ಸೋಮವಾರ, ನವೆಂಬರ್ 18, 2019
27 °C
ಲಿಂಗ ಸಮಾನತೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಎನ್‌ಸಿಇಆರ್‌ಟಿ

ಪ್ಲೇ ಸ್ಕೂಲ್‌ಗಳಲ್ಲಿ ‘ಲಿಂಗಭೇದ ಜಾಗೃತಿ’

Published:
Updated:
Prajavani

ನವದೆಹಲಿ (ಪಿಟಿಐ): ಪ್ಲೇ ಸ್ಕೂಲ್ ಹಂತದಿಂದಲೇ ಮಕ್ಕಳಲ್ಲಿ ಲಿಂಗಭೇದದ ಬಗ್ಗೆ ಜಾಗೃತಿ ಮೂಡಿಸಿ, ಸಮಾನ ಮನೋಭಾವದ ಗುಣ ಬೆಳೆಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ತಿಳಿಸಿದೆ.

‘ಲಿಂಗ ಸಮಾನತೆ’ ಕುರಿತು ಪ್ಲೇ ಸ್ಕೂಲ್‌ ಹಂತದಿಂದ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಪಠ್ಯಾಂಶ ತಯಾರಿಸುವ ವಿಭಾಗ ಗುರುವಾರ ಪ್ರಕಟಿಸಿದೆ. ಶಾಲೆಯಲ್ಲಿ ಬಾಲಕ, ಬಾಲಕಿಯರನ್ನು ಸಮಾನ ಕಾಳಜಿ, ಗೌರವ ಮತ್ತು ಸಮಾನ ಅವಕಾಶಗಳನ್ನು ನೀಡುತ್ತಾ ಶಿಕ್ಷಕರು ನಡೆಸಿಕೊಳ್ಳುತ್ತಿದ್ದಾರೆಯೇ ಎಂಬುದನ್ನು ಶಾಲೆಗಳು ಪರಿಶೀಲಿಸಬೇಕು ಎಂದು ಸೂಚಿಸಿದೆ.

ಯಾವುದೇ ಲಿಂಗತಾರತಮ್ಯ ಮಾಡದಂತಹ ಪುಸ್ತಕಗಳು, ನಾಟಕಗಳು, ಆಟಗಳು ಮತ್ತು ಇತರೆ ಚಟುವಟಿಕೆಗಳನ್ನಷ್ಟೇ ಬೋಧನೆಗಾಗಿ ಶಾಲೆಗಳು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದೆ.‘ಶಿಕ್ಷಕರು ಲಿಂಗತಾರತಮ್ಯ ಮಾಡುವಂತಹ ಪದಗಳನ್ನೂ ಬಳಸಬಾರದು, ಮೇಲು–ಕೀಳು ಎಂದು ಬೇಧ ಮಾಡದ ವಿಷಯಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮಹಿಳೆಯರು ಮತ್ತು ಪುರುಷರು ಇಬ್ಬರೂ ಎಲ್ಲ ಕೆಲಸಗಳನ್ನೂ ಮಾಡಬಲ್ಲರು. ಇಬ್ಬರು ನಾಯಕತ್ವ ವಹಿಸಲು ಶಕ್ತರು, ಸಮಸ್ಯೆಗಳನ್ನು ಪರಿಹಾರ ಮಾಡುವ ಸಾಮರ್ಥ್ಯ ಉಳ್ಳವರು, ಎಂದು ಬಿಂಬಿಸುವಂತಹ ಕಥೆ, ಹಾಡು, ಚಟುವಟಿಕೆಗಳು ಮತ್ತು ಇತರೆ ಬೋಧನಾ ಸಾಧನಗಳನ್ನು ಬಳಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ’ ಎಂದೂ ಹೇಳಿದ್ದಾರೆ.

ಶಿಕ್ಷಕರಷ್ಟೇ ಅಲ್ಲದೆ, ಪೋಷಕರು ಕೂಡ ಮನೆಗಳಲ್ಲಿ ಲಿಂಗ ಸಮಾನತೆ ಮೂಡಿಸುವಂತಹ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದೆ. ಈ ಕ್ರಮಗಳು ಅಸಮಾನತೆ ನಿರ್ಮೂಲನೆಗೆ ಮತ್ತು ಲಿಂಗ ಸಮಾನತೆ ಕುರಿತು ಅರ್ಥ ಮಾಡಿಸುವುದಕ್ಕೆ ನೆರವಾಗುತ್ತದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

ಇದಕ್ಕಾಗಿ ಶಾಲೆಗಳು ಮತ್ತು ಶಿಕ್ಷಕರು ಆಯ್ಕೆ ಮಾಡಿಕೊಳ್ಳುವ ವಿಷಯಗಳು ಮಕ್ಕಳ ವಯಸ್ಸು, ಶಾಲೆಯ ಹಂತಕ್ಕೆ ಅನುಗುಣವಾಗಿ ಇರಬೇಕು ಎಂದೂ ತಿಳಿಸಿದೆ. ಇದಷ್ಟೇ ಅಲ್ಲದೇ, ಶಾಲಾ ಪುರ್ವ ಹಂತದಲ್ಲಿ ಓದುತ್ತಿರುವ ಅಂಗವಿಕಲ ವಿದ್ಯಾರ್ಥಿಗಳು, ಕಲಿಕಾ ನ್ಯೂನತೆ ಇರುವಂತಹ ವಿದ್ಯಾರ್ಥಿಗಳ ಬಗ್ಗೆಯೂ ಸಮಾನ ಕಾಳಜಿ ತೋರಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಗಂಡು ಹೆಣ್ಣು ಸಮಾನತೆ

ಪ್ರತಿಕ್ರಿಯಿಸಿ (+)