ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಕೋಟಾ ಪ್ರವೇಶಕ್ಕೆ ಸಿದ್ಧರಾಗಿ!

Last Updated 26 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಬಡವರು ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ರಾಜ್ಯದಲ್ಲಿನ ಖಾಸಗಿ, ಅನುದಾನಿತ ಶಾಲೆಗಳಲ್ಲಿ ಲಭ್ಯವಿರುವ ಶೇ 25ರಷ್ಟು ಸೀಟುಗಳ ಭರ್ತಿಗೆಇದುವರೆಗೆ ಇದ್ದ ಮಾನದಂಡಗಳಲ್ಲಿ ಈ ವರ್ಷ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ತಿದ್ದುಪಡಿ ಪ್ರಕಾರ ನೆರೆಹೊರೆ ಶಾಲೆಗಳನ್ನು ಗುರುತಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ವಾರ್ಡ್‌ ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ ಶಾಲೆ ಇದ್ದರೆ ಖಾಸಗಿ ಶಾಲೆಯಲ್ಲಿ ಆರ್‌ಟಿಇ ಅಡಿ ಪ್ರವೇಶ ನೀಡುವುದಿಲ್ಲ. ಅದೇ ರೀತಿ ಗ್ರಾಮಾಂತರ ಪ್ರದೇಶದಲ್ಲಿ ಕಂದಾಯ ಗ್ರಾಮದಲ್ಲಿ ಸರ್ಕಾರಿ ಶಾಲೆ ಇದ್ದರೆ, ಅಲ್ಲಿನ ಖಾಸಗಿ ಶಾಲೆಯಲ್ಲಿ ಆರ್‌ಟಿಇ ಅಡಿ ಶೇ 25ರಷ್ಟು ಸೀಟುಗಳನ್ನು ಈ ವರ್ಷ ಹಂಚಿಕೆ ಮಾಡುವುದಿಲ್ಲ. ಸರ್ಕಾರಿ ಮತ್ತು ಅನುದಾನಿತ ಶಾಲೆ ಇಲ್ಲದ ಕಡೆ ಮಾತ್ರ ಖಾಸಗಿ ಶಾಲೆಯಲ್ಲಿ ಆರ್‌ಟಿಇ ಅಡಿ ಪ್ರವೇಶ ಪಡೆಯಬಹುದು.

ಕಳೆದ ವರ್ಷ ಆರ್‌ಟಿಇ ಅಡಿ 1.20 ಲಕ್ಷಕ್ಕೂ ಅಧಿಕ ಸೀಟುಗಳು ಲಭ್ಯವಿದ್ದವು ಆದರೆ, ಬದಲಾದ ಮಾನದಂಡದಿಂದಾಗಿ ಆರ್‌ಟಿಇ ಅಡಿ ಲಭ್ಯವಾಗುವ ಸೀಟುಗಳ ಸಂಖ್ಯೆಯಲ್ಲಿ ಈ ವರ್ಷ ವ್ಯತ್ಯಾಸವಾಗಲಿದೆ. ಒಟ್ಟು ಎಷ್ಟು ಶಾಲೆಗಳು ಆರ್‌ಟಿಇ ಅಡಿ ಬರುತ್ತವೆ, ಎಷ್ಟು ಸೀಟುಗಳು ಲಭ್ಯವಾಗಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನೆರೆಹೊರೆ ಶಾಲೆಗಳನ್ನು ಗುರುತಿಸುವ ಕಾರ್ಯ ಅಂತಿಮಗೊಂಡ ನಂತರವೇ ಒಟ್ಟು ಸೀಟುಗಳ ಚಿತ್ರಣ ಲಭ್ಯವಾಗಲಿದೆ.

ಆನ್‌ಲೈನ್‌ ಪದ್ಧತಿ

ಪ್ರವೇಶಾತಿಯಲ್ಲಿ ಪಾರದರ್ಶಕತೆ ಇರಬೇಕು ಎಂಬ ಉದ್ದೇಶದಿಂದ ಆನ್‌ಲೈನ್ ಮೂಲಕವೇ ಸೀಟು ಹಂಚಿಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದ ಹಿಡಿದು ಸೀಟು ಹಂಚಿಕೆವರೆಗೆ ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಯಲಿದೆ. ಲಭ್ಯವಿರುವ ಸೀಟುಗಳಿಗಿಂತ ಅಧಿಕ ಅರ್ಜಿಗಳು ಬರುವುದರಿಂದ ಲಾಟರಿ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ.

ಸಿಬಿಎಸ್‌ಇ/ಐಸಿಎಸ್‌ಇ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳು (ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) ಆರ್‌ಟಿಇ ಕಾಯ್ದೆ ಪ್ರಕಾರ ಶೇ 25ರಷ್ಟು ಸೀಟುಗಳನ್ನು ಉಚಿತವಾಗಿ ನೀಡಬೇಕು. ಇದನ್ನು ಉಲ್ಲಂಘಿಸಿದರೆ ಅಂತಹ ಶಾಲೆಗಳ ಮಾನ್ಯತೆ ರದ್ದುಪಡಿಸಲಾಗುತ್ತದೆ. ಯಾವುದಾದರೂ ಖಾಸಗಿ ಶಾಲೆ ಪ್ರವೇಶ ನಿರಾಕರಿಸಿದರೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಉಪನಿರ್ದೆಶಕರಿಗೆ ದೂರು ನೀಡಬಹುದು.

ಪೂರ್ವ ಪ್ರಾಥಮಿಕ (ನರ್ಸರಿ) ಅಥವಾ ಒಂದನೇ ತರಗತಿಗೆ ಆರ್‌ಟಿಇ ಕೋಟಾದಡಿ ಶೇ 25ರಷ್ಟು ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ. ಈ ಕೋಟಾದಡಿ ಪ್ರವೇಶ ಪಡೆಯುವ ಮಕ್ಕಳ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಖಾಸಗಿ ಶಾಲೆಯಲ್ಲಿ ನರ್ಸರಿ ಇದ್ದರೆ, ನರ್ಸರಿ ಪ್ರವೇಶದಲ್ಲಿ ಶೇ 25ರಷ್ಟು ಸೀಟುಗಳನ್ನು ಆರ್‌ಟಿಇ ಕೋಟಾದಡಿ ಭರ್ತಿ ಮಾಡಲಾಗುತ್ತದೆ. ಶಾಲೆಯಲ್ಲಿ ನರ್ಸರಿ ಇಲ್ಲದೆ ಇದ್ದರೆ ಒಂದನೇ ತರಗತಿ ಪ್ರವೇಶದಲ್ಲಿ ಶೇ 25ರಷ್ಟು ಸೀಟುಗಳನ್ನು ಆರ್‌ಟಿಇ ಕೋಟಾದಡಿ ಭರ್ತಿ ಮಾಡಬೇಕಾಗುತ್ತದೆ.

ಬಡ ಮಕ್ಕಳಿಗೆ ವರದಾನ

ಶಿಕ್ಷಣ ಹಕ್ಕು ಕಾಯ್ದೆ ಬಡವರು, ದುರ್ಬಲ ವರ್ಗದವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದ್ದು, ನರ್ಸರಿ ಅಥವಾ ಒಂದನೇ ತರಗತಿಯಿಂದ 8ನೇ ತರಗತಿವರೆಗೆ ಉಚಿತವಾಗಿ ವ್ಯಾಸಂಗ ಮಾಡಲು ಅವಕಾಶ ಇದೆ. ಆದರೆ, ಕೆಲವು ಖಾಸಗಿ ಶಾಲೆಗಳ ಅಸಹಕಾರದಿಂದಾಗಿ ಆರ್‌ಟಿಇ ಕೋಟಾದ ಸೀಟುಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತಿಲ್ಲ.

ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದಿರುವುದು, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಅಸಹಕಾರ ಇತ್ಯಾದಿ ಕಾರಣಗಳಿಂದಾಗಿ ಶಿಕ್ಷಣ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಕೆಲವೊಮ್ಮೆ ಸೀಟು ಹಂಚಿಕೆಯಾದರೂ, ಶಾಲೆಗಳಲ್ಲಿ ಪ್ರವೇಶ ನೀಡುವುದಿಲ್ಲ. ಪಠ್ಯಪುಸ್ತಕ, ಸಮವಸ್ತ್ರ, ಶಾಲಾ ವಾರ್ಷಿಕೋತ್ಸವ ಕ್ರೀಡೆ ಇತ್ಯಾದಿ ಹೆಸರಿನಲ್ಲಿ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂಬ ದೂರುಗಳು ಪ್ರತಿ ವರ್ಷ ಕೇಳಿಬರುತ್ತಿವೆ.

ಯಾರು ಅರ್ಹರು

ವಾರ್ಷಿಕ ರೂ 3.5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಪೋಷಕರ ಮಕ್ಕಳು ಆರ್‌ಟಿಇ ಕೋಟಾದಡಿ ಪ್ರವೇಶ ಪಡೆಯಲು ಅರ್ಹರು. ಆದರೂ, ಒಂದು ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಪೋಷಕರ ಮಕ್ಕಳ ಪ್ರವೇಶಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದಾದ ಬಳಿಕ ಉಳಿಯುವ ಸೀಟುಗಳನ್ನು ಒಂದರಿಂದ 3.5 ಲಕ್ಷ ಒಳಗೆ ಆದಾಯವುಳ್ಳ ಪೋಷಕರ ಮಕ್ಕಳಿಗೆ ನೀಡಲಾಗುತ್ತದೆ. ನಿಗದಿತ ಸೀಟುಗಳಿಗಿಂತ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಪೋಷಕರಿಗೆ ಆದಾಯದ ಮಿತಿ ಅನ್ವಯವಾಗುವುದಿಲ್ಲ. ಆರ್‌ಟಿಇ ಕೋಟಾದಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಬಯಸುವ ಪೋಷಕರು ಮಕ್ಕಳ ಭಾವಚಿತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ ಸೇರಿದಂತೆ ಸುತ್ತೋಲೆಯಲ್ಲಿ ತಿಳಿಸಿರುವ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದುಕೊಂಡಿರಬೇಕು.

ನೆರೆಹೊರೆ ಶಾಲೆಗಳೆಂದರೆ ಯಾವುದು?

ಗ್ರಾಮೀಣ ಭಾಗದಲ್ಲಿ ನೆರೆಹೊರೆ ವ್ಯಾಪ್ತಿ ಕಂದಾಯ ಗ್ರಾಮಕ್ಕೆ ಸೀಮಿತವಾಗಿರುತ್ತದೆ. ನಗರ ಪ್ರದೇಶದಲ್ಲಿ ವಾರ್ಡ್ ಅನ್ನು ನೆರೆಹೊರೆ ಪ್ರದೇಶ ಎಂದು ಪರಿಗಣಿಸಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಕೇಂದ್ರೀಕೃತ ಆನ್‌ಲೈನ್ ಲಾಟರಿ ಮೂಲಕ ನಡೆಯಲಿದೆ.

ಅನಾಥ ಮಗು, ಮಂಗಳಮುಖಿ ಮಗು, ವಲಸೆ ಮಗು, ಬೀದಿ ಮಗು, ಅಂಗವಿಕಲ/ವಿಶೇಷ ಆದ್ಯತೆವುಳ್ಳ ಮಗು, ಎಚ್‌ಐವಿ ಪೀಡಿತ ಮಗು ಕೋಟಾದಡಿ ಪ್ರವೇಶ ಬಯಸುವವರು ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು. ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿರುವ ಮಾದರಿಯಲ್ಲೇ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು.

ಅಗತ್ಯ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪಡೆಯಲು ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುವವರೆಗೂ ಕಾಯದೆ ಅಗತ್ಯ ದಾಖಲೆಗಳನ್ನು ಮೊದಲೇಪಡೆದು ಇಟ್ಟುಕೊಳ್ಳುವುದು ಒಳ್ಳೆಯದು. ಇಲಾಖೆ ಕೇಳಿರುವ ದಾಖಲೆಗಳನ್ನು ನೀಡದೆ ಇದ್ದರೆ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸಿ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸುವುದು ಒಳ್ಳೆಯದು.

ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಲಾಗಿದೆ. ನೆರೆಹೊರೆ ಶಾಲೆಗಳನ್ನು ಗುರುತಿಸುವ ಕಾರ್ಯ ಪೂರ್ಣಗೊಂಡ ನಂತರ ಪ್ರವೇಶಾತಿಯ ವೇಳಾಪಟ್ಟಿ ಹೊರಬೀಳಲಿದೆ.

***

ಅಗತ್ಯವಿರುವ ದಾಖಲೆಗಳು

* ಜನ್ಮದಿನಾಂಕದ ದಾಖಲೆ

* ಮಗುವಿನ ಭಾವಚಿತ್ರ

* ವಾಸಸ್ಥಳದ ದೃಢೀಕರಣ ಪತ್ರ

* ಜಾತಿ ಮತ್ತು ಆದಾಯ ಪ್ರಮಾಣ ಪತ್ರ

* ಅನಾಥ ಮಗು, ವಲಸೆ ಮಗು, ಬೀದಿ ಮಗು, ಅಂಗವಿಕಲ/ವಿಶೇಷ ಆದ್ಯತೆವುಳ್ಳ ಮಗು, ಎಚ್‌ಐವಿ ಪೀಡಿತ ಮಗು ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಪ್ರಮಾಣ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT