ಸೋಮವಾರ, ಮಾರ್ಚ್ 8, 2021
24 °C
ಕೈಲಾಂಚ ಪ್ರೌಢಶಾಲೆ ಶಿಕ್ಷಕಿ

ಪಠ್ಯದ ಜೊತೆ ಸಸ್ಯ ಕೃಷಿಯ ಪಾಠ ಶಿಕ್ಷಕಿ ಶೈಲಾ ಶ್ರೀನಿವಾಸ್‌ ಕಾರ್ಯಕ್ಕೆ ಮೆಚ್ಚುಗೆ

ಎಸ್‌. ರುದ್ರೇಶ್ವರ Updated:

ಅಕ್ಷರ ಗಾತ್ರ : | |

Deccan Herald

ರಾಮನಗರ: ವಿದ್ಯಾರ್ಥಿಗಳಿಗೆ ಪಠ್ಯ ಬೋಧಿಸುವ ಜೊತೆಗೆ ಅವರಿಗೆ ಔಷಧೀಯ ಗಿಡ ಮೂಲಿಕೆಗಳ ಬಗ್ಗೆಯೂ ತಿಳಿಸಿಕೊಡುತ್ತಿರುವ ಅಪರೂಪದ ಶಿಕ್ಷಕಿಯೊಬ್ಬರು ಇಲ್ಲಿದ್ದಾರೆ. ಅವರೇ ಇಲ್ಲಿನ ಕೈಲಾಂಚ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಕೆ. ಶೈಲಾ ಶ್ರೀನಿವಾಸ್.

‘ಹಿತ್ತಲ ಗಿಡ ಮದ್ದಲ್ಲ’ ಎನ್ನುವುದು ಗಾದೆ ಮಾತು. ಆದರೆ ಇದನ್ನು ಸುಳ್ಳು ಮಾಡಿ ತೋರಿಸುತ್ತಿದ್ದಾರೆ ಇವರು. ತಮ್ಮ ಮನೆಯಂಗಳ ಹಾಗೂ ತಾವು ಸೇವೆ ಸಲ್ಲಿಸಿದ ಶಾಲೆಗಳ ಆವರಣದಲ್ಲಿ ಔಷಧೀಯ ಸಸಿಗಳನ್ನು ಬೆಳೆಸಿದ್ದಾರೆ, ಬೆಳೆಸುತ್ತಿದ್ದಾರೆ.

ಕನ್ನಡ ಶಿಕ್ಷಕಿಯಾಗಿರುವ ಇವರು ವಿದ್ಯಾರ್ಥಿಗಳಿಗೆ ಸಾಹಿತ್ಯ, ಭಾಷೆ, ವ್ಯಾಕರಣ ಕಲಿಸುವ ಜತೆಗೆ ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಪದ್ಧತಿ, ದೇಸಿ ಆಹಾರ ಪದ್ಧತಿಯ ಮಹತ್ವ, ಮನೆಯ ಬಳಿಯೇ ಬೆಳೆದುಕೊಳ್ಳಬಹುದಾದ ಔಷಧಿ ಗಿಡ ಮೂಲಿಕೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

2014ರಲ್ಲಿ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ‘ಹಿತ್ತಲ ಗಿಡ ಮದ್ದು’ ಎಂಬ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರೈತ ಕಲ್ಯಾಣ ಉತ್ಸವದಲ್ಲಿ ‘ಹಿತ್ತಲ ಎಲೆ ತಿನ್ನಿ’ ಪ್ರದರ್ಶನಕ್ಕೆ ಪ್ರಥಮ ಬಹುಮಾನ ಪಡೆದಿದ್ದಾರೆ.

ಔಷಧೀಯ ಸಸಿಗಳನ್ನು ನೆಡುವ ಜತೆಗೆ, ಈ ಸಸಿಗಳು ಏನೆಲ್ಲಾ ಔಷಧೀಯ ಗುಣ ಹೊಂದಿವೆ, ಯಾವ ರೋಗಕ್ಕೆ ಯಾವ ಗಿಡ ಮದ್ದು ಎಂಬುದರ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದಾರೆ.

ಪರಿಸರದಲ್ಲಿ ದೊರೆಯುವ ಹುಲ್ಲಿನಿಂದ ಹಿಡಿದು ನಾರುಬೇರುಗಳವರೆಗೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಯ ಗುಣ ಹೊಂದಿರುತ್ತವೆ ಎಂದು ಗೊತ್ತಿರುವ ಇವರು ಇದರ ಮಹತ್ವವನ್ನು ವಿದ್ಯಾರ್ಥಿಗಳಿಗೂ ಮನವರಿಕೆ ಮಾಡಿಕೊಡುತ್ತಿದ್ದಾರೆ. ಮಂಗಳೂರು, ದಕ್ಷಿಣ ಕನ್ನಡ ಮುಂತಾದ ಜಿಲ್ಲೆಗಳಿಂದ ಸಸಿಗಳನ್ನು ತಂದು ಅವುಗಳನ್ನು ಮಕ್ಕಳಂತೆ ಪೋಷಸುತ್ತಿದ್ದಾರೆ. ಹಲವು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌, ಗಮಕ ಕಲಾ ಪರಿಷತ್‌ ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕವಿಯೂ ಆಗಿರುವ ಇವರ ‘ಅನಂತ ಪಯಣ’ ಎಂಬ ಕವನ ಸಂಕಲನ ಪ್ರಕಟವಾಗಿದೆ.

‘23 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪಠ್ಯದ ಜತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ’ ಎನ್ನುತ್ತಾರೆ ಶಿಕ್ಷಕಿ ಎಚ್.ಕೆ. ಶೈಲಾ ಶ್ರೀನಿವಾಸ್‌.

ಆಧುನಿಕ ಆಹಾರ ಪದ್ಧತಿಯ ಪರಿಣಾಮದಿಂದ ಆರೋಗ್ಯಕ್ಕೆ ಹಣ ನೀಡಿ ದುಬಾರಿ ಬೆಲೆಯ ಔಷಧಿಗಳನ್ನು ಬಳಸುವುದಕ್ಕಿಂತ ಔಷಧೀಯ ಸಸಿಗಳನ್ನು ಬೆಳೆಸಿ, ಬಳಸಿದರೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಬೆಟ್ಟಗುಡ್ಡಗಳಿಗೆ, ಕಾಡುಗಳಿಗೆ ಬೀಳುವ ಬೆಂಕಿಯಿಂದ ಔಷಧೀಯ ಗಿಡಗಳು ನಾಶವಾಗುತ್ತವೆ. ಸರ್ಕಾರ, ಸಂಘ ಸಂಸ್ಥೆಗಳು ಔಷಧೀಯ ಗಿಡಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎನ್ನುವುದು ಅವರ ಅನಿಸಿಕೆ.

ಭಾರತಕ್ಕೆ ಭೇಟಿ ನೀಡಿದ ವಿದೇಶಿಯರು ಈ ದೇಶದ ಸಸ್ಯ ಸಂಪತ್ತು ಇವುಗಳ ಉಪಯೋಗಗಳ ಬಗ್ಗೆ ಅಧ್ಯಯನ ನಡೆಸಿ ತಮ್ಮ ದೇಶಗಳಿಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇಲ್ಲಿನ ಜನರಿಗೆ ಇದರ ಮಹತ್ವ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಔಷಧಿ ಸಸಿಗಳು
ಮಕ್ಕಳಲ್ಲಿ ಸ್ಪಷ್ಟ ಉಚ್ಛಾರಣೆಗಾಗಿ ನೀಡುವ ಬಜೆ, ಮಧುಮೇಹಕ್ಕೆ ಮಧುನಾಶಿನಿ, ಲಾವಂಚ, ದೊಡ್ಡಪತ್ರೆ, ಮೂಳೆ ಮುರಿತ ಸರಿ ಮಾಡುವ ಮಂಗಾರ ಬಳ್ಳಿ, ಜ್ವರ ಪಾರಿಜಾತ, ಕಾಷಮರದ, ಹಲವು ರೀತಿಯ ಕಾಯಿಲೆಗಳಿಗೆ ರಾಮಬಾಣವಾಗಿರುವ ಅಮೃತಬಳ್ಳಿ, ಕಿಡ್ನಿ ಶುದ್ಧೀಕರಿಸುವ ಶಕ್ತಿಯುಳ್ಳ ಪುನರ್ನವ ಸಸ್ಯ, ಗರಿಕೆ, ಗೋಧಿ ಹುಲ್ಲು, ಬಾಸುಮತಿ, ದಾಲ್ಚಿನ್ನಿ, ಕಾಶಿಕಣಗಲೆ, ಕಾಡುಶುಂಠಿ, ಆಟೆಗಿಡ, ಮಲೇಶಿಯಾ ನೆರಳೆ, ಕಾಳುಮೆಣಸು, ನೆಲ್ಲಿ ಸೇರಿದಂತೆ ನೂರಾರು ಸಸಿಗಳನ್ನು ಅವರು ಬೆಳೆಸಿದ್ದಾರೆ.

* ಶೈಲಾ ಶ್ರೀನಿವಾಸ್ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಜೀವನ ಪ್ರೀತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ
–ಎಲ್.ಸಿ. ರಾಜು, ಸಾಹಿತಿ

* ಶೈಲಾ ಅಧ್ಯಯನ ಮತ್ತು ಅಧ್ಯಾಪನವನ್ನು ಶಿಸ್ತುಬದ್ಧವಾಗಿ ಮತ್ತು ಶ್ರದ್ಧೆಯಿಂದ ಮಾಡುತ್ತಿರುವವರು. ಸರಳ ವ್ಯಕ್ತಿತ್ವ ಅಳವಡಿಸಿಕೊಂಡು ಮಾದರಿ ಶಿಕ್ಷಕಿಯಾಗಿದ್ದಾರೆ
–ಜಿ. ಶಿವಣ್ಣ ಕೊತ್ತೀಪುರ, ಉಪನ್ಯಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು