ಓದು ಮಾನಸಿಕ ನೆಮ್ಮದಿಗೆ ಪೂರಕ

7

ಓದು ಮಾನಸಿಕ ನೆಮ್ಮದಿಗೆ ಪೂರಕ

Published:
Updated:

ಕಾಲೇಜಿನಲ್ಲಿದ್ದಾಗ ವಿಪರೀತ ಓದುವ ಹುಚ್ಚಿರುವವರನ್ನ ಪುಸ್ತಕದ ಹುಳು, ಒಂಟಿ ಗೂಬೆ, ಕುಡುಮಿ, ಲೈಬ್ರರಿ ಭೂತ, ಓದಿ ಓದಿ ಮರುಳಾದವಳು – ಅಂತೆಲ್ಲಾ ರೇಗಿಸುವ ಗೆಳೆಯ–ಗೆಳತಿಯರನ್ನು, ಪುಸ್ತಕಕ್ಕಿಂತ ಹೆಚ್ಚಿನ ಆತ್ಮಸಂಗಾತಿ ಮತ್ತೊಬ್ಬರಿಲ್ಲ, ಪುಸ್ತಕಪ್ರೇಮಿ ಸದಾಸುಖಿ ಎನ್ನುವ ಅಧ್ಯಾಪಕರನ್ನು, ಪುಸ್ತಕಜ್ಞಾನ ಅಪಾರ, ಪ್ರಪಂಚ ಜ್ಞಾನ ಸೊನ್ನೆ – ಎನ್ನುವ ಮನೆಯ ಹಿರಿಯರನ್ನು, ಹಿತಶತ್ರುಗಳನ್ನು ‘ಓದು ಪ್ರಿಯರೆಲ್ಲರು’ ನೋಡಿರುವುದು ಸಹಜ.

ಹೆಚ್ಚು ಓದಿ ಹುಚ್ಚರಾದರು, ಅನುಭವವಿಲ್ಲದ ಜ್ಞಾನ ನಿಷ್ಪ್ರಯೋಜಕ ಎನ್ನುವವರಿಂದ ಹಿಡಿದು ಓದು ಎನ್ನುವುದು ಎಂದೆಂದಿಗೂ ಬತ್ತದ ಆನಂದದ ಹೊಳೆ ಎನ್ನುವವರವರೆಗೆ ಓದಿನ ಬಗ್ಗೆ ಪ್ರತಿಯೊಬ್ಬರದೂ ಒಂದೊಂದು ನಿಲುವು; ಎಲ್ಲವೂ ಅವರವರ ಭಾವಕ್ಕೆ, ಅವರವರ ಭಕುತಿಗೆ. ಆದರೂ ಒಂದಾದರೂ ಒಳ್ಳೆಯ(?) ಪುಸ್ತಕ ಓದಿದವರು ಅದರ ಮಾಂತ್ರಿಕ ಸೆಳವಿಗೆ ಒಳಗಾಗದೆ ಇರಲು ಅಸಾಧ್ಯ. ಓದಿನ ಸುಖವೇ ಅಂಥದ್ದು, ಅದು ನಮ್ಮೊಳಗಿನ ಮನೆಯ ಬೆಳಗಿದ್ದು, ನಮ್ಮ ಯಾತನೆಗಳಿಗೆ ಹೊಸದೊಂದು ದನಿ ನೀಡಿದ್ದು, ನಮ್ಮ ಒಳಗೆಲ್ಲೋ ಹುದುಗಿಹೋಗಿದ್ದ ಹಲವು ಭಾವಗಳಿಗೆ ಬಣ್ಣದ ರೆಕ್ಕೆ ಮೂಡಿಸಿದ್ದು ನಮ್ಮೆಲ್ಲರ ಓದಿನ ಅನುಭವದ ಅವಿಭಾಜ್ಯ ಅಂಗ. ಇಂತಹ ಮಾಂತ್ರಿಕತೆಗೆ ಒಳಗಾಗದವರು ಖಂಡಿತವಾಗಿಯೂ ಜೀವನದ ಬಹುಮುಖ್ಯ, ಬಲು ತೀವ್ರ ಸುಖದಿಂದ ವಂಚಿತರಾದ ನತದೃಷ್ಟರೆಂದರೆ ಅತಿರೇಕವಾಗದೇನೋ.

ಹಾಗಾದರೆ ಅನಕ್ಷರಸ್ಥರೆಲ್ಲರೂ ಅಥವಾ ಅಕ್ಷರಸ್ಥರಾದರೂ ಓದುವುದರಲ್ಲಿ ಆಸಕ್ತಿ ಇರದ ಅನೇಕರು ಒಂದು ರೀತಿ ಅಸಂತುಷ್ಟರು, ಖಿನ್ನರು ಎಂದು ಏಕಾಏಕಿ ಭಾವಿಸುವಂತಿಲ್ಲ. ಜನಪದಕಲೆ, ಕಾವ್ಯ, ಸಂಗೀತ, ನೃತ್ಯದಂತಹ ಚಟುವಟಿಕೆಗಳಲ್ಲಿ ನಿರತರಾದ ಆದಿವಾಸಿಗಳನ್ನೋ, ಪ್ರಕೃತಿಯೊಡನೆ ನಿರಂತರ ಒಡನಾಟದಲ್ಲಿರುವ ರೈತಾಪಿ ಜನರನ್ನೋ, ಓದುವುದಕ್ಕೆ ಬಾರದ ಚಿಕ್ಕ ಮಕ್ಕಳನ್ನೋ, ಓದಿನ ಸಹವಾಸವನ್ನು ಎಳ್ಳಷ್ಟೂ ಮಾಡದ, ಆದರೆ ಸಮಾಜ–ಸಂಸ್ಕೃತಿಯೊಂದಿಗೆ ಮೂಲಭೂತವಾದ್ದೊಂದು ಗಾಢವಾದ ಸಂಬಂಧ ಇರುವ ಹಿರಿಯರನ್ನೋ, ಹಳ್ಳಿಯ ಮುಗ್ಧರನ್ನೋ ನೋಡಿದರೆ ಪುಸ್ತಕದ ಓದು ನಿಜಕ್ಕೂ ಮನಸ್ಸಿಗೆ ನೆಮ್ಮದಿ ನೀಡುವ, ನಮ್ಮನ್ನು ಆಂತರಿಕವಾಗಿ ಬೆಳೆಸುವ ಮುಖ್ಯ ಸಾಧನವಾ ಎಂಬ ಅನುಮಾನ ಕಾಡದೆ ಇರದು.

ಹಾಗೆಯೇ ಓದು ಎಂದರೆ ಪುಸ್ತಕಗಳ ಓದು ಎಂದೇ ಅರ್ಥಮಾಡಿಕೊಳ್ಳಬೇಕಿಲ್ಲ. ಇತರರ ಮನಸ್ಸನ್ನು ಓದುವುದು, ವರ್ತನೆಗಳನ್ನು, ಸಂಜ್ಞೆಗಳನ್ನು ಓದುವುದು, ಸಂಸ್ಕೃತಿಯನ್ನು ಓದುವುದು, ಪ್ರಕೃತಿಯನ್ನು ಓದುವುದು – ಇನ್ನು ಮುಂತಾದ ವಿಶೇಷ ಅರ್ಥಗಳಲ್ಲಿ ಬಳಸಲಾಗುತ್ತದೆ. ಈ ರೀತಿ ಓದಬಹುದಾದ ಎಲ್ಲವನ್ನು ‘text’ ಎಂದು ಪರಿಗಣಿಸುವ ಪರಿಪಾಠವೂ ಇದಕ್ಕೆ ಪೂರಕವಾಗೆ ಇದೆಯಲ್ಲ ಎಂಬ ಪ್ರಶ್ನೆ ಏಳುತ್ತದೆ? ಆದರೆ ನಮ್ಮ ಅನುಭವ ಗ್ರಾಹ್ಯ ದೈನಂದಿನ ಜೀವನದ textಗಳನ್ನು ಓದಲೂ, ಪುಸ್ತಕಗಳ ಓದು ಅಗತ್ಯ. ಒಮ್ಮೆ ಆಲೋಚಿಸಿ ನೋಡಿ, ಜನಪದಕಲೆ, ಸಂಗೀತ, ಕಾವ್ಯ, ನೃತ್ಯ - ಅದರ ಒಳ ಹೊರಗು, ಅರ್ಥ-ಅನ್ವಯ, ಪ್ರಕೃತಿ-ಮಾನವ ಸಂಬಂಧದ ಅನೇಕ ಮಜಲುಗಳು, ಮುದುಕರನ್ನೂ ಬಾಲ್ಯಕ್ಕೆ ಕರೆದೊಯ್ಯುವ ರೋಮಾಂಚಕ ಕಥೆ, ಕವನಗಳು, ಬಾಲ್ಯದ ನೋವು, ಅಪಮಾನಗಳ ಹಿಂದೆ ನಿಜವಾಗಲೂ ನಡೆಯುತ್ತಿದ್ದುದೇನು ಎನ್ನುವುದರ ಸೂಕ್ಷ್ಮ ಅರಿವು, ಸಮಾಜ–ಸಂಸ್ಕೃತಿ ಎಂದರೇನು, ಅದಕ್ಕೂ ನಮಗೂ ಇರುವ ನಂಟು ಯಾವ ಬಗೆಯದು ಎನ್ನುವ ಮೀಮಾಂಸೆ ಎಲ್ಲದರ ಬಗ್ಗೆಯೂ ಲಕ್ಷಾಂತರ ಪುಸ್ತಕಗಳು, ಸಹಸ್ರಾರು ದೃಷ್ಟಿಕೋನಗಳಿಂದ ಬರೆಯಲ್ಪಟ್ಟಿವೆ. ಓದಲು ಬಾರದ, ಓದಲು ಬಂದರೂ ಓದುವ ಆಸಕ್ತಿ ಇರದವರಿಗಿರುವ ಸೀಮಿತ ಅನುಭವಗಳ, ಪರಿಧಿಯೊಳಗಿನ ಬದುಕಿಗೂ, ಓದುವ ಅಭ್ಯಾಸದ ಕಾರಣವಾಗಿಯೇ ಸಾವಿರ ಬದುಕುಗಳನ್ನು, ನೂರಾರು ಅನುಭವಗಳನ್ನೂ, ಲೆಕ್ಕವಿಲ್ಲದಷ್ಟು ಭಾವಗಳನ್ನು, ಅನಂತಾನಂತ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುವುದು ಓದುಪ್ರಿಯರಿಗಿರುವ ಪರಮಭಾಗ್ಯ.

ಓದನ್ನು ಸಾಧ್ಯಮಾಡಿಕೊಂಡ ಮಾನವಜೀವನದ ಮಹಾಯೋಗವೆಂದರೆ ಸರಿಯಾಗುವುದೇನೋ? ಅನೇಕ ಜ್ಞಾನಶಾಖೆಗಳ ಅಧ್ಯಯನದ ಹೊಳಹುಗಳು ಬೌದ್ಧಿಕ ವಿಕಾಸಕ್ಕೆ, ವಿಚಾರಕ್ಕೆ ಕಾರಣವಾದರೆ, ಸಾಹಿತ್ಯದ ಓದು ನಮ್ಮನ್ನು ನಾವೇ ಹೊಸದಾಗಿ ಆವಿಷ್ಕರಿಸಿಕೊಂಡ, ನಮ್ಮೊಳಗಿನ ಆದ್ಯಂತರಹಿತ, ನಿರಂತರ ಅರಿವಿನ, ಪ್ರೇಮದ ಚಿಲುಮೆಯನ್ನು ಶೋಧಿಸಿಕೊಂಡಂತಹ ಸಾರ್ಥಕ ಕ್ಷಣಗಳನ್ನು ನೀಡುತ್ತದೆ. ಸವಕಲು ಬಿದ್ದ, ನಿರ್ಜೀವವಾದ ಎಷ್ಟೋ ಚಿಂತನೆಗಳಿಗೆ ಚಲನಶೀಲತೆಯನ್ನು, ಜೀವನ್ಮುಖಿ ಆಶೋತ್ತರಗಳನ್ನು ಮಾನವ ಹೃದಯದಲ್ಲಿ ಚಿಗುರಿಸುವ ಅಮೃತವಾಹಿನಿ ಓದು. ನಮ್ಮನ್ನು ನಾವೇ ಆಕ್ರಮಿಸಿ, ವಿವೇಕಹೀನತೆಯಿಂದ ನಮ್ಮನ್ನು ನಾವೇ ಹಿಂಸೆಗೊಳಿಸಿಕೊಂಡು, ಇತರರಿಗೂ ಹಿಂಸೆ ನೀಡುವ ಸ್ವಯಂಕೃತ ವಿಷವರ್ತುಲದಿಂದ ಹೊರತೆಗೆಯುವ ಅಮೃತಹಸ್ತ ಓದು. ಓದೆಂದರೆ ಒಬ್ಬಳೇ ಮೂಲೆಯಲ್ಲಿ ಕುಳಿತು ಮಾಡುವ ಶುಷ್ಕಕ್ರಿಯೆ ಎಂದೆಣಿಸದೆ, ಓದುವುದೆಂದರೆ ನಮ್ಮೊಡನೆ ನಾವೇ ನಡೆಸುವ ಸಂವಾದ, ದೀರ್ಘವಾಗಿ ಕನ್ನಡಿಯಲ್ಲೊಮ್ಮೆ ನಮ್ಮದೇ ಪ್ರತಿಬಿಂಬವನ್ನು ನೋಡುವಂತಹ ನೋಟ, ನಮ್ಮೊಡನೆ ನಾವೇ ಸಖ್ಯ ಬೆಳೆಸಿ, ಕೈಹಿಡಿದು ಒಟ್ಟಿಗೆ ನಡೆದಂತಹ, ನರ್ತಿಸಿದಂತಹ, ಯಾರೂ ಕೇಳದಿದ್ದರೂ ಎದೆ ತುಂಬಿ ಹಾಡಿದಂತಹ ಅನುಭವ ಎಂಬ ಅರ್ಥದಲ್ಲಿ ನೋಡಿದರೆ ಓದು ಒಂದು ವಿಶಿಷ್ಟ ರೀತಿಯ ಕಲಾನುಭವ, ಭಾಷೆ ಎಂಬ ಅಚ್ಚರಿಯೊಂದಿಗಿನ ನಮ್ಮ ಆಜನ್ಮ ಸಿದ್ಧ ನಂಟು ಎಂದು ಅರಿವಿಗೆ ಬಾರದೆ ಇರದು.

ನಮ್ಮ ಆಲೋಚನೆಗಳಿಗೆ ಭಾಷೆಯ ರೂಪ ನೀಡಿ, ಅದನ್ನು ಓದಿಗೆ ಒಗ್ಗಿಸಿ, ಅದನ್ನು ಓದಿದ ವ್ಯಕ್ತಿ ಭಾಷೆಯ ಮೂಲಕ ನಮ್ಮ ಆಲೋಚನೆಗಳನ್ನು ಹಾಗೂ ಅದರ ಹಿಂದಿರುವ ಭಾವವನ್ನು ಗ್ರಹಿಸಿ ಅದಕ್ಕೆ ಸ್ಪಂದಿಸುವ ಓದೆಂಬ ಈ ವಿಸ್ಮಯವ ಗ್ರಹಿಸಿದ ಎಂಥವರೂ ಒಮ್ಮೆ ಮನುಷ್ಯನ ಭಾಷಾ ಸಾಮರ್ಥ್ಯಕ್ಕೆ ಮೂಕಸ್ಥಬ್ಧರಾಗದೆ ಇರಲು ಹೇಗೆ ಸಾಧ್ಯ ಮತ್ತು ಭಾಷೆಯ ಮೂಲಕ ಸ್ವ ಅಭಿವ್ಯಕ್ತಿ ಸಾಧ್ಯವಾಗುವ ಈ ವಿಶೇಷ ಸಾಮರ್ಥ್ಯದ ಸಂಪೂರ್ಣ ಉಪಯೋಗ ಪಡೆದುಕೊಳ್ಳುವ ಓದಿನ ಕ್ರಿಯೆ ಒಂದು ಪವಾಡವಲ್ಲ ಎಂದರೆ ಜಗತ್ತಿನಲ್ಲಿ ಪವಾಡಗಳೇ ಇಲ್ಲ ಎನ್ನುವುದನ್ನು ಒಪ್ಪಬಹುದೇನೋ. We are the prisoners of our own thoughts ಎಂಬ ಮಾತೊಂದಿದೆ. ಮನೋಚಿಕಿತ್ಸೆಯ ಅತಿ ಮುಖ್ಯ ಪಂಥವಾದ cognitive therapy ಈ ಮಾತನ್ನು ಬಲವಾಗಿ ಸಮರ್ಥಿಸುತ್ತದೆ.

ನಮ್ಮ ಆಲೋಚನೆಗಳಿಗೂ ನಮ್ಮ ಭಾವನೆಗಳಿಗೂ ನಿಕಟವಾದ ಸಂಬಂಧವಿದೆ. ಒಂದು ಇನ್ನೊಂದನ್ನು ತೀವ್ರವಾಗಿ ಪ್ರೇರೇಪಿಸುವ ಕ್ರಿಯೆ ಹುಟ್ಟಿನಿಂದ ಸಾಯುವವರೆಗೂ ನಡೆದೇ ಇರುತ್ತದೆ. (ಬುದ್ದಿ ಭಾವಗಳು ವಿರುದ್ಧ ಪದಗಳು ಎಂಬಂತಹ ಕಲ್ಪನೆ ಹೊಂದಿದವರು ಗಮನಿಸಿ) ನಮ್ಮ ಬಗ್ಗೆ ನಮಗೆ ಆಂತರಿಕವಾಗಿ, ಬಲವಾಗಿ ಬೇರೂರಿದ ನಂಬಿಕೆಗಳು, ವಿಚಾರಗಳು ನಮ್ಮ ಭಾವಲೋಕವನ್ನು ಸದಾ ಪ್ರಭಾವಿಸುತ್ತಲೇ ಇರುತ್ತದೆ. ಉದಾಹರಣೆಗೆ ‘ನನ್ನನ್ನು ಯಾರೂ ಇಷ್ಟ ಪಡುವುದಿಲ್ಲ’ ‘ನಾನು ಯಾವುದರಲ್ಲೂ ಸರಿಯಾಗಿಲ್ಲ’ ‘ನನ್ನನ್ನು ಎಲ್ಲರೂ ಮೋಸಗೊಳಿಸುತ್ತಾರೆ’,  ‘ನನ್ನ ಜೀವನ ಆದರ್ಶಪ್ರಾಯವಾದದ್ದು, ನಾನು ಶ್ರೇಷ್ಠ ವ್ಯಕ್ತಿ’ – ಇನ್ನೂ ಮುಂತಾದ ಅಭಿಮತಗಳನ್ನು ನಾವು ಅಂತರ್ಗತಗೊಳಿಸಿಕೊಂಡಿರುತ್ತೇವೆ. ಈ ಪ್ರಕ್ರಿಯೆಯಲ್ಲಿ ಕುಟುಂಬದ, ಸಮಾಜದ ಪಾತ್ರವೂ ಬಲು ದೊಡ್ಡದು. ಇಂತಹ ಒಂದು ಸ್ವಯಂ ನಿರ್ಮಿತ ಚೌಕಟ್ಟಿನೊಳಗಿಂದಲೇ ಅಲ್ಲವೇ ನಾವು ಪ್ರಪಂಚವನ್ನು, ಸಂಬಂಧಗಳನ್ನು ನೋಡುತ್ತಿರುತ್ತೇವೆ. ನಮ್ಮ ಅನೇಕ ಭಾವನೆಗಳು ನಮ್ಮ ಸ್ವ ಅಭಿಮತಗಳ ಮೇಲೆ ನಿಂತಿರುತ್ತವೆ. ಇದನ್ನು ಬದಲಾಯಿಸಿಕೊಳ್ಳುವುದು ನಾವಂದುಕೊಂಡಷ್ಟು ಸುಲಭವಲ್ಲ. ನಮ್ಮನ್ನು ಬಾಧಿಸುವ ಅನೇಕ ಪೂರ್ವಗ್ರಹಗಳಿಂದ, ನಿರ್ದಿಷ್ಟ ಆದರೆ ಅನುಪಯುಕ್ತ ಚಿಂತನಕ್ರಮದಿಂದ ಬಿಡುಗಡೆ ಹೊಂದುವುದು ಯಾವ ಸಾಹಸಕ್ಕೂ ಕಡಿಮೆಯಿಲ್ಲ. ಆದರೆ ಅತ್ಯುತ್ತಮ ಪುಸ್ತಕವೊಂದು ಇದನ್ನು ಸಾಧಿಸಲು ಅನುಪಮ ಪ್ರೇರಣೆಯಾಗುವುದು ಖಂಡಿತ ಸಾಧ್ಯವಿದೆ. ಬದುಕನ್ನು ಬದಲಾಯಿಸಬಲ್ಲ, ಚಿಂತನೆಗೆ ಹೊಸ ದಿಕ್ಕನ್ನು ತೋರಿಸುವ ಪುಸ್ತಕಗಳಿರುವುದು ಯಾರೂ ತಿಳಿಯದ ರಹಸ್ಯವೇನಲ್ಲ.

ನಮ್ಮನ್ನು ಪ್ರತಿನಿತ್ಯವೂ ಬಾಧಿಸುವ ಕೋಪ, ಅಸಹಾಯಕತೆ, ಅವಮಾನ – ಮುಂತಾದ ಅನೇಕ ಮನೋವ್ಯಾಪಾರಗಳ ಹೊಸ ವ್ಯಾಖ್ಯೆಯೊಂದು ಓದಿನಿಂದ ಸಾಧ್ಯ. ಬ್ರೆನಿ ಬ್ರೌನ್‌ಳ daring greatly, gifts of imperfection ನಂತಹ ಪುಸ್ತಕಗಳನ್ನೋದಿ ‘shame’ (ನನ್ನಲ್ಲಿ ಮೂಲಭೂತವಾದ ಕೊರತೆಯೊಂದರ ಕಾರಣದಿಂದಾಗಿ ನಾನು ಪ್ರೀತಿಗೆ ಅರ್ಹನಲ್ಲ/ ಅರ್ಹಳಲ್ಲ ಎಂಬ ಅವಮಾನಭರಿತ ಸ್ವ ಅಭಿಮತ)ನಿಂದ ಹಾಗೂ ಅದರಿಂದ ಉಂಟಾಗುವ ಪರಿಪೂರ್ಣತೆಯ ಭ್ರಮೆಯಿಂದ ಬಿಡುಗಡೆ ಹೊಂದಿ ನಿರಾಳತೆಯನ್ನನುಭವಿಸಿದ್ದು ನನ್ನ ಓದಿನ ಸಾಹಸದ ಅವಿಸ್ಮರಣೀಯ ಅನುಭವ ಎಂದು ನನಗನಿಸಿದ್ದನ್ನು ಹೇಳದೆ ಇರುವುದು ಹೇಗೆ? ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಕೇವಲ ಓದಿನಿಂದಷ್ಟೇ ಸಾಧ್ಯವಾಗುವುದಿಲ್ಲ. ನಮ್ಮನ್ನು ನಾವಿರುವಂತೆಯೇ ಒಪ್ಪುವ, ಆಕೃತ್ರಿಮವಾಗಿ ಮೆಚ್ಚುವ, ಚಿಕಿತ್ಸಕ ಮನೋಭಾವನೆಯ, ನೈತಿಕ, ಆಧ್ಯಾತ್ಮಿಕ ಬಲ ನೀಡುವ ಮತ್ತೊಂದು ವ್ಯಕ್ತಿಯ ಆಸರೆ ಇದಕ್ಕೆ ಬೇಕು. ಆದರೆ ಮತ್ತೊಂದು ವ್ಯಕ್ತಿಯ ಮೇಲಿನ ಈ ಅವಲಂಬನೆಯನ್ನು ಓದಿನ ಪರಿಧಿಯ ಹೊರಗಿಡಬೇಕಾಗಿಲ್ಲ, ಈ ಅವಲಂಬನೆ ಮಾನವ ಜೀವನಕ್ಕೆ, ಸಂಬಂಧಗಳಿಗೆ ಇರುವ ಸೌಂದರ್ಯವನ್ನು ಸಾರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ನಿಜವಾಗಿಯೂ ಹೇಳಬೇಕೆಂದರೆ ಒಬ್ಬರ ನೋವುಗಳಿಗೆ ಇನ್ನೊಬರು ಪರೋಕ್ಷವಾಗಿ ಮುಲಾಮು ಹಚ್ಚುವ, ನಲಿವುಗಳಿಗೆ ಇನ್ನಷ್ಟು ಹೊಳಪು ನೀಡುವ ಕಾಯಕವನ್ನೇ ಅಲ್ಲವೇ ಸಾಹಿತ್ಯ, ಕಲೆಗಳು ಸಾಧ್ಯವಾಗಿಸುವುದು? ಪ್ರಖರ ಪುಸ್ತಕಗಳ ಓದಿಲ್ಲದೆ ಹೋದರೆ ಬದಲಾವಣೆಯ ಹಾದಿ ಅಸಂಭವನೀಯವಲ್ಲದಿದ್ದರೂ ತುಸು ತ್ರಾಸದಾಯಕವೇ ಹೌದು. ಈ ಅರ್ಥದಲ್ಲಿ ಪುಸ್ತಕಗಳ ಓದು ಮನೋಚಿಕಿತ್ಸೆಯಂತೆಯೇ ಕೆಲಸ ಮಾಡುತ್ತದೆ ಮತ್ತು ಆಳವಾದ ಭಾವನಾತ್ಮಕ ನೋವುಗಳನ್ನು ಉಪಶಮನಗೊಳಿಸುವಂತಹ ದಿವ್ಯಶಕ್ತಿಯನ್ನು ಹೊಂದಿದೆ.

ಇನ್ನು ಓದೆಂದರೆ ಒಂಟಿಯಾಗಿಯೇ ಮಾಡಬೇಕಾದ ಕ್ರಿಯೆಯಲ್ಲ. ಅದು ಅಪೇಕ್ಷಣೀಯವೂ ಅಲ್ಲ. ಒಟ್ಟಿಗೆ ಓದುವ, ಓದಿದ್ದರ ಅನುಭವ ಹಂಚಿಕೊಳ್ಳುವ, ವಿಮರ್ಶಿಸುವ, ಪ್ರಶ್ನೋತ್ತರಗಳನ್ನು ಕೈಗೊಳ್ಳುವ ಅನೇಕ ಅಧ್ಯಯನಶೀಲ ಗುಂಪುಗಳನ್ನು ಪರಿಗಣಿಸಬಹುದು ಅಥವಾ ವಿದ್ಯುನ್ಮಾನ ಮಾಧ್ಯಮದ ಮುಖಾಂತರವೂ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಓದಿನಿಂದ ಪ್ರೇರಿತವಾದ ಸಂವಾದವೊಂದು ಜನ್ಮತಾಳಿ, ಪರಸ್ಪರ ಸಂವೇದನಾಶೀಲತೆಯನ್ನು ಉದ್ದೀಪಿಸುವ, ಒಬ್ಬರ ಅನುಭವಗಳು ಮತ್ತೊಬ್ಬರ ಅನುಭವಗಳಿಗೆ ಜೊತೆಯಾಗುವ, ಒಬ್ಬರನ್ನೊಬ್ಬರು ಬೆಸೆಯುವ ಕ್ರಿಯೆಯೊಂದು ನಡೆಯುತ್ತದೆ. ಪ್ರಪಂಚದ ನಾನಾ ಭಾಗಗಳಲ್ಲಿನ ಅನೇಕ ಚಿಂತಕರ ಪರಿಕಲ್ಪನೆಗಳನ್ನು, ತಾತ್ವಿಕಲೋಕವನ್ನು ಹೊಕ್ಕು ತನ್ನ ಅನುಭವ, ಚಿಂತನೆಗಳಿಗೆ ಒಂದು ರೀತಿಯ ಸಾಮಾಜಿಕ, ಸಾಂಸ್ಕೃತಿಕ ಅನುಮೋದನೆಯನ್ನು ಪಡೆದುಕೊಳ್ಳುವುದು ಒಂದು ಕಡೆಯಾದರೆ, ತನ್ನ ಅನುಭವಗಳೊಂದಿಗೆ ಹಲವರ ಅನುಭವಗಳು ದನಿ ಗೂಡಿಸಿ, ಒಟ್ಟಾಗಿ ನಿಲ್ಲುವ ಪರಿಯನ್ನು ಕಂಡಾಗ ‘ಹಂಚಿಕೊಳ್ಳುವಿಕೆ’ ನೀಡುವ ಸಮಷ್ಟಿ ಭಾವವೊಂದು ನೆಲೆಸಿ ಮನೋಸ್ಥೈರ್ಯ ಹೆಚ್ಚಾಗುವುದು ನಿಜ. ಇಷ್ಟೇ ಅಲ್ಲದೆ ಆಳವಾದ ಅಧ್ಯಯನ , ಚಿಂತನೆಗಳ ಪ್ರೇರಣೆಯಿಂದ ಆತ್ಮಸ್ಥೈರ್ಯ ಪಡೆದು ವ್ಯಕ್ತಿ ತನ್ನ ಅನುಭವಲೋಕದ ಸತ್ಯವನ್ನು ಮುಚ್ಚುಮರೆಯಿಲ್ಲದೆ ದಿಟ್ಟವಾಗಿ ಅಭಿವ್ಯಕ್ತಿಸುವ ಹೊಸ ಭಾಷೆ, ನವೀನ ಆಲೋಚನಾಕ್ರಮಗಳನ್ನು ಮನೋಗತ ಮಾಡಿಕೊಳ್ಳುವುದು ಸಾಧ್ಯವಿದೆ.

ಆಲೋಚನೆ ಎನ್ನುವುದು ಮಾನವ ಅಸ್ತಿತ್ವದ ಹೆಗ್ಗುರುತಾದರೆ ಓದು ಎನ್ನುವುದು ಆ ಹೆಗ್ಗುರುತನ್ನು ಅತಿ ಹೆಮ್ಮೆಯಿಂದ ಧರಿಸುವ ಸಹಜ ಆಕಾಂಕ್ಷೆ. ಓದು ಆಲೋಚನೆಗಳ ಬೆಡಗಿನ ವಿಸ್ತೃತ ಪ್ರಪಂಚದ ಕೀಲಿಕೈ. ಓದು ನೀಡುವ ವೈಚಾರಿಕ, ಬೌದ್ಧಿಕ ರೋಮಾಂಚನ ಬಲ್ಲವರೇ ಬಲ್ಲರು. ಅರಿವಿಗೆ ಸುಲಭವಾಗಿ ಸಿಗದ ಪರಿಕಲ್ಪನೆಗಳ ಜೊತೆ ಮಾಡುವ ಬೌದ್ಧಿಕ ಕಸರತ್ತುಗಳು ಎಷ್ಟೋ ಕ್ರಾಂತಿಕಾರಕ ವಿಚಾರಧಾರೆಗಳಿಗೆ ಮೂಲವಾಗಿದೆ. ಅನೇಕ ವಿಚಾರಗಳನ್ನು ಓದಿದರೂ, ಗ್ರಹಿಸಿದರೂ ಯಾವುದಕ್ಕೂ ಅತಿಯಾಗಿ ಜೋತುಬೀಳದೆ, ಯಾವುದನ್ನೂ ಸುಲಭವಾಗಿ ಪುರಸ್ಕರಿಸದ, ತಿರಸ್ಕರಿಸದ ಸಮಚಿತ್ತತೆಯನ್ನೂ, ಮಧ್ಯಮಮಾರ್ಗವೊಂದನ್ನು ಕಂಡುಕೊಳ್ಳುವುದು ನಿರಂತರ ಅಧ್ಯಯನಶೀಲತೆಯಿಂದ ಮಾತ್ರ ಸಾಧ್ಯ. ಸಮಚಿತ್ತತೆಯು ಮಾನಸಿಕ ಸೌಖ್ಯದ ಬೇರು. ನೋವು, ಒಂಟಿತನ, ಹತಾಶೆ, ಜುಗುಪ್ಸೆಗಳಿಂದ ಮುಕ್ತಗೊಳಿಸುವ, ಅವುಗಳನ್ನು ಸೃಜನಶೀಲವಾಗಿ ನಿಭಾಯಿಸುವ, ಕಹಿ ಭಾವಗಳನ್ನು ಆತ್ಮೋನ್ನತಿಗಾಗಿ ಬಳಸುವ, ಬುದ್ಧಿವಿಕಾಸದ, ಆತ್ಮವಿಕಾಸದ ಅನೇಕ ಸಾಧ್ಯತೆಗಳು ತೆರೆದುಕೊಂಡು ಪದಗಳಲ್ಲಿ ಹಿಡಿದಿಡಲು ಅಶಕ್ಯವಾದ ಮಾನಸಿಕ ನೆಮ್ಮದಿ ನೆಲೆಸಬೇಕಾದರೆ ಓದು ನಮಗೆ ಪ್ರಿಯವಾಗಲೇಬೇಕು.

*

–ರಮ್ಯಾ ಶ್ರೀಹರಿ 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !