ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್‌ ಪಾಠ | ಪಿಯು ವಿದ್ಯಾರ್ಥಿಗಳ ಹೊಸ ಪರಿಪಾಠ

Last Updated 18 ಜುಲೈ 2019, 19:31 IST
ಅಕ್ಷರ ಗಾತ್ರ

ಪಿ ಯುಸಿ ಪರೀಕ್ಷೆ ಮುಗಿದ ನಂತರ ಮುಂದೇನು ಮಾಡಬೇಕು ಎಂಬ ಗೊಂದಲದ ತಯಾರಿಯಲ್ಲಿವಿದ್ಯಾರ್ಥಿಗಳು ತೊಡಗಿರುತ್ತಾರೆ. ಇನ್ನೂ ಕೆಲವರು ಪರೀಕ್ಷೆ ಮುಗಿದರೆ ಸಾಕು ಕೋಚಿಂಗ್ ಸೆಂಟರ್‌ಗಳತ್ತ ಮುಖ ಮಾಡುತ್ತಾರೆ. ಇಂತಹ ಶಿಕ್ಷಣದ ಕನಸ್ಸು ಹೊತ್ತಿರುವ ಹುಡುಗರ ನಡುವೆ ಪಿಯುಸಿ ಮುಗಿಯುತ್ತಲ್ಲೇ ‘ನಾವು ಸರ್ಕಾರಿ ಶಾಲೆಯ ಮಕ್ಕಳಿಗೆಉಚಿತವಾಗಿ ಇಂಗ್ಲಿಷ್ ಕಲಿಸಿಕೊಡುತ್ತೇವೆ‘ ಎಂದುಇಲ್ಲೊಂದು ಸ್ನೇಹಿತರ ತಂಡ ಮುಂದಾಗಿದೆ.

ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿ ಸಿಇಟಿ ಪರೀಕ್ಷೆ ಬರೆದಿದ್ದೇವೆ. ಮನೆಯಲ್ಲಿ ಸುಮ್ಮನೆ ಕೂರುವ ಬದಲು ಮಕ್ಕಳಿಗೆ ಇಂಗ್ಲಿಷ್‌ ಕಲಿಸುವ ಉಪಾಯ ಕಂಡುಕೊಂಡು ಸಹಪಾಠಿ ಗೆಳೆಯರೆಲ್ಲ ಸೇರಿ ಬೆನ್ನಿಗಾನಹಳ್ಳಿಯ ಹತ್ತಿರದ ನಾಗವಾರಪಾಳ್ಯದ ಸರ್ಕಾರಿ ಶಾಲೆಯ6 ಮತ್ತು 7ನೇ ತರಗತಿ ಮಕ್ಕಳಿಗೆ ಮಕ್ಕಳಿಗೆ ಬೇಸಿಕ್‌ನಿಂದ ಇಂಗ್ಲಿಷ್‌ ಕಲಿಸುತ್ತಿದ್ದೇವೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಭಯವಿರಬಾರದು, ಮುಂದಿನ ದಿನಗಳಲ್ಲಿ ಅವರಿಗೆ ಈ ಭಾಷೆ ಹೊರೆಯಾಗಬಾರದು. ಹಾಗಾಗಿ ಬೇಸಿಕ್‌ನಿಂದ ಮಕ್ಕಳಿಗೆ ಇಂಗ್ಲಿಷ್‌ ಕಲಿಸುತ್ತೇವೆ ಎನ್ನುತ್ತಾರೆ ರಾಹುಲ್.

ಬೆಂಗಳೂರಿನ ವಿವಿಧ ನಗರಗಳಲ್ಲಿರುವರಾಹುಲ್, ನಿಶಾಂತ್, ವಿಗ್ನೇಶ್, ಸಾತ್ವಿಕ್, ಪ್ರಶಾಂತಿ, ತೇಜಸ್‌ ಗೌಡ, ಶಿವಕುಮಾರ್, ಮೃಣಾಲಿನಿ ಸೇರಿದಂತೆ ಕಾಲೇಜು ಸ್ನೇಹಿತರ ತಂಡ ಮಕ್ಕಳ ಕಲಿಕೆಗಾಗಿ ನಾಗವಾರಪಾಳ್ಯಕ್ಕೆ ಬಂದು ಶಾಲೆಗೆ ಬರುವ ಬಡಮಕ್ಕಳಿಗೆ ಇಂಗ್ಲಿಷ್‌ ಕಲಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಚರ್ಚೆಯ ಮೂಲಕ ಕಲಿಕೆ

ಕಲಿಕೆಯ ಆರಂಭದ ಮುನ್ನ ಸ್ನೇಹಿತರೆಲ್ಲ ಸೇರಿ ಇಂದು ಯಾವ ಕಲಿಕೆಯಾಗಬೇಕು ಎಂಬ ಚರ್ಚೆಯ ಮೂಲಕ ನಿರ್ಧರಿಸಿ ಕಲಿಕೆಯನ್ನು ಆರಂಭಿಸುತ್ತಾರೆ. ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸುವ ವಿಧಾನದ ಮೂಲಕ ಅವರಲ್ಲಿ ಕಲಿಕಾಸಕ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಒಬ್ಬರು ಹೇಳುತ್ತಿದ್ದರೆ ಉಳಿದವರು ಮಕ್ಕಳ ಜತೆ ಸೇರಿ ಅದನ್ನು ವಿವರಿಸಿ ತಿಳಿಸುತ್ತಾರೆ. ಕಲಿಸಿದ ಕಲಿಕೆಯನ್ನು ಮರುದಿನ ಹೇಳಿಸಿ ಮುಂದಿನ ಹಂತಕ್ಕೆ ಹೋಗುತ್ತಾರೆ. ಆಟದ ಜತೆಗೆ ಪಾಠವೂ ನಡೆಯುತ್ತೆ.ಮಕ್ಕಳಿಗೆ ಅರ್ಥವಾಗದ ವಿಷಯಗಳನ್ನು ಚಿತ್ರ ಹಾಗೂ ಝರಾಕ್ಸ್‌ ಪ್ರತಿಗಳ ಮೂಲಕ ಸುಲಭವಾಗಿ ಕಲಿಸುತ್ತಾರೆ.

ಸ್ನೇಹದಿಂದ ಪಾಠ

ಮಕ್ಕಳಿಗೆ ಭಯವಾಗಬಾರದು ಎಂಬ ನಿಟ್ಟಿನಲ್ಲಿ ಮಕ್ಕಳೊಂದಿಗೆ ಸ್ನೇಹದಿಂದ ಕಲಿಕೆ ಆರಂಭಿಸುತ್ತೇವೆ. ಆರಂಭದಲ್ಲಿ ನಮಗೆಲ್ಲ ಮಕ್ಕಳು ಸರ್‌, ಮೇಡಂ ಎಂದು ಕರೆಯುತ್ತಿದ್ದರು. ನಾವು ಆ ಗೋಡೆಯನ್ನು ತೆಗೆದು ಮಕ್ಕಳೊಂದಿಗೆ ಸೇರಿ ನಾವೆಲ್ಲ ಸ್ನೇಹಿತರಂತೆ ಎಂಬ ಮನೋಭಾವದಿಂದ ಪಾಠ ಮಾಡುತ್ತೇವೆ. ಮಕ್ಕಳೂ ಕೂಡ ನಮ್ಮನ್ನು ಅಣ್ಣ, ಅಕ್ಕ ಎಂದು ಕರೆಯುತ್ತಾರೆ. ಇದು ಹೇಗೆ ಅಣ್ಣ ಹೇಳಿಕೊಡಿ ಎಂದು ಮುಂದೆ ಬರುತ್ತಾರೆ. ಮಕ್ಕಳ ಕಲಿಕೆಯ ಆಸಕ್ತಿಯೂ ನಮಗೆ ಸಂತಸ ತಂದಿದೆ. ಶಿಕ್ಷಕರು ಕೂಡ ನಮಗೆ ಸಮಯ ಅನುಕೂಲ ಮಾಡಿಕೊಡುತ್ತಾರೆ ಎನ್ನುತ್ತಾರೆ ತಂಡದ ಸ್ನೇಹಿತರು.

ಓದುವ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಬಂದು ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್‌ ಹೇಳಿಕೊಡುತ್ತಿದ್ದಾರೆ. ಅದರಲ್ಲೂ ನಾಗವಾರಪಾಳ್ಯ ಸ್ಲಂ ಆಗಿದ್ದರಿಂದ ಇಲ್ಲಿ ಬಡಮಕ್ಕಳು ಹೆಚ್ಚಾಗಿದ್ದು ಅವರಿಗೆ ಇಂಗ್ಲಿಷ್ ಕಲಿಕೆಯ ಜತೆಗೆ ಶಿಕ್ಷಕರ ಒಡನಾಟದಲ್ಲಿ ಹಾಗೂ ಮನೆಯವರೊಂದಿಗೆ ಸ್ನೇಹಿತರೊಟ್ಟಿಗೆ ಹೇಗಿರಬೇಕು ಎಂಬುದನ್ನು ಕಲಿಸುತ್ತಾರೆ. ಮಕ್ಕಳಿಗೆ ಈ ಕಲಿಕೆಯಿಂದ ಹೆಚ್ಚು ಉಪಯುಕ್ತವಾಗುತ್ತಿದೆ. ತಮ್ಮ ಕಲಿಕೆಯ ಬಗ್ಗೆ ಅಭಿಪ್ರಾಯವನ್ನು ಮಕ್ಕಳು ಹಂಚಿಕೊಂಡಿದ್ದಾರೆ ಎಂದು ತಂಡದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಶಿಕ್ಷಕಿ ಉಮಾದೇವಿ.

‘ಬೇರೆ ಸರ್ಕಾರಿ ಶಾಲೆಗಳಲ್ಲೂ ಕಲಿಸಲು ಸಿದ್ಧ‘

ಮುಂದೆ ಬೇರೆ ಬೇರೆ ಸರ್ಕಾರಿ ಶಾಲೆಗಳಿಗೆ ಹೋಗಿ ಇಂಗ್ಲಿಷ್ ಕಲಿಸುವ ತಯಾರಿ ನಡೆಯುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳು ಇಂಗ್ಲಿಷ್‌ ಭಾಷೆ ಸುಲಭ ಎಂದು ಕಲಿಕೆಗೆ ಮುಂದಾಗುವಂತೆ ಮಾಡುವ ಉದ್ದೇಶವಿದೆ ಎನ್ನುವುದು ತಂಡದ ಮಾತು.

* ತಾವು ಕಲಿತ ಇಂಗ್ಲಿಷ್ ಕಲಿಕೆಯನ್ನು ಸರ್ಕಾರಿ ಶಾಲಾ ಮಕ್ಕಳಿಗೆ ಹೇಳಿಕೊಡುತ್ತಿರುವುದು ತುಂಬಾ ಶ್ಲಾಘನೀಯ. ಮಕ್ಕಳು ಕೂಡ ಆಸಕ್ತಿಯಿಂದ ಕಲಿಯುತ್ತಿದ್ದಾರೆ.

ಉಮಾದೇವಿ, ಶಿಕ್ಷಕಿ

*ಇಂಗ್ಲಿಷ್‌ ಭಾಷೆ ನಮಗೆ ಮೊದಲು ತುಂಬಾ ಕಷ್ಟವೆನಿಸುತ್ತಿತ್ತು ಈಗ ಕಲಿಕೆ ಸುಲಭವಾಗಿದೆ. ಖುಷಿಯಿಂದ ಕಲಿತುತ್ತಿದ್ದೇವೆ.
–ಮಂಜುನಾಥ ವಿದ್ಯಾರ್ಥಿ

* ಇಂಗ್ಲಿಷ್‌ನಲ್ಲಿ ಮಾತನಾಡುವುದು ಬರೆಯುವುದು ಹೇಗೆ ಎಂಬುದನ್ನು ಸುಲಭವಾಗಿ ಕಲಿಸುತ್ತಾರೆ. ಕಲಿಕೆ ಹೀಗಿದ್ದರೆ ಬೇಗ ಕಲಿಯುತ್ತೇವೆ
–ಸಪ್ನ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT