ಶುಕ್ರವಾರ, ಜನವರಿ 22, 2021
20 °C

ಮಕ್ಕಳಿಗಿರಲಿ ಗ್ಯಾಜೆಟ್‌ ಮುಕ್ತ ಸಮಯ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

ಮನೆಯಿಂದಲೇ ಕೆಲಸ, ಆನ್‌ಲೈನ್‌ ಕ್ಲಾಸ್‌, ಅಂತರ್ಜಾಲದ ನಡುವೆ ಬಂಧಿಯಾಗಿರುವ ಬದುಕು...

ಇವೆಲ್ಲದರಿಂದ ಪ್ರತಿದಿನ ಒಂದು ಗಂಟೆಯಾದರೂ ಹೊರಬನ್ನಿ. ಮೊಬೈಲ್‌, ಕಂಪ್ಯೂಟರ್‌, ಟಿವಿ ಪೂರ್ಣ ಬದಿಗಿರಿಸಿ ಮಕ್ಕಳೊಡನೆ ಮಾತನಾಡಿ.

–ಇದು ಜಾಗತಿಕವಾಗಿ ಮನಶ್ಶಾಸ್ತ್ರಜ್ಞರು ನೀಡುತ್ತಿರುವ ಸಲಹೆ.

ಹೌದು, ಪ್ರತಿದಿನ ಬೇಕಿದೆ ಗ್ಯಾಜೆಟ್‌ ಮುಕ್ತ ಅವಧಿ. ಇದಕ್ಕೊಂದು ಕಾರಣವೂ ಇದೆ. ಮಕ್ಕಳು/ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಶಿಕ್ಷಣ ವ್ಯವಸ್ಥೆಯಿಂದಾಗಿ ಮೂಲ ಸಂವಹನ ಕೌಶಲವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂಬ ಆತಂಕ ಎದುರಾಗಿದೆ. 

ಇದನ್ನು ಇತ್ತೀಚೆಗೆ ನಡೆದ ಅಧ್ಯಯನವೊಂದು ಖಚಿತಪಡಿಸಿದೆ. ಅಮೆರಿಕದ ಮಡಬಾ ವಿಶ್ವವಿದ್ಯಾಲಯದ ಬ್ಯುಸಿನೆಸ್‌ ಅಡ್ಮಿನ್‌‌ಸ್ಟ್ರೇಷನ್‌ ವಿಭಾಗದ ಪ್ರಾಧ್ಯಾಪಕ ತಂಡವು ಅಧ್ಯಯನ ನಡೆಸಿತ್ತು. ಅದರ ವರದಿಯಲ್ಲಿ ಈ ವಿಚಾರ ಮಂಡಿಸಲಾಗಿದೆ. ಈ ವ್ಯವಸ್ಥೆ ಬೋಧಕ ಮತ್ತು ವಿದ್ಯಾರ್ಥಿ ನಡುವಿನ ಸಂವಹನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಕೋವಿಡ್‌ ಕಾಲಘಟ್ಟದಲ್ಲೇ ಈ ಅಧ್ಯಯನ ನಡೆದಿದೆ.  ಇದು ಅಮೆರಿಕ ಮಾತ್ರವಲ್ಲ, ಭಾರತದ ಪ್ರಾಥಮಿಕ ಶಾಲೆಯ ಶಿಕ್ಷಕರಿಂದ ಹಿಡಿದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕೂಡಾ ಈ ಅಂಶವನ್ನು ಸಾಕಷ್ಟು ಹಿಂದೆಯೇ ಕಂಡುಕೊಂಡಿದ್ದಾರೆ.  

ಮುಕ್ತ ಸಂವಹನಕ್ಕೆ ಗ್ಯಾಜೆಟ್‌ ಅಡ್ಡಿ

ಈ ಸಂಶೋಧನೆಗೆ ಪೂರಕ ಕಾರಣವನ್ನೂ ಕೊಡುತ್ತಾರೆ ಮನಶ್ಶಾಸ್ತ್ರಜ್ಞ ಮಧುಸೂದನ ಸುಣ್ಣಂಬಳ. ಅವರು ಹೇಳುವಂತೆ, ‘ಸಂವಹನ ನಡೆಯುವುದೇ ಎರಡು ವ್ಯಕ್ತಿಗಳ ನಡುವೆ. ಇಲ್ಲಿ ಒಬ್ಬ ವ್ಯಕ್ತಿ ಸಕ್ರಿಯನಾಗಿಲ್ಲ ಎಂದರೆ ಅದು ಸಂವಹನ ಎಂದು ಆಗುವುದೇ ಇಲ್ಲ ಅಥವಾ ಅದರ ಉದ್ದೇಶ ಸಾರ್ಥಕವಾಗುವುದಿಲ್ಲ. ಇಲ್ಲಿ ಸಂದೇಶ ಸ್ವೀಕರಿಸುವವನಿಗೆ (ರಿಸೀವರ್)‌ ನಡುವಿನ ಮಾಧ್ಯಮ (ಆನ್‌ಲೈನ್‌) ಅಡ್ಡಿಪಡಿಸಿದಂತೆ ಅನಿಸುತ್ತದೆ’.  

‘ಸಂವಹನ ಮಾಧ್ಯಮ ತನ್ನ ಚಟುವಟಿಕೆಗಳನ್ನು ದಾಖಲಿಸುತ್ತಿದೆ ಎಂಬ ಪ್ರಜ್ಞೆ ಇದ್ದಾಗ ಸಂವಹನಕಾರರು (ಬೋಧಕ- ವಿದ್ಯಾರ್ಥಿ) ತಮ್ಮ ಸಹಜತೆಯನ್ನು ಬಿಟ್ಟು ಬೇರೆ ತರಹ ವರ್ತಿಸುತ್ತಾರೆ. ತುಂಬಾ ನಾಜೂಕಾಗಿರಲು ಮುಂದಾಗುತ್ತಾರೆ. ಸಾಮಾನ್ಯ ತರಗತಿಗಳಲ್ಲಿ ಹೀಗಾಗುವುದಿಲ್ಲ. ಮಾತು ಮತ್ತು ಸಂವಹನದ ಹರಿವು ಸಹಜವಾಗಿರುತ್ತದೆ’ ಎನ್ನುತ್ತಾರೆ ಮಧುಸೂದನ. 

ಮತ್ತೆ ಅಧ್ಯಯನದ ವಿಚಾರಕ್ಕೆ ಬರೋಣ. ‘ಆನ್‌ಲೈನ್‌ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಉತ್ಪಾದಕತೆ ಹೆಚ್ಚಾಗಬೇಕೆನಿಸಿದರೆ ಸಂವಹನ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬೇಕು. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಬಹುತೇಕರು ತರಗತಿ ಶಿಕ್ಷಣವನ್ನೇ ಇಷ್ಟಪಟ್ಟಿದ್ದಾರೆ. ಏಕೆಂದರೆ ಕಲಿಕಾ ಸಾಮಗ್ರಿಗಳು, ಪರಸ್ಪರ ಮುಖಾಮುಖಿಯಾಗುವಾಗ ಆಗುವ ಪರಿಣಾಮ ಆನ್‌ಲೈನ್‌ನಲ್ಲಿ ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ’ ಎಂದು ಅಧ್ಯಯನದ ವರದಿ ಹೇಳಿದೆ. 

ಇದೇ ಮಾತನ್ನು ಸಮರ್ಥಿಸುವ ಮಧುಸೂದನ, ‘ಮಗುವಿಗೆ ಅದರದ್ದೇ ಆದ ವೈಯಕ್ತಿಕವಾದ ಕಲಿಕಾ ವಿಧಾನ ಬೇಕು. ಇಲ್ಲಿ ನಿಮ್ಮ ಪ್ರಶ್ನೆಯೊಂದಕ್ಕೆ ಸರಿ ಅಥವಾ ತಪ್ಪು ಎಂಬ ಉತ್ತರ ಅಲ್ಲ. ನೀವು ಕೊಟ್ಟ ವಿಷಯ ಸಂಬಂಧಿಸಿ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ. ಮಗು ವ್ಯಕ್ತಪಡಿಸುವ ಭಾವನೆ ಹೇಗಿದೆ ಎಂಬುದನ್ನು ಪರಿಗಣಿಸಬೇಕು. ಮಗುವಿಗೆ ಕೊಟ್ಟ ವಿಚಾರವನ್ನು ಅದರದ್ದೇ ಆದ ರೀತಿಯಲ್ಲಿ ಬರೆಯುವ ಅಥವಾ ಪ್ರಸ್ತುತಪಡಿಸುವ ಕ್ರಮ ಆಗಬೇಕು’ ಎನ್ನುತ್ತಾರೆ.

ಗ್ಯಾಜೆಟ್‌ ಮುಕ್ತ ಅವಧಿ ಸಾಧ್ಯವೇ? ಒಮ್ಮೆ ಪ್ರಯತ್ನಿಸಿ ನೋಡಿ. ಒಂದು ಆಪ್ತ ಭಾವ ಅನುಭವಿಸಿ.

***

ಗ್ಯಾಜೆಟ್‌ ಮುಕ್ತ ಅವಧಿ ಹೇಗಿರಬೇಕು?


ಮಧುಸೂದನ ಸುಣ್ಣಂಬಳ

ಪುಟ್ಟ ಮಕ್ಕಳ ವಿಷಯಕ್ಕೆ ಬಂದರೆ ಇಲ್ಲಿ ಪೋಷಕರೂ ಯುವ ವಯಸ್ಸಿನವರೇ ಆಗಿರುತ್ತಾರೆ. ಉದ್ಯೋಗ ಅಥವಾ ವೈಯಕ್ತಿಕ ಬಳಕೆಗೆ ಇಡೀ ದಿನ ಫೋನ್‌, ಕಂಪ್ಯೂಟರ್‌ಗೆ ಜೋತು ಬೀಳುವುದುಂಟು.

ಕೊನೇ ಪಕ್ಷ ಒಂದು ಗಂಟೆ ಅವನ್ನೆಲ್ಲ ಬದಿಗಿಡಿ. ಒಟ್ಟಿಗೇ ಕುಳಿತು ಊಟ ಮಾಡಿ. ಮಕ್ಕಳೊಂದಿಗೆ ಮಾತನಾಡಿ. ಮಾತು ಕೂಡಾ ನಮ್ಮ (ಪೋಷಕರ– ಮಕ್ಕಳ) ಅಂದಿನ ದಿನದ ಚಟುವಟಿಕೆಗೆ ಸಂಬಂಧಿಸಿದ್ದೇ ಆಗಿರಲಿ. ಜಗತ್ತಿನ ಆಗು ಹೋಗುಗಳು, ಸುದ್ದಿ, ಚರ್ಚೆ ಬೇಡ. ಅಂದು ನಾನು ಯಾರೊಂದಿಗೆ ಮಾತನಾಡಿದೆ? ಏನು ಆಟವಾಡಿದೆ, ಮನೆಯ ಇತರ ಸದಸ್ಯರು ಏನೆಂದರು? ಯಾರಿಗೆ ಸಹಾಯ ಮಾಡಿದೆ? ಸ್ನೇಹಿತರೊಂದಿಗೆ ಏನಾಯಿತು.. ಇತ್ಯಾದಿಗಳನ್ನು ಮಾತನಾಡಿ. ಮಗುವಿನ ಅಭಿವ್ಯಕ್ತಿಗೆ ದಾರಿ ಮಾಡಿಕೊಡಿ. ನಿಮ್ಮ ವಿಚಾರಗಳನ್ನೂ ಮಗುವಿನ ಮನೋಮಟ್ಟಕ್ಕಿಳಿದು ಮಾತನಾಡಿ.

–ಮಧುಸೂದನ ಸುಣ್ಣಂಬಳ, ಮನಶ್ಶಾಸ್ತ್ರಜ್ಞ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು