ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಶಿಕ್ಷಕರ ಪಡಿಪಾಟಲು: ಕೇಳೋರ್ಯಾರು ಗೋಳು

Last Updated 19 ಸೆಪ್ಟೆಂಬರ್ 2020, 2:39 IST
ಅಕ್ಷರ ಗಾತ್ರ

ಶಿಲೆಯಂತಿರುವ ಮಕ್ಕಳನ್ನು ಅಕ್ಷರ–ಕಾಗುಣಿತವೆಂಬ ಉಳಿ–ಸುತ್ತಿಗೆಗಳನ್ನು ಬಳಸಿ ತಿದ್ದಿತೀಡಿ ಚೆಂದದ ಶಿಲ್ಪವಾಗಿಸುವ ಶಿಕ್ಷಕರು ಅನೇಕಸನ್ನಿವೇಶಗಳಲ್ಲಿ ಉಳಿಯೇಟುಗಳ ಮಾಯದ ಗಾಯಕ್ಕೆ ಈಡಾಗುತ್ತಲೇ ಇರುತ್ತಾರೆ. ಕರ್ನಾಟಕದಲ್ಲಿ ನಾಲ್ಕು ಲಕ್ಷದಷ್ಟಿರುವ ಶಿಕ್ಷಕರು, ಸರ್ಕಾರಿ ನೌಕರರಲ್ಲೇ ಬಹುಸಂಖ್ಯಾತರು. ಮಕ್ಕಳಲ್ಲಿ ಆದರ್ಶ ತುಂಬಿ ಭವ್ಯವ್ಯಕ್ತಿತ್ವವಾಗಿ ರೂಪಿಸುವ, ಭವಿಷ್ಯದ ಸಮಾಜವನ್ನು ಋಜುಮಾರ್ಗದತ್ತ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಅಗಣಿತ.

ಸಮಾಜದ ಕೈ ಹಿಡಿದು ನಡೆಸುವ ಶಿಕ್ಷಕರೆಂಬ ದೀಪಧಾರಿಗಳನ್ನು, ಕೈ–ಮರಗಳನ್ನುಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿ ತಮ್ಮ ಹಣದಾಸೆಗಾಗಿ ಕಷ್ಟಕ್ಕೆ ದೂಡುವ ಘಟನೆಗಳು ‌ ನಿತ್ಯವೂ ನಡೆಯುತ್ತಲೇ ಇರುತ್ತದೆ. ‘ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಕ್ಕಳಿಂದಲೇ ಸಾಧ್ಯ. ಅದು ಮನೆಯಿಂದಲೇ ಶುರುವಾಗಬೇಕು. ಲಂಚದ ದುಡ್ಡಿನಿಂದ ನೀನು ಇದನ್ನುಏಕೆ ತಂದೆ ಅಪ್ಪ–ಅಮ್ಮನನ್ನು ಮಕ್ಕಳು ಪ್ರಶ್ನಿಸಲು ಶುರುಮಾಡಬೇಕು’ ಎಂದು ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಪದೆ ಪದೇ ಹೇಳುತ್ತಿದ್ದುದುಂಟು. ಮಕ್ಕಳಿಗೆ ಸದ್ಬುದ್ಧಿ ಕಲಿಸಬೇಕಾದ ಶಿಕ್ಷಕರೇ ತಮ್ಮ ಕೆಲಸಕ್ಕೆ ಲಂಚ ಕೊಡಬೇಕಾದ ಸ್ಥಿತಿ ಇದ್ದಾಗ ಮಕ್ಕಳನ್ನು ತಿದ್ದುವುದು ಹೇಗೆ ಎಂಬುದು ಪ್ರಶ್ನೆಯಾಗಿಯೇ ಉಳಿದುಬಿಡಬಹುದು.

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಅದು ಸಮಾಜದಲ್ಲಿ ಹೆಚ್ಚು ಸುದ್ದಿಯಾಗುವುದಿಲ್ಲ. ಅದಕ್ಕೆ ಕಾರಣ; ಇಲಾಖೆಯಲ್ಲೇ ತಮ್ಮ ಜೀವನಪೂರ್ತಿ ಸವೆಸಬೇಕಾದ, ಬಹುಸಂಖ್ಯಾತರಿಗೆ ಸಂಬಳ ಹೊರತು ಬೇರೆನೂ ಆದಾಯ ಇಲ್ಲದೇ ಇರುವುದರಿಂದ ಇರುವ ಕೆಲಸವನ್ನೇ ನೆಚ್ಚಿಕೊಳ್ಳುವುದು ಅನಿವಾರ್ಯ. ಯಾರೊಬ್ಬರೂ ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹದಳದ ಬಾಗಿಲು ಬಡಿಯುವುದಿಲ್ಲ. ಹೀಗಾಗಿ, ಭ್ರಷ್ಟಾಚಾರ ಎಂಬುದು ಸಹಜ ಎಂಬಂತಾಗಿ ಬಿಟ್ಟಿದೆ. ಬೇರೆ ಇಲಾಖೆಗಳಲ್ಲಿ ಕಡತ ಇಟ್ಟುಕೊಂಡು ಕುಳಿತರೆ ದುಡ್ಡು ಉದುರುತ್ತದೆ; ಆದರೆ ಶಿಕ್ಷಕರಿಗೆ ಲಂಚದ ಅವಕಾಶಗಳೇ ವಿರಳ. ಹಾಗಿದ್ದರೂ ಕೆಲವೇ ಕೆಲವು ಶಿಕ್ಷಕರು ಶಾಲೆಯ ಸಣ್ಣ ಪುಟ್ಟ ಕಾಮಗಾರಿಗಳಲ್ಲಿ ಚಿಕ್ಕಾಸು ಮಾಡಿಕೊಳ್ಳುವುದು, ಮೆಣಸಿನಕಾಯಿ ಮಾರಿಯೋ, ಬಡ್ಡಿ ವ್ಯವಹಾರ ನಡೆಸಿಯೋ ಒಂದಿಷ್ಟು ಕಾಸು ಮಾಡಿಕೊಳ್ಳುವುದು ಇಲ್ಲವೆಂದಲ್ಲ.

ಶಿಕ್ಷಕ/ಶಿಕ್ಷಕಿಯರೆಂದರೆ ಆರಾಮಾಗಿ ಸಂಬಳ ತೆಗೆದುಕೊಳ್ಳುವ ಮಂದಿ ಎಂಬ ಭಾವನೆ ಸಾಮಾನ್ಯ. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಶೋಷಿತ ಸಮುದಾಯವೆಂದರೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರೆಂದರೆ ಅಪವಾದ ಆಗಲಿಕ್ಕಿಲ್ಲ. ದಸರೆ, ಬೇಸಿಗೆ ರಜೆ ಎಂಬ ಸೌಲಭ್ಯ ಬಿಟ್ಟರೆ ವರ್ಷದುದ್ದಕ್ಕೂ ಏನೂ ಅರ್ಥವಾಗದ ಮಕ್ಕಳೊಟ್ಟಿಗೆ ಏಗಬೇಕು, ಅವರಿಗೆ ಕಲಿಸಬೇಕು, ಅಪ್ಪಿ ತಪ್ಪಿ ಸಿಟ್ಟುಬಂದು ಹೊಡೆದರೆ ಜಗಳಕ್ಕೆ ನಿಲ್ಲುವ ಪೋಷಕರ ಜತೆ ಕಾದಾಡಬೇಕು. ಹಳ್ಳಿ ಮತ್ತು ನಗರ ಪ್ರದೇಶದ ಕೊಳೆಗೇರಿಗಳಲ್ಲಿರುವ ಶಾಲೆಗಳಲ್ಲಿ ಒಂದು–ಎರಡನೇ ತರಗತಿಗೆ ಬರುವ ಮಗು ತನ್ನ ಬಗಲಲ್ಲಿ ಮೂರ್ನಾಲ್ಕು ವರ್ಷದ(ಅಪ್ಪ–ಅಮ್ಮ ಅನಿವಾರ್ಯವಾಗಿ ಕೂಲಿಗೆ, ದುಡಿತಕ್ಕೆ ಹೋಗುವುದರಿಂದಾಗಿ) ಮತ್ತೊಂದು ಮಗುವನ್ನು ಚಚ್ಚಿಕೊಂಡು ಬರುವುದರಿಂದ ಅವನ್ನೂ ಸಂಭಾಳಿಸಬೇಕು. ಜತೆಗೆ, ಜನಗಣತಿ, ಮತದಾರರ ಪಟ್ಟಿ ಪರಿಷ್ಕರಣೆ, ಬಿಸಿಯೂಟ, ಆರ್ಥಿಕ ಸಮೀಕ್ಷೆ, ಈಗ ಕೊರೊನಾ ಕರ್ತವ್ಯ ಹೀಗೆ ವರ್ಷದುದ್ದಕ್ಕೂ ಏನಾದರೂ ಅವರಿಗೆ ಬೆನ್ನಿಗೆ ಬಿದ್ದಿರುತ್ತದೆ. ಆದರೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರು ವಾರಕ್ಕೆ 16ರಿಂದ 8 ತರಗತಿಗಳನ್ನು ತೆಗೆದುಕೊಂಡರೆ ಸಾಕು. ಅವರಿಗೆ ಸಮೀಕ್ಷೆ, ಸರ್ವೆ, ಮಕ್ಕಳ ಲಾಲನೆ–ಪಾಲನೆಯ ಹೊಣೆಯೇ ಇಲ್ಲ. ವೇತನ ಮಾತ್ರ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಹೋಲಿಸಿದರೆ ಮೂರ್ಪಟ್ಟು.

ಇದು ವೇತನದ ಕತೆಯಾದರೆ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ರಾಜಕಾರಣಿ, ಪ್ರಭಾವಿಗಳಿಗೆ ಗೌರವ ಸಲ್ಲಿಸದೇ ಇದ್ದರೆ ಕಿರಿಕಿರಿಯಂತೂ ತಪ್ಪುವುದೇ ಇಲ್ಲ ಎಂಬುದು ಶಿಕ್ಷಕರ ಅನುಭವದ ಮಾತು.

ಗ್ರಾಮೀಣ ಪ್ರದೇಶದ ಶಿಕ್ಷಕರ ಗೋಳು ಹೇಳುತ್ತಾ ಹೋದರೆ ದೊಡ್ಡ ಕಾದಂಬರಿಯೇ ಆದೀತು ಎಂಬುದು ಇಲ್ಲಿ ಕೆಲಸ ಮಾಡಿದವರ ಆಂಬೋಣ. ಬಹುತೇಕ ಊರುಗಳಿಗೆ ಬಸ್ಸುಗಳೇ ಇಲ್ಲ. 20–30 ಕಿ.ಮೀ ದೂರ ಕಿಕ್ಕಿರಿದು ತುಂಬಿದ ಬಸ್ಸ್‌ನಲ್ಲಿ ಹೋಗಿ, ಒಂದು ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನಾಲ್ಕೈದು ಕಿ.ಮೀ ನಡೆದೋ ಅಥವಾ ತಾವೇ ವ್ಯವಸ್ಥೆ ಮಾಡಿಕೊಂಡ ದ್ವಿಚಕ್ರ ವಾಹನದಲ್ಲಿ ಹೋಗುವ ಪರಿಸ್ಥಿತಿ ಇಂದಿಗೂ ಇದೆ.

ಕೆಲವು ಊರುಗಳಿಗೆ ಬೆಳಿಗ್ಗೆ 7.30ಕ್ಕೆ ಒಂದು ಬಸ್‌ ಬಂದು ಅದು ವಾಪಸ್ ಹೋದರೆ, ಮತ್ತೆ ಬಸ್‌ ಕಾಣುವುದು 3.30ಕ್ಕೆ. ಈ ಬಸ್ ತಪ್ಪಿದರೆ ಮತ್ತೆ ಆರೇಳು ಕಿ.ಮೀ ನಡೆದು ಹೋಗಬೇಕಾದ ಪರಿಸ್ಥಿತಿ ಅಥವಾ ಯಾರ ಮನೆಯಲ್ಲಾದರೂ ಉಳಿದುಕೊಳ್ಳಬೇಕಾದ ಸ್ಥಿತಿ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಇವತ್ತೂ ಇದೆ. ಕೆಲಸ ಮಾಡುವ ಊರಲ್ಲೇ ವಾಸ್ತವ್ಯಹೂಡಲು ಮನೆಗಳೇ ಸಿಗದಂತಹ, ಸಿಕ್ಕಿದರೂ ಶೌಚಾಲಯದಂತಹ ಮೂಲಸೌಕರ್ಯಗಳೇ ಇರುವುದಿಲ್ಲ ಎಂಬುದು ಶಿಕ್ಷಕರ ಗೋಳು.

ಶಿಕ್ಷಣಾಧಿಕಾರಿಗಳ ಕಚೇರಿಗಳಂತೂ ಈ ಇಲಾಖೆಯ ಭ್ರಷ್ಟಾಚಾರದ ವಿಷವೃಕ್ಷ ಇದ್ದಂತೆ ಎಂಬುದು ಸಜ್ಜನ ಶಿಕ್ಷಕರ ವಿಮರ್ಶೆ. ದ್ವಿತೀಯ ದರ್ಜೆ ಗುಮಾಸ್ತ ಲಂಚ ಕೇಳುತ್ತಿದ್ದಾನೆ, ಕೆಲಸ ಮಾಡಿಕೊಡುತ್ತಿಲ್ಲ ಎಂದು ಶಿಕ್ಷಕರೊಬ್ಬರು ಶಿಕ್ಷಣಾಧಿಕಾರಿ ಮುಂದೆ ದೂರಿತ್ತರಂತೆ. ಶಿಕ್ಷಕರ ಕಾಳಜಿ ಕಂಡ ಅಧಿಕಾರಿ, ಆ ಗುಮಾಸ್ತನನ್ನು ಕರೆದು ಅವರ ಎದುರಿಗೆ ಚೆನ್ನಾಗಿ ಬೈದರಂತೆ. ಹೊರಗೆ ಬಂದ ಗುಮಾಸ್ತ; ’ನನ್ನ ಬಾಯಿಗೆ ಚಪ್ಪಲಿ ಬೇಕಾದರೂ ಇಡಿ ಚೀಪ್ತೇನೆ. ದುಡ್ಡು ಇಸಗೊಳ್ಳುವುದನ್ನುಮಾತ್ರ ಬಿಡುವುದಿಲ್ಲ. ನೀವು ಏನೂ ದೂರು ಕೊಟ್ಟರೂ ನನ್ನನ್ನೇನೋ ಮಾಡಲಿಕ್ಕಾಗುವುದಿಲ್ಲ’ ಎಂದು ಹೇಳಿದನಂತೆ. ಅದಾದ ಮೇಲೆ ಆ ಶಿಕ್ಷಕರು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿಕೊಂಡು ಹೋದರು. ಅವರ ಸೇವಾ ನೋಂದಣಿ ಪುಸ್ತಕ(ಎಸ್‌ಆರ್ ಬುಕ್‌‌) ಅದೇ ಗುಮಾಸ್ತನ ಬಳಿ ಇತ್ತಂತೆ. ಏನಾದರೂ ಮಾಹಿತಿ ತಿದ್ದಬಹುದು ಎಂಬ ಕಾರಣಕ್ಕೆ ಎಸ್‌ಆರ್‌ ಬುಕ್‌ ಅನ್ನು ಕೈಗೆ ಕೊಡದೇ ಸಂಬಂಧಿಸಿದ ಶಿಕ್ಷಣಾಧಿಕಾರಿ ಕಚೇರಿಗೆ ಕಳಿಸಲಾಗುತ್ತದೆ. ಹೀಗೆ ಕಳಿಸುವಾಗ, ಶಿಕ್ಷಕರ ಸೇವಾ ಪುಸ್ತಕದಲ್ಲಿದ್ದ ಜನ್ಮ ದಿನಾಂಕ 18.06.1970 ಎಂದಿದ್ದುನ್ನು 1970ರಲ್ಲಿ ಕೊನೆಯ ಸೊನ್ನೆಯನ್ನು 6 ಎಂದು ತಿದ್ದಿದ್ದಲ್ಲದೇ, ಅಕ್ಷರದಲ್ಲಿ Nineteen seventy ಎಂದಿದ್ದನ್ನು seventy 'six' ಎಂದು ಸೇರಿಸಿ ಕಳಿಸಿಬಿಟ್ಟನಂತೆ. ಮತ್ತೊಂದು ಊರಿಗೆ ಹೋದಾಗ, ಅಲ್ಲಿನ ಗುಮಾಸ್ತ, ನಿಮ್ಮ ನಿಜವಾದ ಜನ್ಮ ದಿನಾಂಕ 1970 ಅದನ್ನು 76 ಎಂದು ತಿದ್ದುಪಡಿ ಆರು ವರ್ಷ ವಯಸ್ಸು ಕಡಿಮೆ ಮಾಡಿಕೊಂಡು, ಸೇವಾವಧಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿದ್ದೀರಿ ಎಂದು ನಿಮ್ಮ ಮೇಲೆ ಕೇಸು ಹೂಡಬಹುದು. ನಿವೃತ್ತಿ ವೇಳೆ ತೊಂದರೆಯಾಗುತ್ತದೆ ಎಂದೆಲ್ಲ ಹೆದರಿಸಿದನಂತೆ. ಇದನ್ನೆಲ್ಲ ತಿದ್ದಲು ಕೊನೆಗೆ ಲಂಚ ಕೊಟ್ಟು ಸರಿಮಾಡಿಕೊಳ್ಳಬೇಕಾಯಿತು ಎಂದು ಶಿಕ್ಷಕರೊಬ್ಬರು ತಮ್ಮ ಭ್ರಷ್ಟಾಚಾರದ ವಿರೋಧಿ ಹೋರಾಟದ ಕತೆಯನ್ನು ಹೇಳುತ್ತಾರೆ.

ಶಿವಮೊಗ್ಗ ಏಳೆಂಟು ಕಿ.ಮೀ ಬಸ್‌ ನಲ್ಲಿ ಹೋಗಿ, 2 ಕಿ.ಮೀ ನಡೆದುಕೊಂಡು ಶಾಲೆಗೆ ತಲುಪುತ್ತಿದ್ದ ಶಿಕ್ಷಕಿಯೊಬ್ಬರಿದ್ದರು. ಕರಾರುವಾಕ್‌ ಕೆಲಸ ಮಾಡುತ್ತಿದ್ದ ಅವರು, ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕಿಯೂ ಆಗಿದ್ದರು. ಶಿಕ್ಷಕಿ ಗೌರವ ಕೊಡುವುದಿಲ್ಲ ಎಂಬುದು ಆ ಪ್ರದೇಶ ಪ್ರತಿನಿಧಿಸುವ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರ ತಕರಾರು. ಕಾಗೋಡು ತಿಮ್ಮಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ) ನಡೆಸುತ್ತಿದ್ದರು. ಸದಸ್ಯ ಶಿಕ್ಷಕಿ ಸರಿಯಾಗಿ ಶಾಲೆಗೆ ಬರುವುದಿಲ್ಲ; ಪಾಠವನ್ನೇ ಮಾಡುವುದಿಲ್ಲ ಎಂದು ಸಭೆಯಲ್ಲೇ ಸದಸ್ಯ ಪ್ರಸ್ತಾಪಿಸಿದರು. ಶಿಸ್ತನ್ನು ಸದಾ ಬಯಸುತ್ತಿದ್ದ ಕಾಗೋಡು ತಿಮ್ಮಪ್ಪನವರು, ಕೂಡಲೇ ಶಿಕ್ಷಕಿಯನ್ನು ಅಮಾನತ್ ಮಾಡಿ ಎಂದು ಆದೇಶಿಸಿದರು. ಮತ್ತೊಬ್ಬ ಸದಸ್ಯರು ಕಾಗೋಡು ಅವರಿಗೆ ಈ ವಿಷಯ ಮನವರಿಕೆ ಮಾಡಿಕೊಟ್ಟ ಮೇಲೆ ಅವರಿಗೂ ಪರಿಸ್ಥಿತಿ ಅರ್ಥವಾಗಿ, ಅಮಾನತ್ ತೆರವಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎಂದರೆ ದುಡ್ಡು ಕೊಡದೇ ಯಾವುದೇ ಕೆಲಸವೂ ಆಗುವುದಿಲ್ಲ . ವೇತನದ ಬಾಕಿ ಬಿಲ್ ಮಾಡಬೇಕಾದರೆ, ಹಬ್ಬದ ಮುಂಗಡ, ಗಳಿಕೆ ರಜೆ ಮಂಜೂರು ಮಾಡಬೇಕಾದರೆ ಹೀಗೆ ಎಲ್ಲಕ್ಕೂ ಇಂತಿಷ್ಟೇ ಹಣ ನೀಡಬೇಕೆಂಬ ಪಟ್ಟಿಯೇ ಇದೆ. ತಮ್ಮ ಹಣವನ್ನೇ ಕರ್ನಾಟಕ ಜೀವ ವಿಮಾ ನಿಗಮ(ಕೆಜಿಐಡಿ), ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್‌)ಗಳಲ್ಲಿ ಹೂಡಿಕೆ ಮಾಡಿದರೂ ಅದನ್ನು ಸಾಲದ ರೂಪದಲ್ಲಿ ಪಡೆಯಬೇಕಾದರೆ ಲಂಚವನ್ನು ನೀಡಲೇಬೇಕಾದ ಅನಿವಾರ್ಯ ಇದೆ ಎಂಬುದು ಶಿಕ್ಷಕರ ಮನದಾಳದ ನೋವು.

ಹಾಗೂ ಹೀಗೂ ಕಷ್ಟಪಟ್ಟ ಕೆಲಸ ಮುಗಿಸಿ ನಿವೃತ್ತಿಯ ಅಂಚಿಗೆ ಬಂದಾಗ ಅದಾದರೂ ನೆಮ್ಮದಿಯಾಗಿ ನಡೆಯುತ್ತದೆಯೇ ಎಂದರೆ, ಬೆಂಗಳೂರಿನಂತ ನಗರಗಳಲ್ಲಿ ₹20 ಸಾವಿರ ಕೊಡದೇ ಇದ್ದರೆ ವರ್ಷ ಕಳೆದರೂ ಕೆಲಸ ಆಗುವುದಿಲ್ಲ. ಹಣ ಕೊಟ್ಟರೆ ಸರ ಸರ ಕಡತ ಓಡಾಡಿ ಒಂದೆರಡು ತಿಂಗಳಿನಲ್ಲಿ ಪಿಂಚಣಿ ಸಿಗಲು ಶುರುವಾಗುತ್ತದೆ. ಇಲ್ಲದಿದ್ದರೆ ಖಜಾನೆಯಲ್ಲಿ ಕಡತ ಇದೆ, ಲೆಕ್ಕ ಪರಿಶೋಧಕರ(ಎ.ಜಿ) ಕಚೇರಿಯಲ್ಲಿದೆ ಎಂದು ತಳ್ಳುತ್ತಲೇ ಬರಲಾಗುತ್ತದೆ ಎಂಬುದು ಅನುಭವಿ ಶಿಕ್ಷಕರ ಮಾತು.

ಶಿಕ್ಷಕ ಸ್ನೇಹಿ ವರ್ಗಾವಣೆ ಮಾಡಲು ಸಚಿವ ಎಸ್. ಸುರೇಶ್‌ಕುಮಾರ್ ಶತಪ್ರಯತ್ನ ಹಾಕುತ್ತಿದ್ದಾರೆ.

ಆನ್‌ಲೈನ್‌ ಮೂಲಕ ಎಲ್ಲ ಪ್ರಕ್ರಿಯೆ ನಡೆದರೂ ಅಡ್ಡ ಮಾರ್ಗಗಳಿಗೆ ಅವಕಾಶವೇ ಇಲ್ಲ ಎಂದು ಹೇಳಲಾಗದು ಎನ್ನುತ್ತಾರೆ ಶಿಕ್ಷಕರು.

ಕೆಲಸ ಮಾಡಲು ಮನಸ್ಸಿರುವವರಿಗೆ ಉತ್ತಮ ವಾತಾವರಣ, ನೆಮ್ಮದಿಯ ಜಾಗ ಸಿಕ್ಕಿದರೆ ಸಾಕು ಎಂಬುದು ಶಿಕ್ಷಕರ ಬಯಕೆ. ತಮ್ಮ ಊರಿನ ಸಮೀಪದಲ್ಲೋ, ತಮ್ಮ ಭಾಷೆ ಅರ್ಥವಾಗುವ ಪ್ರದೇಶದಲ್ಲೋ, ಕುಟುಂಬದವರು ಇರುವ ಕಡೆಯಲ್ಲೋ ವರ್ಗಾವಣೆ ಮಾಡಿಕೊಟ್ಟರೆ ಚೆನ್ನಾಗಿ ಪಾಠ ಮಾಡಲು ಸಾಧ್ಯ.

ವರ್ಗಾವಣೆ ನಿಯಮಗಳು ಹೇಗಿವೆ ಎಂದರೆ, ಗಂಡ–ಹೆಂಡತಿ ಒಂದೇ ಕಡೆ ಇರಲಾಗುವುದಿಲ್ಲ. ಪೋಷಕರ ಜತೆ ಮಕ್ಕಳು ಇರಲು ಸಾಧ್ಯವಾಗುವುದಿಲ್ಲ. ಅಷ್ಟು ಕಗ್ಗಂಟಾಗಿದೆ. ಶಿಕ್ಷಕರು ಕೇಳಿದ ಕಡೆಗೆ ವರ್ಗಾವಣೆ ಮಾಡಿಕೊಟ್ಟರೆ ಮಲೆನಾಡು, ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರೇ ಇರುವುದಿಲ್ಲ ಎಂಬುದು ಸತ್ಯ ಕೂಡ.

ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳನ್ನೇ ಎಲ್ಲರೂ ಬೇಡುತ್ತಾರೆ. ಹಾಗಂತ; ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಬಯಸುವ ಶಿಕ್ಷಕರು ಇಲ್ಲವೆಂದಲ್ಲ. ಹಾಗೆ ಹೋಗಲು ಬಯಸುವವರಿಗೆ ಅವರ ವೃತ್ತಿ ಅವಧಿಯಲ್ಲಿ ಎರಡು ಬಾರಿ ಅಂತಹ ಆಯ್ಕೆಯನ್ನು ಕೊಟ್ಟು ಯಾವುದೇ ಕಟ್ಟುಪಾಡುಗಳಿಲ್ಲದೇ ವರ್ಗಾವಣೆ ಮಾಡುವ ಪದ್ಧತಿ ಜಾರಿಗೆ ತಂದರೆ ಶಿಕ್ಷಕರು ಇನ್ನಷ್ಟು ಉತ್ತಮವಾಗಿ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡಲು, ಮಕ್ಕಳಿಗೆ ಚೆಂದವಾಗಿ ಕಲಿಸಲು ಸಾಧ್ಯವಾದೀತು. ಶಿಕ್ಷಣ ಸಚಿವರು, ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿ ಇರುವ ಅಧಿಕಾರಿಗಳು ಈ ದಿಕ್ಕಿನಲ್ಲಿ ಯೋಚಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT