ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿಗೆ ಜೊತೆಯಾಗಲಿ ಉದ್ಯೋಗ

Last Updated 28 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಹತ್ತನೇ ತರಗತಿ ಅಥವಾ ಎರಡನೇ ಪಿ.ಯು. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಬಹು ಮಂದಿಯನ್ನು ಮುಂದೆ ಯಾವ ಉದ್ಯೋಗವನ್ನು ಸೇರಲಿ - ಎಂಬ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತದೆ. ಇದೇ ಪ್ರಶ್ನೆ ಮೂರು ವರ್ಷದ ಪದವಿಯನ್ನು ಮುಗಿಸಿರುವ ವಿದ್ಯಾರ್ಥಿಯನ್ನೂ ಕಾಡುತ್ತಿರುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ವೃತ್ತಿಪರ ಕೋರ್ಸ್‌ಗಳ ಅವಶ್ಯಕತೆ ಎದ್ದುಕಾಣುತ್ತದೆ. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ವರ್ಷ ಪದವಿ ಶಿಕ್ಷಣ ಮುಗಿಸಿ ಹೊರಬರುವ ಮಿಲಿಯನ್‍ಗಟ್ಟಲೆ ವಿದ್ಯಾರ್ಥಿಗಳಲ್ಲಿ ಕೇವಲ ಪ್ರತಿಶತ 30ರಷ್ಟು ವಿದ್ಯಾರ್ಥಿಗಳು ಮಾತ್ರ ನೌಕರಿ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ನಮ್ಮ ಪ್ರಸಕ್ತ ಶಿಕ್ಷಣ ಪದ್ಧತಿಯೇ ಈ ಒಂದು ದುಃಸ್ಥಿತಿಗೆ ಮೂಲ ಕಾರಣ. ಬಹುತೇಕ ಶಿಕ್ಷಣ ಸಂಸ್ಥೆಗಳು ಬರಿಯ ಪದವೀಧರರನ್ನು ಉತ್ಪಾದಿಸುವ ಕಾರ್ಖಾನೆಗಳಾಗಿವೆಯೇ ಹೊರತು, ವಿದ್ಯಾರ್ಥಿಗಳಲ್ಲಿ ಉದ್ಯೋಗಕ್ಕೆ ಸೇರಲು ಪೂರಕವಾದ ಕೌಶಲಗಳನ್ನೇ ಬೆಳೆಸುತ್ತಿಲ್ಲ. ನಮ್ಮ ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರವಾಗಿ ಬದಲಾವಣೆಯಾಗದ ಹೊರತು, ಈ ಸಮಸ್ಯೆಗೆ ಪರಿಹಾರವಿಲ್ಲ. ಹಾಗೆಯೇ, ವಿದ್ಯಾರ್ಥಿಗಳೂ ಉದ್ಯೋಗಕ್ಕೆ ಪೂರಕವಾದ ಕೌಶಲಗಳನ್ನು ಗಳಿಸಿಕೊಳ್ಳುವ ಬಗ್ಗೆ ಆಲೋಚಿಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡುವುದು ಈ ಲೇಖನದ ಉದ್ದೇಶ.

ಕೊಂಚ ಭಿನ್ನವಾಗಿ ಯೋಚಿಸಿ
ನೀವು ಯಾವುದೇ ಹಂತದಲ್ಲಿ, ಪದವಿಪೂರ್ವ ಅಥವಾ ಪದವಿಯ ನಂತರ, ವೃತ್ತಿಪರ ಶಿಕ್ಷಣವನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಬಯಸಿದಲ್ಲಿ, ಅದಕ್ಕೆ ಪೂರ್ವಭಾವಿಯಾಗಿ ಕೆಲವೊಂದು ಅಂಶಗಳ ಕಡೆಗೆ ಗಮನ ಹರಿಸಬೇಕು. ಪ್ರಮುಖವಾಗಿ ಈ ಕೆಳಗಿನ ವಿಷಯಗಳ ಬಗ್ಗೆ ನೀವು ಆಲೋಚಿಸಬೇಕು

ಆಸಕ್ತಿಗಳು: ನಿಮ್ಮ ಆಸಕ್ತಿಗೆ ಅನುಗುಣವಾಗಿ ಕೆಲವು ಪ್ರಮುಖ ವೃತ್ತಿಗಳ ಪಟ್ಟಿಯೊಂದನ್ನು ಮಾಡಿಕೊಳ್ಳಿ. ಇದರಲ್ಲಿ ಯಾವ ವೃತ್ತಿಯ ಬಗ್ಗೆ ನಿಮಗೆ ಹೆಚ್ಚು ಆಸಕ್ತಿ ಇದೆಯೋ ಆ ನಿಟ್ಟಿನಲ್ಲಿಯೇ ನೀವು ಮುಂದುವರೆಯುವುದು ಒಳ್ಳೆಯದು.

ಗುರಿಗಳು: ನಿಮ್ಮ ಕನಸಿನ ವೃತ್ತಿಗೆ ನೀವು ಸೇರಬೇಕಾದಲ್ಲಿ ಅದಕ್ಕೆ ಪೂರಕವಾದ ಕೆಲವು ಗುರಿಗಳನ್ನು ಹಾಕಿಕೊಳ್ಳಬೇಕು. ನಿಮ್ಮ ಗುರಿಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ನೆನಪಿಡಿ, ನೀವು ಬರೆದಿಡುವವರೆಗೆ ಅದು ನಿಮ್ಮ ಕನಸು. ಬರೆದಿಟ್ಟ ಮೇಲೆಯೇ ಅದು ನಿಮ್ಮ ಗುರಿಯಾಗುತ್ತದೆ. ಆ ಗುರಿಗಳ ಸಾಧನೆಗೆ ಬೇಕಾದ ಪೂರ್ವ ಸಿದ್ಧತೆಯನ್ನು ನೀವು ಈಗಿನಿಂದಲೇ ಪ್ರಾರಂಭಿಸಬೇಕು.

ಕೌಶಲಗಳು: ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಕೆಲವು ನಿರ್ದಿಷ್ಟ ಕೌಶಲಗಳಿವೆ. ನೀವು ಅಪೇಕ್ಷೆ ಪಟ್ಟಿರುವ ವೃತ್ತಿಯ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಪೂರಕವಾದ ಕೌಶಲಗಳನ್ನು ಈಗಿನಿಂದಲೇ ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು.

ಮೌಲ್ಯಗಳು: ಎಲ್ಲ ವೃತ್ತಿಗಳಿಗೂ ನಿರ್ದಿಷ್ಟವಾದ ವೃತ್ತಿಧರ್ಮ ಹಾಗೂ ಮೌಲ್ಯಗಳಿರುತ್ತವೆ. ಆ ಮೌಲ್ಯಗಳನ್ನು ಪಾಲಿಸುವ ಮನೋಭಾವವನ್ನು ಆರಂಭದಿಂದಲೇ ಬೆಳೆಸಿಕೊಳ್ಳುವುದು ಅತ್ಯವಶ್ಯ.

ಆಯ್ಕೆ ಮಾಡಿಕೊಂಡಿರುವ ವೃತ್ತಿಗೆ ಸಂಬಂಧಿಸಿದಂತೆ ನಿಮ್ಮ ಬಲಗಳನ್ನು ಹಾಗೂ ದೌರ್ಬಲ್ಯಗಳನ್ನು ಗುರುತಿಸಿಕೊಳ್ಳಿ. ಬಲಗಳನ್ನು ವೃದ್ಧಿಪಡಿಸಿಕೊಳ್ಳುವ ಬಗ್ಗೆ ಹಾಗೂ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಯೋಜನೆ ಹಾಕಿಕೊಳ್ಳಿ.

ಅವಶ್ಯ ಮಾರ್ಗದರ್ಶನ ಪಡೆದುಕೊಳ್ಳಿ
ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ನಿಮ್ಮ ಪೋಷಕರ, ಹಿರಿಯರ ಹಾಗೂ ಸಂಬಂಧಿಸಿದ ವೃತ್ತಿನಿರತರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಈ ನಿಟ್ಟಿನಲ್ಲಿ ನಿಮ್ಮ ಶಿಕ್ಷಕರ ನೆರವನ್ನೂ ಪಡೆದುಕೊಳ್ಳಿ. ಇಂಟರ್ನೆಟ್‌ನಲ್ಲಿ ಸಂಬಂಧಿಸಿದ ಜಾಲತಾಣಗಳಿಗೆ ಭೇಟಿ ನೀಡಿ ಅವಶ್ಯಕವಾದ ಮಾಹಿತಿಯನ್ನು ಸಂಗ್ರಹಿಸಿ. ಎಲ್ಲ ಮಾಹಿತಿಗಳನ್ನು ಅವಲೋಕಿಸಿ ಒಂದು ನಿರ್ಧಾರಕ್ಕೆ ಬನ್ನಿ. ನೆನಪಿಡಿ, ನಿಮ್ಮ ಭವಿಷ್ಯದ ದೃಷ್ಟಿಯಿಂದ ಅಂತಿಮ ನಿರ್ಧಾರ ನಿಮ್ಮದೇ ಆಗಿರಲಿ.

ವೈಯಕ್ತಿಕ ಬೆಳವಣಿಗೆಗೆ ಯೋಜಿಸಿ
ನಿಮ್ಮ ವಿದ್ಯಾರ್ಥಿಜೀವನದ ಅವಧಿಯಲ್ಲಿಯೇ ನೀವು ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ನಿಮ್ಮ ವೈಯಕ್ತಿಕ ಬೆಳವಣಿಗೆಯನ್ನು ವೃದ್ಧಿಸಿಕೊಳ್ಳಬಹುದು. ಋಣಾತ್ಮಕ ಯೋಚನೆಗಳಿಗೆ ದಾರಿ ಮಾಡಿಕೊಡದೆ, ನಿಮ್ಮ ಗುರಿಯನ್ನು ಸಾಧಿಸುವ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯುವುದು ಮುಖ್ಯ. ನೀವು ಕ್ರಿಯಾಶೀಲರಾಗಿದ್ದಷ್ಟೂ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.

ವೈಯಕ್ತಿಕ ಬೆಳವಣಿಗೆಗೆ ಯೋಜಿಸಿ
ನಿಮ್ಮ ವಿದ್ಯಾರ್ಥಿಜೀವನದ ಅವಧಿಯಲ್ಲಿಯೇ ನೀವು ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ನಿಮ್ಮ ವೈಯಕ್ತಿಕ ಬೆಳವಣಿಗೆಯನ್ನು ವೃದ್ಧಿಸಿಕೊಳ್ಳಬಹುದು. ಋಣಾತ್ಮಕ ಯೋಚನೆಗಳಿಗೆ ದಾರಿ ಮಾಡಿಕೊಡದೆ, ನಿಮ್ಮ ಗುರಿಯನ್ನು ಸಾಧಿಸುವ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯುವುದು ಮುಖ್ಯ. ನೀವು ಕ್ರಿಯಾಶೀಲರಾಗಿದ್ದಷ್ಟೂ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.

ಸಂವಹನ ಕೌಶಲವನ್ನು ವೃದ್ಧಿಪಡಿಸಿಕೊಳ್ಳಿ
ಕೌಶಲಗಳ ಅಭಿವೃದ್ಧಿಯಲ್ಲಿ ಸಂವಹನ ಸಾಮರ್ಥ್ಯ ಅತ್ಯಂತ ಮುಖ್ಯವಾದುದು. ವಿಶೇಷವಾಗಿ, ಉದ್ಯೋಗಕ್ಕೆ ಸಂಬಂಧಿಸಿದ ಸಂದರ್ಶನಗಳಲ್ಲಿ ನಿಮ್ಮ ಸಂವಹನ ಸಾಮರ್ಥ್ಯ ಒರೆಗೆ ಹಚ್ಚಲ್ಪಡುತ್ತದೆ. ಇದಕ್ಕಾಗಿ, ವಿಶೇಷ ತರಬೇತಿಯ ಅವಶ್ಯಕತೆ ಇಲ್ಲ. ನಿಮ್ಮ ವ್ಯಾಸಂಗದ ಅವಧಿಯಲ್ಲಿಯೇ ಸಂವಹನ ಕೌಶಲವನ್ನು ವೃದ್ಧಿಪಡಿಸಿಕೊಳ್ಳುವ ಹಲವಾರು ಅವಕಾಶಗಳು ನಿಮಗೆ ದೊರಕುತ್ತದೆ. ಚರ್ಚಾಸ್ಪರ್ಧೆ, ಆಶುಭಾಷಣ ಮುಂತಾದ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನೀವೇ ನಿಮ್ಮ ಮಾತುಗಾರಿಕೆಯ ಕಲೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು ಅಂಥ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಿ. ಕಾಲೇಜಿನಲ್ಲಿ ನಡೆಯುವ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಸಂಯೋಜಿಸುವ ಜವಾಬ್ದಾರಿಗಳನ್ನು ನಿರ್ವಹಿಸಿ. ಇದರಿಂದ ನಿಮ್ಮಲ್ಲಿ ನಾಯಕತ್ವದ ಗುಣಗಳು ಬೆಳೆಯುತ್ತವೆ. ಇದೊಂದು ಅತ್ಯವಶ್ಯವಾದ ಕೌಶಲ.

ಈ ರೀತಿಯ ಕೆಲವು ಅಂಶಗಳು ನೀವು ನಿಮ್ಮ ವ್ಯಾಸಂಗ ಮುಗಿಯುತ್ತಿದ್ದಂತೆ ಉದ್ಯೋಗವನ್ನು ಅರಸಬೇಕಾದ ಸಂದರ್ಭದಲ್ಲಿ ನಿಮಗೆ ಅತ್ಯುಪಯುಕ್ತವಾಗುತ್ತವೆ. ನಿಮ್ಮ ಗುರಿಯನ್ನು ತಲುಪಲು ನಿಮಗೆ ನೆರವಾಗುತ್ತವೆ.

ಕಡಿಮೆ ಅವಧಿಯ ಕೋರ್ಸ್‍ಗಳಿಗೆ ಸೇರಿಕೊಳ್ಳಿ
ನಿಮ್ಮ ಆಯ್ಕೆಯ ವೃತ್ತಿಗೆ ಸಂಬಂಧಿಸಿದ ಕೋರ್ಸ್‌ನಲ್ಲಿ ಅಧ್ಯಯನ ಮುಂದುವರೆಸುತ್ತಿರುವಾಗಲೇ, ಅದಕ್ಕೆ ಪೂರಕವಾದ ಕಡಿಮೆ ಅವಧಿಯ ಕೋರ್ಸ್‌ಗಳಿದ್ದರೆ, ಜೊತೆಯಲ್ಲಿಯೇ ಅವುಗಳನ್ನೂ ಮುಗಿಸಿಕೊಳ್ಳುವುದು ಒಳ್ಳೆಯದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಇಂಥ ಅನೇಕ ಪೂರಕ ಅವಕಾಶಗಳಿವೆ. ಕಾಲೇಜಿನ ಅವಧಿಯ ಹೊರಗೆ, ಸಂಜೆಯ ಸಮಯದಲ್ಲಿ ಇಂಥ ತರಬೇತಿಗಳನ್ನು ಕೊಡುವ ನೂರಾರು ಸಂಸ್ಥೆಗಳಿವೆ. ವಾರಾಂತ್ಯಗಳಲ್ಲಿಯೂ ಇಂಥ ತರಬೇತಿಗಳು ಲಭ್ಯವಿವೆ. ನೀವು ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿಯೇ ಇಂಥ ಸೌಲಭ್ಯದ ವ್ಯವಸ್ಥೆ ಇರುವ ಸಾಧ್ಯತೆ ಇರುತ್ತದೆ. ನಿಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಂಡು ಈ ರೀತಿಯ ತರಬೇತಿಗಳನ್ನು ಪಡೆದುಕೊಳ್ಳಿ. ಇದು ನಿಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ನಿಮ್ಮ ವ್ಯಾಸಂಗ ಮುಗಿಯುವ ವೇಳೆಗೆ ನೀವು ಉದ್ಯೋಗಕ್ಕೆ ಸೇರಲು ಬೇಕಾದ ಅರ್ಹತೆಯನ್ನು ಇದರಿಂದ ಗಳಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT