ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಸರ್ಕಾರಿ ಶಾಲೆಗಳು ಪುನರಾರಂಭ: ಹೀಗಿರಲಿ ಶಾಲೆಯಲ್ಲಿ ಮಗುವಿನ ಮೊದಲ ದಿನ

Last Updated 29 ಮೇ 2019, 3:35 IST
ಅಕ್ಷರ ಗಾತ್ರ

ಶಾಲೆಗಳ ಎದುರು ಅಳುವ ಪುಟಾಣಿ ಮಕ್ಕಳು; ತಂದೆ ಅಥವಾ ತಾಯಿ ಬಿಟ್ಟು ಹೋದರೆ ಎಂಬ ಭಯದಿಂದ ಅವರನ್ನು ಅಪ್ಪಿಕೊಂಡು ಶಾಲೆಯೊಳಗೆ ಹೋಗಲು ಒಲ್ಲದ ಚಿಣ್ಣರು; ಮಕ್ಕಳನ್ನು ರಮಿಸುತ್ತ ಒಳಗೆ ಒಯ್ಯುವ ಶಾಲೆಯ ಶಿಕ್ಷಕ/ ಶಿಕ್ಷಕಿಯರು, ಆಯಾಗಳು.. ಇನ್ನೊಂದು ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲೆಗಳ ಸಮೀಪ ಕಾಣುವ ಸಾಮಾನ್ಯ ದೃಶ್ಯಗಳಿವು.

ಮನೆಯಲ್ಲಿ ತಂದೆ– ತಾಯಿಯ ಅಕ್ಕರೆ, ಅಜ್ಜ– ಅಜ್ಜಿಯರ ಮುದ್ದಿನ ಮಧ್ಯೆ ಕಳೆದ ಪುಟಾಣಿಗಳು ಸಮವಸ್ತ್ರ, ಪುಟ್ಟ ಬ್ಯಾಗ್‌ ಹೊತ್ತು ಶಾಲೆಗೆ ಕಾಲಿಡುವ ಈ ಹೊತ್ತು ಅವರ ತಲೆಯೊಳಗೆ ಭಯ, ಆತಂಕವನ್ನು ಹುಟ್ಟು ಹಾಕುವುದು ಸಹಜ. ತಂದೆ– ತಾಯಿಯರಿಂದ ಬೇರ್ಪಡುವ ಈ ಸಂದರ್ಭ ಆ ಮಕ್ಕಳಿಗೆ ನಿಜಕ್ಕೂ ಆಘಾತಕರ. ಪೋಷಕರೂ ಅಷ್ಟೆ, ತಮ್ಮ ಮಕ್ಕಳು ಅನುಭವಿಸುವ ಈ ಯಾತನೆಯಿಂದ ಒತ್ತಡಕ್ಕೆ ಒಳಗಾಗುತ್ತಾರೆ.

ಪೋಷಕರಿಂದ ಬೇರ್ಪಡುವ ಆತಂಕ

ಮಕ್ಕಳು ತಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುವ ಪೋಷಕರಿಗೆ ಅದರಲ್ಲೂ ತಾಯಿಗೆ ಹೆಚ್ಚು ಅಂಟಿಕೊಳ್ಳುವುದು ಸಹಜ. ಹುಟ್ಟಿದ ಕೂಸನ್ನು ತಾಯಿಯಿಂದ ಬೇರ್ಪಡಿಸಿದಾಗ ಅಳುವುದು ಈ ಕಾರಣದಿಂದಲೇ. ಅದರಲ್ಲೂ ಎರಡೂವರೆ– ಮೂರು ವರ್ಷಗಳ ಮಕ್ಕಳಿಗೆ ಪೋಷಕರ ಜೊತೆಗಿನ ಸಂಬಂಧ ಹೆಚ್ಚು ನಿಕಟವಾಗಿರುತ್ತದೆ. ಸ್ವಲ್ಪ ಹೊತ್ತು ಪೋಷಕರು ಕಾಣದಿದ್ದರೂ ಭಯದಿಂದ ಕಂಗಾಲಾಗುತ್ತಾರೆ. ಹೀಗಿರುವಾಗ ತಂದೆ– ತಾಯಿಯರಿಂದ ಬೇರ್ಪಡಿಸಿ ಶಾಲೆಯೆಂಬ ಯಾವುದೋ ಅಪರಿಚಿತ ಜಾಗಕ್ಕೆ ದೂಡಿದರೆ ಪುಟ್ಟ ಮನಸ್ಸಿಗೆ ಹೇಗಾಗಬೇಡ? ತಾನು ಅಲ್ಲಿ ಸುರಕ್ಷಿತವಲ್ಲ ಎಂಬ ಆತಂಕ ಸಹಜವಾಗಿ ಹೊರಹೊಮ್ಮಿ ತಂದೆ– ತಾಯಂದಿರಿಗೆ ಅಂಟಿಕೊಳ್ಳುವಂತೆ ಮಾಡಿಬಿಡುತ್ತದೆ.

ತನ್ನನ್ನು ಇಷ್ಟು ದಿನ ನೋಡಿಕೊಂಡ, ಪ್ರೀತಿಯ ಮಳೆ ಸುರಿಸಿದ ತಂದೆ– ತಾಯಿ ದೂರವಾಗುತ್ತಾರೆ ಎಂಬ ಭಯದಿಂದ ಅದು ಅಳಲು ಶುರುಮಾಡುತ್ತದೆ. ಶಾಲೆಯಲ್ಲಿನ ಅಪರಿಚಿತ ಮುಖಗಳು ಈ ದಿಗಿಲನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹೀಗಾಗಿ ಮಗುವಿನಲ್ಲಿ ಕಾಣಿಸಿಕೊಳ್ಳುವ ಈ ಅಸುರಕ್ಷಿತ ಭಾವನೆಗಳನ್ನು ಹೋಗಲಾಡಿಸಿ, ಶಾಲೆಯ ಶಿಕ್ಷಕ/ ಶಿಕ್ಷಕಿಯರೆಂಬ ಅಪರಿಚಿತ ವ್ಯಕ್ತಿಗಳು, ಉಳಿದ ಮಕ್ಕಳ ಜೊತೆ ಬಾಂಧವ್ಯ ಏರ್ಪಡಿಸಿದರೆ ಮಾತ್ರ ಅದು ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲಾರಂಭಿಸುತ್ತದೆ. ಈ ಮನೆ ವಾತಾವರಣದಿಂದ ಬದಲಾ
ಗುವ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಮಗುವನ್ನು ಮಾನಸಿಕವಾಗಿ ಸಿದ್ಧಪಡಿಸಬೇಕಾಗುತ್ತದೆ.

ಬದಲಾವಣೆಗೆ ಸಮಯ ಬೇಕು

ಈ ಬದಲಾವಣೆಗೆ ಸ್ವಲ್ಪ ಸಮಯ ಬೇಕು. ಪೋಷಕರು ಅವಸರದಿಂದ ವರ್ತಿಸಿದರೆ, ಮಗುವನ್ನು ಗದರಿಸಿದರೆ ಸಾಧ್ಯವಿಲ್ಲ. ನಗರದಲ್ಲಿ ಪೋಷಕರು ಮಗುವನ್ನು ಪ್ಲೇಹೋಮಿಗೆ ಸೇರಿಸಿದರೆ, ಹಳ್ಳಿಗಳಲ್ಲೂ ಅಂಗನವಾಡಿಗೆ ಸೇರಿಸುವ ಪರಿಪಾಠವಿದೆ. ಮಗು ಒಂದಿಷ್ಟು ಬಾಲಿಕವಿತೆಗಳನ್ನು ಹಾಡಬಹುದು, ಅಕ್ಷರಗಳನ್ನು ಕಲಿತು ರಾಗವಾಗಿ ಹೇಳಬಹುದು. ಆದರೆ ಸಾಂಪ್ರದಾಯಕ ಶಾಲೆಗೆ ಸೇರಲು ಮಗುವಿಗೆ ಇಷ್ಟೇ ಸಾಕಾಗಲಾರದು.

ಅಷ್ಟೇ ಅಲ್ಲ, ಪ್ರತಿಯೊಂದು ಮಗುವಿನ ಮನಸ್ಸೂ ಒಂದೇ ರೀತಿ ಇರುವುದಿಲ್ಲ. ಇನ್ನೊಂದು ಮಗುವನ್ನು ತೋರಿಸಿ, ‘ನೋಡು ಅದು ಹೇಗೆ ಸುಮ್ಮನೆ ಶಾಲೆಗೆ ಹೋಗುತ್ತಿದೆ. ನೀನು ದಡ್ಡ’ ಎಂಬಿತ್ಯಾದಿ ಹೋಲಿಸಿ ಮೂದಲಿಸುವುದೂ ಸರಿಯಲ್ಲ. ಪೋಷಕರು ತಮ್ಮ ಮಗು ಶಾಲೆಗೆ ಹೋಗಲು ಮಾನಸಿಕವಾಗಿ ಸಿದ್ಧವಾಗಿದೆಯೇ ಎಂಬುದನ್ನು ಅವಲೋಕಿಸಬೇಕಾಗುತ್ತದೆ. ಅಕ್ಕಪಕ್ಕದ ಮನೆಗಳ ಮಕ್ಕಳ ಜೊತೆ ಅದು ಹೇಗೆ ಬೇರೆಯುತ್ತದೆ ಎಂಬುದನ್ನೂ ಗಮನಿಸಿ. ನಿಮ್ಮ ಸುರಕ್ಷಿತ ವಲಯದಿಂದ ಹೊರಗೆ ಹೋಗಿ ಯಾವುದೇ ತೊಂದರೆಯಿಲ್ಲದೇ ಆಟ ಆಡುವುದೇ ಎಂಬುದನ್ನು ಕೂಡ ನೋಡಬೇಕಾಗುತ್ತದೆ.

ಶಾಲಾ ಶಿಕ್ಷಕರು ಮಗುವಿನ ಭಾವನೆಗಳಿಗೆ ಲಕ್ಷ್ಯ ಕೊಡಬೇಕಾಗುತ್ತದೆ. ಆದರೆ ಶಿಕ್ಷಕರು ಪ್ರತಿ ವರ್ಷ ಇಂತಹ ಮಕ್ಕಳನ್ನು ನೋಡಿ ನೋಡಿ ನಿರ್ಲಕ್ಷ್ಯ ಮಾಡುವುದು ಸಹಜ. ಇದು ಖಂಡಿತ ಕೂಡದು. ಆತಂಕಗೊಂಡ ಮಗುವಿಗೆ ಅಭಯ ಕೊಡುತ್ತ ಅದಕ್ಕೆ ಸುರಕ್ಷಿತ ಭಾವನೆಯನ್ನು ಮೂಡಿಸಬೇಕು. ಮಗು ಭಯಗೊಂಡರೆ ಅದರ ಕಲಿಕಾ ಸಾಮರ್ಥ್ಯ ಕಡಿಮೆಯಾಗಬಹುದು. ಜೊತೆಗೆ ಸ್ಮರಣ ಶಕ್ತಿ ಕೂಡ ಕಡಿಮೆಯಾಗಬಹುದು. ಮಗುವಿನ ಜೊತೆ ಬಾಂಧವ್ಯ, ಪ್ರೀತಿ ಗಟ್ಟಿಯಾದರೆ ಅದರ ಕಲಿಕಾ ಸಾಮರ್ಥ್ಯವೂ ಹೆಚ್ಚುತ್ತದೆ.

(ಲೇಖಕಿ ಶಿಕ್ಷಕಿ ಮತ್ತು ಆಪ್ತ ಸಮಾಲೋಚಕಿ)

**

ಪೋಷಕರು ಹೀಗೆ ಮಾಡಬಹುದು..

ಶಾಲೆಯೆಂಬ ಹೊಸ ವಾತಾವರಣವನ್ನು ಮಗುವಿಗೆ ಪರಿಚಯ ಮಾಡಿಕೊಟ್ಟು ನಿಧಾನವಾಗಿ ಹೊಂದಿಕೊಳ್ಳುವಂತೆ ಮಾಡಿ.

ಕೆಲವು ದಿನಗಳ ಕಾಲ ನೀವೂ ಶಾಲಾ ಕೊಠಡಿಯ ಹೊರಗೆ ನಿಂತು ‘ನಾನಿದ್ದೇನೆ. ಹೆದರುವ ಕಾರಣವಿಲ್ಲ’ ಎಂದು ಮಗುವಿಗೆ ಮನದಟ್ಟು ಮಾಡಿ.

ಅಕ್ಕಪಕ್ಕದ ಮನೆಗಳ ಮಕ್ಕಳು ನಿಮ್ಮ ಮಗುವಿನ ವಯಸ್ಸಿನವರೇ ಎಂದು ತಿಳಿದುಕೊಂಡು ಅವರ ಜೊತೆ ಮಗು ಬೆರೆಯುವಂತೆ ಮಾಡಿ.

ಮಗುವಿಗೆ ಗದರಿಸದೆ, ಅದರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸಹಕರಿಸಿ. ಅದು ಹೇಳುವ ಮಾತುಗಳನ್ನೆಲ್ಲ ಆಲಿಸಿ ಧನಾತ್ಮಕವಾಗಿ ಪ್ರತಿಕ್ರಿಯಿಸಿ.

ಮಗು ಸಂಪೂರ್ಣವಾಗಿ ಸಿದ್ಧವಾಗದಿದ್ದರೆ, ಕೆಲವು ದಿನಗಳ ಕಾಲ ಶಾಲೆಗೆ ಸೇರಿಸುವುದನ್ನು ಮುಂದೂಡಿ.

ಮಗುವಿಗೆ ದಿನನಿತ್ಯದ ಕೆಲಸಗಳನ್ನು ರೂಢಿಸಿದರೆ, ಅಂದರೆ ಬೆಳಿಗ್ಗೆ ಎದ್ದ ಕೂಡಲೇ ಮಾಡಬೇಕಾದ ಕೆಲಸಗಳು– ಶೌಚ, ಸ್ನಾನ, ತಿಂಡಿ.. ಹೀಗೆ ಇವುಗಳಿಗೆ ಒಗ್ಗಿಸಿದರೆ ಶಾಲೆಗೆ ಹೋಗುವುದೂ ಅದರಲ್ಲಿ ಸೇರುತ್ತದೆ ಎಂಬುದನ್ನು ತಿಳಿಹೇಳಿ. ಹೀಗಾಗಿ ಇದೊಂದು ವಿಶೇಷವಾದ ಕೆಲಸ ಎಂಬುದು ಅವರಿಗೆ ಅನಿಸದು.

ಶಾಲೆಯಲ್ಲಿರುವ ಆಕರ್ಷಣೆಗಳನ್ನು ವರ್ಣಿಸಿ. ಇತರ ಪೋಷಕರ ಜೊತೆ ಮಾತನಾಡಿ. ಸಮಯ ಸಿಕ್ಕಾಗ ಅವರ ಮಕ್ಕಳ ಜೊತೆ ನಿಮ್ಮ ಮಗು ಬೆರೆಯುವಂತೆ ನೋಡಿಕೊಳ್ಳಿ.

ಕೇವಲ ಶಾಲೆ, ಓದಿನ ಬಗ್ಗೆ ಮಾತನಾಡದೆ ಇತರ ವಿಷಯಗಳನ್ನು ಹೇಳಿ. ನಡವಳಿಕೆಯನ್ನು ಗಮನಿಸಿ. ಮಗು ಆತಂಕಗೊಂಡಿದೆಯಾ ಅಥವಾ ಶಾಲೆಯ ಬಗ್ಗೆ ಭಯ ಬಿಟ್ಟಿದೆಯಾ ಎಂಬುದು ಅರಿವಾಗುತ್ತದೆ. ನಿಧಾನವಾಗಿ ಧೈರ್ಯ ತುಂಬುತ್ತ ಹೋಗಿ.

ಶಾಲೆಯ ಸ್ನೇಹಿತರು, ಇತರ ತರಗತಿಗಳ ಮಕ್ಕಳ ಬಗ್ಗೆ ಕೇಳಿ. ಆಟ, ಊಟದ ಬಗ್ಗೆ ಮೊದಲು ಕೇಳಿ. ನಂತರ ಓದಿನ ಬಗ್ಗೆ, ಶಿಕ್ಷಕರ ಬಗ್ಗೆ ಪ್ರಸ್ತಾಪಿಸಿ. ಶಾಲೆಗೆ ಆಗಾಗ ಭೇಟಿ ನೀಡಿ. ಶಿಕ್ಷಕರ ಜೊತೆ ಮಾತನಾಡಿ.

ನಿಮ್ಮ ಶಾಲೆಯ ದಿನಗಳ ಬಗ್ಗೆ ಮಾತನಾಡಿ. ಇದು ಸಹಜ ಎಂಬ ಭಾವನೆ ಮಗುವಿಗೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT