ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಶಿಕ್ಷಣ: ಸರ್ಕಾರದಿಂದ ಇಂದು ತೀರ್ಮಾನ?

ನಿಮ್ಹಾನ್ಸ್‌ ವರದಿ6 ವರ್ಷದೊಳಗಿನ ಮಕ್ಕಳಿಗೆ ಆನ್‌ಲೈನ್‌ ತರಗತಿ ಬೇಡ
Last Updated 25 ಮೇ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಆರು ವರ್ಷದೊಳಗಿನ ಮಕ್ಕಳಿಗೆ ಆನ್‌ಲೈನ್‌ ತರಗತಿ ಬೇಡ. ಒಂದು ಗಂಟೆಗಿಂತ ಹೆಚ್ಚು ಹೊತ್ತು ಮಕ್ಕಳು ಡಿಜಿಟಲ್‌ ಪರದೆ ನೋಡುವುದು ಒಳ್ಳೆಯದಲ್ಲ’ ಎಂದು ನಿಮ್ಹಾನ್ಸ್‌ನ ತಜ್ಞರು ವರದಿ ನೀಡಿದ್ದಾರೆ. ಇದನ್ನು ಆಧರಿಸಿ ಈ ವಿಷಯದಲ್ಲಿ ಸರ್ಕಾರ ಮಂಗಳವಾರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಅವರು ಮಂಗಳವಾರ ಇಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದು, 6 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆನ್‌ಲೈನ್ ತರಗತಿ ನಡೆಸುವಂತಿಲ್ಲ ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಖಾಸಗಿ ಶಾಲೆಗಳಿಗೆ ನೀಡುವ ಸಾಧ್ಯತೆ ಇದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.‌

ಖಾಸಗಿ ಶಾಲೆಗಳು ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಗತಿ ನಡೆಸುತ್ತಿವೆ. ಅದಕ್ಕಾಗಿ ಶುಲ್ಕ ಸಂಗ್ರಹಿಸುತ್ತಿವೆ ಎಂಬ ದೂರುಗಳು ಬಂದ ಕಾರಣ, ಪುಟಾಣಿ ಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸಬಹುದೇ ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ನಿಮ್ಹಾನ್ಸ್‌ ಸಂಸ್ಥೆಯನ್ನು ಕೋರಿತ್ತು. ಅದರಂತೆ ಅಧ್ಯಯನ ನಡೆಸಿದ ನಿಮ್ಹಾನ್ಸ್‌ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

‘ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 6 ವರ್ಷದೊಳಗಿನ ಮಕ್ಕಳು ಒಂದು ಗಂಟೆಗಿಂತ ಹೆಚ್ಚು ಹೊತ್ತು ಡಿಜಿಟಲ್‌ ಪರದೆ ನೋಡುತ್ತ ಕೂರಬಾರದು. ಇದರಿಂದ ಅವರ ಕಣ್ಣಿಗೆ ಹಾನಿಯಾಗುವುದರ ಜತೆಗೆ ದೈಹಿಕ, ಮಾನಸಿಕ ತೊಂದರೆಯೂ ಉಂಟಾಗುತ್ತದೆ. ಹೀಗಾಗಿ ಆನ್‌ಲೈನ್‌ ತರಗತಿಗಳನ್ನು ಈ ಮಕ್ಕಳಿಗೆ ನಡೆಸದೆ ಇರುವುದು ಒಳ್ಳೆಯದು ಎಂಬ ಶಿಫಾರಸನ್ನು ಮಾಡಲಾಗಿದೆ’ ಎಂದು ನಿಮ್ಹಾನ್ಸ್‌ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುಟಾಣಿ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಪಾಠ ಹೇಳಿಕೊಡುವ ತರಬೇತಿಯನ್ನು ನಮ್ಮ ಶಿಕ್ಷಕರು ಪಡೆದಿಲ್ಲ. ತರಗತಿಗಳಲ್ಲೇ ವಿದ್ಯಾರ್ಥಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅದೆಷ್ಟೂ ಶಿಕ್ಷಕರು ವಿಫಲರಾಗುತ್ತಿದ್ದು, ಆನ್‌ಲೈನ್‌ನಲ್ಲಿ ಹೇಗೆ ಪರಿಣಾಮಕಾರಿಯಾಗಿ ಪಾಠ ಮಾಡಬಲ್ಲರು? ಆನ್‌ಲೈನ್‌ ಹೆಸರಿನಲ್ಲಿ ಮಕ್ಕಳನ್ನು ಪ್ರಯೋಗಕ್ಕೆ ಒಳಪಡಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ’ ಎಂದರು.

ಪುಟಾಣಿ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಅಗತ್ಯವೇ ಇಲ್ಲ ಎಂಬ ಸ್ಪಷ್ಟ ಅಭಿಪ್ರಾಯವನ್ನು ನಾವು ತಿಳಿಸಿದ್ದೇವೆ, ಮುಂದಿನದು ಸರ್ಕಾರಕ್ಕೆ ಬಿಟ್ಟದ್ದು ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT