ಕುಂಭಕರ್ಣರೆಲ್ಲರೂ ದಡ್ಡರಲ್ಲ!

7

ಕುಂಭಕರ್ಣರೆಲ್ಲರೂ ದಡ್ಡರಲ್ಲ!

Published:
Updated:
Deccan Herald

ತಲೆಬರಹವನ್ನು ನೋಡಿ ನಕ್ಕಿರಾ? ನಕ್ಕು ಬಿಡಿ! ಆದರೆ, ಮಕ್ಕಳು ನಿದ್ರೆ ಮಾಡುತ್ತಾರೆಂದು ಹೀಗೆಳೆಯಬೇಡಿ. ವಿದ್ಯಾರ್ಥಿಗಳಿಗೆ ನಿತ್ಯದ ಊಟ, ತಿಂಡಿ, ಓದಿನಷ್ಟೇ ಮುಖ್ಯ ನಿದ್ರೆ. ರಾವಣ, ಕುಂಭಕರ್ಣ ವಿಭೀಷಣರು ತಪಸ್ಸಿಗೆ ಕುಳಿತಾಗ ದೇವತೆಗಳ ರಾಜನಾದ ಇಂದ್ರನಿಗೆ ರಾವಣ, ವಿಭೀಷಣರಿಗಿಂತ ಕುಂಭಕರ್ಣ ಕೇಳುವ ವರದ ಬಗ್ಗೆ ದಿಗಿಲಿತ್ತು. ಏಕೆಂದರೆ ರಾವಣ ಕೇಳುವ ವರದಲ್ಲೇ ಶಾಪದ ಸೂತ್ರ ಇರುತ್ತದೆ, ಅವನು ದಡ್ಡ - ನೇರವಾಗಿ ವರ ಕೇಳುತ್ತಾನೆ ಎಂದು ಗೊತ್ತಿತ್ತು.

ಹಾಗೆಯೇ ಆಯಿತು ಕೂಡ. ಮೊದಲಿಗೆ ಅವನು ಬೇಡಿದ್ದು ಅಮರತ್ವವನ್ನು, ಅಂದರೆ ಸಾವಿಲ್ಲದ ನಿರಂತರ ಬದುಕನ್ನು. ಅದನ್ನು ಬ್ರಹ್ಮ ನಿರಾಕರಿಸಿದಾಗ ಅವನು ಕೇಳಿದ್ದು ದೇವ, ಯಕ್ಷ, ಕಿನ್ನರ, ಕಿಂಪುರುಷ, ಖಗ-ಮೃಗ – ಇತರ ರಾಕ್ಷಸರಿಂದ ಸಾವು ಬರಬಾರದೆಂದು. ಬ್ರಹ್ಮದೇವ ‘ಆಗಲಿ’ ಎಂದ; ಜೊತೆಗೆ ಅಪಾರವಾದ ಶಸ್ತ್ರವಿದ್ಯೆ ಮತ್ತು ಮಾಯಾವಿದ್ಯೆಯನ್ನೂ ಕರುಣಿಸಿದ.

‘ನರ’ನನ್ನು ತನ್ನ ಪಟ್ಟಿಯಿಂದ ಹೊರಗಿಟ್ಟ ರಾವಣನಿಗೆ ಖೇದವಿರಲಿಲ್ಲ. ‘ಹುಲುಮಾನವ’ ತನ್ನನೇನು ಮಾಡಬಲ್ಲ – ಎಂಬ ಉದಾಸೀನವನ್ನು ತೋರಿ ಬ್ರಹ್ಮನಿಗೆ ಧನ್ಯವಾದಗಳನ್ನು ಅರ್ಪಿಸಿದ. ವಿಭೀಷಣ ಕೇಳಿದ್ದು ಭಕ್ತಿ, ಇತ್ಯಾದಿ ಸಾತ್ವಿಕ ಗುಣಗಳನ್ನು; ಇದು ಕೂಡ ನೇರವಾದ ವರವೇ. ಆದರೆ ಕುಂಭಕರ್ಣ ಏನು ಕೇಳುತ್ತಾನೊ – ಎಂದು ಇಂದ್ರ ಹೆದರಿದ್ದನೊ ಅದನ್ನು ಅವನು ಕೇಳಿಯೇಬಿಟ್ಟ. ಇಂದ್ರಾಸನ (ಕೆಲವರು ನಿರ್ದೇವತ್ವಂ ಎನ್ನುತ್ತಾರೆ).

ಆದರೆ ಅವನು ಜಾಣ ಎಂಬುದನ್ನು ಅರಿತಿದ್ದ ಇಂದ್ರನು ತಾಯಿ ಸರಸ್ವತಿಯನ್ನು ಬೇಡಿಕೊಂಡಳು; ವರದ ಶಬ್ದಗಳು ಅಲ್ಲಿ ಹೊರಳುವಂತೆ ಮಾಡಿದಳು; ಆಗ ‘ನಿದ್ರಾಸನ’ (ನಿದ್ರಾವತ್ವಂ) ಆಗಿ ಮೂಡುವಂತೆ ಮಾಡಿದಾಗ ಬ್ರಹ್ಮನು ತಕ್ಷಣ ಅದನ್ನು ‘ಅಸ್ತು’ ಎಂದುಬಿಟ್ಟನಂತೆ. ಮತ್ತೆ ರಾವಣನ ಬೇಡಿಕೆಯ ಮೇರೆಗೆ ಕುಂಭಕರ್ಣನ ಟೈಮ್‍ಟೇಬಲನ್ನು ಬ್ರಹ್ಮ ‘ಆರು ತಿಂಗಳು ನಿದ್ರೆ, ಆರು ತಿಂಗಳು ಎಚ್ಚರ’ ಎಂದು ತಿದ್ದಿದನಂತೆ. ಕೊನೆಗೆ ಯುದ್ಧದ ಸಂದರ್ಭದಲ್ಲಿ ಎಬ್ಬಿಸಿದಾಗಲೂ ಕುಂಭಕರ್ಣನಷ್ಟು ಸ್ಪಷ್ಟ, ತಾರ್ಕಿಕ ವಿಚಾರಧಾರೆ, ಬುದ್ಧಿವಂತಿಕೆಯ ಸಲಹೆಯನ್ನು ಯಾರೂ ನೀಡುವುದಿಲ್ಲ. ವಿಭೀಷಣನ ಭಕ್ತ್ಯಾವೇಶಭರಿತ ಬುದ್ಧಿವಾದಕ್ಕಿಂತ ಕುಂಭಕರ್ಣನ ವಾಸ್ತವ ವಿವೇಕದ ನಿರೂಪಣೆ ಚೆಂದ ಕಾಣುತ್ತದೆ. ಆದರೆ ರಾವಣನ ಹಟವೇ ಗೆದ್ದಿದ್ದು ಕೊನೆಗೆ. ಕುಂಭಕರ್ಣ ಜ್ಞಾನಿ. ಆದರೆ, ಅದಂತಿರಲಿ ನಿದ್ರೆಯಲ್ಲೇ ಇದ್ದ ಕುಂಭಕರ್ಣ ಜಾಣನಾದುದು ಹೇಗೆ?

ಆಧುನಿಕ ವಿಜ್ಞಾನವು ಹೇಳುತ್ತದೆ – ಜ್ಞಾಪಕಶಕ್ತಿಯು ವೃದ್ಧಿಸುವಲ್ಲಿ ನಿದ್ರೆಯ ಪಾತ್ರ ಮಹತ್ವದ್ದು. ಯಾವುದೇ ಹೊಸ ವಿಚಾರದ ಬೌದ್ಧಿಕ ಪರಿಪಕ್ವತೆಗೆ, ಅದನ್ನು ಕಲಿಯುವ ಮುನ್ನ ಮತ್ತು ಆನಂತರದ ನಿದ್ರೆ ಮುಖ್ಯಪಾತ್ರವನ್ನು ವಹಿಸುತ್ತದೆ. ನಿದ್ರೆ, ಕಲಿಕೆ ಮತ್ತು ಸ್ಮರಣೆ – ಇವು ಬಹಳ ಸಂಕೀರ್ಣ ಪ್ರಕ್ರಿಯೆಗಳಾಗಿದ್ದು ಅದರ ಪೂರ್ಣ ಚಿತ್ರಣ ನಮಗಿನ್ನೂ ದೊರೆತಿರುವುದಿಲ್ಲ. ಆದರೆ ಒಂದನ್ನಂತೂ ವಿಜ್ಞಾನಿಗಳು ನಿಖರವಾಗಿ ತಿಳಿಸಿದ್ದಾರೆ. ಅದೇನೆಂದರೆ ವಿದ್ಯಾರ್ಥಿಗಳ ಕಲಿಕೆ ಮತ್ತು ಸ್ಮರಣೆಯ ಮೇಲೆ ನಿದ್ರೆಯ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಅಂಶಗಳು ಖಂಡಿತ ಪ್ರಭಾವ ಬೀರುತ್ತವೆ.

ಆದುದರಿಂದ ಇನ್ನು ಮುಂದೆ ನಮ್ಮ ಮಕ್ಕಳನ್ನು ‘ಕುಂಭಕರ್ಣನಂತೆ ಮಲಗಿಬಿಡುತ್ತಾನೆ,’ ‘ಹೆಚ್ಚು ನಿದ್ರಿಸುತ್ತಾನೆ,’ ‘ಓದಿದ ತಕ್ಷಣ ಮಲಗಿ ಬಿಡುತ್ತಾನೆ,’ ‘ಮಧ್ಯೆ ಮಧ್ಯೆ ಮಲಗಿಬಿಡುತ್ತಾನೆ’ – ಎಂದೆಲ್ಲ ದೂಷಿಸುವಂತಿಲ್ಲ. ಇದರರ್ಥ ಯಾವ ಬೇಕಾದರೂ ಆಲಸಿಯಂತೆ ಸುಮ್ಮನೆ ಮಲಗಬೇಕು ಎಂದಲ್ಲ. ಆದರೆ ಸಾಕಷ್ಟು ಸಮಯ ನಿದ್ದೆ ಮಾಡಬೇಕು ಎಂದು. ಕಲಿಕೆಯ ಮೂರು ಹಂತಗಳು ಗ್ರಹಿಕೆ (ಅರ್ಜನೆ - Acquisition), ಸಂಸ್ಥಾಪನೆ (ಘನೀಕರಣ -Consolidation) ಮತ್ತು ಸ್ಮರಣೆ (Recall). ಗ್ರಹಿಕೆಯ ಹಂತದಲ್ಲಿ ಮೆದುಳು ತಾನು ಓದಿದ್ದನ್ನೊ, ಬರೆದದ್ದನ್ನೊ, ಕಲಿತದ್ದನ್ನೊ – ಒಟ್ಟು ತನ್ನ ಅನುಭವದ ಪ್ರವೇಶವನ್ನು ದಾಖಲಿಸಿಕೊಳ್ಳುತ್ತದೆ. ಎರಡನೆಯ ಹಂತವಾದ ಸಂಸ್ಥಾಪನೆಯಲ್ಲಿ ಅನುಭವ ಅಥವಾ ದಾಖಲೆ ಘನೀಕೃತಗೊಳ್ಳುತ್ತದೆ. ಮುಂದಿನ ಹಂತದಲ್ಲಿ ಕಲಿತದ್ದನ್ನು ಮೆದುಳಿನ ಕೋಶಗಳಿಂದ ಹೊರ ತೆಗೆಯುತ್ತದೆ.

ಇವುಗಳಲ್ಲಿ ಮೊದಲ ಹಾಗೂ ಕೊನೆಯ ಹಂತಗಳು ಎಚ್ಚರದ ಸ್ಥಿತಿಯಲ್ಲಿ ನಡೆಯುವಂತಹವು. ಸಂಶೋಧನೆಗಳು ತಿಳಿಸುವಂತೆ ಅತಿಮುಖ್ಯವಾದ ಎರಡನೆಯ ಹಂತ – ವಿಷಯದ ಸಂಸ್ಥಾಪನೆ ನಡೆಯುವುದು ನಿದ್ರಾಸಮಯದಲ್ಲಿ. ಆ ಹಂತದಲ್ಲಿ ಮೆದುಳಿನ ನರಕೋಶಗಳು ಸ್ಮರಣಸಂಪರ್ಕಗಳನ್ನು ರೂಪಿಸಿ, ಗಟ್ಟಿಗೊಳಿಸಿಕೊಳ್ಳುತ್ತವಂತೆ. ಹೀಗಾಗಿಯೇ ಎಷ್ಟೋ ಬಾರಿ ನಾವು ಮಲಗುವ ಮುನ್ನ ಓದಿದ ವಿಚಾರಗಳೇ ಮನದಲ್ಲಿ ಗಟ್ಟಿಯಾಗಿ ಬೇರೂರುತ್ತವೆ.

ಸ್ಮರಣೆಯ ವಿಚಾರದಲ್ಲಿ ಎರಡು ರೀತಿಯಲ್ಲಿ ನಿದ್ರೆ ತನ್ನ ಪಾತ್ರ ನಿರ್ವಹಿಸುವುದನ್ನು ಸಂಶೋಧಕರು ಚರ್ಚಿಸಿದ್ದಾರೆ.

ನಿದ್ರೆಯ ವಿವಿಧ ಹಂತಗಳಲ್ಲಿ ಮೆದುಳಿನ ನರಕೋಶಗಳು ರೂಪುಗೊಳ್ಳುವುದು ಒಂದು ಬಗೆಯದಾದರೆ ನಿದ್ರಾಹೀನತೆಯಿಂದ ಕಲಿಕೆಯ ಮೇಲಾಗುವ ಕೆಟ್ಟ ಪರಿಣಾಮಗಳು ಇನ್ನೊಂದು ಬಗೆಯದು. ಬಹುಶಃ ಇದರಿಂದಾಗಿಯೇ ನಮ್ಮಲ್ಲೊಂದು ಗಾದೆ ಹುಟ್ಟಿಕೊಂಡಿದ್ದು – ‘ನಿದ್ದೆಗೇಡಿನಿಂದ ಬುದ್ಧಿಗೇಡು’ ಎಂದು. ಸ್ಮರಣೆಯಲ್ಲಿ ಎರಡು ವಿಧ: ಘೋಷಣಾತ್ಮಕ (Declarative Memory) ಮತ್ತು ಕಾರ್ಯವಿಧಾನಾತ್ಮಕ (Procedural Memory). ಮೊದಲನೆಯದು ಕೇವಲ ವಸ್ತುನಿಷ್ಠ ವಿಚಾರಗಳಿಗೆ ಸಂಬಂಧಿಸಿದ್ದು. ‘ರಾಷ್ಟ್ರದ ರಾಜಧಾನಿ ಯಾವುದು?’, ‘ನಿನ್ನೆ ಅಡುಗೆಯಲ್ಲಿ ಮಾಡಿದ್ದ ಪಲ್ಯ ಯಾವುದರದು?’ – ಇಂತಹ ವಿಚಾರಗಳಿಗೆ ಸಂಬಂಧಿಸಿದ್ದು. ಈ ಸ್ಮರಣಿಕೆಗಳು ದಾಖಲಾಗುವುದು ಕೂಡ ದೀರ್ಘನಿದ್ರೆಯಲ್ಲಿ ಅಂತೆ.

ಮುಚ್ಚಿದ ಕಣ್ಣುರೆಪ್ಪೆಗಳೊಳಗೆ ಅದೂ ಕಣ್ಣುಗುಡ್ಡೆಗಳು ಹೊರಳಾಡುವ (Rapid Eye Movement) ಹಂತದಲ್ಲಿ ಎನ್ನುತ್ತಾರೆ ಸಂಶೋಧಕರು. ಇನ್ನು ಕಾರ್ಯವಿಧಾನಾತ್ಮಕ ಸ್ಮರಣೆ ಎಂಬುದು ಕೆಲಸಕಾರ್ಯಗಳನ್ನು ‘ಹೇಗೆ?’ ಮಾಡಬೇಕು ಎಂಬುದನ್ನು ಕುರಿತಾದದ್ದು. ‘ವೀಣೆ ನುಡಿಸುವುದು ಹೇಗೆ?’, ‘ಕಾರು ಚಾಲನೆ ಮಾಡುವುದು ಹೇಗೆ?’ ಎನ್ನುವಂಥದ್ದರ ಕುರಿತಾದ ಸ್ಮರಣೆ. ಇದೂ ಕೂಡ ನಿದ್ರೆಯ ಹಂತ ಮತ್ತು ನಿಧಾನಗತಿಯ (Slow-wave sleep) ನಿದ್ರೆಯ ಹಂತದಲ್ಲಿ ರೂಪುಗೊಳ್ಳುತ್ತದೆ ಎನ್ನುತ್ತಾರೆ ಸಂಶೋಧಕರು.

ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಆದರೆ ನಿದ್ರಾಹೀನತೆಯಿಂದ ಕಲಿಕೆ, ಸ್ಮರಣೆಗಳಿಗೆ ಖಂಡಿತವಾಗಿ ತೊಂದರೆಯಿದೆ ಎಂಬುದು ಎಲ್ಲ ವಿಜ್ಞಾನಿಗಳ ಅಭಿಪ್ರಾಯ. ಹಿಂದೆಯೇ ಹೇಳಿದಂತೆ ಆಹಾರ-ವಿಹಾರ-ವಿಚಾರ-ನಿದ್ರೆ – ಈ ನಾಲ್ಕರಲ್ಲೂ ಸಮತೂಕವಿರಬೇಕು ವಿದ್ಯಾರ್ಥಿಗಳಲ್ಲಿ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ನಿದ್ರೆಯ ಅವಧಿ ಕಡಿಮೆ ಮಾಡುವುದು; ನಿದ್ರೆ ಬಾರದಂತೆ ಔಷಧ, ಚಹಾ, ತಂಬಾಕುಸೇವನೆಯಂಥವನ್ನು ಮಾಡುವುದು ಖಂಡಿತ ಒಳ್ಳೆಯದಲ್ಲ. ಕನಿಷ್ಠ ಎಂಟು ಗಂಟೆಯ ನಿದ್ರೆ ಬೇಕು. ಮಕ್ಕಳು ರಚ್ಚೆ ಹಿಡಿಯುವಂತೆ ಹದಿಹರೆಯದ ಮನಸ್ಸು ಕೂಡ ನಿದ್ರೆಯ ವಿರುದ್ಧ ರಚ್ಚೆ ಹಿಡಿಯುತ್ತದೆ. ಅಧ್ಯಯನಗಳ ಪ್ರಕಾರ ಹದಿಹರೆಯದವರಿಗೆ 9 ಗಂಟೆ 15 ನಿಮಿಷಗಳ ನಿದ್ರೆಯ ಅಗತ್ಯವಿದೆ. ಆದರೆ ಅವರು 7ರಿಂದ 7:15 ಗಂಟೆ ಮಾತ್ರ ನಿದ್ರಿಸುತ್ತಾರೆ. ಇದರಿಂದ ಉಂಟಾಗುವ ನಿದ್ರಾ ಕೊರತೆ ಅವರ ದೈನಂದಿನ ಚಟುವಟಿಕೆ, ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಸರಿಯಾಗಿ ನಿದ್ರೆ ಮಾಡುವುದು ಅಧ್ಯಯನಕ್ಕೆ ಪೂರಕವಾದ ಅಂಶವೇ ಹೊರತು ಅದಕ್ಕೆ ವಿರುದ್ಧವಾದದ್ದಲ್ಲ.

ಇಂದು ಅನೇಕ ಶಾಲೆಗಳು 7–8 ಗಂಟೆಗೇ ಆರಂಭವಾಗುತ್ತಿವೆ. ಇದಕ್ಕೆ ತಯಾರಾಗಲು ಮಕ್ಕಳು ಐದು-ಆರು ಗಂಟೆಗೆ ಏಳಬೇಕಾಗುತ್ತದೆ. ನಾನೇ ಕಣ್ಣಾರೆ ಕಂಡಿದ್ದೇನೆ. ಬೆಳಗಾಗೆದ್ದು ಪುಟ್ಟ ಮಕ್ಕಳನ್ನು ಬಚ್ಚಲು ಮನೆಗೆ ಎಳೆದೊಯ್ದು ಮೈಮೇಲೆ ನೀರು ಹಾಕಿ ಎಚ್ಚರಿಸಿ, ಹಲ್ಲುಜ್ಜಿಸಿ, ಸ್ನಾನ ಮಾಡಿಸಿ ಶಾಲೆಗೆ ಅಣಿಗೊಳಿಸುವುದನ್ನು. ಇದರ ಪರಿಣಾಮವೆಂದರೆ ಆ ಮಗು ಬಸ್ಸಿನಲ್ಲಿ, ಇಡೀ ದಿನ ಶಾಲೆಯಲ್ಲಿ ತೂಕಡಿಸುತ್ತದೆ ಮತ್ತು ಕ್ರಮೇಣ ಮಂಕಾಗಿಬಿಡುತ್ತದೆ. ಕೆಲವು ವರ್ಷಗಳ ಹಿಂದೆ ಪಿ.ಯು.ಸಿ. ವಿಭಾಗದಲ್ಲಿ ನಾನು ಪಾಠ ಮಾಡುತ್ತಿದ್ದ ದಿನಗಳಲ್ಲಿ ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ನಿದ್ರೆ ಮಾಡುತ್ತಿದ್ದುದನ್ನು ನಾನು ಗಮನಿಸಿದೆ. ನನ್ನ ವಿಷಯವಾದ ಭಾಷೆ Last ಅಥವಾ Last but one ಅವಧಿಯದು. ಹಲವಾರು ಬಾರಿ ಎಚ್ಚರಿಸಿದರೂ ಅವರು ನಿದ್ರೆಗೆ ಜಾರಿಬಿಡುತ್ತಿದ್ದರು. ಏಕೆಂದರೆ, ವಿಜ್ಞಾನದ ವಿಭಾಗದ ವಿದ್ಯಾರ್ಥಿಗಳವರು ಮುಂಜಾನೆ ಐದಕ್ಕೆ ಟ್ಯೂಷನ್‍ಗೆ ಹೋಗಿರುತ್ತಾರೆ; ಅನಂತರ 10:30 ರಿಂದ ಸಂಜೆ 4:30ರವರೆಗೆ ಕಾಲೇಜು. ಮತ್ತೆ ಸಂಜೆ 5:00ರಿಂದ 8:00 ಗಂಟೆವರೆಗೆ ಟ್ಯೂಷನ್ನು.

ರಾತ್ರಿ ಎಲ್ಲ ‘ಹೋಂವರ್ಕ್’ ಮುಗಿಸಿ ಮಲಗುವುದು 11ಕ್ಕೆ. ಭಾನುವಾರಗಳಂದು ಟೆಸ್ಟುಗಳು! ಕೊನೆಗೆ ನನ್ನ ಮನಸ್ಸು ಕರಗಿ ಅವರನ್ನು ಎಬ್ಬಿಸುವುದನ್ನು ಬಿಟ್ಟುಬಿಟ್ಟೆ. ಕೊನೆ ಬೆಂಚಿನಲ್ಲಿ ಶಿಶುವಿಹಾರದ ಮಕ್ಕಳಂತೆ ಗಡದ್ದಾಗಿ ಮಲಗಿಬಿಡುತ್ತಿದ್ದರು ನಾಲ್ಕು ಜನ ಮೀಸೆ ಬಂದ ಮಕ್ಕಳು! ಇದರಿಂದ ಉಳಿದವರು ತನ್ಮಯರಾಗಿ ಪಾಠ ಕೇಳಲು ಸಾಧ್ಯವಾಯಿತು. ಇಲ್ಲವಾದರೆ ನಾನವರನ್ನು ಪದೇ ಪದೇ ಎಚ್ಚರಿಸುವುದೇ ಕೆಲಸವಾಗಿ ಉಳಿದವರಿಗೂ ಪಾಠಕ್ಕೆ ತೊಂದರೆಯಾಗುತ್ತಿತ್ತು. ಹೀಗೊಂದು ಮಧ್ಯಮಮಾರ್ಗದ ಪರಿಹಾರದಿಂದ ಮೂರೂ ಪಾರ್ಟಿಗಳು ನಿರಾಳವಾದೆವು. ಮಕ್ಕಳನ್ನು ರೇಸು ಕುದುರೆಗಳಂತೆ ಕಾಣುವ, ಬೆಳೆಸುವ ಪರಿಪಾಟಿಯನ್ನು ಕಂಡಾಗಲೆಲ್ಲ ಕರುಳು ಕಿವಿಚಿದಂತಾಗುತ್ತದೆ.

ಬೆಳಗಾಗೆದ್ದು ನಾವು ಹಾಲು ತರಲೆಂದು ಬೀದಿಗಿಳಿವ ವೇಳೆಗಾಗಲೇ ಚಿಲ್ಟೆ-ಪಿಟ್ಟೆಗಳನ್ನು ತುಂಬಿಕೊಂಡ ಅಕಡಬ ಪಬ್ಲಿಕ್ ಸ್ಕೂಲ್ ಬಸ್ಸುಗಳು, ಪ್ರತಿಷ್ಠಿತ ಶಾಲೆಗಳ ಶಾಲಾವ್ಯಾನುಗಳು ಶಾಲೆಗಳತ್ತ ಹೂಂಕರಿಸಿ ಹೊರಟಿರುತ್ತವೆ. ಶಿಕ್ಷಣದ ನಿಜವಾದ ಕರಾಳ ಮುಖ ಇದು. ಶಾಲೆಗಳು ಹತ್ತು ಗಂಟೆಗೆ ಮುನ್ನ ಪ್ರಾರಂಭವಾಗಲೇಬಾರದು. ನಿದ್ರೆಯನ್ನು ಕದಿಯುವ ಶಿಕ್ಷಣ ಬೇಕೆ? ಪಾಲಕ-ಪೋಷಕರು ತಮ್ಮ ಮಗುವಿನ ಊಟ-ತಿಂಡಿ-ಬಟ್ಟೆಯತ್ತ ಗಮನ ನೀಡಿದಂತೆ ಸರಿಯಾದ ಅವಧಿಯ ನಿದ್ರೆ ಒದಗಿಸುವತ್ತಲೂ ಗಮನ ನೀಡಬೇಕು. ತೂಕಡಿಸುವ ತಮ್ಮನಿಗೆ ನಿದ್ರಿಸುವ ಅವಕಾಶ ಕೊಡೋಣ. ಅವನು ನವೋತ್ಸಾಹದಿಂದ ಎದ್ದು ತನ್ನ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿ ಕೈಜೋಡಿಸೋಣ.

ನಿದ್ರಾಹೀನತೆ

ಮಕ್ಕಳು ಹರೆಯಕ್ಕೆ ಕಾಲಿಟ್ಟಾಗ ಅವರ ಜೈವಿಕ ಗಡಿಯಾರ (Internal Clock) ಕೆಲವು ಬದಲಾವಣೆ ಕಾಣುತ್ತದೆ. ಆವರೆಗೆ 9ಕ್ಕೆ ಮಲಗುತ್ತಿದ್ದ ಅವರೀಗ 11ರವರೆಗೂ ಮಲಗಲು ಸಾಧ್ಯವಾಗುವುದಿಲ್ಲ. ಇದರರ್ಥ ಅವರು ಬೆಳಗ್ಗೆ ಎರಡು ಗಂಟೆ ತಡವಾಗಿ ಏಳುತ್ತಾರೆ ಎಂದು!

ನಿದ್ರಾಹೀನತೆಯಿಂದ ಹದಿಹರೆಯದಲ್ಲಿ ಕೋಪ, ಸಿಡುಕು, ಅಸಹನೆ, ಅತಿಸೂಕ್ಷ್ಮ ಪ್ರತಿಕ್ರಿಯೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ವಯೋಸಹಜ ‘ಮೂಡ್’ ಏರಿಳಿತ ಅತಿ ಆಗುತ್ತದೆ.

ನಿದ್ರಾಹೀನತೆಯಿಂದ ಅವರ ಗ್ರಹಣ ಸಾಮರ್ಥ್ಯ (Cognitive ability) ತೊಂದರೆಗೊಳಗಾಗುತ್ತದೆ. ಏಕಾಗ್ರತೆ, ಸ್ಮರಣೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಪ್ರತಿಕ್ರಿಯೆಯ ಅವಧಿ, ಸೃಜನಶೀಲತೆ – ಇವೆಲ್ಲದರ ಮೇಲೂ ಅದು ಅಡ್ಡಪರಿಣಾಮ ಬೀರುತ್ತದೆ. ಇದರಿಂದ ಅವರ ಕಲಿಕೆ (Performance) ಕುಸಿಯುತ್ತದೆ.

**

ನಿದ್ರೆ

* ವಿದ್ಯಾರ್ಥಿಗಳು ಪ್ರತಿದಿನ ನಿಗದಿತ ಸಮಯದಲ್ಲಿ ಮಲಗಿ ನಿರ್ಧಾರಿತ ಸಮಯದಲ್ಲಿ ಏಳಬೇಕು.

* ವಾರಾಂತ್ಯದಲ್ಲಿ ಅತಿಯಾಗಿ ನಿದ್ರಿಸಬಾರದು. ಇದರಿಂದ ನಿದ್ರೆಯ ತಾಳ ತಪ್ಪುತ್ತದೆ.

* ಪೂರ್ವಾಹ್ನದಲ್ಲಿ (Early afternoon) 15-20 ನಿಮಿಷದ ಲಘುನಿದ್ರೆಯಿಂದ ದೇಹದ ಶಕ್ತಿಸಾಮರ್ಥ್ಯವನ್ನು ರೀಚಾರ್ಜ್ ಮಾಡಿಕೊಳ್ಳಿ.

* ನಿದ್ರೆಗೆ ಮುನ್ನಿನ ಅವಧಿಯಲ್ಲಿ ಟಿ.ವಿ. ಕಂಪ್ಯೂಟರ್, ಇಂಟರ್ನೆಟ್‌, ಮೊಬೈಲಿನಿಂದ ದೂರವಿರಿ.

* ಇಂತಹ ಉತ್ತೇಜಕ ಚಟುವಟಿಕೆಯಿಂದ ನಿದ್ರೆಗೆ ಜಾರುವುದು ಕೊಂಚ ಕಷ್ಟವಾಗುವುದು.

* ನಿದ್ರಾಸಮಯದ ಪೂರ್ವದ ಮೂರು ಗಂಟೆ ಕಾಫಿ, ಚಹಾಗಳನ್ನು ಸೇವಿಸಬೇಡಿ.

* ನಿದ್ರೆಗೆ ಸಂಬಂಧಿಸಿದಂತೆ ತೊಂದರೆಗಳು ಅಂದರೆ ನಿದ್ರೆ ಬಾರದೇ ಇರುವುದು, ವಿಪರೀತ ನಿದ್ರಿಸುವುದು ಅಥವಾ ಸತತವಾಗಿ ಕೆಟ್ಟ ಕನಸುಗಳು ಕಾಡುವುದು, ಸತತವಾಗಿ ಗೊರಕೆ ಹೊಡೆಯುವುದು ಕಾಣಿಸಿದಾಗ ತಕ್ಷಣ ವೈದ್ಯರನ್ನು ಭೇಟಿಯಾಗಿ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !