿತ ನೈಜ ಆಸಕ್ತಿ, ಕೇವಲ ಸಮಾಜದ ಅಭಿವೃದ್ಧಿಯಷ್ಟೆ ಅಲ್ಲ, ನಮ್ಮ ಭೂಮಂಡಲದ ಒಟ್ಟಾರೆ ಜೀವಜಾಲದ ಸಮಷ್ಟಿ ಅಭ್ಯುದಯವನ್ನೇ ಸಾಧಿಸುವ ಸಂಸ್ಕೃತಿಯನ್ನೇ ಸೃಷ್ಟಿಸುವ ಸಾಮರ್ಥ್ಯವುಳ್ಳದ್ದು. ಅಂಥ ಜ್ಞಾನಾಧಾರಿತ ಸಮಾಜ ನಿರ್ಮಿಸಲು ನಾವು ಶ್ರಮಪಟ್ಟಿದ್ದಿದಿಯೆ?

ದೈನಂದಿನ ವ್ಯವಹಾರ, ಜೀವನ ನಡೆಯಲು ಭಾಷೆ ಹೇಗೆ ಅನಿವಾರ್ಯ ಮತ್ತು ಮಹತ್ವವೋ, ತಂತ್ರಜ್ಞಾನ ಬೆಳೆಯಲು, ದೇಶದ ಅಭಿವೃದ್ದಿಗೆ, ಭೂಮಂಡಲದ ಜೀವಜಾಲದ ಒಳಿತಿಗೆ ಮೂಲಭೂತ ವಿಜ್ಞಾನವೂ ಅನಿವಾರ್ಯ.

ಇದನ್ನು ನಮ್ಮ ವಿಶ್ವವಿದ್ಯಾಲಯಗಳು, ಪ್ರಾಧ್ಯಾಪಕರು, ಆಡಳಿತಗಳು ಸರಿಯಾಗಿ ಅರಿತು ವ್ಯವಹರಿಸುತ್ತಿವೆಯೇ? ದೇಶಕ್ಕೆ ಸ್ವಾತಂತ್ರ್ಯ ದೊರೆತು ಎಪ್ಪತ್ತು ವರ್ಷವಾದರೂ ಪ್ರಾಥಮಿಕ ಶಿಕ್ಷಣ ಮಾಧ್ಯಮ ಯಾವುದಿರಬೇಕೆಂದು ಇನ್ನೂ ಚರ್ಚಿಸುವ, ಪ್ರಯೋಗ ನಡೆಸುವ ಹಂತದಲ್ಲೇ ಇರುವ ನಮಗೆ, ಮೂಲಭೂತ ವಿಜ್ಞಾನದ ಅಗತ್ಯದ ಅರಿವಾಗುವುದು ಕಷ್ಟವೇ! ಇನ್ನು ಸಾಧನೆಯ ವಿಚಾರವಂತೂ ದೂರವೇ ಉಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT