ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೆಂದರೆ ಅಂಕಗಳಿಸುವ ಯಂತ್ರಗಳೇ?

Last Updated 21 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

‘ಅಯ್ಯೋ ಅಯ್ಯೋ, ಅಯ್ಯೋ, ಏನೇ ಇದು? ಕನಿಷ್ಠ 95 ಪರ್ಸೆಂಟ್‌ ಬರುತ್ತೆ ಅಂದ್ಕೊಂಡಿದ್ವಲ್ಲೇ! ಏನಾಯ್ತೇ ನಿಂಗೆ? ಬರೀ 81 ಪರ್ಸೆಂಟ್‌ ಬಂದಿದೆ!’ ಎಂದು ಒಂದೇ ಸಮನೆ ಮಗಳಿಗೆ ದಬಾಯಿಸುತ್ತಿದ್ದಳು. ಪಿಯುಸಿ ಎರಡನೇ ವರ್ಷದ ಫಲಿತಾಂಶವನ್ನು ಹಿಡಿದುಕೊಂಡು, ಆಗಬಾರದ ಅನಾಹುತವೇನೋ ಅಗಿ ಹೋಗಿದೆಯೇನೋ ಎನ್ನುವ ಹಾಗೆ ಮುಖ ತಗ್ಗಿಸಿಕೊಂಡು ತನ್ನ ತಾಯಿಯ ಎದುರಿಗೆ ನಿಂತಿದ್ದಳು ಮಗಳು ಜಾನಕಿ. ಅವಳ ಕಣ್ಣಲ್ಲಿ ನೀರಧಾರೆ.

ಮಕ್ಕಳು ಚೆನ್ನಾಗಿ ಓದಬೇಕು. ಸಾಧ್ಯವಾದಷ್ಟು ಹೆಚ್ಚು ಅಂಕಗಳನ್ನು ಗಳಿಸಬೇಕು. ಅದರಿಂದ ಅವರಿಗೆ ಒಳ್ಳೊಳ್ಳೆಯ ಶಾಲಾ–ಕಾಲೇಜುಗಳಲ್ಲಿ ಓದಲಿಕ್ಕೆ ಸಾಧ್ಯವಾಗುತ್ತದೆ. ಮುಂದೆ ಒಳ್ಳೊಳ್ಳೆಯ ಕಂಪನಿಗಳಲ್ಲಿ ಕೆಲಸ ಸಿಗುತ್ತದೆ. ಕೈತುಂಬ ಸಂಬಳ ಬರುತ್ತದೆ. ಮಗುವಿನ ಜೀವನ ಚೆನ್ನಾಗಿರುತ್ತದೆ. ಇವೆಲ್ಲ ಸದುದ್ದೇಶಗಳಿಂದ ಪಾಲಕರು ತಮ್ಮ ಮಕ್ಕಳು ಶ್ರಮವಹಿಸಿ ಓದಲಿ ಎಂದು ಬಯಸುತ್ತಾರೆ. ಹಣವು ಜಣಜಣವೆಂದರೆ ಜೀವನ ಜಗಮಗ ಎನ್ನುವ ಸತ್ಯ ಪಾಲಕರಿಗೆ ಅರಿವಾಗಿರುತ್ತದೆ. ಬದುಕಿನ ಬಗ್ಗೆ ಅಷ್ಟೆಲ್ಲ ಗಂಭೀರವಾದ ಅರಿವು ಮಕ್ಕಳಿಗೆ ಇರುವುದಿಲ್ಲ! ಹಾಗಾಗಿಯೇ ಅವರನ್ನು ಮಕ್ಕಳು ಎನ್ನುತ್ತೇವೆ.

ಮಕ್ಕಳು ಸಾಧ್ಯವಾದಷ್ಟೂ ಚೆನ್ನಾಗಿ ಓದಬೇಕು. ಸಾಧ್ಯವಾದಷ್ಟೂ ಹೆಚ್ಚಿಗೆ ಅಂಕಗಳನ್ನು ಗಳಿಸಬೇಕು. ನಿಜ. ಅದು ಪಾಲಕರಿಗಷ್ಟೇ ಅಲ್ಲ, ಓದುವ ಮಕ್ಕಳಿಗೂ ಗೊತ್ತಿರುತ್ತದೆ! ಆದರೆ ಎಲ್ಲರಿಂದಲೂ ಅಷ್ಟೆಲ್ಲ ಅಂಕಗಳನ್ನು ಪಡೆಯುವುದಕ್ಕೆ ಆಗುವುದಿಲ್ಲ. ಇನ್ನು ಕೆಲವರಿಗೆ ಬೇಕಾದಷ್ಟು ಅಂಕಗಳನ್ನು ಗಳಿಸಲಿಕ್ಕೆ ಯೋಗ್ಯತೆ ಇರುತ್ತದೆಯಾದರೂ ಅವರು ಗಳಿಸುವುದಿಲ್ಲ. ಮುಂದಿನ ವರ್ಷ ಖಂಡಿತವಾಗಿಯೂ ತೊಂಬತ್ತಕ್ಕಿಂತ ಹೆಚ್ಚು ಬರುವಂತೆ ಮಾಡಿದರಾಯಿತು ಎನ್ನುವ ಗುಂಪಿನವರದ್ದು ಮತ್ತೊಂದು ಕತೆ!

ಮಕ್ಕಳು ಚೆನ್ನಾಗಿ ಓದಬೇಕು ಎಂದು ಪಾಲಕರು ತಮ್ಮ ಕೈಲಾಗುವ ಎಲ್ಲ ಸಹಕಾರವನ್ನೂ ಕೊಡುತ್ತಾರೆ. ಮಕ್ಕಳಿಗಾಗಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಾರೆ. ಮಕ್ಕಳು ಕೇಳಿದ್ದನ್ನು ಇಲ್ಲವೆನ್ನಲಿಕ್ಕಾಗದೇ ತಂದು ಕೊಡುತ್ತಾರೆ. ಅದಕ್ಕಾಗಿ ಪಾಲಕರು ಕಷ್ಟ ಪಡುತ್ತಾರೆ. ಮಕ್ಕಳ ಉಜ್ವಲ ಭವಿಷತ್ತಿನ ಬಗ್ಗೆ ಬಣ್ಣಬಣ್ಣದ ಕನಸು ಕಟ್ಟುತ್ತಾರೆ. ಎಲ್ಲವೂ ನಿಜ. ಆದರೆ ಮಕ್ಕಳಿಗೆ ಪಾಲಕರ ಕಷ್ಟ, ಇಷ್ಟ ಅರ್ಥವಾಗುವುದಿಲ್ಲ. ಎಲ್ಲಿಯವರೆಗೆ ಮಗುವಿಗೆ ತಾನು ಏನನ್ನಾದರೂ ಸಾಧಿಸಬೆಕು, ತಾನು ಚೆನ್ನಾಗಿ ಓದಬೇಕು ಎಂದು ಅನ್ನಿಸುವುದಿಲ್ಲವೊ, ಅಲ್ಲಿಯವರೆಗೆ ಯಾರೇನೇ ಹೇಳಿದರೂ ಅದನ್ನು ಮಗು ಅರ್ಥಮಾಡಿಕೊಳ್ಳುವುದಿಲ್ಲ. ಮಕ್ಕಳ ಆ ಮನಃಸ್ಥಿತಿಯನ್ನು ಪಾಲಕರು ಅರ್ಥಮಾಡಿಕೊಳ್ಳುವುದಿಲ್ಲ.

ಬಹುತೇಕ ಪಾಲಕರಿಗೆ ತಮ್ಮ ಮಕ್ಕಳು ತಮಗಿಂತ ಹೆಚ್ಚಿನದನ್ನು ಸಾಧಿಸಬೇಕು. ತಮಗಿಂತ ವಿಶೇಷವಾದದನ್ನು ಸಾಧಿಸಬೇಕು. ತಮಗಿಂತಲೂ ಹೆಚ್ಚು ಸುಖವಾಗಿ ಬದುಕಬೇಕು ಎನ್ನುವ ಆಸೆಗಳ ಪಟ್ಟಿಯೇ ಸಿದ್ಧವಾಗಿರುತ್ತದೆ. ಪಾಲಕರ ಇಂತಹ ಎಲ್ಲಾ ಆಸೆಗಳನ್ನು ಪೂರೈಸಲಿಕ್ಕೆ ಮಕ್ಕಳಿಂದ ನಿಜಕ್ಕೂ ಸಾಧ್ಯವಾಗುತ್ತದೆಯೆ?ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂದು ಪಾಲಕರು ಮಕ್ಕಳ ಮೇಲೆ ಒತ್ತಡವನ್ನು ಹಾಕುತ್ತಾರೆ. ಉಳಿದ ಮಕ್ಕಳ ಜೊತೆಗೆ ಹೋಲಿಸಿ ಮಾತನಾಡುತ್ತಾರೆ. ಅವನಿಂದಾಗುವ ಕೆಲಸ ನಿನ್ನಿಂದೇಕೆ ಆಗುವುದಿಲ್ಲ ಎಂದು ಪ್ರಶ್ನಿಸುತ್ತಾರೆ.

ಪಾಲಕರ ಭಯದಿಂದಲೋ, ಮತ್ತ್ಯಾವುದೋ ಕಾರಣದಿಂದಲೋ ಮಗು ಓದಲಿಕ್ಕೆ ಕುಳಿತುಕೊಳ್ಳುತ್ತದೆ. ನೋಡುವವರಿಗೆ ಮಗು ಓದುತ್ತಿರುವಂತೆಯೇ ಕಾಣುತ್ತದೆ. ಆದರೆ ಮಗು ನಿಜವಾಗಿಯೂ ಓದುತ್ತಿದೆಯೋ ಇಲ್ಲವೋ ಎನ್ನುವುದು ಉಳಿದವರಿಗೆ ಗೊತ್ತಾಗುವುದಿಲ್ಲ. ತನಗೆ ಇಷ್ಟವಿದ್ದು ಓದಿದಾಗ ಮಾತ್ರ ಓದಿದ ವಿಷಯ ಅರ್ಥವಾಗುತ್ತದೆ. ಬೇರೆಯವರ ಅಣತಿಯಂತೆ, ಬೇರೆಯವರ ಕಣ್ಣಳತೆಯಲ್ಲಿ ಓದುವವರಿಗೆ ವಿಷಯ ಅರ್ಥವಾಗುವ ಸಾಧ್ಯತೆ ತೀರಾ ಕಡಿಮೆ. ಅವರ ಕೈಯಲ್ಲಿ ಪುಸ್ತಕವಿರುತ್ತದೆಯಾದರೋ, ಅವರ ಮಸ್ತಕ ಮತ್ತೆಲ್ಲಿಗೋ ಹೋಗಿರುತ್ತದೆ! ಮನಸ್ಸು ಇದ್ದರೆ ಮಾರ್ಗ. ಮನಸ್ಸಿಲ್ಲದಿದ್ದರೆ ಇನ್ನೆಲ್ಲಿಯ ಮಾರ್ಗ? ಬಹಳ ಸಲ ಮಕ್ಕಳಿಗೆ ಪಾಲಕರು ಹೇರುವ ಒತ್ತಡ ಜಾಸ್ತಿಯಾಗುತ್ತದೆ. ಅದನ್ನು ಅವರಿಂದ ನಿಭಾಯಿಸಲಿಕ್ಕೆ ಆಗುವುದಿಲ್ಲ. ಅದು ಅವರ ಅಶಕ್ತತೆ ಎಂದು ಪಾಲಕರು ತಿಳಿದುಕೊಳ್ಳಬೇಕಾಗಿಲ್ಲ. ತಮ್ಮ ಮಗು ಅಸಮರ್ಥ ಎಂದೂ ಕೊರಗಬೇಕಾಗಿಲ್ಲ. ಮಕ್ಕಳೆಂದರೆ ಮಾರ್ಕ್ಸ್ ಗಳಿಸುವ ಮಶೀನುಗಳಲ್ಲ! ಅವರೂ ನಮ್ಮಿಂದ ನಮಗಾಗಿ ಬಂದವರು.

ನಮ್ಮಂತೆಯೇ ಇರುತ್ತಾರೆ. ಗಮನಿಸಿ ನೋಡಿದರೆ ನಮ್ಮ ಮಕ್ಕಳು ಎಲ್ಲ ವಿಷಯಗಳಲ್ಲೂ ನಮಗಿಂತಲೂ ಚುರುಕಾಗಿರುತ್ತಾರೆ. ಅದನ್ನು ನಾವು ಒಪ್ಪಿಕೊಳ್ಳಬೆಕು. ಅವರ ವಯಸ್ಸಿನಲ್ಲಿ ನಾವು ಹೇಗೆಲ್ಲ ಇದ್ದೆವು ಎನ್ನುವುದನ್ನು ನೆನಪಿಸಿಕೊಳ್ಳಬೇಕು.

ಮಕ್ಕಳಿಗೆ ಇಷ್ಟವಿರುವುದನ್ನು ಕಲಿಯಲಿಕ್ಕೆ ಪಾಲಕರು ಸಹಾಯ ಮಾಡುವುದು ಸರಿ. ಆದರೆ ಮಗುವನ್ನು ಯಾವುದೇ ಕಾರಣದಿಂದಾದರೂ ಬೈಯುತ್ತ, ಹೋಲಿಸುತ್ತ, ಹೀಗಳಿಯುತ್ತ ಇದ್ದರೆ ಮಗುವಿನ ಮನಸ್ಸು ಕುಗ್ಗುತ್ತದೆ. ಮುದುಡಿದ ಮನಸ್ಸು ಎಲ್ಲಾ ಕ್ಷೇತ್ರಗಳಲ್ಲಿ ಹಿಂಜರಿಯುತ್ತದೆ. ಜೀವನ ಎನ್ನುವುದು ಪ್ರತಿಯೊಬ್ಬರಿಗೂ ಬೇರೆ ಬೆರೆಯದೇ ಆದ ಅನುಭವಗಳನ್ನು ಕೊಡುತ್ತದೆ. ನಮ್ಮ ಹಾಗೆಯೇ ಇಲ್ಲಿ ಮೊದಲ ಸಲ ಹುಟ್ಟಿ ಬೆಳೆಯುತ್ತಿರುವ ನಮ್ಮ ಮಕ್ಕಳೂ ಸಹ ಜೀವನವನ್ನು ಎಲ್ಲ ಏರಿಳಿತಗಳ ಗುಂಟ ಪ್ರಯಾಣಿಸಿಯೇ ಅರ್ಥಮಾಡಿಕೊಳ್ಳಬೇಕಗುತ್ತದೆ. ಪಾಲಕರು ಮಕ್ಕಳಿಗಾಗಿ ಏನೇನನ್ನೂ ತಯಾರಿಸಿಟ್ಟು, ಅದನ್ನು ಅವರು ಸುಖವಾಗಿ ಅನುಭವಿಸಲಿ ಎನ್ನುವುದು ಸರಿಯಲ್ಲ. ಅದರಿಂದ ಮಕ್ಕಳ ಕ್ರಿಯಾಶೀಲತೆಯ ಅಭಿವ್ಯಕ್ತಿಯನ್ನು ತಡೆದಂತಾಗುತ್ತದೆ. ಕ್ರಿಯಾಶೀಲ ಮನಸ್ಸು ತನ್ನ ಜೀವನದ ಗಮ್ಯವನ್ನು ತಾನೇ ಹುಡುಕಿಕೊಳ್ಳುತ್ತದೆ. ಅದಕ್ಕೆ ಪ್ರೋತ್ಸಾಹವನ್ನು ಕೊಡಬೇಕಾದದ್ದು ಪಾಲಕರ ಕೆಲಸ. ನಮ್ಮ ಕನಸುಗಳನ್ನು ನಮ್ಮ ಮಕ್ಕಳು ನನಸು ಮಾಡಬೇಕೆಂದು ಆಶಿಸುವುದು ಸರಿಯಲ್ಲ.
ಮಕ್ಕಳ ಕನಸು ನನಸಾಗುವಂತೆ ಶಕ್ತಿಮೀರಿ ಸಹಾಯ ಮಾಡುವುದು ಒಳ್ಳೆಯದು.

ಬಹಳಷ್ಟು ಸಲ ನಮ್ಮ ಮಕ್ಕಳು ನಮಗಿಂತ ವಿಶೇಷವಾದದ್ದನ್ನು ಸಾಧಿಸುವಷ್ಟು ಶಕ್ತಿವಂತರಾಗಿರುತ್ತಾರೆ. ಆದರೆ ನಮಗೆ ಅವರಲ್ಲಿರುವ ಆ ವಿಶೇಷ ಶಕ್ತಿಯ ಅರಿವಾಗುವುದಿಲ್ಲ. ಹಾಗಾದಾಗ ನಮ್ಮ ಮಕ್ಕಳು ನಮ್ಮ ಜೀವನಾನುಭವದ ಪ್ರಕಾರವೇ, ನಮಗಿಂತಲೂ ಹೆಚ್ಚು ಸುಖವಾಗಿರುವ ದಾರಿಯನ್ನು ನಾವೇ ಅವರಿಗೆ ಬಲವಂತವಾಗಿ ತೋರಿಸುವ ಕೆಲಸವನ್ನು ಮಾಡುತ್ತೇವೆ. ಅದು ನಿಜಕ್ಕೂ ಸರಿಯಲ್ಲ! ನಮ್ಮ ಮಗುವಿಗೆ ಐನ್‌ಸ್ಟೈನ್‌ನೋ ಚಾಣಕ್ಯನೋ ಇನ್ನೇನೋ ಆಗುವ ಯೋಗ್ಯತೆ ಇರುತ್ತದೆ ಎಂದುಕೊಳ್ಳಿ. ನಮ್ಮ ಮಸುಕಾದ ಅರಿವಿಗೆ ಅದು ಗೋಚರಿಸುವುದಿಲ್ಲ. ಹಾಗಾಗಿ ನಾವು ನಮ್ಮ ಮಗು ತೊಂಬತ್ತೊಂಬತ್ತನ್ನೋ, ನೂರಕ್ಕೆ ನೂರು ಅಂಕಗಳನ್ನು ಗಳಿಸಲಿ ಎಂದಷ್ಟೇ ನಿರೀಕ್ಷಿಸುತ್ತೇವೆ. ಅದಕ್ಕಾಗಿ ಮಗುವಿನ ಮೇಲೆ ಒತ್ತಡವನ್ನು ಹೇರುತ್ತೇವೆ. ನಮ್ಮ ಮಕ್ಕಳ ಅಂಕಪಟ್ಟಿಯಿಂದ ನಮ್ಮ ಬುದ್ಧಿವಂತಿಕೆಯ ಪ್ರದರ್ಶನಕ್ಕೆ ಅಣಿಯಾಗುತ್ತೇವೆ. ನಮ್ಮ ಅಂಕಪಟ್ಟಿಯಿಂದ ನಮಗಾಗಿದ್ದ ನೋವನ್ನು ಮಗುವಿನ ಅಂಕಪಟ್ಟಿಯಿಂದ ಮರೆಯುವ ಅಂತರಂಗದ ಆಸೆಗೆ ಬಲಿಯಾಗಿರುತ್ತೇವೆ. ಕಡಿಮೆ ಅಂಕ ಪಡೆದುಕೊಂಡಿರುವ ಮಗುವಿನ ಪಾಲಕರ ದಯನೀಯ ಮುಖವನ್ನು ನೋಡುವಾಗ, ಅವರ ಮಾತನ್ನು ಕೇಳಿದಾಗ ನನಗಂತೂ ಹೀಗೆಯೇ ಅನ್ನಿಸಿದೆ. ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದುಕೊಂಡ ಮಗು ಮುಂದೆ ಎಲ್ಲ ಪರೀಕ್ಷೆಗಳಲ್ಲೂ ಹಾಗೇ ಮಾಡುತ್ತದೆ ಎನ್ನುವ ಹಾಗಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಎರಡನೆಯ ದರ್ಜೆಯಲ್ಲಿ ಪಾಸಾದ ಮಗು ಮುಂದೆ ಪದವಿಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಿದೆ. ಹಾಗೆಯೇ ಪಿಯುವಿನಲ್ಲಿ ರ‍್ಯಾಂಕ್‌ ಬಂದ ವಿದ್ಯಾರ್ಥಿ ಇ ಎಂಜನಿಯರಿಂಗ್‌ನಲ್ಲಿ ನಪಾಸಾದದ್ದೂ ಇದೆ. ಹಾಗಾಗಿ ಯಾವುದೇ ಸಂದರ್ಭದಲ್ಲಿಯಾದರೂ ಮಕ್ಕಳು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಂತೆ ಗಮಸಿಸಬೇಕಾದ್ದು ಪಾಲಕರ ಕೆಲಸ. ಅಷ್ಟನ್ನು ಮಾಡಿದರೆ ಮಗು ತನ್ನ ಜೀವನದಲ್ಲಿ ಸೋಲುವ ಸಾಧ್ಯತೆ ತೀರಾ ಕಡಿಮೆಯಾಗಿರುತ್ತದೆ. ಆತ್ಮವಿಶ್ವಾಸವಲ್ಲದೇ ಯಾರೂ ಯಶಸ್ವಿಯಾಗಲಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT