ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದ ಯಶಸ್ಸಿಗೆ ಶೈಕ್ಷಣಿಕ ಮುನ್ನೋಟ

Last Updated 11 ಜೂನ್ 2019, 19:30 IST
ಅಕ್ಷರ ಗಾತ್ರ

‘ನಿಮ್ಮ ಹಣೆಬರಹದ ಸೃಷ್ಟಿಕರ್ತರು ನೀವೇ’– ಸ್ವಾಮಿ ವಿವೇಕಾನಂದ

**

ಶಿಕ್ಷಣ, ಉದ್ಯೋಗ ಹೊಂದುವುದು ಇವೆಲ್ಲ ಸಂಪೂರ್ಣವಾಗಿ ವಿದ್ಯಾರ್ಥಿಯ ಗುರಿ, ಆಸಕ್ತಿ, ಪ್ರಯತ್ನ, ಸಮರ್ಪಣೆ ಮೇಲೆ ನಿರ್ಧಾರವಾಗುತ್ತದೆ. ತಾನು ಮುಂದೆ ಯಾವ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಬೇಕು ಅಥವಾ ಉದ್ಯಮ ಆರಂಭಿಸಬೇಕು ಎಂದು ನಿರ್ಧಾರ ಮಾಡಿಕೊಂಡ ಮೇಲೆ ಅದೇ ನಿಟ್ಟಿನಲ್ಲಿ ಶಿಕ್ಷಣ, ಕೌಶಲ ತರಬೇತಿ ಮೊದಲಾದವುಗಳನ್ನು ಪಡೆದುಕೊಳ್ಳುವುದು ಉತ್ತಮ ವಿಧಾನ.

ವಿದ್ಯಾರ್ಥಿ ಪ್ರಾಥಮಿಕ / ಪ್ರೌಢ ಶಿಕ್ಷಣ ಪಡೆಯುತ್ತಿದ್ದರೆ ಉದ್ಯೋಗದ ಬಗ್ಗೆ ಪೋಷಕರ ಸಹಾಯದೊಂದಿಗೆ ದೀರ್ಘಕಾಲೀನ ಮುನ್ನೋಟದ ಯೋಜನೆ ಸಿದ್ಧಪಡಿಸಲು ಸೂಕ್ತ ಸಮಯ.

ಉದಾಹರಣೆಗೆ ವಿದ್ಯಾರ್ಥಿ/ ವಿದ್ಯಾರ್ಥಿನಿ ರೈಲ್ವೆ ಇಲಾಖೆಯಲ್ಲಿ (ಲೋಕೊ ಪೈಲಟ್ ) ಉದ್ಯೋಗದ ಗುರಿ ಹೊಂದಿದ್ದರೆ ಅದರ ಪ್ರಯತ್ನ ಪಠ್ಯಾನುಕ್ರಮವಾಗಿ ಅಲ್ಲದಿದ್ದರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ತಯಾರಿ ನಡೆಸಲು ಪ್ರಾಥಮಿಕ/ ಪ್ರೌಢ ಶಿಕ್ಷಣ ಅವಧಿ ಸೂಕ್ತ ಸಮಯ (ರನ್ನಿಂಗ್, ವೇಟ್ ಲಿಫ್ಟಿಂಗ್, ಐ ಕಾಂಟ್ಯಾಕ್ಟ್ 6/6 ). ಇವೆಲ್ಲ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ನಂತರ ಮಾತ್ರ ಮುಂದೆ ನೀವು ವಿವಿಧ ಹಂತಗಳಲ್ಲಿ (ಸ್ಟೇಜ್1, ಸ್ಟೇಜ್2) ತೇರ್ಗಡೆ ಹೊಂದಬಹುದು. ಇಂತಹ ಪ್ರಯತ್ನಗಳೂ ಕೂಡ ಮುಖ್ಯವೇ ಹೊರತು ಲಿಖಿತ ಪರೀಕ್ಷೆಯ ತೇರ್ಗಡೆಯ ಆಧಾರದ ಮೇಲೆ ಮಾತ್ರ ನೇಮಕಾತಿ ಅಸಾಧ್ಯ.

ಆದ್ದರಿಂದ ಇಂತಹ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳು ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಕಾಳಜಿ ವಹಿಸುವುದು ಅತ್ಯಗತ್ಯ. ವಿದ್ಯಾರ್ಥಿಗಳು ತಡರಾತ್ರಿಯವರೆಗೂ ಅಭ್ಯಾಸ ಮಾಡುವ ಹವ್ಯಾಸ ಹೊಂದಿರಬಾರದು. ನಿದ್ರಾಹೀನತೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ ಮತ್ತು ಈ ರೀತಿಯ ಉದ್ಯೋಗಾವಕಾಶಗಳಲ್ಲಿ ಅರ್ಹತೆಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಆಸಕ್ತಿಯಿರುವ ವಿಷಯದ ಆಯ್ಕೆ ಮುಖ್ಯ
ಪ್ರೌಢ ಶಿಕ್ಷಣ ಮುಗಿಸಿದ ನಂತರ ಪಿಯುಸಿ ವಿಭಾಗದ ಆಯ್ಕೆ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಈ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು ತಮ್ಮ ಉದ್ಯೋಗ ಕ್ಷೇತ್ರ ಯಾವುದು ಎಂಬುದನ್ನು ನಿರ್ಧರಿಸಿರುತ್ತಾರೆ. ಪಿಯುಸಿ ವಿಭಾಗದ ಆಯ್ಕೆ ನಿಮಗೆ ಆಸಕ್ತಿ ಇರುವ ವಿಷಯದ ಮೇಲೆ ನಡೆಯಬೇಕೆ ಹೊರತು ‘ಕಲಾ ವಿಭಾಗ ಸುಲಭ, ವಾಣಿಜ್ಯ ವಿಭಾಗವೆಂದರೆ ಗಣಿತ, ವಿಜ್ಞಾನ ಕಬ್ಬಿಣದ ಕಡಲೆ’ ಎನ್ನುವ ಬೇರೆಯವರ ಅಭಿಪ್ರಾಯದಿಂದ ಅಲ್ಲ.

ನಿಮಗೆ ಗಣಿತ ವಿಷಯದಲ್ಲಿ ಸಾಕಷ್ಟು ಆಸಕ್ತಿಯಿದ್ದು ಉತ್ತಮ ಅಂಕಗಳನ್ನು ಪಡೆದಿದ್ದರೂ ಕೂಡ ‘ಗಣಿತ ಎಂದರೆ ಕಷ್ಟ’ ಎನ್ನುವ ಸಹಪಾಠಿ ಅಥವಾ ಸ್ನೇಹಿತರ ಅಭಿಪ್ರಾಯವನ್ನು ಪಡೆದು ನೀವು ಕೂಡ ಕಲಾ ವಿಷಯವನ್ನು ಆಯ್ಕೆ ಮಾಡಿಕೊಂಡಿರಿ ಎಂದಿಟ್ಟುಕೊಳ್ಳಿ. ಕಲೆಯಲ್ಲಿ ಸ್ವಲ್ಪವೂ ಆಸಕ್ತಿ ಇರದ ನೀವು ಆ ವಿಭಾಗದಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹೇಗೆ ತಾನೇ ಸಾಧ್ಯ? ಅದೇ ಕಲಾ ವಿಭಾಗದಲ್ಲಿ ಪದವಿ ಮುಗಿಸಿದ ನಿಮ್ಮ ಸ್ನೇಹಿತ ಅಥವಾ ಸಹಪಾಠಿ ಮತ್ತಷ್ಟು ಪೂರಕ ಕೋರ್ಸ್‌ಗಳ ನೆರವಿನಿಂದ ಉತ್ತಮ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಇದರಿಂದ ಒಂದಂತೂ ಸತ್ಯ, ಔದ್ಯೋಗಿಕ ಯಶಸ್ಸು ಆಸಕ್ತಿಯಿರುವ ವಿಷಯದ ಆಯ್ಕೆ ಮತ್ತು ಪ್ರಯತ್ನದ ಮೂಲಕ ಮಾತ್ರ ಸಾಧ್ಯ.

ಹೀಗಾಗಿ ವಿಷಯವನ್ನು ಆಯ್ಕೆ ಮಾಡುವ ಸಮಯದಲ್ಲಿಯೇ ಸೂಕ್ತ ಮಾರ್ಗದರ್ಶನ ಪಡೆದು, ಅವರಿವರ ಒತ್ತಡಕ್ಕೊಳಗಾಗದೆ ಮುಕ್ತವಾಗಿ ನಿಮ್ಮಿಷ್ಟದ ವಿಷಯವನ್ನು ಆಯ್ಕೆ ಮಾಡಿಕೊಂಡು ಉತ್ತಮ ಅಂಕಗಳನ್ನು ಗಳಿಸುವುದು ಸೂಕ್ತ.

ಅಂಕ ಗಳಿಕೆಯತ್ತ ಗುರಿ
ಪದವಿ ವಿದ್ಯಾರ್ಥಿಗಳು ತಮ್ಮ ಸೆಮಿಸ್ಟರ್ ಅಂಕಗಳ ಮೇಲೆ ಗಮನಹರಿಸುವುದು ಬಹಳ ಮುಖ್ಯ. ಈಗ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳಷ್ಟೇ ಏಕೆ, ಕೆಲವು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಅರ್ಹತೆಯಾಗಿ ಶೇ 85, ಶೇ 75.. ಹೀಗೆ ಅಂಕಗಳನ್ನು ಮಾನದಂಡವಾಗಿ ಬಳಸುತ್ತಾರೆ. ಹೀಗಾಗಿ ಗರಿಷ್ಠ ಅಂಕಗಳನ್ನು ಪಡೆಯಲು ಯತ್ನಿಸಿ. ಪದವಿಯ ನಂತರ ವಿದ್ಯಾರ್ಥಿಗಳಿಗೆ ಇರುವ ಆಯ್ಕೆಗಳು ಸಾಕಷ್ಟು. ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಂಡು ನಿರ್ದಿಷ್ಟ ಉದ್ಯೋಗ ಹೊಂದುವುದು ಮುಖ್ಯ. ಪದವಿಯಲ್ಲಿ ವೃತ್ತಿಪರ ತರಬೇತಿ ಹೊಂದಿರುವವರು ಕ್ಯಾಂಪಸ್ ಆಯ್ಕೆ ಆಗದೇ ಇದ್ದರೆ ಸಣ್ಣ ಅಥವಾ ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ಕೆಲಸ ಆರಂಭಿಸಿ ಅನುಭವ ಪಡೆದುಕೊಳ್ಳಿ. ಸಂದರ್ಶನದ ತರಬೇತಿ ಹೊಂದಿ ಉನ್ನತ ಕಂಪನಿಗಳಲ್ಲಿ ಕೆಲಸ ಪ್ರಾರಂಭಿಸಬಹುದು.

ಹಾಗೆಯೇ ಸ್ನಾತಕೋತ್ತರ ಪದವಿ ಅಥವಾ ವಿದೇಶಗಳಲ್ಲಿ ಓದು ಮುಂದುವರಿಸಲು ಇಚ್ಛಿಸುವವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು.

ಸಮಯ ಕಾಯುವುದಿಲ್ಲ!
ಸಿವಿಲ್ ಸರ್ವಿಸ್ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಪದವಿಯ ಅಂತಿಮ ಸೆಮಿಸ್ಟರ್ ನಂತರ ಪರೀಕ್ಷೆಯ ಮಾಹಿತಿಯನ್ನು ಕಲೆ ಹಾಕಿಕೊಳ್ಳಬೇಕು. ಸಂಬಂಧಿಸಿದ ಅಧ್ಯಯನ ಸಾಮಗ್ರಿ ಸಂಗ್ರಹಿಸಿ ನಿಮಗೆ ತರಬೇತಿಯ ಅವಶ್ಯಕತೆ ಇದೆಯೇ ಅಥವಾ ಸ್ವಯಂ ಅಧ್ಯಯನ ಮಾಡಿದರೆ ಸಾಕೇ ಎಂಬುದನ್ನು ಸ್ವತಃ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಏಕೆಂದರೆ ಪ್ರಾರಂಭದಲ್ಲಿ ಸ್ವಯಂ ಅಧ್ಯಯನದಿಂದ ಸಫಲ ಆಗದಿದ್ದಾಗ ಕೊನೆಗೆ ಕೋಚಿಂಗ್‌ನ ಮೊರೆ ಹೋಗುವುದು ಖಂಡಿತ ಒಳ್ಳೆಯ ನಿರ್ಧಾರವಲ್ಲ. ಏಕೆಂದರೆ ಇಂತಹ ಪರೀಕ್ಷೆಗೆ ಎಷ್ಟು ಬಾರಿ ಯತ್ನಿಸುತ್ತೀರಿ ಎಂಬುದು ಲೆಕ್ಕಕ್ಕೆ ಬರುವುದರಿಂದ ವಿದ್ಯಾರ್ಥಿಯ ಮೇಲೆ ಒತ್ತಡ ಹೆಚ್ಚಾಗುತ್ತಾ ಹೋಗುತ್ತದೆ. ಕೊನೆಯ ಯತ್ನದಲ್ಲಿ ಸೂಕ್ತವಾದ ಜ್ಞಾನವನ್ನು ಹೊಂದಿದ್ದರೂ ಕೂಡ ಕೊನೆಯ ಯತ್ನ ಎಂಬ ಒತ್ತಡದಿಂದ ವಿಫಲವಾಗುವ ಸಾಧ್ಯತೆಯೇ ಹೆಚ್ಚು.

ಹೀಗಾಗಿ ಅದಕ್ಕೆ ಅನುವು ಮಾಡಿಕೊಡದೆ ಸ್ವಯಂ ಅಧ್ಯಯನವಾದರೂ ಸರಿ, ತರಬೇತಿಯಾದರೂ ಸರಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮುಖ್ಯ. ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕ್ಲರ್ಕ್, ಪ್ರೊಬೇಷನರಿ ಅಧಿಕಾರಿ ಹುದ್ದೆಗಳಿಗಾಗಿ ಪ್ರತಿವರ್ಷ ನೇಮಕಾತಿ ನಡೆಯುತ್ತದೆ. ಇದರಲ್ಲೂ ಸಹ ಆಸಕ್ತಿ ಹೊಂದಿದವರು ಮೊದಲ ಅಥವಾ ದ್ವಿತೀಯ ಯತ್ನಗಳಲ್ಲಿ ಸಂಪೂರ್ಣ ಪ್ರಯತ್ನದಿಂದ ಉತ್ತೀರ್ಣಗೊಳ್ಳಬೇಕು. ವರ್ಷಗಳು ಕಳೆದಂತೆ ಸ್ಪರ್ಧೆ ಹೆಚ್ಚಾಗುತ್ತಾ ಹೋಗುತ್ತದೆ. ಓದಲು ಏಕಾಗ್ರತೆ ಕಡಿಮೆಯಾಗುತ್ತದೆ.

**
ಸರ್ಕಾರಿ ಹುದ್ದೆ ಪಡೆಯಬೇಕೆಂಬ ಆಸೆ ಇಟ್ಟುಕೊಂಡವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಖಂಡಿತ ಒಳ್ಳೆಯ ನಿರ್ಧಾರವಲ್ಲ. ಏಕೆಂದರೆ ಅವುಗಳಲ್ಲಿ ಅನೇಕ ವಿಧಗಳಿರುತ್ತವೆ. ವಿವಿಧ ಹುದ್ದೆಗಳ ಪರೀಕ್ಷೆಗಳು ವಿವಿಧ ರೀತಿಯಲ್ಲಿ ಕ್ಲಿಷ್ಟಕರವಾಗಿರುತ್ತವೆ ಹಾಗೂ ಬೇರೆ ಬೇರೆ ರೀತಿಯ ಪಠ್ಯಕ್ರಮ ಹೊಂದಿರುತ್ತವೆ.

ಹೀಗಾಗಿ ಅರ್ಜಿ ಸಲ್ಲಿಸುವ ಮೊದಲು ಹುದ್ದೆಯ ಮಾಹಿತಿ, ಕಚೇರಿ ಕೆಲಸ/ ಕ್ಷೇತ್ರ ಕೆಲಸ, ಪರೀಕ್ಷೆಯ ರೀತಿ ಹಾಗೂ ಪಠ್ಯಕ್ರಮ ಇವೆಲ್ಲವುಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಮಾತ್ರ ನಮಗೆ ಸೂಕ್ತ ಎನ್ನಿಸಿದ ಹುದ್ದೆಗೆ ಅರ್ಜಿ ಸಲ್ಲಿಸಿ, ಅದರ ಸಿಲೆಬಸ್ ಅನುಸಾರವಾಗಿ ಅಭ್ಯಸಿಸಿ ಯಶಸ್ವಿ ಫಲಿತಾಂಶ ಪಡೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT