ಯುವ ಜನರಿಂದ ‘ಹೈಟೆಕ್‌’ ಸ್ಪರ್ಶ

7

ಯುವ ಜನರಿಂದ ‘ಹೈಟೆಕ್‌’ ಸ್ಪರ್ಶ

Published:
Updated:
Prajavani

ದಕ್ಷಿಣ ಕನ್ನಡದ ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 234ರ ಮಣಿಹಳ್ಳದಿಂದ ಎಡಕ್ಕೆ 2 ಕಿ.ಮೀ. ಸಾಗಿದರೆ ಎಡಭಾಗದಲ್ಲಿ ಗುಡ್ಡದ ಮೇಲೆ ಬಹುಮಹಡಿಯ ಸುಂದರ ಕಟ್ಟಡ ಗೋಚರಿಸುತ್ತದೆ. ಅದು ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಖಾಸಗಿ ಶಾಲೆಯನ್ನು ಮೀರಿಸುವಂತಹ ಸುಸಜ್ಜಿತ ಕಟ್ಟಡ, ವಿಶಾಲವಾದ ಆಟದ ಮೈದಾನ, ಮೂರು ಶಾಲಾ ಬಸ್‌, ಕೈತೋಟ, ಹೈಟೆಕ್ ಶೌಚಾಲಯ, ಸ್ಮಾರ್ಟ್‌ಕ್ಲಾಸ್‌ನಂತಹ ಸೌಲಭ್ಯಗಳು. ಯೋಗ, ನೃತ್ಯ, ಸಂಗೀತ, ಕರಾಟೆ, ಕಂಪ್ಯೂಟರ್‌, ಕೃಷಿ ತರಬೇತಿ ಉಚಿತವಾಗಿ ಕಲಿಸುತ್ತಿದ್ದಾರೆ. ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಕನ್ನಡ ಪ್ರಥಮ ಭಾಷೆಯನ್ನಾಗಿ, ಉಳಿದ ವಿಷಯಗಳನ್ನು ಆಂಗ್ಲ ಭಾಷೆಯಲ್ಲಿ ಬೋಧಿಸಲಾಗುತ್ತದೆ. ಎಲ್‌ಕೆಜಿ, ಯುಕೆಜಿ ಮಾದರಿಯಲ್ಲಿ ಪೂರ್ವ ಪ್ರಾಥಮಿಕ 1, ಪೂರ್ವ ಪ್ರಾಥಮಿಕ 2 ತರಗತಿಯನ್ನು ಆರಂಭಿಸಲಾಗಿದೆ.

ಮೂರು ವರ್ಷದ ಹಿಂದೆ

42 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಸಾವಿರಾರು ಮಂದಿ ವಿದ್ಯಾಭ್ಯಾಸ ಮಾಡಿದ್ದಾರೆ. ಎರಡು ದಶಕಗಳ ಹಿಂದೆ 250ಕ್ಕೂ ಅಧಿಕ ಮಕ್ಕಳು ಇಲ್ಲಿ ಕಲಿಯುತ್ತಿದ್ದರು. ಆದರೆ, ಆಂಗ್ಲ ಮಾಧ್ಯಮದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಿದ ಕಾರಣ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು. ಬಡ ಕುಟುಂಬದ 30 ಮಕ್ಕಳು ಇಲ್ಲಿ ಕಲಿಯುತ್ತಿದ್ದರು. ಕಟ್ಟಡ ಶಿಥಿಲವಾಗಿದ್ದು, ಶಾಲೆ ಮುಚ್ಚುವ ಹಂತದಲ್ಲಿತ್ತು.

ಈ ಸಂದರ್ಭದಲ್ಲಿ ಶಾಲೆಗೆ ಆಕಸ್ಮಿಕವಾಗಿ ಭೇಟಿ ನೀಡಿದ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಗ್ರಾಮದ ಕರೆಂಕಿ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್‌ ಅಧ್ಯಕ್ಷ ಪ್ರಕಾಶ್‌ ಅಂಚನ್ ಶಾಲೆಯ ಪರಿಸ್ಥಿತಿ ಕಂಡು ಮರುಗಿದರು. ತಮ್ಮ ಸಂಘಟನೆಯಿಂದ ಶಾಲೆಯನ್ನು ದತ್ತು ಪಡೆದು, ಮರುಚೈತನ್ಯ ನೀಡಲು ಪಣತೊಟ್ಟರು. ಕ್ಲಬ್‌ನ ನೂರು ಯುವಕರ ತಂಡ ಶಾಲೆಯ ಪುನಶ್ಚೇತನದ ಜತೆಗೆ, ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೂ ಅನುಕೂಲ ಕಲ್ಪಿಸಲು ಮುಂದಾದರು.

ತಮ್ಮ ಮಕ್ಕಳನ್ನೇ ಶಾಲೆಗೆ..

ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೋಧನೆಗೆ ಅನುಮತಿ ಕೇಳಿದಾಗ ಅಧಿಕಾರಿಗಳಿಂದ ಸ್ಪಂದನೆ ಸಿಗಲಿಲ್ಲ. ಕೊನೆಗೆ ಪ್ರಕಾಶ್‌ ಅಂಚನ್‌ ತಮ್ಮ ಇಬ್ಬರು ಪುತ್ರರನ್ನು ಮತ್ತು ಸಂಘಟನೆಯ ಸದಸ್ಯರ 26 ಮಕ್ಕಳನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿಯೇ ಖಾಸಗಿ ಶಾಲೆಯಿಂದ ಬಿಡಿಸಿ, ಈ ಶಾಲೆಗೆ ಸೇರಿಸಿದರು. ಮಾತ್ರವಲ್ಲ, ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದುದರಿಂದ ಸಂಘಟನೆಯಿಂದಲೇ ಅತಿಥಿ ಶಿಕ್ಷಕರನ್ನು ನೇಮಿಸಿ, ಸಂಭಾವನೆ ನೀಡಲು ಆರಂಭಿಸಿದರು.

ಹಂತಹಂತವಾಗಿ ಕಟ್ಟಡ, ಶಾಲಾ ಬಸ್‌, ಸ್ಮಾರ್ಟ್‌ ಕ್ಲಾಸ್‌ನಂತಹ ಸೌಲಭ್ಯಗಳನ್ನು ನೀಡಲು ಮುಂದಾದರು. ಪರಿಣಾಮವಾಗಿ ಮೂರು ವರ್ಷದಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಯಿತು. 2016ರಲ್ಲಿ ಶಾಲೆಯಲ್ಲಿ 8ನೇ ತರಗತಿಯನ್ನೂ ಆರಂಭಿಸಲಾಯಿತು. 2016–17ರಲ್ಲಿ 138, 2017–18ರಲ್ಲಿ 240, 2018–19ರಲ್ಲಿ 328 ಹೀಗೆ ಮಕ್ಕಳ ಸಂಖ್ಯೆ ಏರಿಕೆಯಾಗಿದೆ. ಈ ವರ್ಷ ಪೂರ್ವ ಪ್ರಾಥಮಿಕ 1 ಮತ್ತು 2ರಲ್ಲಿ ಬರೋಬ್ಬರಿ 146 ಮಕ್ಕಳಿದ್ದಾರೆ. ಹೀಗೆ ಒಟ್ಟು 474 ಮಕ್ಕಳು ಇಲ್ಲಿದ್ದಾರೆ.

‘2015ರಲ್ಲಿ ನಾನು ಫ್ರೆಂಡ್ಸ್ ಕ್ಲಬ್‌ ಅಧ್ಯಕ್ಷನಾದಾಗ ದಡ್ಡಲಕಾಡು ಶಾಲೆಯಲ್ಲಿ ಕ್ಲಬ್‌ನಿಂದ ‘ನಮ್ಮ ಆದ್ಯತೆ– ನಮ್ಮ ಸ್ವಚ್ಛತೆ’ ಎಂಬ ಕಾರ್ಯಕ್ರಮ ಮಾಡಿದ್ದೆವು. ಆ ವೇಳೆ ಶಾಲೆಯ ಸ್ಥಿತಿ ಕಂಡು ಬೇಸರವಾಯಿತು. ನಾನು ಕಲಿತ ಶಾಲೆಗೆ ಇಂಥ ಸ್ಥಿತಿ ಬರಬಾರದು. ನನಗಂತೂ ಉನ್ನತ ಶಿಕ್ಷಣ ಪಡೆಯಲಾಗಲಿಲ್ಲ. ನಮ್ಮ ಊರಿನ ಮಕ್ಕಳು ಅದರಿಂದ ವಂಚಿತವಾಗಬಾರದು ಎಂಬ ಯೋಚಿಸಿ, ಸಂಘಟನೆ ಮೂಲಕ ಶಾಲೆ ಅಭಿವೃದ್ಧಿಪಡಿಸಲು, ದತ್ತು ಪಡೆಯುವ ನಿರ್ಧಾರ ಮಾಡಿದೆವು. ಸಂಘದ ಸದಸ್ಯರು ಬೆನ್ನೆಲುಬಾಗಿ ನಿಂತರು. ಹೀಗಾಗಿ, ಮೂರು ವರ್ಷದಲ್ಲಿ ಇಷ್ಟು ಬದಲಾವಣೆ ಸಾಧ್ಯವಾಯಿತು’ ಎನ್ನುತ್ತಾರೆ ಪ್ರಕಾಶ್‌.

ಮೊದಲು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ತೆರವುಗೊಳಿಸಿ ₹ 3.20 ಕೋಟಿ ವೆಚ್ಚದ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿದರು. ಸರ್ಕಾರದ ಅನುದಾನ ಬಯಸದೆ ಮೂರು ಹಂತಗಳಲ್ಲಿ ಎರಡು ಮಹಡಿಯ ಕಟ್ಟಡ ನಿರ್ಮಿಸಲು ನಿರ್ಧರಿಸಿ, ಕೆಲಸಕ್ಕೆ ಇಳಿದೇ ಬಿಟ್ಟರು. ‘ಶಿಕ್ಷಣ ಪ್ರೇಮಿಗಳ ಸಹಕಾರದಿಂದ ₹ 1.20 ಕೋಟಿ ವೆಚ್ಚದಲ್ಲಿ ನೆಲಮಹಡಿಯ 8 ಕೊಠಡಿಗಳು ನಿರ್ಮಾಣವಾದವು. ಏ. 22, 2017 ರಂದು ಲೋಕಾರ್ಪಣೆಯಾಯಿತು.

ಈ ಕಟ್ಟಡದಲ್ಲಿ ಮುಂಬೈನ ಆಲ್ ಕಾರ್ಗೊ ಸಂಸ್ಥೆ ಮುಖ್ಯಸ್ಥ ಶಶಿಕಿರಣ್‌ ಶೆಟ್ಟಿ ಅವರು ವಿದ್ಯಾರ್ಥಿನಿಯರಿಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಎರಡನೇ ಹಂತದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಮೊದಲನೇ ಮಹಡಿಯಲ್ಲಿ 16 ಕೊಠಡಿಗಳನ್ನು ಕಟ್ಟಲಾಗಿದೆ. ಇದರ ಶೌಚಾಲಯಕ್ಕೆ ಎಂಆರ್‌ಪಿಎಲ್‌ ಆರ್ಥಿಕ ನೆರವು ನೀಡಿದೆ’ ಎಂದು ವಿವರಿಸಿದರು ಪ್ರಕಾಶ್. ಫ್ರೆಂಡ್ಸ್‌ ಕ್ಲಬ್‌ನಿಂದ ಶಾಲೆಗೆ ಮೂರು ಬಸ್‌ಗಳನ್ನು ನೀಡಿದ್ದಾರೆ. 300 ಮಕ್ಕಳು ಬಸ್‌ನಲ್ಲಿ ಓಡಾಡುತ್ತಿದ್ದಾರೆ.

ಸ್ವಯಂ ಪ್ರೇರಿದ ದಾಖಲಾತಿ

ಶಾಲೆ ಪುನಶ್ಚೇತನಗೊಂಡ ಮೇಲೂ, ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಯಾರೂ ಮನವಿ ಮಾಡಿಲ್ಲ. ಈಗಿರುವ ಶಾಲೆಯ ವ್ಯವಸ್ಥೆಯನ್ನು ನೋಡಿ ಪೋಷಕರೇ ಮಕ್ಕಳನ್ನು ತಂದು ಸೇರಿಸುತ್ತಿದ್ದಾರೆ. ‘ಒಂದು ಪೈಸೆ ಶುಲ್ಕವಿಲ್ಲ. ಆದರೆ, ಕೆಲ ಪೋಷಕರು ಶಾಲೆಯ ಅಭಿವೃದ್ಧಿಗಾಗಿ ತಮ್ಮ ನೀಡಿದ ದೇಣಿಗೆಯನ್ನು ಸ್ವೀಕರಿಸಿದ್ದೇವೆ. ದಾನಿಗಳ ಸಹಕಾರದಿಂದ ಇಷ್ಟೆಲ್ಲ ಸೌಲಭ್ಯ ಕಲ್ಪಿಸಲು ಸಾಧ್ಯವಾಯಿತು’ ಎಂದು ಅವರು ದಾನಿಗಳ ನೆರವನ್ನು ಸ್ಮರಿಸುತ್ತಾರೆ.

ಶಾಲೆಯಲ್ಲಿ ಸೌಲಭ್ಯವಷ್ಟೇ ಅಲ್ಲ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಿಗೆ ಸರ್ಕಾರದ ಸಮವಸ್ತ್ರದ ಜತೆಗೆ, ಪ್ರಕಾಶ್ ಅಂಚನ್‌ ಅವರು, ಪ್ರತಿವರ್ಷ ಒಂದು ಜತೆ ಸಮವಸ್ತ್ರವನ್ನು ಎಲ್ಲರಿಗೂ ನೀಡುತ್ತಾರೆ. ಖಾಸಗಿ ಶಾಲೆಗಿಂತ ಹೆಚ್ಚಿನ ಸೌಲಭ್ಯ ಇಲ್ಲಿ ಉಚಿತವಾಗಿ ಮಕ್ಕಳಿಗೆ ಸಿಗುತ್ತಿದೆ. ‘ಇದೀಗ ನಮ್ಮ ಶಾಲೆಯಲ್ಲಿ ಪ್ರವೇಶಕ್ಕೆ ಭಾರಿ ಪೈಪೋಟಿ ನಡೆಯುತ್ತದೆ. ಕಳೆದ ವರ್ಷ ಅನೇಕ ಮಕ್ಕಳಿಗೆ ಪ್ರವೇಶಾವಕಾಶವಿಲ್ಲದೇ ವಾಪಸ್‌ ಕಳಿಸಿದ್ದೇವೆ. ಮುಂದಿನ ವರ್ಷಕ್ಕೆ ಈಗಲೇ ಅವಕಾಶ ಕೇಳಿಕೊಂಡು ಪೋಷಕರು ಬರುತ್ತಿದ್ದಾರೆ’ ಎಂದು ಹೇಳುತ್ತಾರೆ ಶಾಲೆಯ ಮುಖ್ಯಶಿಕ್ಷಕ ಮೌರಿಸ್ ಡಿಸೋಜ.

ಸಂಪರ್ಕಕ್ಕೆ: ಪ್ರಕಾಶ್‌ ಅಂಚನ್‌– 9886543840, ಮೌರಿಸ್ ಡಿಸೋಜ– 9480363951

**

ಜನವರಿ 5, 6ರಂದು ಶಿಕ್ಷಣ ಹಬ್ಬ

ದಡ್ಡಲಕಾಡು ಸರ್ಕಾರಿ ಶಾಲೆಯಲ್ಲಿ ಇದೇ 5 ಮತ್ತು 6 ರಂದು ಶೈಕ್ಷಣಿಕ ಹಬ್ಬ ಆಯೋಜಿಸಲಾಗಿದೆ. ಈ ಹಬ್ಬದ ಜತೆಗೆ, ಶಾಲೆಯ ಮೇಲಂತಸ್ಥಿನ ಕಟ್ಟಡವನ್ನು ಉದ್ಘಾಟಿಸಲಾಗುತ್ತಿದೆ. ಅದೇ ದಿನ ಶಾಲಾ ವಾರ್ಷಿಕೋತ್ಸವವೂ ಇದೆ. 5 ರಂದು ಮಧ್ಯಾಹ್ನ 2.30ಕ್ಕೆ ರಾಜ್ಯಪಾಲರು, ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಕಟ್ಟಡದ ಉದ್ಘಾಟನೆ ನಡೆಯಲಿದೆ. ಸರ್ಕಾರಿ ಶಾಲೆ ಉಳಿಸುವುದು ಮತ್ತು ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದ ಗೋಷ್ಠಿಗಳಿವೆ.

**

ಇದು ನಮಗೆ ಶಾಲೆಯಲ್ಲ, ದೇಗುಲವಿದ್ದಂತೆ. ಇಲ್ಲಿಗೆ ಕೈಮುಗಿದು ಬರುತ್ತೇವೆ. ಇಂತಹ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ನಾವೇ ಪುಣ್ಯವಂತರು.
–ಕೀರ್ತನ್‌, 8ನೇ ತರಗತಿ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !