ಬಸ್‌ಗಾಗಿ 12 ಕಿ.ಮೀ ನಡೆದ ವಿದ್ಯಾರ್ಥಿನಿಯರು!

7
ಪೆಂಚನಪಳ್ಳಿ ಗ್ರಾಮದ 14 ಬಾಲಕಿಯರ ಗಾಂಧಿಗಿರಿ

ಬಸ್‌ಗಾಗಿ 12 ಕಿ.ಮೀ ನಡೆದ ವಿದ್ಯಾರ್ಥಿನಿಯರು!

Published:
Updated:

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಸುಲೇಪೇಟೆ ಸರ್ಕಾರಿ ಕನ್ಯಾ ಪ್ರೌಢಶಾಲೆಯ 14 ವಿದ್ಯಾರ್ಥಿನಿಯರು ಗುರುವಾರ ‘ಗಾಂಧಿಗಿರಿ’ ಮೂಲಕ ತಮ್ಮೂರಿನಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳು ನಿಲ್ಲುವಂತೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಗೆ ಆಗುತ್ತಿದ್ದ ಅನನುಕೂಲಕ್ಕೆ ಪರಿಹಾರ ಹುಡುಕಲು ಈ ವಿದ್ಯಾರ್ಥಿನಿಯರು ಕಂಡುಕೊಂಡಿದ್ದು 12 ಕಿಲೊಮೀಟರ್‌ಗಳ ಪಾದಯಾತ್ರೆ!

ಆಗಿದ್ದು ಇಷ್ಟು. ತಾಲ್ಲೂಕಿನ ಪೆಂಚನಪಳ್ಳಿಯ ವಿದ್ಯಾರ್ಥಿನಿಯರು 4 ಕಿಲೊಮೀಟರ್‌ ಅಂತರದ ಸುಲೇಪೇಟೆ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ಬಸ್‌ಗಳು ಇವರ ಊರಲ್ಲಿ ನಿಲ್ಲಿಸದೇ ಹೋಗುತ್ತಿವೆ. ಹೀಗಾಗಿ ನಡೆದುಕೊಂಡೇ ಶಾಲೆಗೆ ಹೋಗುವುದು ಅನಿವಾರ್ಯವಾಗಿತ್ತು.

‘ಎಷ್ಟು ದಿನ ಅಂತ ನಡೆದುಕೊಂಡು ಹೋಗುವುದು?’ ಎಂದು ಬೇಸರದಲ್ಲೇ ಶಾಲೆಗೆ ಬಂದರು. ಸುಮಾರು 11.30 ಹೊತ್ತಿಗೆ ಅಲ್ಲಿಂದ ಹೊರ ಬಂದರು. ಕೈಯಲ್ಲಿ ಕಾಸು ಇಲ್ಲದ ಕಾರಣ ಸುಲೇಪೇಟೆಯಿಂದ ಚಿಂಚೋಳಿ (12ಕಿಮೀ)ಗೆ ನಡೆದುಕೊಂಡು ಹೊರಟರು.

ಅದೇ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಂಡಪ್ಪ ಹೋಳ್ಕರ್‌ ಅವರು ವಿದ್ಯಾರ್ಥಿನಿಯರನ್ನು ಕಂಡು ಕುತೂಹಲದಿಂದ ಮಾತನಾಡಿದ್ದಾರೆ. ಆಗ ಇವರು ಬಸ್ಸಿನ ಸಮಸ್ಯೆಯನ್ನು ತಿಳಿಸಿ, ಡಿಪೋ ವ್ಯವಸ್ಥಾಪಕರನ್ನು ಕಾಣಲು ಹೊರಟಿರುವುದಾಗಿ ಹೇಳಿದರು. ಇಷ್ಟರಲ್ಲಿ ಚಿಂಚೋಳಿ ಸಮೀಪಕ್ಕೆ ಬಂದಿದ್ದರು. ಬಂಡಪ್ಪ ದಾರಿಯಲ್ಲಿ ಹೋಗುತ್ತಿದ್ದ ಆಟೊವನ್ನು ನಿಲ್ಲಿಸಿ, ಅದರಲ್ಲಿ ಇವರನ್ನು ಬಸ್‌ ಡಿಪೋ ವ್ಯವಸ್ಥಾಪಕ ವಿಜಯಕುಮಾರ ಹೊಸಮನಿ ಅವರ ಬಳಿಗೆ ಕರೆದುಕೊಂಡು ಹೋದರು. ವಿದ್ಯಾರ್ಥಿನಿಯರು ತಮ್ಮ ತೊಂದರೆಯನ್ನು ಅಲ್ಲಿ ವಿವರಿಸಿದರು. ಸ್ಥಗಿತಗೊಂಡಿರುವ ಬೆಡಕಪಳ್ಳಿ ಬಸ್ಸನ್ನು ಮತ್ತೆ ಓಡಿಸಲು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಸಮಸ್ಯೆಗೆ ಸ್ಪಂದಿಸಿದ ವಿಜಯಕುಮಾರ, ಚಿಂಚೋಳಿ–ಸೇಡಂ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಪೆಂಚನಪಳ್ಳಿ ಬಳಿ ನಿಲುಗಡೆ ಮಾಡುವುದರ ಜತೆಗೆ ಬೆಡಕಪಳ್ಳಿಗೆ ಬಸ್‌ ಓಡಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದರಿಂದ ಸ್ವಪ್ನಾ, ಪಲ್ಲವಿ, ಪಾರ್ವತಿ, ಸಂಜನಾ, ಭಾಗ್ಯಶ್ರೀ ಹಾಗೂ ಪಾದಯಾತ್ರೆಯಲ್ಲಿದ್ದ ಎಲ್ಲ ವಿದ್ಯಾರ್ಥಿನಿಯರು ಖುಷಿಪಟ್ಟರು. ಬಂಡಪ್ಪ ಹೋಳ್ಕರ್‌ ಅವರು ಆಟೊದಲ್ಲಿ ಅವರನ್ನು ಊರಿಗೆ ಕಳಿಸಿಕೊಟ್ಟರು.

ರಸ್ತೆ ತಡೆ ನಡೆಸದೆ, ಧಿಕ್ಕಾರ ಕೂಗದೆ, ಟೈರಿಗೆ ಬೆಂಕಿ ಹಾಕದೆ, ಮಾತನಾಡದೆ ಗಾಂಧಿಗಿರಿಯಿಂದ ತಮ್ಮ ಬೇಡಿಕೆಯನ್ನು ಈಡೇರಿಸಿಕೊಂಡ ವಿದ್ಯಾರ್ಥಿನಿಯರ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. 

ಮುಖ್ಯಾಂಶಗಳು

* ವಿದ್ಯಾರ್ಥಿನಿಯರಿಂದ ಗಾಂಧಿಗಿರಿ

* ‘ಎಷ್ಟು ದಿನ ಅಂತ ನಡೆದು ಕೊಂಡು ಹೋಗುವುದು?’ ಎಂದ ವಿದ್ಯಾರ್ಥಿಗಳು 

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !