ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾ ಅವಧಿ ಹೆಚ್ಚಳ; ಶೈಕ್ಷಣಿಕ ಗುಣಮಟ್ಟ ಖಾತ್ರಿ

Last Updated 28 ಮೇ 2019, 19:30 IST
ಅಕ್ಷರ ಗಾತ್ರ

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯ ಪರೀಕ್ಷಾ ಫಲಿತಾಂಶಗಳು ಪ್ರಕಟಗೊಂಡು ಸಾಧಕ ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಹಿಂದಿನ ಸೂತ್ರಗಳನ್ನು ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಹಂಚಿಕೊಂಡ ಅಂಶಗಳಲ್ಲಿ ಸಾಮಾನ್ಯವಾದ ಅಂಶವೆಂದರೆ ಅವರು ಕಲಿಕೆಯಲ್ಲಿ ಗುಣಾತ್ಮಕವಾಗಿ ಮತ್ತು ಗರಿಷ್ಠ ಅವಧಿಯವರೆಗೆ ತೊಡಗಿದ್ದರು ಎಂಬುದು. ಅನೇಕರು ಕೋಚಿಂಗ್ ಕೇಂದ್ರಗಳಿಗೆ ಹೋಗದೆ ಶಾಲೆ, ಕಾಲೇಜುಗಳಲ್ಲಿ ಕೈಗೊಂಡ ಬೋಧನೆಯನ್ನು ಗಮನವಿಟ್ಟು ಕೇಳಿ, ನಂತರ ಮನೆಯಲ್ಲಿ ಸ್ವ ಆಸಕ್ತಿಯಿಂದ ಗರಿಷ್ಠ ಅವಧಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡ ಪರಿಣಾಮ ಅವರಿಗೆ ಯಶಸ್ಸು ಸಾಧ್ಯವಾಗಿದ್ದನ್ನು ಬಿಚ್ಚಿಟ್ಟಿದ್ದಾರೆ.

ಉತ್ತಮ ಶೈಕ್ಷಣಿಕ ನಾಯಕತ್ವ, ಶಿಕ್ಷಕರ ಇಚ್ಛಾಶಕ್ತಿ, ಹೊಸಬಗೆಯ ಪ್ರಯೋಗಗಳ ಅನುಷ್ಠಾನ, ಪೋಷಕರು ಹಾಗೂ ಸ್ಥಳೀಯ ಸಮುದಾಯಗಳು ಶಾಲೆಯೊಂದಿಗೆ ಹೊಂದಿರುವ ಸಕ್ರಿಯ ಸಹಭಾಗಿತ್ವ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಖಾತ್ರಿಪಡಿಸಲು ಕಾರಣವಾದ ಅಂಶಗಳಾಗಿವೆ. ಇವುಗಳ ಜೊತೆ ವಿದ್ಯಾರ್ಥಿಗಳಿಗೆ ಗರಿಷ್ಠ ಕಲಿಕಾವಕಾಶ ಸಮಯ ಲಭ್ಯವಾಗುವಂತೆ ಮಾಡುವುದೂ ಸಹ ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ಮತ್ತು ಕುಟುಂಬಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗುವ ಕಲಿಕಾವಕಾಶ ಸಮಯ ಹಾಗೂ ಅದರ ಪ್ರಾಮುಖ್ಯತೆಯ ಕುರಿತು ಒಂದಿಷ್ಟು ಚರ್ಚಿಸೋಣ.

ಶೈಕ್ಷಣಿಕ ಕ್ಷೇತ್ರದ ವಿವಿಧ ಹಂತಗಳಲ್ಲಿ ಅನುಷ್ಠಾನಗೊಂಡ, ಶಾಲೆಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಭಾವಿಸಬಹುದಾದ ಒಟ್ಟು ಶೈಕ್ಷಣಿಕ ಚಟುವಟಿಕೆಗಳನ್ನು ಹಲವಾರು ರೀತಿಯಲ್ಲಿ ವರ್ಗೀಕರಿಸಬಹುದು. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ.

ಪ್ರಧಾನ ಬೋಧನಾ- ಕಲಿಕಾ ಚಟುವಟಿಕೆಗಳು

ಶಿಕ್ಷಕರು ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಕೈಗೊಳ್ಳುವ ಜೊತೆಗೆ ಚರ್ಚೆ, ವಿಚಾರ ವಿನಿಮಯ, ಪ್ರಯೋಗ, ಪ್ರಾತ್ಯಕ್ಷಿಕೆ ಇತ್ಯಾದಿ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಇವುಗಳ ಜೊತೆಗೆ ಶಾಲೆಗಳಲ್ಲಿ ವಿವಿಧ ರೀತಿಯ ವೈಜ್ಞಾನಿಕ, ಸಾಂಸ್ಕೃತಿಕ, ಕ್ರೀಡೆ, ಆಟೋಟಗಳು, ಹಾಡು, ನೃತ್ಯ, ನಾಟಕ, ಸಂಗೀತ, ಮುಂತಾದ ಅನೇಕ ಸಹಪಠ್ಯ ಚಟುವಟಿಕೆಗಳನ್ನು ಶಿಕ್ಷಕರು ಆಯೋಜಿಸುತ್ತಾರೆ. ಈ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಾಲಾ ಪಠ್ಯಕ್ರಮಕ್ಕೆ ಸಂಬಂಧಿಸಿದ ಕಲಿಕೆಗೆ ಕಾರಣವಾಗುತ್ತವೆ ಹಾಗೂ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಪ್ರಭಾವ ಬೀರುತ್ತವೆ. ಈ ಚಟುವಟಿಕೆಗಳನ್ನು ಪ್ರಧಾನ ಬೋಧನಾ ಚಟುವಟಿಕೆಗಳೆನ್ನಬಹುದು. ಈ ಚಟುವಟಿಕೆಗಳನ್ನು ಶಿಕ್ಷಕರು ನಿರಾತಂಕ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಬೇಕು. ಹಾಗಾದಲ್ಲಿ ಮಾತ್ರ ಶಿಕ್ಷಣದ ಗುಣಮಟ್ಟವನ್ನು ಕಾಯ್ದಕೊಳ್ಳಲು ಸಹಾಯಕವಾಗುತ್ತದೆ. ಈ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಶಿಕ್ಷಕರಿಗೆ ನಿಗದಿತ ಸಮಯವು ಲಭ್ಯವಾಗುವಂತಿರಬೇಕು ಹಾಗೂ ಇತರೆ ಯಾವುದೇ ಅಡೆತಡೆಗಳು ಅವರನ್ನು ಬಾಧಿಸಬಾರದು.

ಕಲಿಕಾ ಬೆಂಬಲಿತ ಚಟುವಟಿಕೆಗಳು

ವಿದ್ಯಾರ್ಥಿಗಳಿಗೆ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಹಾಲು, ವಿದ್ಯಾರ್ಥಿವೇತನ, ಪಠ್ಯಪುಸ್ತಕ, ಬೈಸಿಕಲ್ ಇತ್ಯಾದಿ ಕೊಡುವುದರ ಮೂಲಕ ಉತ್ತೇಜನ ನೀಡಲಾಗುತ್ತದೆ. ಇವುಗಳನ್ನು ವಿದ್ಯಾರ್ಥಿಗಳಿಗೆ ಪೂರೈಸುವ ಪ್ರಕ್ರಿಯೆಯಲ್ಲಿ ಶಿಕ್ಷಕರು ತೊಡಗಿಕೊಳ್ಳುತ್ತಾರೆ. ಈ ಕುರಿತ ಕಾರ್ಯಚಟುವಟಿಕೆಗಳ ಜೊತೆ ವಿದ್ಯಾರ್ಥಿ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ದತ್ತಾಂಶ ಸಂಗ್ರಹಣೆ ಹಾಗೂ ಡಿಜಿಟಲೀಕರಣ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ಕರೆತರುವುದು, ವಿಶೇಷ ಚೇತನ ಮಕ್ಕಳಿಗಾಗಿ ಹಮ್ಮಿಕೊಳ್ಳುವ ಸಮನ್ವಯ ಶಿಕ್ಷಣ ಚಟುವಟಿಕೆಗಳು, ವಿದ್ಯಾರ್ಥಿಗಳ ದಾಖಲಾತಿಗಾಗಿ ಆಂದೋಲನ ಇತ್ಯಾದಿಗಳಲ್ಲಿ ಶಿಕ್ಷಕರು ಭಾಗಿಯಾಗಬೇಕಾಗುತ್ತದೆ. ಈ ಚಟುವಟಿಕೆಗಳು ವಿದ್ಯಾರ್ಥಿಗಳ ಕಲಿಕೆಗೆ ಬೆಂಬಲ ನೀಡುವ ಕಾರಣ ಇವುಗಳನ್ನು ಕಲಿಕಾ ಬೆಂಬಲಿತ ಚಟುವಟಿಕೆಗಳೆನ್ನಬಹುದು.

ಕಲಿಕಾವಕಾಶ ಸಮಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು.

ಶಾಲಾ ವಾರ್ಷಿಕ ಯೋಜನೆ: ಶಾಲೆಯು ಇಡೀ ವರ್ಷ ಕೈಗೊಳ್ಳುವ ಚಟುವಟಿಕೆಗಳನ್ನು ಪಟ್ಟಿ ಮಾಡಿ, ಶಾಲೆಯು ಕಾರ್ಯನಿರ್ವಹಿಸುವ ದಿನಗಳು ಹಾಗೂ ಅದರಲ್ಲಿ ಶಾಲೆಯು ಪ್ರಧಾನ ಬೋಧನಾ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಲಭ್ಯವಾಗುವ ದಿನಗಳನ್ನು ಅಂದಾಜಿಸಿ, ಯೋಜನೆಯನ್ನು ತಯಾರಿಸಬೇಕು. ಶಿಕ್ಷಣ ಹಕ್ಕು ಕಾಯ್ದೆ ಆರ್.ಟಿ.ಇ.ನಂತೆ ಶಾಲೆಯು ಕಾರ್ಯನಿರ್ವಹಿಸುವ ದಿನಗಳ ಸಂಖ್ಯೆ ವರ್ಷಕ್ಕೆ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ 200 ದಿನಗಳು (800 ಗಂಟೆಗಳ ಬೋಧನಾ ಅವಧಿ) ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ 220 ದಿನಗಳು (1000 ಗಂಟೆಗಳ ಬೋಧನಾ ಅವಧಿ)ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಶಿಕ್ಷಕರು ಬೋಧನೆಗೆ ತಯಾರಿ, ಬೋಧನೆ, ಮೌಲ್ಯಮಾಪನ ಚಟುವಟಿಕೆಗಳಿಗಾಗಿ ವಾರಕ್ಕೆ ಕನಿಷ್ಠ 45 ಗಂಟೆಗಳ ಕಾಲ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರಬೇಕು. ಈ ಅವಧಿಯನ್ನು ಗುಣಾತ್ಮಕವಾಗಿ ವಿನಿಯೋಗವಾಗುವುದನ್ನು ಖಾತ್ರಿಪಡಿಸಿಕೊಳ್ಳಲು ಸೂಕ್ತ ಸೂಚಕಗಳನ್ನು ಶಾಲಾ ವಾರ್ಷಿಕ ಯೋಜನೆಯಲ್ಲಿ ಅಳವಡಿಸಬೇಕು.

ರಜೆಯಲ್ಲಿರುವ ಶಿಕ್ಷಕರ ಬದಲಿ ವ್ಯವಸ್ಥೆ: ಕೆಲವೊಮ್ಮೆ ಶಿಕ್ಷಕರು ದೀರ್ಘ ಅವಧಿ ಅಥವಾ ಸಂಕ್ಷಿಪ್ತ ಅವಧಿಯ ಮೇಲೆ ರಜೆಯ ಮೇಲೆ ತೆರಳುವ ಸಂದರ್ಭ ಸೃಷ್ಟಿಯಾಗಬಹುದು. ಇಂತಹ ಸಂದರ್ಭದಲ್ಲಿ ರಜೆಯ ಮೇಲೆ ತೆರಳಿದ ಶಿಕ್ಷಕರ ಕಾರ್ಯವನ್ನು ನಿರ್ವಹಿಸಲು ಬದಲಿ ಶಿಕ್ಷಕರ ವ್ಯವಸ್ಥೆ ಮಾಡಬೇಕು. ಕೆಲವೊಮ್ಮೆ ಶಿಕ್ಷಕರು ತುರ್ತು ರಜೆಯ ಮೇಲೆ ಹೋದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಿಡುವಿನಿಂದ ಕಾಲ ಕಳೆಯದೇ ಆ ಸಮಯವನ್ನು ಗುಣಾತ್ಮಕ ಕಲಿಕಾ ಸಮಯವನ್ನಾಗಿ ಪರಿವರ್ತಿಸಿಕೊಳ್ಳಲು ಅಗತ್ಯ ತರಬೇತಿ ನೀಡಬೇಕು. ವಿದ್ಯಾರ್ಥಿಗಳು ಬೋಧನೆ ಮುಕ್ತಾಯಗೊಂಡ ಪಾಠಗಳ ಮನನ, ಕಾನ್ಸೆಪ್ಟ್ ಮ್ಯಾಪ್ ತಯಾರಿ, ಚರ್ಚೆ, ಪ್ರಯೋಗ ಅಥವಾ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಳ್ಳುವಿಕೆ, ಗ್ರಂಥಾಲಯದ ಪರಿಣಾಮಕಾರಿ ಬಳಕೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಅವರನ್ನು ತರಬೇತುಗೊಳಿಸಬೇಕು. ಇದರಿಂದ ವಿದ್ಯಾರ್ಥಿಗಳು ನಿರುಪಯುಕ್ತವಾಗಿ ವ್ಯರ್ಥವಾಗಿ ಸಮಯ ಕಳೆಯುವುದನ್ನು ತಪ್ಪಿಸಬಹುದು. ವಿದ್ಯಾರ್ಥಿಗಳ ಗುಣಾತ್ಮಕ ಕಲಿಕಾ ಸಮಯಕ್ಕೆ ಧಕ್ಕೆ ತರುವ ಅಡ್ಡಿ ಅಡಚಣೆಗಳನ್ನು ಪರಿಣಾಮಕಾರಿಯಾಗಿ ದೂರವಿಡಬೇಕು.

ಕುಟುಂಬದಲ್ಲಿ ನಿಗಾ ವ್ಯವಸ್ಥೆ: ಶಾಲಾ ಅವಧಿಯ ನಂತರ ಮನೆಯಲ್ಲಿ ತಮ್ಮ ಮಕ್ಕಳು ಕಲಿಕೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಮಯವನ್ನು ಹೆಚ್ಚಿಸುವುದನ್ನು ಪೋಷಕರು ಖಾತ್ರಿಪಡಿಸಿಕೊಳ್ಳಬೇಕು.

ಕಲಿಕಾ-ಪೂರಕ ಚಟುವಟಿಕೆಗಳು

ಶಿಕ್ಷಕರ ವೃತ್ತಿ ನೈಪುಣ್ಯತೆಯನ್ನು ಅಭಿವೃದ್ಧಿಗೊಳಿಸಲು ವಿವಿಧ ರೀತಿಯ ತರಬೇತಿ, ಕಾರ್ಯಾಗಾರ, ಸಭೆ, ವಿಚಾರ ಸಂಕಿರಣ, ಸಮಾವೇಶ ಇತ್ಯಾದಿಗಳನ್ನು ಆಯೋಜಿಸಲಾಗುತ್ತದೆ. ಈ ಚಟುವಟಿಕೆಗಳು ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಸಹಾಯಕವಾಗುತ್ತವೆ. ಈ ಚಟುವಟಿಕೆಗಳಲ್ಲಿ ಶಿಕ್ಷಕರು ಭಾಗವಹಿಸುವುದರಿಂದ ಪರೋಕ್ಷವಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಈ ಚಟುವಟಿಕೆಗಳನ್ನು ಕಲಿಕಾ ಪೂರಕ ಚಟುವಟಿಕೆಗಳೆನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT