ಸರ್ಕಾರಿ ಶಾಲಾ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಸುಲಭ!

7

ಸರ್ಕಾರಿ ಶಾಲಾ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಸುಲಭ!

Published:
Updated:
Deccan Herald

ಇಲ್ಲೊಂದು ಸರ್ಕಾರಿ ಶಾಲೆಯ ಇಂಗ್ಲಿಷ್‌ ‌ಶಿಕ್ಷಕ ಮಕ್ಕಳನ್ನು ದತ್ತು ಪಡೆದಂತೆ ಶಿಕ್ಷಣ ನೀಡುತ್ತಾರೆ. ಅವರ ಪಾಠ ಕೇಳಿದ ಮಕ್ಕಳು ಇಂಗ್ಲಿಷ್‌ ವಿಷಯದಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಮಾತ್ರವಲ್ಲ, ಪಿಯುಸಿಯಲ್ಲಿ ವಿಜ್ಞಾನ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡುತ್ತಿದ್ದಾರೆ.

ಬಾಗಲಕೋಟೆಯ ಬೀಳಗಿ ತಾಲ್ಲೂಕಿನ ಕೋಲೂರ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ವಿಷಯ ಬೋಧಿಸುತ್ತಿರುವ ಸೋಮಶೇಖರ ತಳೇವಾಡ ಅವರು ಮಕ್ಕಳಿಗೆ ಇಂಗ್ಲಿಷ್‌ ಭಾಷೆಯನ್ನು ಸರಳ ರೀತಿಯಲ್ಲಿ ಕಲಿಸುತ್ತಿದ್ದಾರೆ. ಇವರ ಬಳಿ ಪಾಠ ಕಲಿತ ಹಲವು ವಿದ್ಯಾರ್ಥಿಗಳು ಇಂಗ್ಲಿಷ್‌ ‌ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿರುವ ನಿದರ್ಶನಗಳೂ ಸಾಕಷ್ಟಿವೆ.

ವಿಜಯಪುರದ ಸೋಮಶೇಖರ ಅವರು ಬಸವನಬಾಗೇವಾಡಿಯಲ್ಲಿ
1 ರಿಂದ 10ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ವಿಜಯಪುರದಲ್ಲಿ ಪದವಿ ಪಡೆದು, ಬೆಂಗಳೂರಿನಲ್ಲಿ ಬಿ.ಇಡಿ ವ್ಯಾಸಂಗ ಮಾಡಿದ್ದಾರೆ. ಇಂಗ್ಲಿಷ್‌ ಮತ್ತು ರಾಜ್ಯಶಾಸ್ತ್ರ‌ದಲ್ಲಿ ಎಂ.ಎ ಪೂರ್ಣಗೊಳಿಸಿದ್ದಾರೆ.

ಇಂಗ್ಲಿಷ್‌ ಕಲಿಕಾ ವಿಧಾನ

‘ಮಕ್ಕಳಿಗೆ ಸುಲಭವಾಗಿ ಹೇಗೆ ಇಂಗ್ಲಿಷ್ ಹೇಳಿಕೊಡಬೇಕು’– ಇದಕ್ಕೆ ಉತ್ತರ ಕಂಡುಕೊಳ್ಳಲು ಒಂದು ವರ್ಷ ಬೇಕಾಗಿದೆ ಈ ಮೇಷ್ಟ್ರಿಗೆ. ಮಕ್ಕಳನ್ನು ಇಂಗ್ಲಿಷ್ ಕಲಿಕೆಗಷ್ಟೇ ಸೀಮಿತವಾಗಿಸಿದರೆ, ಬೇರೆ ವಿಷಯಗಳಲ್ಲಿ ಅವರು ಹಿಂದುಳಿಯುತ್ತಾರೆ. ಅದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಏನ್ಮಾಡೋದು? ಇಂಥದ್ದೊಂದು ಗೊಂದಲ ಅವರನ್ನು ಕಾಡಿತು.

ಇದನ್ನು ನಿವಾರಿಸಿಕೊಳ್ಳಲು ಅವರೇ ದಾರಿಗಳನ್ನು ಕಂಡುಕೊಂಡರು. ಮೊದಲು ಮಕ್ಕಳಲ್ಲಿದ್ದ ಇಂಗ್ಲಿಷ್‌ ಕಲಿಕೆಯ ಭಯ ಹೊಗಲಾಡಿಸಬೇಕು. ಅದಕ್ಕಾಗಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆಯಿಂದ ಮುಂದೆ ಆಗುವ ಉಪಯೋಗಗಳನ್ನು ಮನದಟ್ಟು ಮಾಡಿಕೊಟ್ಟರು. ಅದಕ್ಕೆ ತಾನು ಇಂಗ್ಲಿಷ್ ಕಲಿತಿದ್ದನ್ನೇ ವಿವರಿಸಿದರು. ಈ ವಿಧಾನ ಅನುಸರಿಸಿದ ಮೇಲೆ ಮಕ್ಕಳು ಇಂಗ್ಲಿಷ್ ಕಲಿಯಲು ಆಸಕ್ತಿ ತೋರಿದರು ಎಂದು ಸೋಮಶೇಖರ ನೆನಪಿಸಿಕೊಳ್ಳುತ್ತಾರೆ.

ತಮ್ಮ ತರಗತಿಗಳಲ್ಲಿ ಮಕ್ಕಳು ಇಂಗ್ಲಿಷ್ ಕಲಿತರೆ ಸಾಲದು. 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೂ ಅದನ್ನು ಮುಂದುವರಿಸಬೇಕು ಎಂದು ತೀರ್ಮಾನಿಸಿದರು. ಆದರೆ, ಶಾಲೆ ಸಮಯದಲ್ಲಿ ಕಷ್ಟ. ಹಾಗಾಗಿ ಬೆಳಿಗ್ಗೆ 9 ರಿಂದ 10 ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು, ಪಾಠ ಹೇಳಿಕೊಡಲು ಆರಂಭಿಸಿದರು. ಈ ವಿಶೇಷ ತರಗತಿಗಳಿಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರುತ್ತಿದ್ದರು. ‘ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಕಲಿಸುವುದು ಕಷ್ಟ. ಆದರೆ, ನಾನು ಆಸಕ್ತಿ ಕಳೆದುಕೊಳ್ಳದೇ ಪಾಠ ಮಾಡುತ್ತಿದ್ದೆ’ ಎನ್ನುತ್ತಾ ಕಲಿಸುವ ಸಂದರ್ಭದ ಸಂಕಷ್ಟಗಳನ್ನು ಅವರು ತೆರೆದಿಡುತ್ತಾರೆ.

ಪದಗಳನ್ನು ಸೇರಿಸಿ ಓದಿಸುವುದು

ಮೂರು ಪದಗಳನ್ನು ಸೇರಿಸಿ ಓದಬೇಕು. ಇದು 8ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆ ಆರಂಭಿಸಿದ ಪರಿ. ಇಂಗ್ಲಿಷ್‌ ಅಕ್ಷರ ‘A’ ಹೇಗೆ ಉಪಯೋಗಿಸಬೇಕು. an, I am, I have then, the, has ಎನ್ನುವ ಸಣ್ಣ ಸಣ್ಣ ಪದಗಳನ್ನು ಜೋಡಿಸಿ ಓದುವುದನ್ನು ಅಭ್ಯಾಸ ಮಾಡಿಸುವುದು. ಹೀಗೆ ಆರಂಭದಲ್ಲಿ ಆರು ತಿಂಗಳು ಇಂಥದ್ದೇ ಪ್ರಯತ್ನ ಮುಂದುವರಿಸಿದರು. ಪುಸ್ತಕದಲ್ಲಿರುವ ಪಠ್ಯಗಳ ಜತೆ ಜತೆಗೆ, ಸಣ್ಣ ಪದಗಳ ಉಚ್ಚಾರಣೆ ಮತ್ತು ಬರೆಯುವುದನ್ನು ಅಭ್ಯಾಸ ಮಾಡಿಸಿದರು. ಮುಂದಿನ ಆರು ತಿಂಗಳಲ್ಲಿ ಪಠ್ಯಗಳನ್ನು ಅಭ್ಯಾಸ ಮಾಡಿಸುತ್ತಾ, ಪರೀಕ್ಷೆಯ ಪೂರಕ ಓದಿಗೆ ಒತ್ತು ನೀಡಿದರು.

ಮುಂದೆ ಇದೇ ವಿದ್ಯಾರ್ಥಿಗಳು 9ನೇ ತರಗತಿಗೆ ಸೇರುತ್ತಾರೆ. ಅವರಿಗೆ ಮೊದಲ ಆರು ತಿಂಗಳು ವ್ಯಾಕರಣ ಅಭ್ಯಾಸ. ಜತೆಗೆ ವಾಕ್ಯಗಳಲ್ಲಿ ವ್ಯಾಕರಣ ದೋಷ ತಡೆಯುವ ಕುರಿತು ತರಬೇತಿ ನೀಡಿದರು. ಕನ್ನಡ ಮತ್ತು ಇಂಗ್ಲಿಷ್‌ ವ್ಯಾಕರಣಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಹೇಳುತ್ತಲೇ, ಅದನ್ನು ಯಾವ ರೀತಿಯಲ್ಲಿ ಸುಧಾರಿಸಿಕೊಳ್ಳಬಹುದು ಎನ್ನುವುದನ್ನು ಹೇಳಿಕೊಟ್ಟರು.

‘ಈ ವಿಧಾನದಲ್ಲಿ ಇಂಗ್ಲಿಷ್ ಕಲಿತ 8 ಮತ್ತು 9 ನೇ ತರಗತಿಯ ಮಕ್ಕಳು, 10ನೇ ತರಗತಿಗೆ ಬರುವುದರೊಳಗೆ ಇಂಗ್ಲಿಷ್ ಕಲಿಕೆ ಬಗೆಗಿನ ಭಯ ಹೋಗಿರುತ್ತದೆ. ಮಾತ್ರವಲ್ಲ, ಇಂಗ್ಲಿಷ್ ವಿಷಯದ ಪರೀಕ್ಷೆಯಲ್ಲಿ ಅನಾಯಾಸವಾಗಿ ಉತ್ತೀರ್ಣರಾಗುತ್ತಾರೆ’ ಎನ್ನುವುದು ಸೋಮಶೇಖರ ಅವರ ಅನುಭವದ ನುಡಿ.

ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು

ಅಂದಹಾಗೆ, 10 ವರ್ಷಗಳಲ್ಲಿ 769 ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ವಿಷಯ ಪಾಠ ಹೇಳಿದ್ದಾರೆ. ಅದರಲ್ಲಿ 748 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಮುಂದೆ ವೈದ್ಯಕೀಯ ಪದವಿ ಕಲಿಯುತ್ತಿದ್ದಾರೆ.

‘ನಾನು 8ನೇ ತರಗತಿಗೆ ಬರುವವರೆಗೂ ಸರಿಯಾಗಿ ಎ, ಬಿ, ಸಿ, ಡಿ ಬರುತ್ತಿರಲಿಲ್ಲ. ಆದರೆ, ಇಂದು ಬೆಂಗಳೂರಿನ ಮೆಡಿಕಲ್‌ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್‌. ಓದುತ್ತಿದ್ದೇನೆ. ಇದಕ್ಕೆ ಸೋಮಶೇಖರ ತಳೇವಾಡ ಸರ್‌ ಕಲಿಸಿದ ಇಂಗ್ಲಿಷ್ ಪಾಠವೇ ಕಾರಣ’ ಎಂದು ನೆನಪಿಸಿಕೊಳ್ಳುತ್ತಾರೆ ಅದೇ ಶಾಲೆಯ ಹಿರಿಯ ವಿದ್ಯಾರ್ಥಿ ವಿಷ್ಣುವರ್ಧನ ಪಡಸಲಗಿ.

‘ಆತ್ಮಸಾಕ್ಷಿಯಾಗಿ ಹೇಳ್ತೀನ್‌ ರಿ, ನಾನು ಆ ಸರ್‌ ಬಗ್ಗೆ ಎಷ್ಟು ಹೇಳಿದ್ರೂ ಕಡಿಮಿ. ಕೋಲೂರ ಸಾಲ್ಯಾಗೆ ನಮ್‌ ಮಗಳು ಎಸ್‌ಎಸ್‌ಎಲ್‌ಸ್ಯಾಗ ನೂರಕ್ಕೆ ನೂರು ತಗದಾಳ. ಜಮಖಂಡ್ಯಾಗ ಪಿಯುಸಿ ಸೈನ್ಸ್‌ ತಗೊಂಡು ಅದರಾಗ 96 ಪರ್ಸೆಂಟೇಜ್‌ ತಗಂಡಾಳ. ಎಲ್ಲಾ ಆ ಸರ್‌ ಪಾಠ ಮಾಡಿದ್ದಕ್ಕ ಆಗಿದ್ದು. ಈ ಕಾಲದಾಗ ಮಕ್ಳು ಓದುತಾರೊ ಇಲ್ಲೊ ಅಂತಾ ಯ್ಯಾರ್ ಬಂದು ಮನಿ ಬಾಗಲಾ ಬಡದು ಕೇಳ್ತಾರ ಹೇಳ್ರಿ’ ಎನ್ನುತ್ತಾ ಶಾಲೆ ಮತ್ತು ಶಿಕ್ಷಕ ಸೋಮಶೇಖರ ಅವರ ಕಾಳಜಿಯನ್ನು ಶಾಲೆಯ ವಿದ್ಯಾರ್ಥಿಯಾಗಿದ್ದ ಚೈತ್ರಾ ಅವರ ತಾಯಿ ಶೋಭಾ ಪಾಂಡಪ್ಪ ಮದರಖಂಡಿ ಪ್ರೀತಿಯಿಂದ ಸ್ಮರಿಸುತ್ತಾರೆ.

ಇಂಗ್ಲಿಷ್ ಮೇಷ್ಟ್ರಾದ ಕಥೆ

ಕೋಲೂರ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸುತ್ತಿರುವ ಸೋಮಶೇಖರ ಮೇಷ್ಟ್ರಿಗೆ, ಒಂದರಿಂದ 10ನೇ ತರಗತಿವರೆಗೂ ಇಂಗ್ಲಿಷ್ ಓದಲು, ಬರೆಯಲು ಬರುತ್ತಿರಲಿಲ್ಲ. ಮನೆಯಲ್ಲಿ ಯಾರೂ ಹೇಳಿಕೊಡುವವರಿರಲ್ಲ. ಪೋಷಕರು 10ನೇ ತರಗತಿಯಲ್ಲಿದ್ದಾಗ ಯರನಾಳದ ಪಂಪಾಪತೇಶ್ವರ ವಿರಕ್ತ ಮಠಕ್ಕೆ ಸೇರಿಸಿದ್ದರು.

‘ಮಠದ ಸ್ವಾಮೀಜಿ ಔಷಧದ ಮೇಲಿದ್ದ ಹೆಸರು ಓದಲು ಹೇಳಿದರು. ನಾನು ಓದಲಿಲ್ಲ. ಅದಕ್ಕೆ ಅವರು, ‘ನೀವೆಲ್ಲಾ ಯಾಕ್‌ ಬರ್ತೀರಿ, ಎನ್‌ ಕಲಿತಿರೊ ಏನೊ’ ಎಂದು ಎಲ್ಲರ ಮುಂದೆ ಬೈದಿದ್ದರು. ಅವರ ಬೈಗುಳವೇ ನನ್ನನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ’ ಎಂದು ನೆನಪಿಸಿಕೊಳ್ಳುತ್ತಾರೆ ಸೋಮಶೇಖರ.

ಹೀಗೆ ವಿದ್ಯಾಭ್ಯಾಸ ಆರಂಭಿಸಿದ ಅವರು ಮುಂದೆ ಪದವಿಯಲ್ಲಿ ಇಂಗ್ಲಿಷ್‌ ಭಾಷೆಯನ್ನೇ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡರು. 2007ರಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಹಾಕಿದ್ದರು. ಕೆಲಸ ಸಿಗಲಿಲ್ಲ. 2008ರಲ್ಲಿ ಸಿಇಟಿ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಕಷ್ಟಪಟ್ಟು ಓದಿದರು. 2008ರ ಸಿಇಟಿಯಲ್ಲಿ ಟಾಪ್‌ 3 ರಲ್ಲಿ ಇವರ ಹೆಸರಿತ್ತು. ಇಂಗ್ಲಿಷ್ ಅಷ್ಟೇ ಅಲ್ಲದೇ, ಇತಿಹಾಸದ ವಿಷಯದಲ್ಲೂ ಆಯ್ಕೆಯಾಗಿದ್ದರು.

‘ಎಂ.ಎ ಇಂಗ್ಲಿಷ್‌ ಮಾಡುತ್ತಿದ್ದರಿಂದ ಇಂಗ್ಲಿಷ್‌ ವಿಷಯದ ಶಿಕ್ಷಕನಾಗಿ ಮುಂದುವರಿಯಬೇಕೆನಿಸಿತು. ಹಾಗಾಗಿ ಇಂಗ್ಲಿಷ್‌ ಶಿಕ್ಷಕನಾದೆ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !