‘ಗೆರಿಝಿಮ್’ನಲ್ಲಿ ಸಮನ್ವಯ ಶಾಲೆ

7

‘ಗೆರಿಝಿಮ್’ನಲ್ಲಿ ಸಮನ್ವಯ ಶಾಲೆ

Published:
Updated:

‘ಗೆರಿಝಿಮ್’ (Gerizim) ವಿಶೇಷ ಮಕ್ಕಳ ಸಮನ್ವಯ ಶಾಲೆ ಬೆಂಗಳೂರಿನ ವಿವೇಕ ನಗರ ಪೋಸ್ಟ್‌ ವ್ಯಾಪ್ತಿ, ಇಜಿಪುರ ಬಡಾವಣೆಯ ‘ಡಿ’ ಬ್ಲಾಕ್, 24ನೇ ಮುಖ್ಯರಸ್ತೆ, ಪ್ಲಾಟ್‌ ನಂ: 24ರಲ್ಲಿ ನೆಲೆಗೊಂಡಿದೆ. ಈ ವಸತಿಯುತ ವಿಶೇಷ ಮಕ್ಕಳ ಸಮನ್ವಯ ಶಾಲೆಯನ್ನು 1992ರಲ್ಲಿ ಜಿ.ಜೆ.ಯೇಸುಡಿಯನ್ ಅವರು ಸ್ಥಾಪಿಸಿದ್ದಾರೆ.

‘ಗೆರಿಝಿಮ್’ ಎಂಬುದು ಮೂಲತಃ ಬ್ಯಾಬಿಲನ್ ಪದವಾಗಿದ್ದು ‘ಪವಿತ್ರ ಸ್ಥಳ’ ಎಂಬ ಅರ್ಥ ಹೊಂದಿದೆ. ಈ ಹೆಸರಿನಲ್ಲಿ ಒಂದು ಪರ್ವತವಿದ್ದು, ಇದು ಸಮರಿಟನ್ (Samaritan) ಜನಾಂಗದ ಪ‍ವಿತ್ರ ತಾಣವಾಗಿದೆ. ಪ್ರಸ್ತುತ ನಿರ್ದೇಶಕ ಜೊಸೇಫ್ ಪೊನ್‌ರಾಜ್ ಅವರ ನೇತೃತ್ವದಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

5 ವರ್ಷಕ್ಕಿಂತ ಕಡಿಮೆ ವಯೋಮಾನದ, ಅನಾಥ, ಅಸಹಾಯಕ ಮಕ್ಕಳಿಗೆ ಹಾಗೂ ಆಟಿಸಂ, ಡೌನ್‌ಸಿಂಡ್ರೋಂ, ಬುದ್ಧಿಮಾಂದ್ಯತೆ, ಕಲಿಕಾ ನ್ಯೂನತೆ, ಡಿಸ್ಲೆಕ್ಸಿಯಾ, ವರ್ತನಾ ಅಪಸಂಯೋಜನೆ... ಇತ್ಯಾದಿ ಮಾನಸಿಕ ಸಮಸ್ಯೆಗಳಿಂದ ಬಳಲುವ ಮಕ್ಕಳಿಗೆ ಈ ಶಾಲೆಯಲ್ಲಿ ಪ್ರವೇಶ ನೀಡಲಾಗುತ್ತದೆ. ಶಾಲೆ ಆರಂಭದಲ್ಲಿ 100 ವಿದ್ಯಾರ್ಥಿಗಳು ಹಾಗೂ 30 ಬೋಧಕರನ್ನು ಒಳಗೊಂಡಿತ್ತು. ಪ್ರಸ್ತುತ ಶಾಲೆಯಲ್ಲಿ 200 ಮಕ್ಕಳು ಅಧ್ಯಯನ ನಿರತರಾಗಿದ್ದು, 60 ಬೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಮೂರು ವಿದ್ಯಾರ್ಥಿಗಳಿಗೆ ಒಬ್ಬರು ಬೋಧಕರಿದ್ದು, ಮಕ್ಕಳ ಕುರಿತು ವೈಯಕ್ತಿಕ ಕಾಳಜಿ ವಹಿಸಲು ಅನುಕೂಲವಾಗಿದೆ.

ಇಲ್ಲಿ ‘ಮಗು ಕೇಂದ್ರಿತ’ ಪಠ್ಯಕ್ರಮ ಅಳವಡಿಸಿಕೊಂಡಿದ್ದು, ವಿಶೇಷ ಮಕ್ಕಳನ್ನು ಸಾಮಾನ್ಯ ಮಕ್ಕಳೊಡನೆ ಸೇರಿಸಿ ಬೋಧಿಸುವ ‘ಸಮನ್ವಯ ಶಿಕ್ಷಣ ಮಾದರಿ’ ಅನುಸರಿಸಲಾಗುತ್ತಿದೆ. 10 ಸುಸಜ್ಜಿತ–ಕಲಿಕಾ ಸಂಪನ್ಮೂಲ ಭರಿತ ತರಗತಿಗಳು, 600ಕ್ಕೂ ಹೆಚ್ಚು ಜನ ಕುಳಿತುಕೊಳ್ಳುವಷ್ಟು ದೊಡ್ಡದಾದ ಸಭಾಗೃಹ, ಆಪ್ತಸಮಾಲೋಚನಾ ಕೊಠಡಿ, ಗಣಕಯಂತ್ರ ಕೊಠಡಿ, ಚಿಕಿತ್ಸಾ ಕೊಠಡಿ, ಒಳಾಂಗಣ ಕ್ರೀಡಾ ವ್ಯವಸ್ಥೆ, ಆಟದ ಮೈದಾನ, ಉತ್ಕೃಷ್ಟ ಪುಸ್ತಕಗಳನ್ನು ಒಳಗೊಂಡಿರುವ ಗ್ರಂಥಾಲಯ, ಶೌಚಾಲಯ, ಕುಡಿಯುವ ನೀರು, ಸಿಸಿಟಿವಿ... ಇತ್ಯಾದಿ ಸೌಕರ್ಯಗಳನ್ನು ಒಳಗೊಂಡಿದೆ.

‘ಮಾನಸಿಕ ನ್ಯೂನತೆಯಿಂದ ಬಳಲುತ್ತಿರುವ ಮಕ್ಕಳಿಗೆ ತಾವು ಇತರರಿಗಿಂತ ಭಿನ್ನ ಎಂಬ ಭಾವನೆ ಕಾಡಬಾರದು. ಆ ಮಕ್ಕಳಲ್ಲೂ ಸಾಮಾನ್ಯ ಮಕ್ಕಳಂತೆ ಗ್ರಹಿಕೆ, ಭಾವನೆ, ಬುದ್ಧಿಶಕ್ತಿ, ಸೃಜನಶೀಲತೆ ಸಾಮರ್ಥ್ಯಗಳಿರುತ್ತವೆ. ಆದರೆ, ಆ ಸಾಮರ್ಥ್ಯದ ಅಭಿವ್ಯಕ್ತಿಯ ಕೊರತೆ ಅವರಲ್ಲಿ ಕಾಣುತ್ತದೆ. ಈ ಕೊರತೆ ನೀಗಿಸಲು ‘ಸಮನ್ವಯ ಕಲಿಕಾ ಮಾರ್ಗ’ ಉತ್ತಮ ಉಪಾಯವಾಗಿದೆ’ ಎಂಬುದು ಶಾಲೆಯ ಮುಖ್ಯ ತತ್ವವಾಗಿದೆ. ನ್ಯೂನತೆಯುಳ್ಳ ಮಕ್ಕಳ ಕುರಿತು ಇರುವ ನಕಾರಾತ್ಮಕ ಸಾಮಾಜಿಕ ಧೋರಣೆ ಬದಲಾಯಿಸುವುದು ಈ ಸಂಸ್ಥೆಯ ಗುರಿಯಾಗಿದೆ.

‘ಗೆರಿಝಿಮ್’ನಲ್ಲಿ ಅನುಭವಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ವಿಶೇಷ ಶಿಕ್ಷಕರು, ಚಿಕಿತ್ಸಕರು, ವೈದ್ಯರು, ಆಪ್ತಸಮಾಲೋಚಕರು ಸೇರಿದ್ದಾರೆ. ತಂತ್ರಜ್ಞಾನ ಆಧರಿತ ಕಲಿಕೆ ಇರುವುದರಿಂದ ಈ ಶಾಲೆ ವಿಶೇಷ ಮಕ್ಕಳ ವಿಶ್ರಾಂತಿ ತಾಣವಾಗಿರದೇ, ಕ್ರಿಯಾತ್ಮಕ ಕಲಿಕೆ ಹಾಗೂ ಸೃಜನಾತ್ಮಕ ಅಭಿವ್ಯಕ್ತಿಯ ಕೇಂದ್ರವಾಗಿದೆ.

ಮಕ್ಕಳ ಅಗತ್ಯಕ್ಕೆ ತಕ್ಕಂತೆ ಸ್ಪೀಚ್ ಥೆರಪಿ, ಫಿಜಿಯೋ ಥೆರಪಿ, ಮ್ಯೂಸಿಕ್ ಥೆರಪಿ, ಡ್ಯಾನ್ಸ್ ಥೆರಪಿ, ಬಾಲ್‌ ಥೆರಪಿ, ಆರ್ಟ್‌ ಥೆರಪಿ... ಹೀಗೆ ಬಹುವಿಧ ಚಿಕಿತ್ಸೆಯನ್ನು ತಜ್ಞರಿಂದ ಕೊಡಿಸಲಾಗುತ್ತದೆ. ಅಲ್ಲದೆ, ಬಿಗ್‌ ಮಿಷನ್ ಹಾಸ್ಪಿಟಲ್ ಮತ್ತು ನಿಮ್ಹಾನ್ಸ್‌ನಲ್ಲೂ ನಿಯಮಿತ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.

ಶಾಲಾಪೂರ್ವ, ಪ್ರಾಥಮಿಕ, ಮಾಧ್ಯಮಿಕ ಹಾಗೂ ವೃತ್ತಿ ಪೂರ್ವ, ವೃತ್ತಿ ತರಬೇತಿ ಎಂಬ ಐದು ಹಂತದ ಶಿಕ್ಷಣವನ್ನು ಇಲ್ಲಿ ಮಕ್ಕಳಿಗೆ ಒದಗಿಸಲಾಗುತ್ತದೆ. ವಿಶೇಷ ಪಠ್ಯಕ್ರಮ ಅಧ್ಯಯನದ ಜತೆ ಜೀವನ ಕೌಶಲಗಳನ್ನು ರೂಢಿಸಲಾಗುತ್ತದೆ. ಶಾಲೆಯಲ್ಲಿ ಮಕ್ಕಳ ಸಾಮಾಜೀಕರಣ, ನೈತಿಕ ವಿಕಾಸ ಹಾಗೂ ವೃತ್ತಿ ಕೌಶಲ ವಿಕಸನಕ್ಕೆ ಒತ್ತು ನೀಡಿದ್ದು, ವೃತ್ತಿ ತರಬೇತಿ ಹಂತದಲ್ಲಿ ಕಾಗದದ ಕೈಚೀಲ, ಲಕೋಟೆ, ಕರಕುಶಲ ವಸ್ತುಗಳು, ಸೆರಾಮಿಕ್ ಆಭರಣ, ಮೇಣದಬತ್ತಿ, ಮಣ್ಣಿನ ಮಾದರಿ, ದೀಪಗಳ ತಯಾರಿಕೆ, ಚಿತ್ರಕಲೆ, ಪೇಂಟಿಂಗ್, ಕೈತೋಟ ನಿರ್ವಹಣೆ, ಕಂಪ್ಯೂಟರ್ ತರಬೇತಿ ಒದಗಿಸಲಾಗುತ್ತದೆ.

ಶಾಲೆಯ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಮೇಳಗಳಲ್ಲಿ ತಮ್ಮ ಪ್ರತಿಭೆ ತೋರಿದ್ದಾರೆ. ಚೀನಾದಲ್ಲಿ ನಡೆದ ವಿಶೇಷ ಒಲಿಂಪಿಕ್ಸ್‌ನಲ್ಲಿ ಶಾಲೆಯ ವಿದ್ಯಾರ್ಥಿನಿ ಕವಿತಾ ಶಾಟ್‌ಪಟ್‌ನಲ್ಲಿ ಕಂಚಿನ ಪದಕ ಬಾಚಿಕೊಂಡಿದ್ದಾರೆ. ರೂಪಾ ಫ್ಲೋರ್ ಹಾಕಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ನಂದಿನಿ ಅಂತರರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಶಾಲೆಯ ಸಹ ಸಂಸ್ಥಾಪಕಿ ಇಂದಿರಾ ಯೇಸುಡಿಯನ್ ಅತ್ಯುತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಶಾಲೆಯಲ್ಲಿ ಪ್ರವೇಶ, ನೆರವು ಮತ್ತಿತರ ಮಾಹಿತಿಗೆ ದೂರವಾಣಿ: 080–25713201 ಅಥವಾ 25712015 ಸಂಪರ್ಕಿಸಬಹುದು.


ಪ್ರಕೃತಿ ಸಂಚಾರ ನಿರತ ‘ಗೆರಿಝಿಮ್’ ವಿಶೇಷ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !