ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಐಟಿಐ ಪಾಡೇ ಹೀಗಾದರೆ ಹೇಗೆ?

ಉದುರುತ್ತಿದೆ ಚಾವಣಿಯ ಗಾರೆ : ಅಂಗಳದಲ್ಲೇ ಉರಿಯುತ್ತದೆ ಕಸ
Last Updated 20 ಫೆಬ್ರುವರಿ 2019, 5:18 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿ ಸಮರ್ಪಕವಾದ ಶೌಚಾಲಯ ವ್ಯವಸ್ಥೆಯೇ ಇಲ್ಲ. ಬಯಲಿನಲ್ಲೇ ಮೂತ್ರ ವಿಸರ್ಜನೆ ಮಾಡುವ ಶೋಚನಿಯ ಸ್ಥಿತಿ ಇಲ್ಲಿನ ವಿದ್ಯಾರ್ಥಿಗಳದು. ಇನ್ನೊಂದೆಡೆ ಚಾವಣಿಯೂ ಅಲ್ಲಲ್ಲಿ ಕಿತ್ತು ಬರುತ್ತಿದೆ.

ರಾಜ್ಯದ ಏಕೈಕ ಮಾದರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಡೇರಿ ವೃತ್ತದ ಐಟಿಐನ ದುರವಸ್ಥೆ ಇದು.

ಐಟಿಐ ಪ್ರಾಂಗಣದಲ್ಲಿರುವ ಮೂರು ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದೆ. ವಿದ್ಯಾರ್ಥಿಗಳ ಶೌಚಗೃಹಕ್ಕೆ ನೀರಿನ ಸಂಪರ್ಕವೇ ಇಲ್ಲ. ಹಾಗಾಗಿ ತ್ಯಾಜ್ಯ ಮೆತ್ತಿಕೊಂಡು ಸಿಂಕ್ ಮತ್ತು ಟಬ್‌ಗಳು ಕಪ್ಪಿಟ್ಟಿವೆ.ಇಲ್ಲಿಗೆ ವಿದ್ಯಾರ್ಥಿಗಳು ಕಾಲು ಬೆಳೆಸದೆ, ತಿಂಗಳುಗಳೇ ಕಳೆದಿವೆ. ಕಟ್ಟಡದೊಳಗೆ ಜೇಡಗಳು ಬಲೆಗಳನ್ನು ಹೆಣೆದಿವೆ.

ಕಾಲೇಜಿನಲ್ಲಿನ ವಾಹನ ನಿಲುಗಡೆ ಸ್ಥಳದಲ್ಲೇ ವಿದ್ಯಾರ್ಥಿಗಳು ಮುಜುಗರದಿಂದಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಕಾಲೇಜು ಅಂಗಳದಲ್ಲಿ ಸ್ವಚ್ಛತೆ ಮಾಯವಾಗಿದೆ.

ಕಾಲೇಜಿನ ಒಂದನೇ ಮಹಡಿಯಲ್ಲಿನ ಶೌಚಾಲಯವನ್ನು ವಿದ್ಯಾರ್ಥಿನಿಯರಿಗಾಗಿ, ನೆಲಮಹಡಿಯಲ್ಲಿ ಇರುವುದನ್ನು ಸಿಬ್ಬಂದಿ ವರ್ಗಕ್ಕೆ ಮೀಸಲು ಇಡಲಾಗಿದೆ. ಇವುಗಳಿಗೆ ನೀರು ಪೂರೈಕೆಯಾಗುವುದಿಲ್ಲ. ಪ್ರವೇಶ ದ್ವಾರದಲ್ಲಿ, ಡ್ರಮ್‌ವೊಂದರಲ್ಲಿ ನೀರು ತುಂಬಿಸಿರುತ್ತಾರೆ. ಒಳ ಹೋಗುವಾಗ ಅದರಲ್ಲಿನ ಟಬ್‌ಗಳಿಂದ ನೀರು ತುಂಬಿಸಿಕೊಂಡೇ ಹೋಗಬೇಕು. ಶೌಚಗೃಹದ ಟಬ್‌ಗಳೂ ಮುರಿದಿವೆ. ಇಲ್ಲಿಯೂ ಸ್ವಚ್ಛತೆ ಮರೀಚಿಕೆ.

ಉದುರುತ್ತಿದೆ ಚಾವಣಿ: ತರಗತಿ ಕೊಠಡಿಗಳ, ಕಾರಿಡಾರ್‌ನ ಚಾವಣಿಯ ಸಿಮೆಂಟ್‌ ಸೀಲಿಂಗ್‌ ಆಗಾಗ ಉದುರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಭೀತಿಯಿಂದಲೇ ಕುಳಿತು ಪಾಠ ಕೇಳುತ್ತಾರೆ. ‘ಆರು ತಿಂಗಳ ಹಿಂದೆ, ಉಪನ್ಯಾಸಕರೊಬ್ಬರು ಪಾಠ ಮಾಡುವಾಗ, ಸೀಲಿಂಗ್‌ ಪಕಳೆಗಳು ಮೈಮೇಲೆ ಬಿದ್ದವು. ಇದರಿಂದ ವಿದ್ಯಾರ್ಥಿಗಳಿಬ್ಬರಿಗೆ ತಲೆ ಮತ್ತು ಕುತ್ತಿಗೆಗೆ ಗಾಯವಾಗಿತ್ತು’ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಅಂಗಳದಲ್ಲೇ ಕಸಕ್ಕೆ ಬೆಂಕಿ: ನಗರದಲ್ಲಿ ಕಸವನ್ನು ಸುಡುವುದಕ್ಕೆ ಅವಕಾಶ ಇಲ್ಲ. ಆದರೆ, ಇಲ್ಲಿ ಕಾಗದ ಮತ್ತಿತರ ಕಸ ಮತ್ತು ಮರಗಿಡಗಳಿಂದ ಉದುರುವ ಒಣಎಲೆಗಳನ್ನು ಅಂಗಳದಲ್ಲೇ ರಾಶಿ ಹಾಕಿ ಬೆಂಕಿ ಹಚ್ಚುತ್ತಾರೆ. ಇದರಿಂದ ದಟ್ಟಹೊಗೆಯು ಆಗಾಗ ಹಬ್ಬಿಕೊಳ್ಳುತ್ತದೆ. ಈ ಪರಿಪಾಠ ನಗರದ ವಾಯುಮಾಲಿನ್ಯ ಹೆಚ್ಚಳಕ್ಕೂ ಕಾರಣವಾಗುತ್ತಿದೆ.

ಪ್ರತಿ ತರಗತಿಯ ಒಳಾಂಗಣದಲ್ಲೂ ಪಾರಿವಾಳಗಳ ಹಿಕ್ಕೆಗಳು ಬಿದ್ದಿವೆ. ಪ್ರತಿದಿನ ಕಸ ಗುಡಿಸದ ಕಾರಣ, ತರಗತಿಗಳ ನೆಲಹಾಸಿನಲ್ಲೂ ಕಸ ಹರಿದಾಡುತ್ತಿದೆ. ಕೆಲವು ಕಿಟಕಿಗಳು ಮುರಿದಿವೆ, ಸ್ವಿಚ್‌ ಬೋರ್ಡ್‌ಗಳಿಂದ ವೈರ್‌ಗಳು ಹೊರಚಾಚಿವೆ. ಮುರಿದ ಬೆಂಚುಗಳ ರಾಶಿ ಮೆಟ್ಟಿಲುಗಳ ಕೆಳಗೆ ಬಿದ್ದಿದೆ. ಪ್ರಾಂಗಣದಲ್ಲಿ ಹಳೆಯ ವಾಹನಗಳ, ಯಂತ್ರೋಪಕರಣಗಳ ರಾಶಿಯೂ ಕಾಣುತ್ತದೆ.

ಇಂತಹ ಅಸ್ತವ್ಯಸ್ತ ವ್ಯವಸ್ಥೆಯಲ್ಲೇ ದೇಶದ ಕೈಗಾರಿಕಾ ಕ್ಷೇತ್ರದ ಭವಿಷ್ಯ ರೂಪುಗೊಳ್ಳಬೇಕಾದ ಪರಿಸ್ಥಿತಿ ಇದೆ.

**

‘ಹೊಸ ಶೌಚಾಲಯ ಕಟ್ಟಿಸುತ್ತೇವೆ’

‘ತಲಾ ₹ 5 ಲಕ್ಷ ವೆಚ್ಚದಲ್ಲಿ ಎರಡು ಶೌಚಾಲಯಗಳನ್ನು ಕಟ್ಟಿಸಲು ಯೋಜಿಸಿದ್ದೇವೆ’ ಎಂದು ಪ್ರಾಂಶುಪಾಲರಾದ ಎಸ್‌.ಡಿ.ಮೊಕಾಶಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜು ಕಟ್ಟಡ 1952–53ರಲ್ಲಿ ನಿರ್ಮಾಣಗೊಂಡಿದೆ. ಹಾಗಾಗಿ ಚಾವಣಿಯ ಸಿಮೆಂಟ್‌ ಗಾರೆ ಉದುರುತ್ತಿದೆ. ಕಾಲೇಜು ನಿರ್ವಹಣೆ ಮತ್ತು ನವೀಕರಣಕ್ಕೆ ವರ್ಷಕ್ಕೆ ₹ 1 ಕೋಟಿ ಅನುದಾನ ಕೇಂದ್ರ ಸರ್ಕಾರದಿಂದ ಸಿಗುತ್ತಿದೆ. ಅದರಲ್ಲೇ ಕೈಲಾದಷ್ಟು ನಿರ್ವಹಣೆ ಮಾಡುತ್ತಿದ್ದೇವೆ’ ಎಂದು ಅವರ ಸಮಜಾಯಿಷಿ ನೀಡಿದರು.

‘ಕಾಲೇಜಿನ ಪಾರಂಪರಿಕ ಮತ್ತು ಸುಂದರ ವಾಸ್ತುರಚನೆ ಉಳಿಸಿಕೊಂಡು ನವೀಕರಣ ಮಾಡಲು, ಜತೆಗೆ ಹೊಸ ಕಟ್ಟಡ ನಿರ್ಮಿಸಲು ಯೋಜಿಸುತ್ತಿದ್ದೇವೆ’ ಎಂದು ಚಿಕ್ಕಪೇಟೆ ಕ್ಷೇತ್ರದ ಶಾಸಕ ಬಿ.ಉದಯ್‌ ಗರುಡಾಚಾರ್‌ ತಿಳಿಸಿದರು.

ಅಂಕಿ ಅಂಶ

1,600:ಐಟಿಐನ ವಿದ್ಯಾರ್ಥಿಗಳು

22:ಕೋರ್ಸ್‌ಗಳ ಸಂಖ್ಯೆ

45:ತರಗತಿ ಕೊಠಡಿ ಮತ್ತು ಪ್ರಯೋಗಾಲಯಗಳ ಸಂಖ್ಯೆ

19.1 ಎಕರೆ:ಐಟಿಐ ಪ್ರಾಂಗಣದ ವಿಸ್ತೀರ್ಣ

**

₹ 50 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸುವ ಪ್ರಸ್ತಾವನೆಯನ್ನು ಸಚಿವ ಜಿ.ಪರಮೇಶ್ವರ ಅವರಿಗೆ ಸಲ್ಲಿಸಿದ್ದೇನೆ. ಮತ್ತೊಮ್ಮೆ ಗಮನ ಸೆಳೆಯುತ್ತೇನೆ.

-ಬಿ.ಉದಯ್‌ ಗರುಡಾಚಾರ್, ಸ್ಥಳೀಯ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT