ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಳಿಗೆ ರಂಗು ತುಂಬುವ ‘ಗ್ರಾಫಿಕ್’,‘ಆ್ಯನಿಮೇಷನ್‌’

Last Updated 26 ಏಪ್ರಿಲ್ 2019, 12:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಿಯುಸಿ ಫಲಿತಾಂಶ ಬಂದಾಯಿತು. ಮುಂದೇನು? ಅದೇ ಸಾಂಪ್ರದಾಯಿಕ ಬಿ.ಎ, ಬಿ.ಕಾಂ, ಬಿ.ಎಸ್‌.ಸಿ ಇಲ್ಲವೇ ಎಂಜಿನಿಯರಿಂಗ್, ಮೆಡಿಕಲ್ ಕೋರ್ಸ್‌ ಎಂಬ ಸೀಮಿತ ಚೌಕಟ್ಟಿನೊಳಗೆ ಓದು ಮುಂದುವರಿಸಬೇಕೆ?ಅದರಿಂದ ಈಚೆಗೆ ಬಂದು ಹೊಸ ಸಾಧ್ಯತೆಗಳತ್ತ, ಸೃಜನಶೀಲವಾಗಿ ವಿದ್ಯಾರ್ಥಿಗಳು ಯೋಚನೆ ಮಾಡಬಾರದೇಕೆ?

ನಿಮ್ಮೊಳಗೆ ಹೊಸತನದ ತುಡಿತವಿದೆಯೇ? ಚಿತ್ರಕಲೆಯಲ್ಲಿಯೂ ಆಸಕ್ತಿ ಇದೆಯೇ? ಹಾಗಿದ್ದಲ್ಲಿ ನೀವು ‘ಗ್ರಾಫಿಕ್ ಡಿಸೈನಿಂಗ್’, ‘ಆ್ಯನಿಮೇಷನ್‌’ ಕೋರ್ಸ್‌ ಕಲಿಯುವತ್ತ ಯೋಚನೆ ಮಾಡಬಾರದೇಕೆ?

ಕಂಪ್ಯೂಟರ್ ಗ್ರಾಫಿಕ್ಸ್ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಆವರಿಸಿದೆ. ಚಿಕ್ಕ ಮಕ್ಕಳಿಂದ ವಯೋವೃದ್ಧರವರೆಗೂ ಎಲ್ಲರನ್ನು ಆಕರ್ಷಿಸುವಂತಹ ಶಕ್ತಿಯನ್ನು ಹೊಂದಿದೆ. ಗ್ರಾಫಿಕ್ ವಿನ್ಯಾಸಕಾರರು, ಡಿಸೈನರ್, ‘ಸಂವಹನ ವಿನ್ಯಾಸಕರು’ ಎಂದು ಕರೆಯಲಾಗುವ ಈ ಕ್ಷೇತ್ರದ ವ್ಯಾಪ್ತಿಯೂ ದೊಡ್ಡದೂ, ಅವಕಾಶಗಳು ಹೆಚ್ಚು.

ಹಾಗಿದ್ದರೆ ‘ಗ್ರಾಫಿಕ್ಸ್ ಡಿಸೈನಿಂಗ್’ ಅಂದರೇನು? ಅಕ್ಷರಗಳು, ಫೋಟೊ, ಅಂಕಿಸಂಖ್ಯೆಗಳನ್ನು ಒಳಗೊಂಡ ಚಿತ್ರ. ಅದನ್ನು ವಿಶೇಷವಾಗಿ ಜಾಹೀರಾತುಗಳಲ್ಲಿ, ಪುಸ್ತಕಗಳಿಗೆ, ಮ್ಯಾಗಝಿನ್‌ಗಳಿಗೆ ಬಳಕೆ ಮಾಡುತ್ತಾರೆ. ಗ್ರಾಫಿಕ್ ವಿನ್ಯಾಸಕಾರರು ಹೊಸ ಪರಿಕಲ್ಪನೆಯನ್ನು, ಫೋಟೊ ಅಥವಾ ಅಕ್ಷರಗಳನ್ನು ಕಂಪ್ಯೂಟರ್ ಸಾಫ್ಟ್‌ವೇರ್ ಮೂಲಕ ಅಥವಾ ಕೈಯಿಂದ ಚಿತ್ರ ಬರೆದು ಸ್ಕ್ಯಾನ್‌ ಮಾಡಿ ಬಳಸುತ್ತಾರೆ. ಅದಕ್ಕೊಂದು ದೃಶ್ಯ ಪರಿಕಲ್ಪನೆಗಳನ್ನು ಸೃಷ್ಟಿಸುತ್ತಾರೆ

ಗ್ರಾಫಿಕ್‌ ಡಿಸೈನರ್ ಆದರೆ ಮುದ್ರಿತ ಪುಸ್ತಕಗಳಿಗೆ, ಬ್ರೋಷರ್‌ ತಯಾರಿ, ವೆಬ್‌ಸೈಟ್‌ಗಳಿಗೆ, ಪತ್ರಿಕೆಗಳಿಗೆ, ಪುಸ್ತಕಗಳಿಗೆ, ವಿವಿಧ ಉತ್ಪನ್ನಗಳ ಮಾರಾಟಕ್ಕೆ ಅಗತ್ಯವಾದ ‍ಪ್ಯಾಕೇಜಿಂಗ್‌ಗೆ ವಿನ್ಯಾಸ ಮಾಡಿಕೊಡಬಹುದು. ಫ್ರೀಲಾನ್ಸರ್ ಆಗಿಯೂ ಕೆಲಸ ನಿರ್ವಹಿಸಬಹುದು. ಕಲಿಕೆ ಮುಗಿಸಿದಾಗ ನಿಮಗೆ ಸಾಫ್ಟ್‌ವೇರ್ ಕಂಪನಿಗಳಲ್ಲಿ, ಮುದ್ರಣ ಕ್ಷೇತ್ರದಲ್ಲಿ, ಜಾಹೀರಾತು ಲೋಕದಲ್ಲಿ ಕೆಲಸದ ಅವಕಾಶಗಳಿವೆ. ಸ್ವತಂತ್ರವಾಗಿ ಕೂಡ ಕೆಲಸ ಮಾಡಬಹುದು.

ಆ್ಯನಿಮೇಷನ್‌ ಕ್ಷೇತ್ರ...

ಆ್ಯನಿಮೇಷನ್‌ ಕೈಚಳಕವನ್ನು ಎಲ್ಲರೂ ನೋಡಿಯೇ ಇರುತ್ತೀರಿ. ಕಳೆದ ವರ್ಷ ಸಾಕಷ್ಟು ದೊಡ್ಡ ಸದ್ದು ಮಾಡಿದ ‘ಬಾಹುಬಲಿ’ಯ ವಿಎಫ್ಎಕ್ಸ್ (visual Effects-VFX) ಕೈಚಳಕವನ್ನು ನೋಡಿದ್ದೀರಿ. ಅದೆಲ್ಲ ಸಾಧ್ಯವಾಗಿದ್ದು ‘ಗ್ರಾಫಿಕ್ಸ್‌’, ’ಆ್ಯನಿಮೇಷನ್‌’ನ ಮುಂದಿನ ಹಂತದಲ್ಲಿ. ಇದು ಬಹುದೊಡ್ಡ ಸೃಜನಶೀಲ ಲೋಕ. ನಿರಂತರ ಹೊಸತನದ ತುಡಿತವೇ ಭಂಡವಾಳ.

’ಗ್ರಾಫಿಕ್‌ ಡಿಸೈನಿಂಗ್‌’ ನಲ್ಲಿ ಮುಂದುವರಿದಂತೆ ಗ್ರಾಫಿಕ್ಸ್‌ ಕ್ಷೇತ್ರದಲ್ಲಿಯೇ ದೊಡ್ಡ ಭವಿಷ್ಯವನ್ನು ಕಂಡುಕೊಳ್ಳ ಬಯಸುವವರು ಗ್ರಾಫಿಕ್ಸ್‌ ಡಿಪ್ಲೊಮಾ, ಪದವಿ ಹಾಗೂ ಆ್ಯನಿಮೇಷನ್‌ ಕೋರ್ಸ್‌ ಗಳನ್ನು ಮಾಡಬಹುದು. ಇದರಲ್ಲಿ 2–3 ತಿಂಗಳಿನ ಬೇಸಿಕ್‌ ಸರ್ಟಿಫಿಕೆಟ್‌ ಕೋರ್ಸ್ ನಿಂದ ಆರಂಭವಾಗಿ, 12–15 ತಿಂಗಳು, 2–4 ವರ್ಷಗಳ ಹೈಯರ್‌ ಎಂಡ್‌ ಕೋರ್ಸ್‌ಗಳಾಗಿ ಡಿಪ್ಲೊಮಾ/ಪದವಿ ಓದಬೇಕಾಗುತ್ತದೆ.

ಹುಬ್ಬಳ್ಳಿ, ಧಾರವಾಡ ಸೇರಿ, ನಿಮ್ಮೂರಿನ ತಾಲ್ಲೂಕು– ಜಿಲ್ಲಾ ಕೇಂದ್ರಗಳು ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಗ್ರಾಫಿಕ್ ಡಿಸೈನ್ ಕೋರ್ಸ್, ಕಂಪ್ಯೂಟರ್‌ ತರಬೇತಿ ಕೇಂದ್ರಗಳಲ್ಲಿ ಅರೆನಾ ಆ್ಯನಿಮೇಷನ್ ಕೇಂದ್ರಗಳಲ್ಲಿ ‘ಗ್ರಾಫಿಕ್‌ ಡಿಸೈನಿಂಗ್’ ಕಲಿಸಿಕೊಡಲಾಗುತ್ತದೆ. ವಿಶೇಷವಾಗಿ ಉನ್ನತ ಮಟ್ಟದಲ್ಲಿ ‘ಗ್ರಾಫಿಕ್‌ ಡಿಸೈನಿಂಗ್’ / ಆ್ಯನಿಮೇಷನ್‌’ ಕಲಿಯಬೇಕಿದ್ದರೆ ಬೆಂಗಳೂರಿನ ಅರೆನಾ–ಮಾಯಾ ಆ್ಯನಿಮೇಷನ್, ವಿಎಫ್ಎಕ್ಸ್ ಆ್ಯಂಡ್ ಆ್ಯನಿಮೇಷನ್ ಅಕಾಡೆಮಿ, ಐಕ್ಯಾಟ್ ಡಿಸೈನ್ ಆ್ಯಂಡ್ ಮೀಡಿಯಾ ಕಾಲೇಜುಗಳತ್ತ ಮುಖಮಾಡಬೇಕಾಗುತ್ತದೆ.

ವಿದ್ಯಾರ್ಹತೆ: ಗ್ರಾಫಿಕ್ಸ್ ಡಿಸೈನರ್‌ ಸರ್ಟಿಫಿಕೆಟ್‌ ಕೋರ್ಸ್, ಡಿಪ್ಲೊಮಾ ಮಾಡಲು ಎಸ್.ಎಸ್.ಎಲ್.ಸಿ ಆಗಿದ್ದರೂ ಸಾಕು. ಆದರೆ ಈ ವಿಷಯದಲ್ಲಿ ಪದವಿ ಪಡೆಯಲು ನೀವು ಪಿ.ಯು.ಸಿ ತೇರ್ಗಡೆ ಹೊಂದಿರಬೇಕು.

ಗ್ರಾಫಿಕ್ ಹಾಗೂ ಆ್ಯನಿಮೇಷನ್ ಕ್ಷೇತ್ರದಲ್ಲಿ ನೀವು ಪರಿಣತಿಗಳಿಸಬೇಕಾದರೆ ನಿಮಗೆ ಚಿತ್ರಕಲೆ ಮತ್ತು ದೃಶ್ಯ ಮಾಧ್ಯಮದ ಬಗ್ಗೆ ಒಂದಿಷ್ಟು ಅನುಭವ ಮತ್ತು ಮಾಹಿತಿ ಇರಬೇಕಾಗುತ್ತದೆ. ಗ್ರಾಫಿಕ್ಸ್ ಮತ್ತು ದೃಶ್ಯ ಸಂಯೋಜನೆಗೆ ಇರುವ ವ್ಯಾಪ್ತಿ ದೊಡ್ಡದು. 2ಡಿ, 3ಡಿ ಆ್ಯನಿಮೇಷನ್, ಮೋಶನ್ ಗ್ರಾಫಿಕ್ಸ್, ಮೋಶನ್ ಆ್ಯನಿಮೇಷನ್‍ಗಳ ಕಲಿಕೆಯಿಂದ ಮಾತ್ರ ಕ್ರಮಬದ್ಧ ದೃಶ್ಯ ಸಂಯೋಜನೆ ಮಾಡಲು ಸಾಧ್ಯ.

ಎಲ್ಲದಕ್ಕಿಂತ ಹೆಚ್ಚಾಗಿ ನೀವು ದೊಡ್ಡ ಕನಸುಗಾರರಾಗಿರಬೇಕು. ಭಿನ್ನವಾಗಿ ಮತ್ತು ಕ್ರಿಯಾತ್ಮಕವಾಗಿ ಯೋಚಿಸಬೇಕು. ಬಣ್ಣಗಳ ಬಗ್ಗೆ ಹೆಚ್ಚು ಆಸಕ್ತಿ ಇರಬೇಕು. ದೊಡ್ಡ ದೊಡ್ಡ ವಿಚಾರಗಳನ್ನು ಅಷ್ಟೇ ಸರಳವಾಗಿ ಮತ್ತು ಸೂಕ್ಷ್ಮವಾಗಿ ಹೇಳುವಂತಹ ಕಲೆ ನಿಮ್ಮೊಳಗಿದ್ದರೆ ನೀವು ಆ್ಯನಿಮೇಷನ್‌ ಕ್ಷೇತ್ರದಲ್ಲಿ ಮಿಂಚಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT