ಶನಿವಾರ, ಸೆಪ್ಟೆಂಬರ್ 21, 2019
21 °C

ಶಿಕ್ಷಕರಾಗಲು ಶಿಕ್ಷಣ

Published:
Updated:
Prajavani

ನಮ್ಮ ಮಕ್ಕಳಿಗೆ ಪಾಠ ಹೇಳಿ ಕೊಡಲು ವಿಷಯಾವಾರು ಶಿಕ್ಷಕರ ಕೊರತೆ ಇದೆ. ಸದ್ಯಕ್ಕೆ ಶಾಲಾ– ಕಾಲೇಜುಗಳಲ್ಲಿ ಹಲವಾರು ವಿಷಯತಜ್ಞರ ಅಗತ್ಯವಿದ್ದು, ಶಿಕ್ಷಕ ಹುದ್ದೆಗೆ ಬೇಡಿಕೆ ಸಾಕಷ್ಟಿದೆ. ಹಾಗಾದರೆ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಳ್ಳಲು ಯಾವ ಬಗೆಯ ಕೋರ್ಸ್‌ ಮಾಡಬೇಕು?​

ಶಿಕ್ಷಕರು ಹೇಳಿ ಕೊಟ್ಟ ಪಾಠ ಕೇಳಿದ ವಿದ್ಯಾರ್ಥಿ ತಾನು ಎಂಜಿನಿಯರ್, ಡಾಕ್ಟರ್, ವ್ಯಾಪಾರಿ, ಉದ್ಯಮಿ.. ಹೀಗೆ ನಾನಾ ವ್ಯಕ್ತಿಗಳಾಗಿ ಬೆಳೆಯಲು ಬಯಸುತ್ತಾನೆ. ಆದರೆ ತಾನು ಶಾಲೆಯಲ್ಲಿ ಕಲಿತ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಹೇಳುವ ಶಿಕ್ಷಕನಾಗಲು ಕೊಂಚ ಹಿಂದು ಮುಂದು ನೋಡುತ್ತಾನೆ. ಹೀಗಾಗಿ ನಮ್ಮ ಮಕ್ಕಳಿಗೆ ಪಾಠ ಹೇಳಿ ಕೊಡಲು ವಿಷಯಾವಾರು ಶಿಕ್ಷಕರ ಕೊರತೆ ಇದೆ. ಸದ್ಯಕ್ಕೆ ಶಾಲಾ– ಕಾಲೇಜುಗಳಲ್ಲಿ ಹಲವಾರು ವಿಷಯತಜ್ಞರ ಅಗತ್ಯವಿದ್ದು, ಶಿಕ್ಷಕ ಹುದ್ದೆಗೆ ಬೇಡಿಕೆ ಸಾಕಷ್ಟಿದೆ. ಹಾಗಾದರೆ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಳ್ಳಲು ಯಾವ ಬಗೆಯ ಕೋರ್ಸ್‌ ಮಾಡಬೇಕು?

ಡಿಪ್ಲೊಮಾ ಇನ್ ಎಜುಕೇಶನ್, ಬ್ಯಾಚುಲರ್‌ ಇನ್‌ ಎಜುಕೇಶನ್ ಮತ್ತು ಮಾಸ್ಟರ್ ಇನ್‌ ಎಜುಕೇಶನ್ ಇವು ಪ್ರಾಥಮಿಕ, ಪ್ರೌಢಶಾಲೆ ಮತ್ತು ಇತ್ತೀಚೆಗೆ ಕಾಲೇಜಿನ ಶಿಕ್ಷಕರಿಗೆ ಕೂಡ ಬೇಕಾದ ಪದವಿಗಳು. ಮೊದಲು ಪ್ರಾಥಮಿಕ ಶಿಕ್ಷಕರಾಗಲು ಟಿಸಿಎಚ್‌, ಪ್ರೌಢಶಾಲೆಗೆ ಬಿ.ಎಡ್‌. ಪದವಿ ಪಡೆಯಬೇಕಾಗುತ್ತಿತ್ತು. ಎಲ್.ಕೆ.ಜಿ.– ಯು.ಕೆ.ಜಿ. ಮಕ್ಕಳಿಗೆ ಪಾಠ ಹೇಳಿಕೊಡಲು ಶಿಕ್ಷಕರಿಗೆ ಬೇಕಾದ ಅರ್ಹತೆ ಪ್ರಾಥಮಿಕ ಶಿಕ್ಷಕ ತರಬೇತಿ ಅಥವಾ ಎನ್.ಟಿ.ಟಿ. ತರಬೇತಿ. ಈ ತರಬೇತಿಯ ಪ್ರಮಾಣ ಪತ್ರಗಳನ್ನು ಹೊಂದಿದ ಶಿಕ್ಷಕರು ಶಾಲೆಯಲ್ಲಿ ಉದ್ಯೋಗ ಪಡೆಯಲು ಆರ್ಹರಾಗುತ್ತಿದ್ದರು.

ಆದರೆ ಈಗ ಡಿ.ಇಡಿ., ಬಿ.ಇಡಿ. ಮತ್ತು ಎಂ.ಇಡಿ. ಪದವಿಗಳು ಮತ್ತು ಅನುಭವಗಳು ಶಿಕ್ಷಕರಾಗಲು ಬಯಸುವವರಿಗೆ ಬೇಕಾದ ಮಾನದಂಡವಾಗಿವೆ. ಎರಡನೇ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಡಿ.ಎಡ್. ಮಾಡಬಹುದು. ಬಿ.ಕಾಂ./ ಬಿ.ಎಸ್‌ಸಿ./ ಬಿ.ಎ. ಪದವಿ ಪಡೆದವರು ಬಿ.ಇಡಿ. ಮಾಡಬಹುದು. ನಂತರ ಎಂ.ಇಡಿ. ಪದವಿಗೆ ಹೋಗಬಹುದು. ಈ ಶಿಕ್ಷಣ ವಿಧಾನದಲ್ಲಿ ಶಿಕ್ಷಕರಾಗಲು ಬಯಸುವ ಪ್ರಶಿಕ್ಷಣಾರ್ಥಿ ವಿದ್ಯಾರ್ಥಿಗೆ ಪ್ರಾಯೋಗಿಕವಾಗಿ ತರಬೇತಿ ಇರುತ್ತದೆ. ಎಲ್ಲ ತರಗತಿಗಳ ವಿಷಯಾವಾರು ಪಾಠ, ಅಭ್ಯಾಸಯೋಗ್ಯ ಪಠ್ಯಪುಸ್ತಕಗಳು, ಪಾಠದ ಕಲಿಕೆ ಸಿದ್ಧಪಡಿಸುವುದರಿಂದ ಹಿಡಿದು ಬೋಧನಾ ವಿಧಾನಗಳವರೆಗೆ ನುರಿತ ಶಿಕ್ಷಕರು ತರಬೇತಿ ನೀಡುತ್ತಾರೆ.

ನಂತರ ಪದವಿ ಪಡೆದ ಶಿಕ್ಷಕರು ಸರ್ಕಾರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಬೇಕು. ಎಲ್ಲ ಕಡೆ ಸರ್ಕಾರದ ಮತ್ತು ಖಾಸಗಿ ಸಂಸ್ಥೆಗಳು ಶಿಕ್ಷಕರ ತರಬೇತಿ ನೀಡುತ್ತಿವೆ. ಈಗ ಆಧುನಿಕ ತಂತ್ರಜ್ಞಾನದ ಪಾಠಗಳು ಸೇರ್ಪಡೆಯಾಗಿದ್ದು, ಮಾದರಿ ಪಾಠಪ್ರವಚನಗಳು ಸಾಕಷ್ಟು ತಿಳಿವಳಿಕೆ ನೀಡುವಂತಿವೆ.

Post Comments (+)