ಗುರುವಾರ , ಡಿಸೆಂಬರ್ 5, 2019
20 °C
ಶಾಲೆಯ ಆವರಣದಲ್ಲಿ 200ಕ್ಕೂ ಹೆಚ್ಚು ಗಿಡಗಳು l ಸುಂದರ ಪರಿಸರಕ್ಕೆ ಮನಸೋತ ವಿದ್ಯಾರ್ಥಿಗಳು

ಕೈಬೀಸಿ ಕರೆಯುತ್ತಿದೆ ಮೈನಳ್ಳಿ ಸರ್ಕಾರಿ ಶಾಲೆ

Published:
Updated:

ಅಳವಂಡಿ: ಗೋಡೆಗಳ ಮೇಲೆ ಬಣ್ಣ, ಬಣ್ಣದ ಚಿತ್ತಾರ, ನೂರಾರು ಚಿತ್ರಪಟ, ತಂಪಾದ ಗಾಳಿ ಬೀಸುವ ಸ್ವಚ್ಛಂದ ಪರಿಸರದಲ್ಲಿ ಮಕ್ಕಳ ವಿದ್ಯಾಭ್ಯಾಸ. ಇಂತಹ ಸೌಲಭ್ಯಗಳಿಂದ ಗಮನ ಸೆಳೆಯತ್ತಿದೆ ಕೊಪ್ಪಳ ಜಿಲ್ಲೆಯ ಮೈನಳ್ಳಿ ಗ್ರಾಮದ ಶಿವಶರಣೆ ಬುಡ್ಡಮ್ಮ ದೇವಿ ಸರ್ಕಾರಿ ಪ್ರೌಢ ಶಾಲೆ. 

ಮೂರೂವರೆ ಎಕರೆ ವಿಶಾಲವಾದ ಪ್ರದೇಶದಲ್ಲಿ ಇರುವ ಶಾಲೆಗೆ ಸುತ್ತಲೂ ಆವರಣ ಗೋಡೆ, ಉದ್ಯಾನ, ಮರ,ಗಿಡ ಬಳ್ಳಿಗಳು, ಬಣ್ಣ ಹಚ್ಚಿದ ಕೊಠಡಿಗಳ ಮೇಲೆ ವರ್ಲಿ ಸೇರಿ ವಿವಿಧ ಕಲೆಗಳ ಚಿತ್ತಾರ ಮನಸ್ಸು ಪ್ರಫುಲ್ಲಗೊಳಿಸುತ್ತದೆ. ಸರ್ಕಾರಿ ಶಾಲೆಯೆಂದರೆ ಮುರಿದ ಕಿಟಕಿ, ಬಾಗಿಲು, ಬಿದ್ದ ಕಟ್ಟಡ ಎಂದು ಮೂಗು ಮುರಿಯುವ ಜನರ ಈ ಮಧ್ಯೆ ಈ ಶಾಲೆ ಗಮನ ಸೆಳೆಯುತ್ತಿದೆ.

ಆಟವಾಡಲು ವಿಸ್ತಾರವಾದ ಆಟದ ಮೈದಾನ ಇದೆ. ಶಾಲೆ ಆವರಣ ಗೋಡೆ ಮೇಲೆ ಒಲಿಂಪಿಕ್ಸ್‌ ಕ್ರೀಡೆ ಸೇರಿ 260 ಕ್ರೀಡಾ ಚಟುವಟಿಕೆ ಚಿತ್ರ ಬಿಡಿಸಲಾಗಿದೆ. ಶಾಲೆಯ ಆವರಣದಲ್ಲಿ ಬೇವು, ಅರಳಿ, ಆಲ, ಬಾದಾಮಿ, ತೆಂಗು, ಹೊಂಗೆ, ಸೇರಿ  ಬಹೂಪಯೋಗಿ ಗಿಡಗಳನ್ನು ನೆಡಲಾಗಿದೆ.

200ಕ್ಕೂ ಹೆಚ್ಚು ಆಲಂಕಾರಿಕ ಗಿಡಗಳು, ವಿವಿಧ ಜಾತಿಯ ಹೂವಿನ ಗಿಡಗಳು, ಹುಲ್ಲು ಹಾಸು ಮನ ಸೆಳೆಯುತ್ತವೆ. 9 ಮತ್ತು 10ನೇ ತರಗತಿಯಲ್ಲಿ ಒಟ್ಟು 119 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಮೀಪದಲ್ಲಿ ಖಾಸಗಿ ಶಾಲೆಗಳು ಇದ್ದರೂ ಇಲ್ಲಿನ ಗುಣಮಟ್ಟದ ಶಿಕ್ಷಣದಿಂದ ಬೇರೆಡೆಗೆ ಹೋಗಲು ಆಸಕ್ತಿ ತೋರುತ್ತಿಲ್ಲ.

ಪ್ರತಿಯೊಂದು ತರಗತಿ ಕೊಠಡಿಗೂ ವಿದ್ಯುತ್ ದೀಪ, ಫ್ಯಾನ್ ಅಳವಡಿಸಲಾಗಿದೆ. ಪ್ರತಿ ಕೋಣೆಯಲ್ಲಿ ಪಠ್ಯಪುಸ್ತಕ ಆಧಾರಿತ ಚಿತ್ರಗಳನ್ನು ಬಿಡಿಸಲಾಗಿದ್ದು, ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿವೆ. ಪುನರ್ಬಳಕೆ ಮಾಡಬಹುದಾದ ವಸ್ತುಗಳಿಂದ ಆಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುವುದು ಹಾಗೂ ಮುಂತಾದ ಕಲೆಗಳ ಹವ್ಯಾಸದಲ್ಲಿಯೂ ತೊಡಗಿಸಿಕೊಳ್ಳುವಂತೆ ಶಿಕ್ಷಕರು ಪ್ರೇರಣೆ ನೀಡುತ್ತಿದ್ದಾರೆ. ಚಿತ್ರಕಲಾ ಶಿಕ್ಷಕ ಮಹಾದೇವಪ್ಪ ವಂದಾಲ ಅವರ ಮಾರ್ಗದರ್ಶನದಲ್ಲಿ ಹಲವು ಚಿತ್ರಗಳನ್ನು ರಚಿಸಿ ತರಗತಿ ಕೊಠಡಿಯನ್ನೇ ಆರ್ಟ್ ಗ್ಯಾಲರಿಯನ್ನಾಗಿ ಪರಿವವರ್ತಿಸಿ ಪ್ರದರ್ಶನ ಮಾಡಿದ್ದಾರೆ. ಶಾಲೆಯಲ್ಲಿ ವಾಲಿಬಾಲ್, ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ಅನೇಕ ಕ್ರೀಡಾ ಸಾಮಗ್ರಿಗಳು ಲಭ್ಯವಿವೆ. ಮಹಾತ್ಮರ ಜೀವನ ಚರಿತ್ರೆ, ಶಬ್ದಕೋಶ ಒಳಗೊಂಡಂತೆ ಸುಮಾರು 2 ಸಾವಿರ ಪುಸ್ತಕಗಳ ಸಂಗ್ರಹವಿದೆ. ಎಲ್ಲ ವಿಷಯಗಳಿಗೂ ಶಿಕ್ಷಕರು ಇದ್ದು, ಬೋಧನೆ ಕೂಡಾ ಪರಿಣಾಮಕಾರಿಯಾಗಿದೆ.

‌ಗಣಿತ, ಇಂಗ್ಲಿಷ್‌, ಸಮಾಜ ವಿಷಯಗಳಿಗೆ ಸಂಬಂಧಪಟ್ಟಂತೆ ಎಲೆಕ್ಟ್ರಾನಿಕ್ ಪ್ರೊಜೆಕ್ಟರ್‌ ಮೂಲಕ ಬೋಧಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಇದೆ.  ಶಾಲೆಯಲ್ಲಿ ಉತ್ತಮ ರೀತಿಯ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಅವರಲ್ಲಿರುವ ಹವ್ಯಾಸ ಗುರುತಿಸಿ ಪ್ರೋತ್ಸಾಹ ನೀಡುತ್ತಿದ್ದೇವೆ. ಎಲ್ಲ ಮಕ್ಕಳಲ್ಲೂ ಏನಾದರೂ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅಂಥವರಿಗೆ ವೇದಿಕೆ ಕಲ್ಪಿಸುವುದು ನಮ್ಮ ಜವಾಬ್ದಾರಿ ಎನ್ನುತ್ತಾರೆ ಪ್ರಭಾರ ಮುಖ್ಯಶಿಕ್ಷಕ ಎಂ. ಶ್ರೀನಿವಾಸ.
ನಮ್ಮ ಶಾಲೆಯಲ್ಲಿ ಎಲ್ಲ ಶಿಕ್ಷಕರು ತುಂಬಾ ಚೆನ್ನಾಗಿ ಪಾಠ ಹೇಳಿಕೊಡುತ್ತಾರೆ. ಈ ಶಾಲೆಗೆ ನಿತ್ಯ ಬರಬೇಕೆನಿಸುತ್ತದೆ. ಹೆಮ್ಮೆ ಕೂಡಾ ಆಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿನಿ ಕಾವ್ಯ ಕ್ಯಾತನಗೌಡ್ರ.

ಪ್ರತಿಕ್ರಿಯಿಸಿ (+)