ಗುರುವಾರ , ಏಪ್ರಿಲ್ 2, 2020
19 °C

ಎಥಿಕಲ್ ಹ್ಯಾಕಿಂಗ್ ಕೋರ್ಸ್ಕಂಪ್ಯೂಟರ್ ಶಿಕ್ಷಣ ಕಡ್ಡಾಯ

ಹರೀಶ್‌ ಶೆಟ್ಟಿ ಬಂಡ್ಸಾಲೆ Updated:

ಅಕ್ಷರ ಗಾತ್ರ : | |

Prajavani

ನಾನು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದೇನೆ. ನನಗೆ ಎಥಿಕಲ್ ಹ್ಯಾಕಿಂಗ್ ಕೋರ್ಸ್ ಮಾಡುವ ಆಸೆ ಇದೆ. ಇದರ ಬಗ್ಗೆ ಮಾಹಿತಿ ನೀಡಿ.

ದಿಲೀಪ್ ಐರಣಿ, ಊರು ಇಲ್ಲ

ದಿಲೀಪ್, ಎಥಿಕಲ್ ಹ್ಯಾಕಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕೋರ್ಸ್ ಆಗಿದೆ. ಅಂತರ್ಜಾಲದ ಆಡುಭಾಷೆಯಲ್ಲಿ ಎಥಿಕಲ್ ಹ್ಯಾಕರ್‌ಗಳನ್ನು ‘ವೈಟ್ ಹ್ಯಾಟ್’ ಎಂದೂ ಕೂಡ ಕರೆಯುತ್ತಾರೆ. ದೇಶದ ಭದ್ರತೆಯ ದೃಷ್ಟಿಯಿಂದ ಸರ್ಕಾರದ ಸಂಸ್ಥೆಗಳಿಂದ ಅನುಮತಿ ಪಡೆದು ಸೂಕ್ಷ್ಮ ಮಾಹಿತಿಗಳನ್ನು ಹ್ಯಾಕಿಂಗ್ ಮುಖಾಂತರ ಪಡೆಯುವುದು ಈ ಹ್ಯಾಕರ್‌ ಕೆಲಸ. ಸಾಮಾನ್ಯವಾಗಿ ಭಯೋತ್ಪಾದನೆ ಮತ್ತು ದೇಶದ ಭದ್ರತೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಕಲೆಹಾಕಲು, ನಿಗಾ ವಹಿಸಲು ಮತ್ತು ಹೊರಗಿನವರ ನುಗ್ಗುವಿಕೆಯನ್ನು ತಡೆಯಲು ಇದನ್ನು ಬಳಸಲಾಗುತ್ತದೆ.

ನೇರವಾಗಿ ಎಥಿಕಲ್ ಹ್ಯಾಕಿಂಗ್ ಶಿಕ್ಷಣ ಪಡೆಯಲು ಬರುವುದಿಲ್ಲ. ಸಾಮಾನ್ಯವಾಗಿ ಕಂಪ್ಯೂಟರ್ ಅಥವಾ ಐ.ಟಿ. ವಿಷಯದಲ್ಲಿ ಪದವಿ ಶಿಕ್ಷಣ ಪಡೆದ ನಂತರ ಎಥಿಕಲ್ ಹ್ಯಾಕಿಂಗ್‌ನಲ್ಲಿ ಸರ್ಟಿಫಿಕೇಷನ್ ಕೋರ್ಸ್‌  ಮಾಡಬೇಕಾಗುತ್ತದೆ. ಎಥಿಕಲ್ ಹ್ಯಾಕಿಂಗ್ ಎನ್ನುವುದು ಅಡ್ವಾನ್ಸ್ಡ್‌ ಕೋರ್ಸ್‌  ಆಗಿರುವುದರಿಂದ ಕಂಪ್ಯೂಟರ್ ಭಾಷೆಗಳ ಬಗ್ಗೆ ಪೂರ್ವ ಶಿಕ್ಷಣ ಮತ್ತು ಅನುಭವ ಮುಖ್ಯ. ಕಾಮರ್ಸ್ ಶಿಕ್ಷಣದ ನಂತರ ನೀವು ಎಥಿಕಲ್ ಹ್ಯಾಕಿಂಗ್ ಶಿಕ್ಷಣ ಪಡೆಯುವ ಮೊದಲು ಕಂಪ್ಯೂಟರ್ ಶಿಕ್ಷಣದಲ್ಲಿ ಪದವಿ ಅಥವಾ ಡಿಪ್ಲೊಮಾ ಹೊಂದಿರಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಎಥಿಕಲ್ ಹ್ಯಾಕಿಂಗ್ ವಿಷಯದಲ್ಲಿ ಸರ್ಟಿಫೈ ಮಾಡುವ ಇಸಿ-ಕೌನ್ಸಿಲ್‌ನ ವೆಬ್‌ಸೈಟ್‌ ಅನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಸಮಯ, ಪರಿಸ್ಥಿತಿ ಮತ್ತು ಅನುಕೂಲತೆಯನ್ನು ನೋಡಿಕೊಂಡು ನಿರ್ಧರಿಸಿ. ಶುಭಾಶಯ.

ಸರ್, ನಾನು ಬಿ.ಕಾಂ. ಓದುತ್ತಿದ್ದೇನೆ. ನನಗೆ ಕೆಎಎಸ್‌ ಮಾಡಬೇಕು ಅಥವಾ ಏರ್‌ಲೈನ್ಸ್‌ನಲ್ಲಿ ಉದ್ಯೋಗ ಮಾಡಬೇಕು ಎಂಬ ಆಸೆಯಿದೆ. ಯಾವುದು ಒಳ್ಳೆಯದು?  

ಭೂಮಿಕಾ ಎ., ಊರು ಇಲ್ಲ.

ಭೂಮಿಕಾ, ಭಿನ್ನವಾದ ಎರಡು ಕ್ಷೇತ್ರಗಳನ್ನು ಹೋಲಿಕೆ ಮಾಡಿಕೊಂಡು ಯಾವುದು ಬೆಸ್ಟ್ ಎಂದು ಹೇಳಲು ಬರುವುದಿಲ್ಲ. ಈ ಎರಡೂ ಕೂಡ, ತಮ್ಮದೇ ಆದಂತಹ ಕೆಲಸದ ರೀತಿ ಮತ್ತು ವಾತಾವರಣ ಹೊಂದಿದ್ದು ಅಲ್ಲಿ ಕೆಲಸ ನಿರ್ವಹಿಸಲು ಬೇರೆ ಬೇರೆಯಾದ  ಜ್ಞಾನ ಮತ್ತು ಕೌಶಲ ಅಗತ್ಯ. ಹಾಗೆಯೇ ಅದರ ವ್ಯಾಪ್ತಿ ಕೂಡ ಬೇರೆಯಾಗಿದೆ. ಇಲ್ಲಿ ನೀವು ಯಾವುದು ನಿಮಗೆ ಒಪ್ಪುತ್ತದೆ ಮತ್ತು ಯಾವುದರಲ್ಲಿ ನೀವು ಕೆಲಸ ಮಾಡಲು ಇಚ್ಛಿಸುತ್ತೀರಿ ಎಂದು ನೋಡಬೇಕು. ಕೆ.ಎ.ಎಸ್. ಪರೀಕ್ಷೆ ಪಾಸಾದರೆ ನೀವು ನಾಗರಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಹಾಗೂ ಸರ್ಕಾರದ ಸೇವೆಗಳನ್ನು ಜನರ ಬಳಿಗೆ ತಲುಪಿಸುವ ಇಲಾಖೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ರಾಜ್ಯದ ಮತ್ತು ಜಿಲ್ಲೆಗಳ ಬೇರೆ ಬೇರೆ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಬೇಕು. ಆಡಳಿತಾತ್ಮಕ ವಿಷಯಗಳಲ್ಲಿ ಪರಿಣತಿ ಮತ್ತು ಕೌಶಲ ಹೊಂದುವುದು ಈ ಕ್ಷೇತ್ರಕ್ಕೆ ಬೇಕಾಗಿರುವ ಅರ್ಹತೆ.

ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕಾದರೆ ಅದಕ್ಕೆ ಸಂಬಂಧಿಸಿದ ಶಿಕ್ಷಣ ಮತ್ತು ತರಬೇತಿಯನ್ನು ಪಡೆಯಬೇಕಾಗುತ್ತದೆ. ವಿಮಾನಯಾನ ಕ್ಷೇತ್ರದಲ್ಲಿ ಪೈಲಟ್, ಗಗನಸಖಿ, ಟೆಕ್ನಿಷಿಯನ್, ಗ್ರೌಂಡ್ ಡ್ಯೂಟಿ.. ಹೀಗೆ ಅನೇಕ ಕೆಲಸಗಳು ಇರುತ್ತವೆ ಮತ್ತು ಎಲ್ಲದಕ್ಕೂ ಸೂಕ್ತ ತರಬೇತಿ ಪಡೆಯಬೇಕಾಗುತ್ತದೆ. ಉತ್ತಮವಾದ ಇಂಗ್ಲಿಷ್ ಭಾಷೆ, ಸಂಬಂಧಿಸಿದ ತಾಂತ್ರಿಕ ಕೌಶಲ ಮೊದಲಾದವು ಕಡ್ಡಾಯ.

ಎರಡೂ ಕ್ಷೇತ್ರಗಳಲ್ಲಿ ಮಾಡಬೇಕಿರುವ ಕೆಲಸಗಳ ಕುರಿತು ಓದಿ, ಕೇಳಿ ಸೂಕ್ತ ಎನಿಸುವ ಕ್ಷೇತ್ರವನ್ನು ಆಯ್ದುಕೊಳ್ಳಿ.  

ನಾನು ಬಿ.ಎ. ನಂತರ ಎಂ.ಎ. ಪದವಿ ಮುಗಿಸಿ ಈಗ ಪಿಎಚ್.ಡಿ. ಪದವಿಗೆ ಆಂತರಿಕ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡುತ್ತಿದ್ದೇನೆ. ಆದರೆ ನಾನು ಬಿ.ಇಡಿ. ಪದವಿಯನ್ನು ಮಾಡಿಲ್ಲ. ಬಿ.ಇಡಿ. ಪದವಿಯನ್ನು ದೂರ ಶಿಕ್ಷಣದಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಕೈಗೊಳ್ಳಲು ಅವಕಾಶ ಇದೆಯೇ? ಒಂದು ವೇಳೆ ಇದ್ದರೆ ಮುಂದೆ ಉದ್ಯೋಗಕ್ಕೆ ಆಯ್ಕೆಯಾದರೆ ಸಮಸ್ಯೆ ಆಗಬಹುದೆ?

ಪಿ.ಎನ್. ವಡಕಿ, ಯಮನೂರ

ವಡಕಿ ಅವರೇ, ದೂರ ಶಿಕ್ಷಣದಲ್ಲಿ ಬಿ.ಇಡಿ. ಮಾಡುವ ಅವಕಾಶ ಸದ್ಯ ಇರುವುದು ಈಗಾಗಲೇ ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರಿಗಾಗಿ ಮಾತ್ರ. ಅವರು ಕೂಡ ಹಿಂದೆ ನೇರ ಶಿಕ್ಷಣದಲ್ಲಿ ಟೀಚರ್ ಎಜುಕೇಷನ್ ತರಬೇತಿ ಹೊಂದಿರಬೇಕು. ಅಂದರೆ ಟಿಸಿಎಚ್ ಅಥವಾ ಡಿ.ಇಡಿ. ಶಿಕ್ಷಣವನ್ನು ಮುಗಿಸಿರಬೇಕು ಮತ್ತು ಕನಿಷ್ಠ ಕಳೆದ ಎರಡು ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿರಬೇಕು. ಹೀಗಾಗಿ ನೀವು ದೂರ ಶಿಕ್ಷಣದಲ್ಲಿ ಬಿ.ಇಡಿ ಮಾಡಲು ಬರುವುದಿಲ್ಲ. ರೆಗ್ಯುಲರ್ ಮೋಡ್‌ನಲ್ಲಿ ಎರಡು ವರ್ಷಗಳ ಬಿ.ಇಡಿ ಮಾಡಬಹುದು. ಆದರೆ ನೀವು ಈಗಾಗಲೇ ರೆಗ್ಯುಲರ್ ಪಿಎಚ್.ಡಿ. ಮಾಡುತ್ತಿರುವುದರಿಂದ ಎರಡೆರಡು ಶೈಕ್ಷಣಿಕ ಅರ್ಹತೆಗಳನ್ನು ಒಂದೇ ಸಮಯದಲ್ಲಿ ಮಾಡಿದಾಗ ಗಣನೆಗೆ ಬರುವುದಿಲ್ಲ ಮತ್ತು ಅದು ಕಾನೂನಾರ್ಹವೂ ಅಲ್ಲ. ಹಾಗಾಗಿ ಅದು ಮಾನ್ಯವಾಗುವುದಿಲ್ಲ. ನಿಮ್ಮ ವಿಶ್ವವಿದ್ಯಾಲಯದಲ್ಲಿ ಈ ಬಗ್ಗೆ ಒಮ್ಮೆ ವಿಚಾರಿಸಿ ದೃಢಪಡಿಸಿಕೊಳ್ಳಿ.

ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಬೋಧಿಸಲು ಬಿ.ಇಡಿ ಶಿಕ್ಷಣದ ಅವಶ್ಯಕತೆ ಇಲ್ಲ. ನಿಮ್ಮ ಸ್ನಾತಕೋತ್ತರ ಮತ್ತು ಪಿಎಚ್.ಡಿ.ಯ ಶೈಕ್ಷಣಿಕ ಅರ್ಹತೆಯ ಮೇಲೆ ಬೋಧಿಸಬಹುದು. ಪದವಿಪೂರ್ವ ಮತ್ತು ಹೈಸ್ಕೂಲ್ ಹಂತದಲ್ಲಿ ಬೋಧಿಸಲು ಮಾತ್ರ ಬಿ.ಇಡಿ ಕಡ್ಡಾಯ. ನಿಮಗೆ ಯಾವ ಹಂತದಲ್ಲಿ ಬೋಧಿಸಲು ಆಸಕ್ತಿ ಇದೆ ಎಂದು ನಿರ್ಧರಿಸಿ ಮುಂದುವರಿಯಿರಿ. 

ಸರ್, ನಾನು ಪಿಎಚ್.ಡಿ. ಪಾರ್ಟ್‌ ಟೈಮ್‌ ಮಾಡುತ್ತಲೇ ಬಿ.ಇಡಿ ಮಾಡಬಹುದೆ? ಇದರಿಂದ ಮುಂದೆ ನೇಮಕಾತಿಯಲ್ಲಿ ತೊಂದರೆಯಾಗುತ್ತದೆಯೇ? 

ಪ್ರೇಮ ಯು., ಊರು ಬೇಡ

ಪ್ರೇಮ, ಮೇಲಿನ ಪ್ರಶ್ನೆಗೆ ಉತ್ತರಿಸುವಾಗ ಹೇಳಿದಂತೆ ನೀವು ದೂರ ಶಿಕ್ಷಣದಲ್ಲಿ ಪಿಎಚ್.ಡಿ. ಮಾಡಲು ಬರುವುದಿಲ್ಲ. ಆದರೆ ರೆಗ್ಯುಲರ್ ವಿಧಾನದಲ್ಲಿ ಮಾಡಬಹುದು. ನೀವು ಪಾರ್ಟ್‌ಟೈಮ್‌ ಪಿಎಚ್.ಡಿ. ಮಾಡುತ್ತಿರುವುದರಿಂದ ನಿಮ್ಮ ಕೋರ್ಸ್‌ವರ್ಕ್‌ ಮುಗಿದಿದ್ದರೆ ನೀವು ಕೆಲಸ ಮಾಡುತ್ತ ಪಿಎಚ್.ಡಿ. ಮಾಡಲು ಅರ್ಹರಾಗಿರುತ್ತೀರಿ. ಆದರೆ ನೀವು ಪಾರ್ಟ್‌ಟೈಮ್‌ ಪಿಎಚ್.ಡಿ. ಮಾಡುತ್ತಿರುವಾಗ ಇನ್ನೊಂದು ಶೈಕ್ಷಣಿಕ ಅರ್ಹತೆಯನ್ನು ಪಡೆಯಬಹುದೇ ಅಥವಾ ಇಲ್ಲವೇ ಎಂಬುದು ನಿಮ್ಮ ವಿಶ್ವವಿದ್ಯಾಲಯದ ನಿಯಮಗಳು ದೃಢಪಡಿಸುತ್ತವೆ. ಹೀಗಾಗಿ ನಿಮ್ಮ ವಿಶ್ವವಿದ್ಯಾಲಯದಲ್ಲಿ ಈ ಬಗ್ಗೆ ವಿಚಾರಿಸಿ ಮಾಹಿತಿ ಪಡೆದು ಮುಂದುವರಿಯಿರಿ. 

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು