ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನಿಂದ ಕಂಗೊಳಿಸುವ ಹಂದಿಕೇರಾ ಶಾಲೆ

‘ನಲಿ–ಕಲಿ’ ಸಮರ್ಪಕ ಅನುಷ್ಠಾನ l ಮಾದರಿ ಶಾಲೆಗೆ ಹಲವು ಪ್ರಶಸ್ತಿಗಳ ಗರಿ
Last Updated 18 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ಘೋಡವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂದಿಕೇರಾ ಬಡಾವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ‘ನಲಿ–ಕಲಿ’ ಯೋಜನೆಯನ್ನು ಸಮರ್ಪಕ ಅನುಷ್ಠಾನಗೊಳಿಸುವ ಮೂಲಕ ಮತ್ತೊಮ್ಮೆ ಜಿಲ್ಲೆಯಲ್ಲಿ ಹೆಸರು ಪಡೆದಿದೆ.

ಕಳೆದ ತಿಂಗಳು (ಸೆ.12) ನಡೆದ ರಾಜ್ಯ ಮಟ್ಟದ ನಲಿ–ಕಲಿ ಸಮೀಕ್ಷೆಯಲ್ಲಿ ತಾಲ್ಲೂಕಿನಿಂದ ಮೂರು ಶಾಲೆಗಳು ಆಯ್ಕೆಯಾಗಿದ್ದು, ಅದರಲ್ಲಿ ಈ ಶಾಲೆಯು ಒಂದಾಗಿದೆ. ₹5,000 ನಗದು ಬಹುಮಾನದೊಂದಿಗೆ ಉತ್ತಮ ನಲಿ–ಕಲಿ ಶಾಲೆ ಪ್ರಶಸ್ತಿಗೂ ಭಾಜನವಾಗಿದೆ.

2017ರಲ್ಲಿ ಬೀದರ್ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಳದಿ ಶಾಲೆ ಪ್ರಶಸ್ತಿ ಮತ್ತು 2018ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ತಾಲ್ಲೂಕು ಮಟ್ಟದ ಉತ್ತಮ ಶಾಲಾ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.ಸುಮಾರು 1.3 ಎಕರೆ ವಿಶಾಲವಾದ ಪ್ರದೇಶದಲ್ಲಿರುವ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ 45 ವಿದ್ಯಾರ್ಥಿಗಳು, 42 ವಿದ್ಯಾರ್ಥಿನಿಯರು ಸೇರಿ ಒಟ್ಟು 87 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನಾಲ್ವರು ಶಿಕ್ಷಕರು ಇದ್ದಾರೆ. ಸುಸಜ್ಜಿತ ಐದು ಕೊಠಡಿಗಳು ಇವೆ.

ಶಾಲೆಯ ಆವರಣದ ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ನೇರಳೆ, ನಿಂಬೆ, ಸಾಗವಾನಿ, ಅಂಜೂರ, ನುಗ್ಗೆಕಾಯಿ, ಪುದೀನಾ, ಕಾಜು ಗಿಡ, ಕರಿಬೇವು, ಆಲದಮರ, ನೆಲ್ಲಿಕಾಯಿ, ಚಿಕ್ಕು, ಅರಳಿಮರ, ಮಾವಿನಮರ, ಗುಲಾಬಿ, ಮಲ್ಲಿಗೆ ಸೇರಿದಂತೆ ಸುಮಾರು 200 ವೃಕ್ಷಗಳನ್ನು ಬೆಳೆಸಲಾಗಿದ್ದು, ಶಾಲೆಯು ಹಸಿರು ಹೊದ್ದು ನಿಂತಿದೆ. ಮಕ್ಕಳಿಗೆ 1ನೇ ತರಗತಿಯಿಂದ ನಲಿ–ಕಲಿ ಮೂಲಕ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಯೋಗಾಭ್ಯಾಸ, ಆರೋಗ್ಯ ಕಾರ್ಯಕ್ರಮ, ಪ್ರತಿ ಶನಿವಾರ ಸಾಮೂಹಿಕ ಕವಾಯತು ಸೇರಿ ಪರಿಸರ ಸಂರಕ್ಷಣೆ, ಕಲೆ, ಸಾಹಿತ್ಯ, ಸಂಸ್ಕೃತಿ, ಆಚರಣೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಕ್ರೀಡಾ ಚಟುವಟಿಕೆಗಳಿಗಾಗಿ ವಿಶಾಲವಾದ ಆಟದ ಮೈದಾನ ಇದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಿದೆ. ಶಾಲೆಯಲ್ಲಿಯೇ ಕೊಳವೆ ಬಾವಿ, ನಳದ ಸಂಪರ್ಕ ಇರುವುದರಿಂದ ನೀರಿನ ಸಮಸ್ಯೆ ಇಲ್ಲ. ಹಸಿರು ವನ ರಕ್ಷಣೆಗೆ ಕಾಂಪೌಂಡ್‌ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.‘ನಮ್ಮ ಶಾಲೆಯು ಈವರೆಗೆ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಶಾಲೆಯ 14 ಜನ ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರವೇಶಾತಿ ಗಿಟ್ಟಿಸಿಕೊಂಡಿರುವುದು ಸಂತಸ ತಂದಿದೆ’ ಎಂದು ಮುಖ್ಯಶಿಕ್ಷಕ ಶ್ರೀಕಾಂತ ಸೂಗಿ ಹರ್ಷ ವ್ಯಕ್ತಪಡಿಸಿದರು.

‘ಶಾಲೆಯಲ್ಲಿ ಕಲಿಕೆಯ ಜತೆಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಬೇಸಿಗೆ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆಯ ಕಿರು ಉದ್ಯಾನದಲ್ಲಿನ ಗಿಡಗಳ ನೆರಳಲ್ಲಿ ಕುಳಿತು ಅಭ್ಯಾಸ ಮಾಡಲು ಬಹಳ ಅನುಕೂಲವಾಗಿದೆ’ ಎಂದು ಮುಖ್ಯಶಿಕ್ಷಕ ಶ್ರೀಕಾಂತ ಸೂಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT