ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಂಡಳಿಗಳ ವಿಲೀನವೋ, ಇಲಾಖೆಗಳ ವಿಲೀನವೋ?

Last Updated 8 ಸೆಪ್ಟೆಂಬರ್ 2020, 4:09 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಶೀಘ್ರದಲ್ಲೇ ವಿಲೀನಗೊಳಿಸಿ ಏಕರೂಪ ಪರೀಕ್ಷಾ ಮಂಡಳಿ ಅಸ್ತಿತ್ವಕ್ಕೆ ತರಲು ಸರ್ಕಾರ ಮುಂದಾಗಿರುವುದು ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.‘ಮಂಡಳಿಗಳ ವಿಲೀನದ ನೆಪದಲ್ಲಿ ಸರ್ಕಾರವು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗಳನ್ನು ವಿಲೀನಗೊಳಿಸಲು ಸಜ್ಜಾಗುತ್ತಿದ್ದು, ಈ ನಿಟ್ಟಿನಲ್ಲಿ ಇದು ಪ್ರಥಮ ಹೆಜ್ಜೆ’ ಎಂಬ ಮಾತುಗಳು ಎರಡೂ ಇಲಾಖೆಗಳ ಹಿರಿಯ ಅಧಿಕಾರಿಗಳು, ಬೋಧಕರ ಮಟ್ಟದಲ್ಲಿ ಕೇಳಿ ಬರುತ್ತಿವೆ.

ಇದಕ್ಕೆ ಪ್ರಮುಖ ಕಾರಣ ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಹೇಳಿದ ಮಾತುಗಳು. ‘ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸದ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಶೈಕ್ಷಣಿಕ ಚಟುವಟಿಕೆ ನೋಡಿಕೊಂಡರೆ, ಪಿಯು ಶೈಕ್ಷಣಿಕ ಚಟುವಟಿಕೆಯನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ನೋಡಿಕೊಳ್ಳುತ್ತಿದೆ. ಶೀಘ್ರವೇ ಇವೆರಡನ್ನೂ ವಿಲೀನಗೊಳಿಸಲಾಗುತ್ತದೆ’ ಎಂದು ಸಚಿವರು ಆಗಸ್ಟ್‌ 28ರಂದು ಹೇಳಿಕೆ ನೀಡಿದ್ದರು.

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಮುಖವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸೇರಿದಂತೆ ಕರ್ನಾಟಕ ಮುಕ್ತ ಶಾಲೆ, ಡಿ.ಇಎಲ್‌.ಇಡಿ, ಡಿ.ಪಿ.ಇಡಿ, ವಾಣಿಜ್ಯ, ಸಂಗೀತ, ನೃತ್ಯ, ಗಣಕಯಂತ್ರ, ಚಿತ್ರಕಲೆ, ಅರೇಬಿಕ್‌, ಚಲನಚಿತ್ರ ನಟನೆ, ರಂಗಶಿಕ್ಷಣ, ಎನ್‌ಟಿಎಸ್‌ಇ, ಎನ್‌ಎಂಎಂಎಸ್‌ ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಯನ್ನೂ ನಿಭಾಯಿಸುತ್ತಿದೆ.

ಆದರೆ, ಈ ಮಂಡಳಿಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ಹೊಣೆಗಾರಿಕೆ ಹೊತ್ತಿಲ್ಲ. ಆ ಜವಾಬ್ದಾರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಡಿಎಸ್‌ಇಆರ್‌ಟಿ, ಡಯಟ್, ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶನಾಲಯ ಮತ್ತು ಪ್ರೌಢಶಿಕ್ಷಣ ವಿಭಾಗದ ನಿರ್ದೇಶನಾಲಯ ಹಾಗೂ ಆಯುಕ್ತಾಲಯಗಳು ಹೊತ್ತಿವೆ.

ಇನ್ನು ರಾಜ್ಯದಲ್ಲಿ ಪದವಿ ಪೂರ್ವ ಪರೀಕ್ಷಾ ಮಂಡಳಿ ಎಂಬುದು ಸದ್ಯಕ್ಕೆ ಪ್ರಚಲಿತದಲ್ಲಿಲ್ಲ. ಈಗ ಚಾಲ್ತಿಯಲ್ಲಿರುವುದು ಪದವಿ ಪೂರ್ವ ಶಿಕ್ಷಣ ಇಲಾಖೆ. ಅದರಲ್ಲೊಂದು ಪರೀಕ್ಷಾ ವಿಭಾಗ ಇದೆಯೇ ಹೊರತು ಪರೀಕ್ಷಾ ಮಂಡಳಿ ಎಂಬುದು ಇಲ್ಲ. ಈ ವಿಭಾಗವು ಪರೀಕ್ಷಾ ಕಾರ್ಯಗಳನ್ನು ನಿಭಾಯಿಸುವ ಹೊಣೆಯನ್ನಷ್ಟೇ ಹೊತ್ತಿದೆಯೇ ಹೊರತು, ಪಿ.ಯು ಶೈಕ್ಷಣಿಕ ಚಟುವಟಿಕೆಗಳನ್ನು ನಿಭಾಯಿಸುವ ಜವಾಬ್ದಾರಿಯನ್ನಲ್ಲ.

ಶಿಕ್ಷಣ ಸಚಿವರ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರು ಒಂದರ್ಥದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆ ನಡೆಸುವುದಕ್ಕೆ ಏಕರೂಪ ಪರೀಕ್ಷಾ ಮಂಡಳಿ ರಚನೆ ಬಗ್ಗೆ ಹೇಳಿದ್ದಾರೆ. ಅಂಥೆಯೇ ಇನ್ನೊಂದರ್ಥದಲ್ಲಿ ಎರಡೂ ಇಲಾಖೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ವ್ಯವಸ್ಥೆಯ ವಿಲೀನದ ಬಗ್ಗೆಯೂ ಹೇಳಿದ್ದಾರೆ. ಈ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗಳೆರಡನ್ನೂ ವಿಲೀನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂಬುದರ ಸುಳಿವನ್ನು ಸಚಿವರು ನೀಡಿದ್ದಾರೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ಇನ್ನು ದೇಶದ ಬಹುತೇಕ ರಾಜ್ಯಗಳಲ್ಲಿ ಪದವಿ ಪೂರ್ವ ಶಿಕ್ಷಣ ಎಂಬ ಪ್ರತ್ಯೇಕ ವ್ಯವಸ್ಥೆ ಇಲ್ಲ. 10ನೇ ತರಗತಿ ನಂತರ ‘+2’ ಎಂಬ ವ್ಯವಸ್ಥೆ ಇದೆ. ಇವೆರಡೂ ಒಂದೇ ಇಲಾಖೆ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಐಸಿಎಸ್‌ಇ ಯಲ್ಲಿ ಕೂಡ 10ರ ನಂತರ 11, 12ನೇ ತರಗತಿ ಎಂದೇ ಇದೆ. ಇಂಥದ್ದೇ ಮಾದರಿಯನ್ನು ಕರ್ನಾಟಕವೂ ಅಳವಡಿಸಿಕೊಳ್ಳಲು ಹೊರಟಂತಿದೆ ಎನ್ನುತ್ತಾರೆ ಅವರು.

ಒಂದೇ ಕಲ್ಲಿಗೆ ಎರಡು ಹಕ್ಕಿ:

ಕೇಂದ್ರ ಸರ್ಕಾರ ಪ್ರಕಟಿಸಿರುವ ನೂತನ ರಾಷ್ಟ್ರೀಯ ಶೈಕ್ಷಣಿಕ ನೀತಿಯಲ್ಲಿ (ಎನ್‌ಇಪಿ) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು 5+3+3+4 ಎಂದು ಮರು ವಿಂಗಡಣೆ ಮಾಡಲಾಗಿದೆ. ಅಂದರೆ ಪ್ರಿ ನರ್ಸರಿ, ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಮತ್ತು 2ನೇ ತರಗತಿ ಒಳಗೊಂಡಂತೆ 5 ವರ್ಷಗಳ ‘ತಳಹದಿಯ ಹಂತ’; 3, 4 ಮತ್ತು 5ನೇ ತರಗತಿ ಒಳಗೊಂಡಂತೆ 3 ವರ್ಷಗಳ ‘ಸಿದ್ಧತಾ ಹಂತ’; 6, 7 ಮತ್ತು 8ನೇ ತರಗತಿ ಒಳಗೊಂಡಂತೆ 3 ವರ್ಷಗಳ ‘ಮಾಧ್ಯಮಿಕ ಹಂತ’; 9, 10, 11 ಮತ್ತು 12ನೇ ತರಗತಿ ಒಳಗೊಂಡಂತೆ 4 ವರ್ಷಗಳ ‘ಸೆಕೆಂಡರಿ ಹಂತ’ ಎಂದು ವಿಂಗಡಿಸಲಾಗಿದೆ. ಇದರಲ್ಲಿ ಪಿ.ಯು ಹಂತವನ್ನು ಸೆಕೆಂಡರಿ ಹಂತದಲ್ಲಿ ವಿಲೀನ ಮಾಡಲಾಗಿದೆ.

ಎನ್‌ಇಪಿ ಅಳವಡಿಸಿಕೊಳ್ಳಲು ಉತ್ಸುಕತೆ ತೋರಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಎನ್‌ಇಪಿ ಮಾದರಿಯನ್ನು ಅಳವಡಿಸಿಕೊಂಡರೆ, ರಾಜ್ಯದಲ್ಲಿ ಈಗ ಚಾಲ್ತಿಯಲ್ಲಿರುವ ಪ್ರಥಮ ಮತ್ತು ದ್ವಿತೀಯ ಪಿ.ಯು ತರಗತಿಗಳು 11 ಮತ್ತು 12ನೇ ತರಗತಿಗಳಾಗಿ ಬದಲಾಗಬೇಕಾಗುತ್ತವೆ. ಆಗ ಅದು ಸೆಕೆಂಡರಿ ಹಂತದ ವಿಭಾಗಕ್ಕೆ ಸೇರ್ಪಡೆ ಆಗಬೇಕಾಗುತ್ತದೆ.

ಎಸ್ಸೆಸ್ಸೆಲ್ಸಿ ಮತ್ತು ಪಿ.ಯು ಪರೀಕ್ಷೆಗಳನ್ನು ನಡೆಸಲು ಏಕರೂಪ ಪರೀಕ್ಷಾ ಮಂಡಳಿ ರಚಿಸಲು ಮುಂದಾಗಿರುವ ಸರ್ಕಾರದ ಯೋಚನೆಯ ಹಿಂದೆ, ಎರಡು ಮಂಡಳಿಗಳ ಅಥವಾ ಪರೀಕ್ಷಾಂಗಗಳ ವಿಲೀನದ ಲೆಕ್ಕಾಚಾರವಷ್ಟೇ ಇದ್ದಂತಿಲ್ಲ. ಬದಲಿಗೆ ಎರಡೂ ಇಲಾಖೆಗಳ ವಿಲೀನದ ದೂರದೃಷ್ಟಿಯೂ ಗೋಚರಿಸುತ್ತಿದೆ. ಅದರ ಜತೆಗೆ ಎನ್‌ಇಪಿಯನ್ನು ಅಳವಡಿಸಿಕೊಂಡಂತೆಯೂ ಆಗುತ್ತದೆ. ಹೀಗೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದಂತಾಗುತ್ತದೆ ಎಂದು ವಿಶ್ಲೇಷಿಸುತ್ತಾರೆ ಶಿಕ್ಷಣ ತಜ್ಞ ಶ್ರೀಪಾದ ಭಟ್‌.

ಅದಾಗ್ಯೂ, ರಾಜ್ಯದಲ್ಲಿ ಎನ್‌ಇಪಿಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಬೇಕು ಎಂದೇನಿಲ್ಲ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ ರಾಜ್ಯ ಸರ್ಕಾರಗಳು ತಮಗೆ ಬೇಕಾದಂತೆ ಮಾರ್ಪಾಡು ಮಾಡಿಕೊಳ್ಳಲು ಅವಕಾಶ ಇರುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇರುವುದರಿಂದ ರಾಜ್ಯ ಸರ್ಕಾರ ತುದಿಗಾಲಲ್ಲಿ ನಿಂತಂತಿದೆ ಎನ್ನುತ್ತಾರೆ ಅವರು.

ಎಲ್ಲದರಲ್ಲೂ ‘ಏಕರೂಪ’ ತರಬೇಕು ಎಂಬುದು ಬಿಜೆಪಿಯು ಸಿದ್ಧಾಂತವೇ ಆಗಿದೆ. ಎನ್‌ಇಪಿಯೂ ಅದಕ್ಕೇ ಒತ್ತು ನೀಡುತ್ತದೆ. ಈಗಾಗಲೇ ಕೇಂದ್ರದಲ್ಲಿ ಏಕರೂಪ ಪರೀಕ್ಷಾ ಏಜೆನ್ಸಿಯಾಗಿ ಎನ್‌ಟಿಎ ಜಾರಿಗೆ ಬಂದಿದೆ. ಏಕರೂಪ ನೇಮಕಾತಿ ಏಜೆನ್ಸಿಯನ್ನೂ ತರಲು ಕೇಂದ್ರ ಯೋಜಿಸಿದೆ. ಅಂತೆಯೇ ಎಲ್ಲದರಲ್ಲೂ ‘ಏಕರೂಪ’ ನೀತಿ ಜಾರಿಗೊಳಿಸಲು ಕೇಂದ್ರ ಬಯಸಿದೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರವು ಕುಣಿಯುತ್ತಿದೆ ಎಂದು ಅವರು ವಿವರಿಸುತ್ತಾರೆ.

‘ಪದವಿಗೆ ಸಿದ್ಧತಾ ಹಂತ ಬೇಕಲ್ಲವೇ?’:

ಪದವಿ ಪೂರ್ವ ಶಿಕ್ಷಣ ವ್ಯವಸ್ಥೆ ಉಳಿಯಬೇಕು ಎಂದು ಪ್ರತಿಪಾದಿಸುವ ವಿಮರ್ಶಕ ಬರಗೂರು ರಾಮಚಂದ್ರಪ್ಪ ಅವರು, ‘ಮಾಧ್ಯಮಿಕ ಹಂತಕ್ಕೆ ಪೂರಕವಾಗಿ ಒಂದು ಸಿದ್ಧತಾ ಹಂತ ಇರುವುದಾದರೆ, ಪದವಿ ಹಂತಕ್ಕೆ ಪಿ.ಯು ರೀತಿಯ ಸಿದ್ಧತಾ ಹಂತ ಏಕೆ ಬೇಡ?’ ಎಂದು ಪ್ರಶ್ನಿಸುತ್ತಾರೆ.

‘ಎನ್‌ಇಪಿ ಜಾರಿಗೆ ಬಂದರೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಸ್ತಿತ್ವ ಕಳೆದುಕೊಳ್ಳುತ್ತದೆ. ಜತೆಗೆ ತಾನಾಗಿಯೇ ಒಂದೇ ಶೈಕ್ಷಣಿಕ ವ್ಯವಸ್ಥೆ ಬಂದು ಬಿಡುತ್ತದೆ. ಇದರಿಂದ ಕಾಲೇಜುಗಳ ಬೋಧಕರು ಮತ್ತು ವಿದ್ಯಾರ್ಥಿಗಳ ಮೇಲೆ ಆಗುವ ಪರಿಣಾಮವನ್ನು ತಿಳಿದುಕೊಳ್ಳುವ ಪ್ರಯತ್ನ ಸರ್ಕಾರ ಮಾಡಬೇಕು’ ಎನ್ನುತ್ತಾರೆ ಅವರು.

ಸ್ಪಷ್ಟತೆ ಇದ್ದಂತಿಲ್ಲ:

ರಾಜ್ಯ ಸರ್ಕಾರದ ಸದಾಶಯ ಏನಿದೆ ಎಂಬುದು ನಿಖರವಾಗಿ ಗೊತ್ತಾಗುತ್ತಿಲ್ಲ. ಸಚಿವರ ಹೇಳಿಕೆಯಲ್ಲಿ ಸ್ಪಷ್ಟತೆ ಇಲ್ಲ. ಎಸ್ಸೆಸ್ಸೆಲ್ಸಿ ಮಂಡಳಿ ಮತ್ತು ಪಿಯು ಪರೀಕ್ಷಾ ವಿಭಾಗಗಳಷ್ಟೇ ವಿಲೀನವಾಗುತ್ತವೆಯಾ ಅಥವಾ ಎರಡು ಇಲಾಖೆಗಳು ಒಂದಾಗುತ್ತವೆಯಾ ಎಂಬುದು ತಿಳಿಯುತ್ತಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯು ಒಂದೇ ಸಚಿವಾಲಯದ ವ್ಯಾಪ್ತಿಯಲ್ಲಿ ಬರುತ್ತವೆಯಾದರೂ ಎರಡಕ್ಕೂ ತನ್ನದೇ ಆದ ಪ್ರತ್ಯೇಕ ಅಸ್ತಿತ್ವ, ಮನ್ನಣೆ, ಮಹತ್ವ ಇದೆ. ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ ದೇಶಕ್ಕೆ ಮಾದರಿಯಾಗಿ ರೂಪುಗೊಂಡಿದೆ. ಪಿ.ಯು ಇಲಾಖೆಯಲ್ಲಿ ಜಾರಿಗೆ ಬಂದ ಸಿಇಟಿ ವ್ಯವಸ್ಥೆ ದೇಶದಾದ್ಯಂತ ಜನಮನ್ನಣೆಗಳಿಸಿದೆ. ಹೀಗಿರುವಾಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ ನೆಪದಲ್ಲಿ ಇಲಾಖೆಗಳನ್ನು ವಿಲೀನಗೊಳಿಸುವುದು ಸಮಂಜಸವಲ್ಲ ಎನ್ನುತ್ತಾರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ. ಎ.ಎಚ್‌.

ಸದ್ಯ ರಾಜ್ಯದಲ್ಲಿ 5000ಕ್ಕೂ ಹೆಚ್ಚು ಪಿ.ಯು ಕಾಲೇಜುಗಳಿವೆ. 1250 ಸರ್ಕಾರಿ, 790 ಅನುದಾನಿತ, 165 ಪದವಿ ಕಾಲೇಜುಗಳಿಂದ ವಿಭಜಿತ ಹಾಗೂ 3000ಕ್ಕೂ ಹೆಚ್ಚು ಖಾಸಗಿ ಕಾಲೇಜುಗಳಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 65 ಸಾವಿರಕ್ಕೂ ಹೆಚ್ಚು ಶಾಲೆಗಳಿವೆ. ಎರಡೂ ಇಲಾಖೆಗಳಲ್ಲಿನ ಬೋಧಕ, ಬೋಧಕೇತರ ಹುದ್ದೆಗಳ ವೃಂದ ಮತ್ತು ನೇಮಕಾತಿ ನಿಯಮಗಳು ಹಾಗೂ ಬಡ್ತಿ ನಿಯಮಗಳು ಬೇರೆ ಬೇರೆಯಾಗಿವೆ. ಕಾಲೇಜುಗಳ ಉಪನ್ಯಾಸಕರು ‘ಗ್ರೂಪ್‌–ಬಿ’ ಹುದ್ದೆಯವರಾಗಿದ್ದರೆ, ಪ್ರೌಢಶಾಲೆಗಳ ಸಹಾಯಕ ಶಿಕ್ಷಕರು ‘ಗ್ರೂಪ್‌–ಸಿ’ ಹುದ್ದೆಯವರಾಗಿರುತ್ತಾರೆ. ಅಂತೆಯೇ ಪಿ.ಯು ಕಾಲೇಜುಗಳ ಪ್ರಾಂಶುಪಾಲರು ‘ಗ್ರೂಪ್‌–ಎ’ ಹುದ್ದೆಯವರಾಗಿದ್ದರೆ, ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ‘ಗ್ರೂಪ್‌–ಬಿ’, ಬಿಇಒಗಳು ‘ಗ್ರೂಪ್‌–ಎ’ ಹುದ್ದೆಯವರಾಗಿರುತ್ತಾರೆ. ಹೀಗೆ ವೃಂದ ಮತ್ತು ನೇಮಕಾತಿ ಹಾಗೂ ಶ್ರೇಣಿ ವ್ಯವಸ್ಥೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಹೀಗಿರುವಾಗ ವೈಜ್ಞಾನಿಕವಾಗಿ ಹೇಗೆ ವಿಲೀನ ಸಾಧ್ಯ ಎಂದು ಅವರ ಪ್ರಶ್ನಿಸುತ್ತಾರೆ.

ಹೊಸ ಶೈಕ್ಷಣಿಕ ನೀತಿಯ ಪಾಲನೆಯ ಅಂಗವಾಗಿ ಇಲಾಖೆಗಳ ವಿಲೀನ ಆದರೆ, ಸದ್ಯದಲ್ಲಿ ಚಾಲ್ತಿಯಲ್ಲಿರುವ ಪಿಯು ಕಾಲೇಜು ಅಥವಾ ಜೂನಿಯರ್‌ ಕಾಲೇಜುಗಳಲ್ಲಿ 9 ಮತ್ತು 10ನೇ ತರಗತಿ ತೆರೆಯಬೇಕಾಗುತ್ತದೆ, ಇಲ್ಲವೇ 9 ಮತ್ತು 10ನೇ ತರಗತಿ ಇರುವೆಡೆ 11 ಮತ್ತು 12ನೇ ತರಗತಿಗಳನ್ನು ತೆರೆಯಬೇಕಾಗುತ್ತದೆ. ಇದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಒಪ್ಪುತ್ತವೆಯಾ ಎಂಬ ಪ್ರಶ್ನೆಯೂ ಇದೆ. ಅದರ ಸಾಧಕ– ಬಾಧಕಗಳ ಚರ್ಚೆಯೂ ಆಗಬೇಕಿದೆ. ಹಾಗಾಗಿ ಮೊದಲಿಗೆ ಸರ್ಕಾರ ಈ ಕುರಿತು ತನ್ನ ಯೋಜನೆಯ ಪ್ರಸ್ತಾವದ ಕರಡನ್ನು ಸಾರ್ವಜನಿಕರ ಮುಂದಿಟ್ಟು, ಚರ್ಚೆಗೆ ಅವಕಾಶ ಕಲ್ಪಿಸಬೇಕು. ಬಳಿಕ ವೈಜ್ಞಾನಿಕವಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸುತ್ತಾರೆ.

ಪಿ.ಯು ವಿಲೀನ ಮತ್ತು ವಿಭಜನೆಗಳ ಪ್ರಯೋಗ ಇಂದು, ನಿನ್ನೆಯದಲ್ಲ:

ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸಾಕಷ್ಟು ಕಲ್ಲು, ಮುಳ್ಳುಗಳ ಹಾದಿಯನ್ನು ಸವೆದು ಸದೃಢವಾಗಿ ನಿಂತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬೇರ್ಪಡಲು ಉಪನ್ಯಾಸಕರು ದಶಕದಿಂದ ನಡೆಸಿದ ಹೋರಾಟ ಅಷ್ಟಿಷ್ಟಲ್ಲ. ಕೆಲವಾರು ಬಾರಿ ವಿಲೀನ, ವಿಭಜನೆಗಳನ್ನು ಕಂಡ ಇಲಾಖೆ ಇದು. ಇಲಾಖೆಯ ಮೇಲೆ ನಡೆದ ಸಾಕಷ್ಟು ಪ್ರಯೋಗಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಎಂಬುದನ್ನು ಆಡಳಿತ ವರ್ಗ ಮರೆಯಬಾರದು ಎನ್ನುತ್ತಾರೆ ಸರ್ಕಾರಿ ಪಿ.ಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಶಿಕ್ಷಣ ತಜ್ಞ ಎಲ್‌.ಎನ್‌. ಮುಕುಂದರಾಜ್‌.

ಪಿಯು ಮಂಡಳಿ ರಚನೆ, ಅದು ಇಲಾಖೆಯಾಗಿ ಪರಿವರ್ತಿತವಾದದ್ದು ಸೇರಿದಂತೆ ಪಿ.ಯು ಶಿಕ್ಷಣ ವ್ಯವಸ್ಥೆ ನಡೆದು ಬಂದ ಹಾದಿಯನ್ನು ಅವರು ನೆನಪಿಸಿಕೊಂಡಿದ್ದಾರೆ.

ದೇಶದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಎರಡು ವರ್ಷದ ಇಂಟರ್‌ ಮೀಡಿಯಟ್‌ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿತ್ತು. ಅದರ ಉಸ್ತುವಾರಿಯು ವಿಶ್ವವಿದ್ಯಾಲಯಗಳದ್ದಾಗಿತ್ತು. 1952ರಲ್ಲಿ ಎರಡು ವರ್ಷದ ಇಂಟರ್ ಮೀಡಿಯಟ್‌ ಶಿಕ್ಷಣವನ್ನು ಒಂದು ವರ್ಷದ ಪದವಿ ಪೂರ್ವ ಶಿಕ್ಷಣವನ್ನಾಗಿಸಲಾಯಿತು. ಅದನ್ನು ಮೇಲ್ದರ್ಜೆಗೇರಿಸಿದ ಹೈಸ್ಕೂಲ್‌ಗಳಲ್ಲಿ ಬೋಧಿಸಲಾಗುತ್ತಿತ್ತು.

ಸರ್ಕಾರ 1971–72ರಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿಯನ್ನು ರಚಿಸಿತು. ಆದರೆ ನಾಲ್ಕೇ ವರ್ಷಗಳಲ್ಲಿ ಅದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸಿತು. ವಿಧಾನ ಪರಿಷತ್ತಿನ ಸದಸ್ಯ ಚನ್ನಬಸವಯ್ಯ ಹಾಗೂ ನಜೀರ್‌ ಸಾಬ್‌ ಅವರ ಪ್ರಯತ್ನದಿಂದಾಗಿ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ (1983) ಪದವಿ ಪೂರ್ವ ಶಿಕ್ಷಣ ಮಂಡಳಿ ಮತ್ತೆ ಅಸ್ತಿತ್ವಕ್ಕೆ ಬಂದಿತು. ಆದರೆ 1988ರಲ್ಲಿ ಬೊಮ್ಮಾಯಿ ಸರ್ಕಾರ ಮಂಡಳಿಯನ್ನು ಪುನಃ ರದ್ದುಗೊಳಿಸಿ, ಅದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ತರುವ ಆದೇಶ ಹೊರಡಿಸಿತು. ಆಗ ರಾಜ್ಯದ ಹಲವೆಡೆ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.

ಶಿಕ್ಷಕರ ದಿನಾಚರಣೆ ಬಹಿಷ್ಕಾರ, ಮೌಲ್ಯಮಾಪನ ಕಾರ್ಯಗಳ ಬಹಿಷ್ಕಾರ, ಉಪವಾಸ ಸತ್ಯಾಗ್ರಹಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನಗಳನ್ನು ಉಪನ್ಯಾಸಕರು ದಶಕಗಳ ಕಾಲ ಮಾಡಿದರು. ಇದರ ಪರಿಣಾಮವಾಗಿ 1992ರಲ್ಲಿ ಎಂ. ವೀರಪ್ಪ ಮೊಯ್ಲಿ ಸರ್ಕಾರವು ಪದವಿ ಪೂರ್ವ ಶಿಕ್ಷಣ ಇಲಾಖೆ ರಚನೆಗೆ ಆದೇಶ ಹೊರಡಿಸಿತು. ಅದಕ್ಕೆ ಸ್ವತಂತ್ರ ಅಸ್ತಿತ್ವ ನೀಡಿತು ಎಂದು ಅವರು ಸ್ಮರಿಸುತ್ತಾರೆ. ಇದೀಗ ಮತ್ತೆ ಇಲಾಖೆ ವಿಲೀನದ ಚರ್ಚೆ ನಡೆಯುತ್ತಿರುವುದು ಬೇಸರದ ವಿಷಯ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT