ಸರ್ಕಾರಿ ಶಾಲೆಯಲ್ಲಿ ಇಲಾಖೆಯೇ ಕಲಿಯಲಿ!

7

ಸರ್ಕಾರಿ ಶಾಲೆಯಲ್ಲಿ ಇಲಾಖೆಯೇ ಕಲಿಯಲಿ!

Published:
Updated:

ತೆರೆದ ಪುಸ್ತಕ ಪರೀಕ್ಷೆ ಮುಖ್ಯವಾಹಿನಿಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ; ಆಗಬೇಕು ಸಹ. ಹೊಸನೀರು ಬರುವುದೇ ಹಾಗೆ. ಈ ಮಂಥನ ಮೊದಲು ವಿಷವನ್ನು ತಂದರೂ ಅಮೃತ ಮುಂದೆ ಬಂದೇ ಬರುತ್ತದೆ. ಈ ತೆರೆದ ಪುಸ್ತಕ ಪರೀಕ್ಷೆಯ ಚರ್ಚೆ ಸಮಗ್ರವಾಗಿ ಪರೀಕ್ಷಾವಿಧಾನದ ಪುನರಾವಲೋಕನಕ್ಕೆ ನಾಂದಿಯಾಗಲಿ ಎಂದು ಹಾರೈಸೋಣ.

ಇದರ ಜೊತೆಗೆ ಮಾಧ್ಯಮಗಳ ಮೂಲಕ ಚರ್ಚೆಗೆ ಒಳಗಾಗಿರುವುದು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಬಸ್‍ ಪಾಸ್ ‍ಕೊಡುವ ವಿಷಯ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಸರಿತಪ್ಪುಗಳ ತುಲನೆ ನಡೆಯುತ್ತಿದೆ. ಕೆಲವರು ‘ಲಕ್ಷಾಂತರ ಫೀಸು ಕೊಟ್ಟು ಖಾಸಗಿ ಶಾಲೆಗಳಿಗೆ ಹೋಗುವವರಿಗೆ ಯಾಕೆ ಉಚಿತ ಪಾಸು?’ ಎಂದು ಪ್ರಶ್ನಿಸಿದರೆ, ‘ಬಡವರಾದರೂ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಏಕೆಂದರೆ ಸರ್ಕಾರಿ ಶಾಲೆಗಳ ವ್ಯವಸ್ಥೆಯೇ ಹಾಗಿದೆ!’ ಎಂದು ಇನ್ನು ಕೆಲವರು ಎಂದು ತೀರ್ಪುಕೊಡುತ್ತಿದ್ದಾರೆ.

ಇಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡುವ ಅನೇಕರಿಗೆ ಅವುಗಳ ಪರಿಚಯ ಎಷ್ಟರಮಟ್ಟಿಗಿದೆ ಎಂಬುದು ಪ್ರಶ್ನೆ! ಎಲ್ಲೋ ಪತ್ರಿಕೆಯಲ್ಲೋದಿದ ‘ಮರದ ಕೆಳಗೆ ಪಾಠ ನಡೆಯುವ, ಉಪಾಧ್ಯಾಯರೇ ಇಲ್ಲದ ಶಾಲೆಗಳನ್ನು ಸಾರ್ವತ್ರಿಕವಾಗಿ ಅನ್ವಯಿಸಿ ಇಡೀ ವ್ಯವಸ್ಥೆಯೇ ಹಾಗಿದೆ’ ಎಂಬ ತೀರ್ಮಾನಕ್ಕೆ ಬಂದವರು ಅವರು. ಇಂದು ಸರ್ಕಾರಿ ಶಾಲೆಗಳ ಒಟ್ಟಾರೆ ಚಿತ್ರಣ ಭಯಪಡಿಸುವಂತೇನೂ ಇಲ್ಲ. ಸಾಕಷ್ಟು ಸಾಧನೆ ಮಾಡಿದ ಶಾಲೆಗಳಿವೆ. ಶಿಕ್ಷಣ ಕ್ಷೇತ್ರಕ್ಕೆ ತೆತ್ತುಕೊಂಡ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರಿದ್ದಾರೆ. ತಜ್ಞ ವ್ಯವಸ್ಥೆಯುಳ್ಳ ಮೌಲ್ಯಮಾಪನದಲ್ಲಿ ಪದೇ ಪದೇ ಸರ್ಕಾರಿ ಶಾಲೆಗಳೇ ಗೆದ್ದಿರುವುದನ್ನು ನಾವು ಮರೆಯಬಾರದು. 

ಹಾಗಾದರೆ ವಾಸ್ತವವೇನು? ಸಮಸ್ಯೆಗಳಿರುವುದು ಸುಳ್ಳೇ? ಸರ್ಕಾರಿ ಶಾಲೆಗಳೆಂದರೆ ಅವ್ಯವಸ್ಥೆಯ ಮೂಟೆಗಳೂ ಅಲ್ಲ, ಅಮರವಾತಿಯೂ ಅಲ್ಲ! (ಹಾಗೆಯೇ ಖಾಸಗಿ ಶಾಲೆಗಳೂ ಸಹ ಅಮರಾವತಿಯೂ ಅಲ್ಲ, ಅವ್ಯವಸ್ಥೆಯ ಮೂಟೆಯೂ ಅಲ್ಲ!). ವ್ಯವಸ್ಥೆಯಲ್ಲಿ ಸರಿಪಡಿಸಬಹುದಾದ ಅನೇಕ ದೋಷಗಳಿವೆ, ಲೋಪಗಳಿವೆ. ಅವನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕಿವೆ. ಈ ಕುರಿತಾಗಿ ರಾಜಕೀಯ ಇಚ್ಛಾಶಕ್ತಿಯನ್ನು ಮೂಡಿಸಬೇಕಾಗಿದೆ, ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

ಹೊಸ ನೀರು ಬರಲಿ
ಮುಖ್ಯವಾಗಿ ಇಲಾಖೆಯ ದೃಷ್ಟಿಕೋನ ಬದಲಾಗಬೇಕಿದೆ. ಹೊಸ ನೀರು, ಹೊಸ ಚಿಂತನೆಗಳು ಹರಿಯಬೇಕಿವೆ. ಅವೇ ಹಳೆಯ ಜಡ್ಡುಗಟ್ಟಿದ ವ್ಯವಸ್ಥೆಗೆ ಭ್ರಷ್ಟಾಚಾರದ ಪ್ರಹಾರವೂ ಬಡಿದು ವ್ಯವಸ್ಥೆಯ ಕಾರ್ಯಾತ್ಮಕ ಪದರ ಶಿಥಿಲವಾಗಿದೆ. ಅಂದರೆ ಒಳಗಿನ ಗಟ್ಟಿತನ ಹಾಗೆಯೇ ಇದೆ. ಈಗ ಇರುವ ಸವಾಲು ಎಂದರೆ ಈ ಶೈಥಲ್ಯವನ್ನು ಬಿಡಿಸಿ ಎಲ್ಲರೂ ಉತ್ಸಾಹದಿಂದ ಮಾನವಸಂಪನ್ಮೂಲ ಸೃಷ್ಟಿಯ ಪವಿತ್ರಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಹೇಗೆ ಎಂಬುದು. ಇದು ಮೇಲ್ನೋಟಕ್ಕೆ ಕಾಣುವಷ್ಟು ಕಷ್ಟವಲ್ಲ, ಆದರೆ ಸವಾಲಿನದು.

ಪರಿಹಾರ ಎಲ್ಲಿದೆ?
ಇಲ್ಲಿನ ಕೆಲವು ಪರಿಹಾರಗಳು ಶಿಕ್ಷಣ ಮಾತ್ರವಲ್ಲ, ಇತರೆ ಇಂತಹುದೇ (ಆರ್ಥಿಕ ಲಾಭವನ್ನು ನೋಡಬಾರದ) ಇಲಾಖೆಗಳಿಗೆ (ಉದಾ: ಅರಣ್ಯ, ಕೃಷಿ, ಪೊಲೀಸ್‍) ಸಹ ಅನ್ವಯಿಸುತ್ತದೆ. ಸಮಸ್ಯೆಗಳ ಇತ್ಯರ್ಥಕ್ಕೆ ಕುಳಿತಾಗ ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳು, ನಾಯಕರುಗಳು ಹೇಳುವ ಮಾತು ‘ಸಿಬ್ಬಂದಿಯ ಕೊರತೆಯಿದೆ’! ಭಾರತದಂತಹ ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಸಿಬ್ಬಂದಿಯ ಕೊರತೆಯೇ? ಹೀಗೆ ಹೇಳುವ ವ್ಯವಸ್ಥೆಯೇ ಇನ್ನೆಲ್ಲೋ ‘ಲಕ್ಷಕೋಟಿ ವಿನಿಯೋಗಿಸಿ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ’ ಎನ್ನುತ್ತದೆ! ಬದಲಾಗಿ ನಮ್ಮ ಈ ಇಲಾಖೆಗಳಿಗೇ ಅಗತ್ಯವಿರುವ ಸಿಬ್ಬಂದಿಯ ನೇಮಕಾತಿ ಮಾಡಿಕೊಂಡರೆ ಉದ್ಯೋಗ ಸೃಷ್ಟಿಯಾಗುವುದಿಲ್ಲವೆ? ನಮ್ಮದೇ ಅತಿಮುಖ್ಯವಾದ ಕೆಲಸಗಳು ಚೆನ್ನಾಗಿ ನಡೆಯುವುದಿಲ್ಲವೆ? ಇದಕ್ಕೆ ‘ಸಂಪನ್ಮೂಲದ ಕೊರತೆ’ ಎಂಬ ಸಬೂಬು ಬರುತ್ತದೆ. ಅಷ್ಟು ಜನರಿಗೆ ಸಂಬಳ, ಸಾರಿಗೆ ಎಲ್ಲಿಂದ ತರೋದು ಎಂಬ ಮಾತೂ ಕೇಳಿಬರುತ್ತದೆ. ಇದು ಯೋಜನಾ ಆಯೋಗ, ವೇತನ ಆಯೋಗ ಮತ್ತು ಆರ್ಥಿಕ ಇಲಾಖೆಗಳು ಜಂಟಿಯಾಗಿ ಸೇರಿ ಪರಿಹರಿಸಬೇಕಾದ ಸಮಸ್ಯೆ. ಯಾರಿಗೋ ಲಕ್ಷಾಂತರ ರೂಪಾಯಿಗಳ ಸಂಬಳ ನಿಗದಿ ಮಾಡಿ ಶಾಲಾ ಮಟ್ಟದಲ್ಲಿ ಅತಿ ಕಡಿಮೆ ವೇತನ ನಿಗದಿಯಾಗುವ ಸಹಾಯಕನ ಹುದ್ದೆ ಖಾಲಿಯಿಡುವುದು ವ್ಯವಸ್ಥೆಗೆ ಮಾಡುವ ದ್ರೋಹವಲ್ಲವೆ?

ಇದು ಏಕೆ ಪ್ರಸ್ತುತವಾಗುತ್ತಿದೆ ಎಂದರೆ, ಶಾಲೆಗಳಲ್ಲಿ ಅಧ್ಯಾಪಕರಿಗೆ ಅದರಲ್ಲಿಯೂ ಆಡಳಿತದ ಹೊಣೆಯನ್ನೂ ಹೊತ್ತ ಮುಖ್ಯೋಪಾಧ್ಯಾಯರಿಗೆ ಅನೇಕ ಒಳ ಕಿರಿಕಿರಿಗಳಿಗೆ ಸದ್ಯದ ವ್ಯವಸ್ಥೆ ಅನುವುಮಾಡಿದೆ. ಇದರಲ್ಲಿ ಕೆಲವನ್ನು ಹೆಚ್ಚುವರಿ ಸಿಬ್ಬಂದಿಯಿದ್ದಲ್ಲಿ ಸುಲಭವಾಗಿ ನಿಭಾಯಿಸಬಹುದು. ಇನ್ನು ಕೆಲವನ್ನು ಆಡಳಿತಯಂತ್ರಕ್ಕೆ ಆಧುನಿಕತೆ, ಸ್ವಂತಿಕೆಯನ್ನು ತರುವ ಮೂಲಕ ಮೂಲಕ ಸರಿಪಡಿಸಬಹುದು.

ಅನೇಕ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ನೀರನ್ನು ಎಲ್ಲಿಂದಲೋ ಹೊತ್ತು ತರಬೇಕು. ಯಾರು ಹೊತ್ತು ತರಬೇಕು? ಎಷ್ಟೋ ಕಡೆ ಸಹಾಯಕರೇ ಇಲ್ಲ. ಇರುವಲ್ಲಿಯೂ ಅವರ ಸಂಖ‍್ಯೆ ಸಾಲದು. ಅವರಿಗೆ ಅನೇಕ ಕೆಲಸಗಳನ್ನು ಹಚ್ಚಿರುತ್ತಾರೆ. ಹಾಗಾಗಿ ಶಿಕ್ಷಕರು ನೀರು ಹೊರಬೇಕೆ? ಒಂದು ಶಾಲೆಯಲ್ಲಿ ವಿದ್ಯಾರ್ಥಿಯನ್ನು ನೀರು ತರಲು ಕಳಿಸಿದ್ದರು. ಅಲ್ಲಿನ ಕುಂಟೆಗೆ ಅದು ಹೇಗೋ ವಿದ್ಯುತ್‍ ಸಂಪರ್ಕ ಬಂದು ಆ ವಿದ್ಯಾರ್ಥಿ ಮೃತನಾದ. ಇದು ದೊಡ್ಡ ಗಲಾಟೆಯಾಯಿತು. ಇದರ ಉತ್ತರದಾಯಿತ್ವ ಯಾರದ್ದು? ಶಿಕ್ಷಕರದ್ದೇ? ವಿದ್ಯಾರ್ಥಿಯದ್ದೇ? ಎಲ್ಲದಕ್ಕೂ ತಲೆ ಕೊಡಬೇಕಾದ ಮುಖ್ಯೋಪಾಧ್ಯಯರದ್ದೇ? ಸಹಾಯಕರು ಇನ್ನು ಅನೇಕ ಕೆಲಸಗಳಿಗೆ ಬೇಕಾಗುತ್ತಾರೆ.

ಇಂತಹವು ಹಲವಾರಿವೆ. ಮೊನ್ನೆಯಷ್ಟೇ ಯಾವುದೋ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನಿಂದ ಶೌಚಾಲಯವನ್ನು ಸ್ವಚ್ಛಪಡಿಸಿದ ಘಟನೆ ವಿವಾದಕ್ಕೆ ಕಾರಣವಾಯಿತು. ವಿದ್ಯಾರ್ಥಿ ಮಾಡಿದರೆ ತಪ್ಪೇ? ಶಿಕ್ಷಕರು ಏಕೆ ಮಾಡಬಾರದು? ಗಾಂಧೀಜಿಯವರು ಹೇಳಿದ್ದು ಏನು? ಎಂದೆಲ್ಲಾ ಮಾತುಗಳು ಬಂದುಹೋದವು. ಇಲ್ಲಿ ಶಿಕ್ಷಕರಾಗಲಿ, ವಿದ್ಯಾರ್ಥಿಗಳಾಗಲಿ ಮಾಡಬಾರದು ಎಂದಲ್ಲ. ಸರ್ಕಾರ ತನ್ನ ಕೆಲಸಕ್ಕೆ ಏನು ವ್ಯವಸ್ಥೆ ಮಾಡಿದೆ ಎಂಬುದು ಮುಖ್ಯ. ಕೆಲಸಗಳಲ್ಲಿ ಎಲ್ಲವೂ ಒಂದೇ ಮೇಲು ಕೀಳು ಎಂಬುದಿಲ್ಲ ಎಂಬ ತತ್ವವನ್ನು ಮಕ್ಕಳಲ್ಲಿ ಮೂಡಿಸುವ ಸಲುವಾಗಿ ಅವರೇ ಮಾಡಲಿ ಅಥವಾ ಶಿಕ್ಷಕರೇ ಮಾಡಲಿ ಎಂಬುದಾದರೆ ಅದಕ್ಕೊಂದು ದಿನ ನಿಗದಿ ಮಾಡಲಿ. ಅಂದು ಎಲ್ಲರೂ ಸೇರಿ ಶೌಚಾಲಯ ತೊಳೆಯುವುದು, ಶಾಲೆಯನ್ನು ಸ್ವಚ್ಛಪಡಿಸುವುದು ಇತ್ಯಾದಿಗಳನ್ನು ಮಾಡಲಿ. ಮಕ್ಕಳು, ಶಿಕ್ಷಕರು ಮಾಡಬಹುದು ಎಂದಾದಲ್ಲಿ ಅಧಿಕಾರಿಗಳೂ ಮಾಡಬಹುದು. ಇಲಾಖೆಯ ಕಾರ್ಯದರ್ಶಿಗಳೂ ಸಕ್ರಿಯವಾಗಿ ಭಾಗವಹಿಸಿ ಮೇಲ್ಪಂಕ್ತಿಯನ್ನು ಹಾಕಿಕೊಡಬಹುದು. ಇದು ಆಗ ಬೇಕಾದ ಕೆಲಸ. ಆದರೆ, ದಿನನಿತ್ಯದ ಕೆಲಸಗಳಿಗೆ ಅಗತ್ಯ ಸಿಬ್ಬಂದಿಗಳನ್ನು ಒದಗಿಸಿ, ಅವರಿಗೆ ಕಾರ್ಯನಿಗದಿ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ. ಇಲ್ಲಿ ಯಾವುದೇ ನೆಪಗಳಿಗೆ ಆಸ್ಪದವಿರಬಾರದು.

ಇನ್ನು ಸರ್ಕಾರಿ ಶಾಲೆಗಳಲ್ಲಿಯೂ ಅನುದಾನಗಳು ಎಂಬ ಕಾಯಿಲೆಯಿದೆ. ಶಾಲಾನುದಾನ, ಶೂ ಭಾಗ್ಯಕ್ಕೆ ಅನುದಾನ, ಸಮವಸ್ತ್ರಕ್ಕೆ ಅನುದಾನ ಇತ್ಯಾದಿ ಇತ್ಯಾದಿ. ಇದು ಭ್ರಷ್ಟಾಚಾರಕ್ಕೂ ಆಸ್ಪದ ಮಾಡಿಕೊಡುತ್ತದೆ. ಈ ಅನುದಾನಗಳಲ್ಲಿಯೇ ಶಾಲೆಯು ವಿದ್ಯುತ್‍, ನೀರು ಇತ್ಯಾದಿಗಳ ಬಿಲ್ಲನ್ನು ತೂಗಿಸಬೇಕು. ವಿದ್ಯುತ್‍ ಅಥವಾ ನೀರಿನ ಬಿಲ್ಲು ಹೆಚ್ಚಾದರೆ ಅದಕ್ಕಾಗಿ ಯಾರದರೂ ದಾನಿಗಳನ್ನು ಬೇಡಬೇಕು. ಈ ದಾನಿಗಳನ್ನು ಬೇಡಿ ತರುವ ವಸ್ತುಗಳು, ದ್ರವ್ಯವೇ ಬೇಕಾದಷ್ಟು ವಿಷಯಗಳಿಗಿದೆ. ಸಿ.ಸಿ.ಟಿ.ವಿ. ಕ್ಯಾಮೆರಾ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿ. ಕೆಲವೆಡೆ ಸರ್ಕಾರವೇ ವ್ಯವಸ್ಥೆ ಮಾಡಿರುವುದುಂಟು. ಆದರೆ, ಈ ನೀರಿನ ಯಂತ್ರ ಕೆಟ್ಟರೆ, ಅಥವಾ ಈ ಎಲ್ಲ ವ್ಯವಸ್ಥೆಯಿಂದ ಹೆಚ್ಚುಬಿಲ್ಲು ಬಂದರೆ ಮತ್ತೆ ‘ನಮ್ಮ ನಡೆ ದಾನಿಗಳ ಕಡೆಗೆ’ ಎಂದು ಶಿಕ್ಷಕರು ಹೊರಡಬೇಕಾಗುತ್ತದೆ. ಇದನ್ನು ತಪ್ಪಿಸಬೇಕು. ಮಕ್ಕಳಿಗೆ ಬೇಕಾದ ವ್ಯವಸ್ಥೆಯನ್ನು ಸರ್ಕಾರ ಮಾಡಲಿ. ಈ ಬಿಲ್ಲುಗಳ ಪಾವತಿ ಎಂಬ ಪ್ರಹಸನ ನಿಲ್ಲಲಿ! ಈ ವಿದ್ಯುತ್‍ ಮತ್ತು ನೀರಿನ ಬಿಲ್ಲನ್ನು ಶಾಲೆಕಟ್ಟಿದರೆ ಅದು ಅದೇ ಸರ್ಕಾರಕ್ಕೆ ತಾನೆ ಹೋಗುತ್ತದೆ? ಈ ಒಂದು ಇಲಾಖೆಯಿಂದ ಮತ್ತೊಂದಕ್ಕೆ ಹಣ ಬದಲಾಯಿಸಲು ಶಾಲೆಗಳನ್ನು ಮಧ್ಯೆ ತರುವುದರ ಬದಲು ನೇರವಾಗಿ ಸದರಿ ಇಲಾಖೆಗಳು ಬಿಲ್ಲನ್ನು ಆರ್ಥಿಕ ಇಲಾಖೆಗೆ ಕಳಿಸಿ ಪಾವತಿ ಮಾಡಿಸಿಕೊಳ್ಳಲಿ. ತಂತ್ರಜ್ಞಾನದ ಇಂದಿನ ದಿನಗಳಲ್ಲಿ ಇದು ಕಷ್ಟದ ಮಾತೇನೂ ಅಲ್ಲ. ಶಿಕ್ಷಕರು ಹಾಗೂ ಮುಖ‍್ಯ ಶಿಕ್ಷಕರನ್ನು ಅನವಶ‍್ಯಕ ಶೈಕ್ಷಣಿಕೇತರ ಹೊಣೆಗಳಿಂದ ಬಿಡುಗಡೆ ಮಾಡಿ ಅವರು ಪಾಠಪ್ರವಚನದ ಕಡೆಗೆ ಹೆಚ್ಚೆಚ್ಚು ಗಮನಕೊಡುವಂತೆ ಮಾಡಬೇಕಿದೆ. ಇಂದಿನ ಪರಿಸ್ಥಿತಿಯಲ್ಲಿ ಮುಖ್ಯಶಿಕ್ಷಕರು ಪಾಠ ಮಾಡಲು ಸಮಯ ಹೊಂದಿಸಿಕೊಳ್ಳುವುದೇ ಕಷ್ಟವಾಗಿದೆ. ಬೇಕಾದಲ್ಲಿ ಪರ್ಯಾಯವಾಗಿ ಒಬ್ಬ ಆಡಳಿತಾತ್ಮಕ ಮುಖ್ಯರ ಹುದ್ದೆಯನ್ನು ಸರ್ಕಾರ ರಚಿಸಿ ನೇಮಿಸಲಿ.

ಇನ್ನು ಸಮವಸ್ತ್ರ. ಒಂದು ಸಮವಸ್ತ್ರವನ್ನು ಕೊಡುತ್ತಾರೆ. ಮತ್ತೊಂದಕ್ಕೆ ಅನುದಾನವಂತೆ. ಆರನೇ ತರಗತಿಯವರೆಗೂ ಇನ್ನೂರು ರೂಪಾಯಿ. ಆರನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಮುನ್ನೂರು ರೂಪಾಯಿ. ಈ ಬೆಲೆಗೆ ಇಂದಿನ ದಿನಮಾನದಲ್ಲಿ ಬೆಳೆಯುವ ವಯಸ್ಸಿನ ಮಕ್ಕಳಿಗೆ ಬಟ್ಟೆ ತಂದು ಹೊಲಿದು ಕೊಡುಬೇಕೆಂದು ಇಲಾಖೆ ನಿರೀಕ್ಷಿಸುತ್ತದೆ. ಇದನ್ನು ಸರಿಪಡಿಸಲಾಗದೇ?

ದೇಶದ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಹೊಣೆ ಹೊತ್ತಿರುವ ಶಿಕ್ಷಣ ಇಲಾಖೆ ಇಂತಹ ಅನೇಕ ಬದಲಾವಣೆಗಳನ್ನು ತಂದು ಆಡಳಿತ ಸುಸೂತ್ರವಾಗಿ ನಡೆಯುವಂತೆ ಮಾಡಿ, ಶಿಕ್ಷಕರಿಗೆ ಯುಕ್ತ ತರಬೇತಿ ನೀಡಿ ಅವರ ಪ್ರತಿಭೆಯನ್ನು ಸಂಪೂರ್ಣ ಬಳಸಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಆಡಳಿತ 2.0 ಎಂದು ಉತ್ಸಾಹದಿಂದ ತೊಡುಗುವ ಸಮಯವಿದು.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !