ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಕಥೆ ಕಾರಣ..ಕಥೆ ಮೂಲಕ ಮಕ್ಕಳಿಗೆ ವ್ಯಾಕರಣ!

Last Updated 15 ನವೆಂಬರ್ 2019, 6:30 IST
ಅಕ್ಷರ ಗಾತ್ರ

ಕಥೆಗಳಿಗೆ ಮಕ್ಕಳಲ್ಲಿ ಒಂದು ರೀತಿಯ ಮಾಂತ್ರಿಕ ಜಗತ್ತನ್ನೇ ಸೃಷ್ಟಿಸಿ ಮಂತ್ರಮುಗ್ಧಗೊಳಿಸುವ ಜಾದೂಶಕ್ತಿಯಿದೆ. ಅವು ಬದುಕಿನ ಬಗ್ಗೆ ಹೇಳುತ್ತವೆ, ನಮ್ಮ ಬಗ್ಗೆ, ಇತರರ ಬಗ್ಗೆ ಕೂಡ ಕುತೂಹಲ ಸೃಷ್ಟಿಸುತ್ತವೆ. ಇದು ಮಕ್ಕಳಿಗೆ ಒಂದು ವಿಷಯವನ್ನು ಅರ್ಥ ಮಾಡಿಸಲು, ಸಂಸ್ಕೃತಿ, ಇತಿಹಾಸವನ್ನು ಪರಿಚಯಿಸಲು ತಕ್ಷಣಕ್ಕೆ ಸಿಗುವ ಸಾಧನ ಎನ್ನಬಹುದು.

ಈಗ ಆಧುನಿಕ ಗ್ಯಾಜೆಟ್‌ಗಳು ಬಂದು ಕಥೆ ಹೇಳುವ ಅಭ್ಯಾಸ ಅಥವಾ ಅಜ್ಜಿಯರು ಹೇಳುವ ಕಥೆ ಕೇಳಿಸಿಕೊಳ್ಳುವುದು ಸ್ವಲ್ಪ ಕಡಿಮೆಯಾಗಿರಬಹುದು. ಆದರೆ ಅದು ಮತ್ತೊಂದು ರೂಪದಲ್ಲಿ ಮತ್ತೂ ಆಕರ್ಷಕವಾಗಿ, ಉಪಯುಕ್ತವಾಗಿ ಹೊರ ಬರುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದು ಹೇಗೆಂದರೆ ಶಿಕ್ಷಣದಲ್ಲಿ ಈ ಕಥಾರೂಪವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಕ್ಲಿಷ್ಟಕರ ವಿಷಯವನ್ನು ಅತ್ಯಂತ ಸರಳೀಕರಿಸಿ ಹೇಳಲು ಇದು ಸುಲಭ ಮಾಧ್ಯಮ.

ಆರಂಭದಲ್ಲಿ ಪುಟ್ಟ ಮಕ್ಕಳನ್ನು ರಂಜಿಸಲು, ಅವರಲ್ಲಿ ಏಕಾಗ್ರತೆ ಮೂಡಿಸಲು, ಒಂದು ಕಡೆ ಕೂರುವಂತೆ ಮಾಡಲು, ಮನಸ್ಸಿನಲ್ಲಿ ಮೂಡುವ ಅರ್ಥವಾಗದ ಪ್ರಶ್ನೆಗಳಿಗೆ ಒಂದು ಮೂರ್ತ ರೂಪ ನೀಡಲು, ಧ್ವನಿ, ಶಬ್ದ, ಭಾಷೆಯನ್ನು ಪರಿಚಯಿಸಲು, ಪುಸ್ತಕ, ಕಥೆಗಳ ಬಗ್ಗೆ ಒಲವು ಬೆಳೆಸಲು ಬಳಕೆಯಾಗುವ ಈ ಮಾಧ್ಯಮವನ್ನು ನಿಧಾನವಾಗಿ ಶಿಕ್ಷಣದ ಮೂಲ ಪಾಠಗಳನ್ನು ಅರ್ಥ ಮಾಡಿಸಲು ಬಳಸಬಹುದು. ಅದು ಅವರಲ್ಲಿ ಕಲಿಕೆಯ ಕುರಿತು ಆತ್ಮವಿಶ್ವಾಸವನ್ನು ಕೂಡ ಹೆಚ್ಚು ಮಾಡಬಲ್ಲದು; ಸೃಜನಶೀಲ ಅಲೋಚನೆಗಳನ್ನು ಮೂಡಿಸಬಲ್ಲದು. ಎಲ್ಲಕ್ಕಿಂತ ಹೆಚ್ಚಾಗಿ ಆಲಿಸುವ ಕ್ರಿಯೆಯಲ್ಲಿ ಆಸಕ್ತಿ ಮೂಡಿಸುತ್ತದೆ.

ವ್ಯಾಕರಣ

ವ್ಯಾಕರಣ ಯಾವ ಭಾಷೆಯದೇ ಆಗಿರಲಿ, ಅದು ಕಬ್ಬಿಣದ ಕಡಲೆಯೇ, ಅದನ್ನು ಸುಲಭ ಮಾಡುವುದು ಹೇಗೆ? ಅಲ್ಲೂ ಸಹಾ ನಮ್ಮ ಕಥೆಗಳು ಸಹಾಯಕವಾಗುತ್ತವೆ. ಯಾವುದಾದರೂ ಒಂದು ಕಥೆ ಹೇಳಿದಾಗ ಮಕ್ಕಳು ಬಹಳ ಇಷ್ಟಪಟ್ಟು ಕುತೂಹಲದಿಂದ ಕೇಳುತ್ತಾರೆ. ಆ ಕಥೆಗಳ ಮೂಲಕ ವ್ಯಾಕರಣವನ್ನು ಕಲಿಸಬಹುದೆಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಅಲ್ಲವೇ?

ಕಲಿಯುವ ರೀತಿ ನೀರಸವಾಗದಿರಲು....

ಯಾವುದೇ ವಾಕ್ಯವನ್ನು ನೀವು ಅವರಿಗೆ ಕಲಿಸಬೇಕೆಂದಾಗ ಮಕ್ಕಳು ಬಾಯಿಪಾಠ ಮಾಡಿ ಕಲಿಯುತ್ತಾರೆ, ಆದರೆ ಕಲಿಯುವ ರೀತಿ ಮಾತ್ರ ನೀರಸವಾಗಿರುತ್ತದೆ. ಆದರೆ ಕಥೆಗಳನ್ನು ಮತ್ತೆ ಮತ್ತೆ ಕೇಳಲು ಅವರಿಗೆ ಯಾವುದೇ ಬೇಸರವಿರುವುದಿಲ್ಲ. ಆ ವಾಕ್ಯಗಳು ಅವರ ಮನದಲ್ಲಿ ಮೂಡಿ ಬಿಡುತ್ತವೆ. ಭಾಷೆ ಬೇರೆಯದೇ ಆದರೂ ಅವರಿಗೆ ವಾಕ್ಯಗಳು ಪರಿಚಿತವಾಗಿ ಬಿಡುತ್ತವೆ. ಕಥೆ ಹೇಳುವ ಮೂಲಕ ಗ್ರಹಣ ಶಕ್ತಿ, ಶಬ್ದ ಸಂಪತ್ತು, ಮಾತನಾಡುವ ಕಲೆ, ಸೃಜನಶೀಲತೆ ಮತ್ತು ವ್ಯಾಕರಣವನ್ನೂ ಕಲಿಸಬಹುದು.

ವಾಕ್ಯಗಳ ರಚನೆ

ಮೊದಲಿಗೆ ವಾಕ್ಯಗಳ ರಚನೆ. ವಾಕ್ಯಗಳನ್ನು ಬರೆಯುವಾಗ ಪದಗಳ ಮಧ್ಯೆ ಒಂದು ಬೆರಳಿನಷ್ಟು ಸ್ಥಳ ಬಿಡಬೇಕು, ವಾಕ್ಯದ ಪ್ರಾರಂಭ ದೊಡ್ಡ ಅಕ್ಷರದಿಂದಲೇ ಆಗಬೇಕು ಮತ್ತು ವಾಕ್ಯದ ಕೊನೆಗೆ ಪೂರ್ಣ ವಿರಾಮ, ಪ್ರಶ್ನಾರ್ಥಕ ಚಿಹ್ನೆ, ಆಶ್ಚರ್ಯ ಸೂಚಕ ಚಿಹ್ನೆ.. ಈ ರೀತಿ ಯಾವುದಾದರೂ ಚಿಹ್ನೆ ಬರಬೇಕೆಂದು ತಿಳಿಸಲಾಗುತ್ತದೆ. ಕಥೆಯ ವಾಕ್ಯಗಳಲ್ಲಿ ಬರುವ ದೊಡ್ಡ ಅಕ್ಷರಗಳ (ಕ್ಯಾಪಿಟಲ್ ಲೆಟರ್) ಕೆಳಗೆ ಗೆರೆಗಳನ್ನೂ ಮಕ್ಕಳಿಂದಲೇ ಹಾಕಿಸುವ ಮೂಲಕ ಮತ್ತೆ ಮತ್ತೆ ವಾಕ್ಯಗಳ ಮೊದಲು ದೊಡ್ಡ ಅಕ್ಷರ ಬರಬೇಕು ಮತ್ತು ವಾಕ್ಯದ ಕೊನೆಗೆ ಪೂರ್ಣ ವಿರಾಮ ಚಿಹ್ನೆ ಬರೆಯಬೇಕೆನ್ನುವ ವಿಷಯವನ್ನು ಒತ್ತಿ ಹೇಳಲಾಗುತ್ತದೆ. ಈ ವಿಷಯ ಮಕ್ಕಳ ಮನಸ್ಸಿನಲ್ಲಿ ಮುದ್ರಿತವಾಗಿ ಬಿಡುತ್ತದೆ.

ನಾಮಪದಗಳು

ಎರಡನೆಯದಾಗಿ ಪ್ರಾಣಿಗಳ ಕಥೆ, ಉದಾಹರಣೆಗೆ ತೋಳ- ಕುರಿಮರಿ ಕಥೆ ಹೇಳುವ ಮೂಲಕ ಕಥೆಯಲ್ಲಿ ಬರುವ ನಾಮಪದಗಳ ಪರಿಚಯವನ್ನು ಮಾಡಲಾಗುತ್ತದೆ. ಕಥೆಯಲ್ಲಿ ಬರುವ ನಾಮಪದಗಳ ಕೆಳಗೆ ಗೆರೆ ಹಾಕಿ ಗುರುತಿಸಲು ಹೇಳಲಾಗುತ್ತದೆ. ನಾಲ್ಕು ಕಾಲಂ ಮಾಡಿ ಜನರ ಹೆಸರು, ಸ್ಥಳಗಳು, ಪ್ರಾಣಿಗಳು ಮತ್ತು ವಸ್ತುಗಳನ್ನು ಬರೆಯಲು ಹೇಳಲಾಗುತ್ತದೆ. ಕಥೆಯನ್ನು ಮತ್ತೆ ಮತ್ತೆ ಕೇಳಿದ್ದರಿಂದ ಮಕ್ಕಳಿಗೆ ವಾಕ್ಯಗಳು ಪರಿಚಿತ ಮತ್ತು ನಾಮಪದಗಳ ಗುರುತಿಸುವಿಕೆ ಸುಲಭವಾಗುತ್ತದೆ.

ಇದೇ ರೀತಿಯಲ್ಲಿ ಪ್ರತಿಯೊಂದು ಕಥೆ ಹೇಳುವಾಗಲೂ ಒಂದೊಂದು ವ್ಯಾಕರಣ ವಿಷಯಗಳನ್ನು ತಿಳಿಸಿ ಕೊಡಲಾಗುತ್ತದೆ. ಕ್ರಿಯಾಪದ, ಸರ್ವನಾಮ, ವಚನಗಳು, ಕಾಲಗಳು... ಈ ರೀತಿ ಒಂದೊಂದನ್ನೇ ಮತ್ತೆ ಮತ್ತೆ ವಿವರವಾಗಿ ತಿಳಿಸಿದಾಗ ಕಥೆಯ ಜೊತೆ ವ್ಯಾಕರಣವೂ ಮನದಲ್ಲಿ ಮೂಡುತ್ತದೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಪಾಠ ಹೇಳಿಕೊಡುವ ಆಶಾ ಇನ್ಫಿನೈಟ್ ಸಂಸ್ಥೆಯ ನಿರ್ದೇಶಕಿ ಕಾಂತಿ ಮೇಡಾ ಅವರು ‘ಮಕ್ಕಳಿಗೆ ವ್ಯಾಕರಣ ಬಹಳ ಮುಖ್ಯ, ಆದರೆ ಅವರು ಅದನ್ನು ಅರ್ಥ ಮಾಡಿಕೊಳ್ಳುವಂತೆ ಮಾಡಬೇಕೆಂದರೆ ಅವರಲ್ಲಿ ಆಸಕ್ತಿ ಮೂಡಿಸುವುದು ಬಹಳ ಮುಖ್ಯ. ಕಥೆಯ ಮೂಲಕ ಕಲಿಸುವುದು ನಿಜಕ್ಕೂ ಸುಲಭ, ಕಥೆಯ ಮೂಲಕ ಶಿಕ್ಷಣ ಬಹಳ ಪುರಾತನವಾದುದು ಮತ್ತು ಜನಪ್ರಿಯವೂ ಹೌದು. ಕಷ್ಟಕರವೆನಿಸಿಕೊಂಡ ವಿಷಯಗಳನ್ನು ಕಥೆಗಳ ಮೂಲಕ ತಿಳಿಸುವುದು ಸಾಧ್ಯವಿದೆ ಎನ್ನುವುದಕ್ಕೆ ಪಂಚತಂತ್ರ ಬಹಳ ಒಳ್ಳೆಯ ಉದಾಹರಣೆ’ ಎನ್ನುತ್ತಾರೆ .

‘ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕೆಂದರೆ ಅವರಿಗೆ ಕಥೆಗಳನ್ನು ಹೇಳಿ. ಅವರು ಇನ್ನೂ ಹೆಚ್ಚು ಬುದ್ಧಿವಂತರಾಗಬೇಕೆಂದರೆ ಇನ್ನೂ ಹೆಚ್ಚು ಹೆಚ್ಚು ಕಥೆಗಳನ್ನು ಹೇಳಿ’ ಎಂದು ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರ ಹೇಳಿಕೆಯನ್ನು ಇಲ್ಲಿ ಪ್ರಸ್ತಾಪಿಸಬಹುದು.

ಕಥೆಯಿಂದ ಭಾಷೆಯ ತಳಪಾಯ

ಇಡೀ ವಿಶ್ವದ ಹಲವಾರು ಸಂಸ್ಕೃತಿಗಳು ಈಗಲೂ ಕಥೆ ಹೇಳುವ ಕಲೆಯನ್ನು ಶಿಕ್ಷಣದ ಮುಖ್ಯ ಸಾಧನವನ್ನಾಗಿ ಬಳಸುತ್ತಿವೆ. ಮಕ್ಕಳಿಗೆ ಕಥೆ ಎಂದರೆ ಅದೇನೋ ಮೋಹ, ಅವರು ಕಥೆಯನ್ನು ಕೇಳಿದಾಗ ಅವರಲ್ಲಿ ಭಾಷೆಯ ಗಟ್ಟಿಯಾದ ತಳಪಾಯವೇ ಅಲ್ಲಿ ಮೂಡಿ ಬಿಡುತ್ತದೆ. ಹೇಳುವ ವಿಷಯವನ್ನು ಸುಮ್ಮನೆ ಹೇಳಿದಾಗ ಮೂಡುವ ಪರಿಣಾಮವೇ ಬೇರೆ, ಆದರೆ ಕಥೆಯ ಮೂಲಕ ಆಗುವ ಪರಿಣಾಮವೇ ಬೇರೆ. ಕಥೆ ಅವರಲ್ಲಿ ಭಾವನಾ ತರಂಗಗಳನ್ನು ಎಬ್ಬಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT