ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಲಿಕಾ ಆಸಕ್ತಿಗೆ ಒತ್ತು ನೀಡಿ

Last Updated 11 ಜೂನ್ 2019, 19:30 IST
ಅಕ್ಷರ ಗಾತ್ರ

ಮಗು ಹುಟ್ಟಿದಾಗ ಅದು ಪೋಷಕರಿಗೂ ಹೊಸ ಹುಟ್ಟು ಇದ್ದಂತೆ. ಪೋಷಕತ್ವ ಎಂಬುದು ಹೊಸ ಪಾತ್ರವಾದರೂ ತಮ್ಮ ಮಗುವನ್ನು ಹೇಗೆ ಬೆಳೆಸಬೇಕು, ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ಚೆನ್ನಾಗೇ ಯೋಚಿಸಿರುತ್ತಾರೆ. ಇದಕ್ಕೆ ಅವರ ಪೋಷಕರು, ಸುತ್ತಮುತ್ತ ಇರುವವರಿಂದ ಸಲಹೆಗಳೂ ಧಾರಾಳವಾಗಿ ಸಿಗುತ್ತವೆ. ಆದರೂ ತಂದೆ– ತಾಯಿಯಾಗಿ ಮಕ್ಕಳನ್ನು ಯಾವುದೇ ಒತ್ತಡವಿಲ್ಲದೇ ಬೆಳೆಸಬೇಕು ಎಂಬ ವಿಷಯದಲ್ಲಿ ಬಹುತೇಕರು ಎಡವುತ್ತಿದ್ದಾರೆ ಎನ್ನುವುದಂತೂ ನಿಜ.

ಮಕ್ಕಳ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ತಂದೆ– ತಾಯಿ ಅವರ ಮೇಲೆ ಎಲ್ಲವನ್ನೂ ಹೇರುವುದು, ಅದರಿಂದ ಮಕ್ಕಳು ಒತ್ತಡಕ್ಕೊಳಗಾಗುವುದು ಇಂದು ಎಲ್ಲೆಡೆ ಕಂಡು ಬರುತ್ತಿರುವ ಆತಂಕಕಾರಿ ಬೆಳವಣಿಗೆ. ನಮ್ಮ ಮಕ್ಕಳು ಸಕಲ ವಿದ್ಯೆಗಳನ್ನು ಕಲಿತು ಬಿಡಬೇಕು ಎನ್ನುವ ಹುಮ್ಮಸ್ಸಿನಲ್ಲಿ ಅವರ ಮನದಲ್ಲೇನಿದೆ ಎಂದು ತಂದೆ– ತಾಯಂದಿರು ಇಣುಕಿ ನೋಡಲು ಸಹ ಹೋಗುವುದಿಲ್ಲ. ತಮ್ಮ ಆಶೋತ್ತರಗಳನ್ನು ತೀರಿಸಿಕೊಳ್ಳುವುದರಲ್ಲೇ ಇರುತ್ತಾರೆ. ಮಗು ಶಾಲೆ ಬಿಟ್ಟು ಉಳಿದ ಅವಧಿಯಲ್ಲಿ ಮನೆಪಾಠ, ಸಂಗೀತ, ನೃತ್ಯ, ಚಿತ್ರಕಲೆ, ಕರಾಟೆ.. ಹೀಗೆ ಒಂದಲ್ಲ, ಹಲವಾರು ಕಡೆ ಓಡಾಡುತ್ತ ಶ್ರಮಪಡಬೇಕಾಗುತ್ತದೆ. ಈ ಹತ್ತಾರು ತರಗತಿಗಳಿಗೆ ಆಡುವ ವಯಸ್ಸಿನ ಪುಟ್ಟ ಮಕ್ಕಳನ್ನು ಸೇರಿಸುವ ಅವಶ್ಯಕತೆ ಏನಿದೆ? ಆಲ್‌ ರೌಂಡರ್‌ ಮಾಡುವ ಇರಾದೆ ಯಾಕೆ? ಅವರಷ್ಟಕ್ಕೇ ಅವರನ್ನು ಬಿಡಲು ಸಾಧ್ಯವಿಲ್ಲವೇ! ಅವರಲ್ಲಿ ಏನು ಕೌಶಲವಿದೆ ಎಂಬುದನ್ನು ನಿಧಾನವಾಗಿ ಅವಲೋಕಿಸಿ, ಅವರ ಆಸಕ್ತಿಗಳಿಗೆ ನೀರೆರೆಯಬೇಕೇ ಹೊರತು ಎಲ್ಲವನ್ನೂ ತುರುಕುವ ಅಗತ್ಯವಿಲ್ಲ.

ಹತ್ತಾರು ಕೋರ್ಸ್‌ಗಳು
ನಿಜ, ಇದು ಸ್ಪರ್ಧಾತ್ಮಕ ಯುಗ. ಮಕ್ಕಳು ಎಷ್ಟು ಅಂಕ ಗಳಿಸಿದರೂ ತೃಪ್ತಿ ಇಲ್ಲ, ತರಗತಿಗಳು ಮುಗಿದ ತಕ್ಷಣ ಮನೆಪಾಠ ಪ್ರಾರಂಭ. ಚಿಕ್ಕ ಮಕ್ಕಳಾದರೆ ಅವರಿಗೆ ಯಾವುದಾದರೊಂದು ಪಠ್ಯೇತರ ಕೋರ್ಸನ್ನು ಹುಡುಕಿಯೇ ಇಟ್ಟಿರುತ್ತಾರೆ. ಅದು ವಾರದಲ್ಲಿ ಮೂರು ದಿನವಾಗಬಹುದು ಅಥವಾ ವಾರದ ಐದು ದಿನವೂ ಆಗಬಹುದು. ಅದು ಆ ಮಕ್ಕಳು ಇಷ್ಟಪಡುವಂತಹದ್ದು ಆಗಿರಬೇಕೆಂದೇನೂ ಇಲ್ಲ. ಹಿಂದೆ ಮನೆ ತುಂಬಾ ಮಕ್ಕಳಿರುತ್ತಿದ್ದರು. ಅವರಷ್ಟಕ್ಕೇ ಅವರನ್ನು ಬಿಟ್ಟು ಬಿಡುತ್ತಿದ್ದರು. ಈಗ ಇರುವ ಒಂದು ಮಗುವಿನ ಮೇಲೆ ಪೋಷಕರ ಎಲ್ಲಾ ಆಸೆಗಳು ಅವಲಂಬಿತವಾಗಿರುತ್ತವೆ. ಎಲ್ಲದರಲ್ಲೂ ಅವರು ಪರಿಣಿತರಾಗಬೇಕು, ಮುಂದೆ ಯಾವುದಾದರೂ ರಿಯಾಲಿಟಿ ಷೋಗೆ ಹೋಗಲು ಅನುವು ಮಾಡಿಕೊಡಬೇಕು, ನೋಡಿದವರು ಭೇಷ್ ಎನ್ನಬೇಕೆನ್ನುವುದೇ ಅವರ ಉದ್ದೇಶವಾಗಿರುತ್ತದೆ. ಅದು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದರ ಬಗ್ಗೆ ಅವರು ಯೋಚಿಸುವುದೇ ಇಲ್ಲ.

ನಿಜಕ್ಕೂ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತರುವುದು ಪೋಷಕರ ಆದ್ಯ ಕರ್ತವ್ಯ. ಆದರೆ ಅದಕ್ಕಾಗಿ ಪೋಷಕರು ನೀಡುವ ಒತ್ತಡ ಅತಿಯಾದರೆ ಅಮೃತವೂ ವಿಷವಾಗುತ್ತದೆ. ಮಹದಾಸೆ ಹೊತ್ತ ತಂದೆ– ತಾಯಿಯರು ಮಕ್ಕಳ ಭವ್ಯ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಇಷ್ಟವಿದೆಯೋ ಅಥವಾ ಇಲ್ಲವೋ ಎಂದು ಯೋಚಿಸುವುದಿಲ್ಲ. ಅವರ ಮೇಲೆ ಒತ್ತಡ ಹೇರುತ್ತಾರೆ.

ಉದಾಹರಣೆಗೆ ಒಬ್ಬ ಹುಡುಗನ ತಾಯಿಗೆ ತನ್ನ ಮಗ ಒಬ್ಬ ಖ್ಯಾತ ಕ್ರಿಕೆಟ್ ಆಟಗಾರನಾಗಲಿ ಎನ್ನುವ ಆಸೆ. ಅದಕ್ಕಾಗಿ ಪ್ರತಿ ದಿನ ಬೆಳಿಗ್ಗೆ, ಸಂಜೆ ಅವನಿಗೆ ತರಬೇತಿ. ಮಧ್ಯೆ ಮನೆಪಾಠ, ತರಗತಿಗಳು. ಇದು ಆ ಮಗುವಿಗೆ ಎಷ್ಟರ ಮಟ್ಟಿಗೆ ಇಷ್ಟವಿದೆ ಎನ್ನುವುದನ್ನು ವಿಚಾರಿಸುವುದೂ ಇಲ್ಲ. ಅಲ್ಲದೆ ಅವನು ಯಶಸ್ಸನ್ನು ಪಡೆಯದಿದ್ದರೆ ಪೋಷಕರಿಂದ ಇನ್ನಷ್ಟು ಒತ್ತಡ ಹೇರಿಕೆ. ಇದು ಮಗುವಿನ ಎಳೆಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಜೀವನವೆನ್ನುವುದು ಒಂದು ಓಟವಾಗಿ ಬಿಟ್ಟಿದೆ.

ಯುನಿಸೆಫ್ ಮತ್ತು ಡಬ್ಲ್ಯು.ಎಚ್.ಒ. (ವಿಶ್ವ ಆರೋಗ್ಯ ಸಂಸ್ಥೆಯ) ಪ್ರಕಾರ ಐದರಲ್ಲಿ ಒಂದು ಮಗುವಿನ ಮಾನಸಿಕ ಅನಾರೋಗ್ಯಕ್ಕೆ ಪೋಷಕರು ಹೇರುವ ಒತ್ತಡವೂ ಕಾರಣ. ಇದರಿಂದ ಮಕ್ಕಳಲ್ಲಿನ ಆಲೋಚನಾ ಶಕ್ತಿ ಮತ್ತು ಕಲ್ಪನಾ ಶಕ್ತಿ ಎರಡೂ ಕುಂಠಿತವಾಗುತ್ತದೆ ಎನ್ನುವುದು ಮಾನಸಿಕ ತಜ್ಞರ ಅಭಿಪ್ರಾಯವೂ ಹೌದು.

ಸೂಪರ್ ಮಕ್ಕಳು ಆಗುತ್ತಾರೋ ಇಲ್ಲವೋ ಮಕ್ಕಳಲ್ಲಿ ಸೋಲು– ಗೆಲುವನ್ನು ಎದುರಿಸಲು ಧೈರ್ಯವನ್ನು ತುಂಬುವುದು ಅತ್ಯಗತ್ಯ. ಅವರನ್ನು ಅವರಂತೆಯೇ ಇರಲು ಬಿಡಿ, ಅವರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಕಲಿಯಲು ಪ್ರೋತ್ಸಾಹಿಸುವುದರಿಂದ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT