ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯಾಶಾಸ್ತ್ರದಲ್ಲಿ ಉನ್ನತ ಅಧ್ಯಯನ

ಅಕ್ಷರ ಗಾತ್ರ

ನಾನು ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದಿದ್ದೇನೆ. ನನ್ನ ಆಯ್ಕೆಯ ವಿಷಯಗಳು- ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ. ಈ ವಿಷಯಗಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿದ್ದೇನೆ. ನನಗೆ ಸಂಖ್ಯಾಶಾಸ್ತ್ರ (statistics) ವಿಷಯದಲ್ಲಿ ಆಸಕ್ತಿ ಇದೆ. ಆದರೆ ಈ ವಿಷಯದಲ್ಲಿ ಹೇಗೆ ಮುಂದುವರಿಯಬೇಕು ಎಂದು ತಿಳಿದಿಲ್ಲ. ಈ ವಿಷಯದಲ್ಲಿ ನನ್ನ ಶಿಕ್ಷಣವನ್ನು ಮುಂದುವರಿಸಲು ಸಲಹೆಗಳನ್ನು ನೀಡಿ. ಯಾವ ಕೋರ್ಸ್‌ಗಳಿವೆ, ಅವುಗಳಿ ಗೆ ಬೇಕಾದ ಅರ್ಹತೆ ಮತ್ತು ಉದ್ಯೋಗ ಅವಕಾಶಗಳನ್ನು ತಿಳಿಸಿ.

–ಅಭಿಷೇಕ್, ಬೆಂಗಳೂರು

ಅಭಿಷೇಕ್, ನೀವು ತಿಳಿಸಿರುವಂತೆ ಪಿಯುಸಿಯಲ್ಲಿ ನೀವು ಕಲಿಯುತ್ತಿರುವ ವಿಷಯಗಳ ಆಧಾರದ ಮೇಲೆ ನೀವು ಧಾರಾಳವಾಗಿ ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ಮುಂದುವರಿಯಬಹುದು. ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ಮುಂದುವರಿಯಲು ಪಿಯುಸಿ ನಂತರ ಸಂಖ್ಯಾಶಾಸ್ತ್ರ ವಿಷಯ ಇರುವ ಪದವಿಯನ್ನು ಓದಬೇಕು. ಸಾಮಾನ್ಯವಾಗಿ ಹೆಚ್ಚಿನ ಕಾಲೇಜುಗಳಲ್ಲಿ ಸಂಖ್ಯಾಶಾಸ್ತ್ರವನ್ನು ಇತರೆ ವಿಷಯಗಳ ಜೊತೆ ಬಿಎಸ್‌ಸಿ ಅಥವಾ ಬಿಕಾಂ ಪದವಿಯ ಮುಖಾಂತರ ಕಲಿಯಬೇಕಾಗುತ್ತದೆ. ಹೆಚ್ಚಾಗಿ ಅರ್ಥಶಾಸ್ತ್ರ, ಗಣಿತದ ಜೊತೆಗಿನ ಪದವಿ ಕೋರ್ಸ್‌ಗಳು ಇರುತ್ತವೆ. ಪದವಿಯ ನಂತರ ಎಂಎಸ್‌ಸಿ ಸಂಖ್ಯಾಶಾಸ್ತ್ರ ಓದಬೇಕು. ಒಳ್ಳೆಯ ಸಂಸ್ಥೆಯಲ್ಲಿ ಪದವಿ ಮುಗಿಸುವುದು ನಿಮ್ಮ ಕಲಿಕೆ ಮತ್ತು ಉದ್ಯೋಗದ ದೃಷ್ಟಿಯಿಂದ ಒಳ‍್ಳೆಯದು. ಇಂಡಿಯನ್ ಸ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌, ಬೆಂಗಳೂರು, ಬೆಂಗಳೂರಿನ ಕ್ರೈಸ್ಟ್ ಕಾಲೇಜು, ಜೈನ್ ಯೂನಿವರ್ಸಿಟಿ, ವಿಜಯ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಮತ್ತು ಇತರ ಕಾಲೇಜುಗಳಲ್ಲಿ ಪ್ರಯತ್ನಿಸಬಹುದು.

ಉದ್ಯೋಗ ಅವಕಾಶಗಳು: ಭಾರತೀಯ ಸಂಖ್ಯಾಶಾಸ್ತ್ರ ಸೇವೆ, ಭಾರತೀಯ ಅರ್ಥಶಾಸ್ತ್ರ ಸೇವೆಗಳಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಗಳನ್ನು ಬರೆದು ಸರ್ಕಾರಿ ಸೇವೆಗೆ ಸೇರಬಹುದು. ಸರ್ಕಾರಿ ಸಂಸ್ಥೆಗಳಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌, ಬೆಂಗಳೂರು, ದೆಹಲಿ, ಕೊಲ್ಕತ್ತಾದಲ್ಲೂ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸಬಹುದು. ಖಾಸಗಿ ಸಂಸ್ಥೆಗಳಲ್ಲಿ ಹೇರಳವಾದ ಉದ್ಯೋಗ ಅವಕಾಶಗಳಿದ್ದು ಶೈಕ್ಷಣಿಕ ಸಂಶೋಧನೆ, ಮಾರುಕಟ್ಟೆ ಸಂಶೋಧನೆ, ಜನಸಂಖ್ಯೆ ಕುರಿತ ಅಧ್ಯಯನ, ಆರೋಗ್ಯ, ಅಪರಾಧ, ಸಾಮಾಜಿಕ ಜಾಲತಾಣ ಮತ್ತು ಆನ್‌ಲೈನ್‌ ಮಾರುಕಟ್ಟೆ ಮತ್ತು ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸಂಖ್ಯಾಶಾಸ್ತ್ರ ತಜ್ಞರಾಗಿ, ವಿಶ್ಲೇಷಕರಾಗಿ, ರಿಸರ್ಚ್ ಅಸೋಸಿಯೇಟ್, ಅಂಕಿ- ಅಂಶ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಬಹುದು. ಸಂಖ್ಯಾಶಾಸ್ತ್ರದಲ್ಲಿ ಪಿಎಚ್‌.ಡಿ ಓದಿದರೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿಯೂ ಕೆಲಸ ನಿರ್ವಹಿಸಬಹುದು.

ನಿಮ್ಮ ಕಾಲೇಜು ಶಿಕ್ಷಣದ ಜೊತೆಗೆ ಸಂಖ್ಯಾಶಾಸ್ತ್ರದ ಕುರಿತಾದ ವೈಯಕ್ತಿಕ ಆಸಕ್ತಿ ನಿಮ್ಮನ್ನು ಹೆಚ್ಚು ಸಶಕ್ತರನ್ನಾಗಿ ಮಾಡುತ್ತದೆ. ನಿಮ್ಮ ಬಳಿ ಇನ್ನೂ ಐದಾರು ವರ್ಷಗಳ ಕಾಲ ಹೇರಳ ಸಮಯ ಇರುವುದರಿಂದ ಅಂತರ್ಜಾಲ ಅಥವಾ ನಿಮ್ಮ ಕಾಲೇಜಿನ ಗ್ರಂಥಾಲಯದ ಸಹಾಯದಿಂದ ಸಂಖ್ಯಾಶಾಸ್ತ್ರದ ಕುರಿತ ಆಸಕ್ತಿಕರ ವಿಷಯಗಳನ್ನು ಓದಿ. ಸಂಖ್ಯಾಶಾಸ್ತ್ರ ಕ್ಷೇತ್ರವನ್ನು ಆಸಕ್ತಿದಾಯಕ ಮತ್ತು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವಂತೆ ಸ್ವಾರಸ್ಯಕರವಾಗಿ ಮಾಡಿದ ಸಂಖ್ಯಾಶಾಸ್ತ್ರಜ್ಞ ಹನ್ಸ್ ರೋಸಲಿಂಗ್ ಕುರಿತು ತಿಳಿಯಿರಿ ಮತ್ತು ಯೂಟ್ಯೂಬ‌್‌ನಲ್ಲಿ ಅವರ ವಿಡಿಯೊಗಳನ್ನು ವೀಕ್ಷಿಸಿ. ಸಂಖ್ಯಾಶಾಸ್ತ್ರವನ್ನು ಬಳಸಿಕೊಂಡು ಶಿಕ್ಷಣ, ವ್ಯವಹಾರ, ವಿಜ್ಞಾನ ಅಥವಾ ನಿಮ್ಮ ಆಸಕ್ತಿಕರ ಕ್ಷೇತ್ರದಲ್ಲಿ ಮಾಡಲಾಗಿರುವ ಸಂಶೋಧನೆಗಳ ಕುರಿತು ಓದಿ. ಇದನ್ನು ಹಂತಹಂತವಾಗಿ ಮಾಡಿದಾಗ ನಿಮ್ಮ ಕ್ಷೇತ್ರದ ಕುರಿತು ನಿಮ್ಮ ಕ್ಷಮತೆ ಹೆಚ್ಚುತ್ತದೆ ಹಾಗೂ ನೀವು ಒಳ್ಳೆಯ ಸಂಖ್ಯಾಶಾಸ್ತ್ರ ತಜ್ಞರಾಗಿಯೂ ಬೆಳೆಯಬಹುದು.

ನಾನು ಪಿಯುಸಿಯಲ್ಲಿ ಆರ್ಟ್ಸ್‌ ಓದಿದ್ದೇನೆ. ಕನ್ನಡ ಮಾಧ್ಯಮ. ಬಿ.ಎ., ಬಿ.ಎಡ್‌. ಮಾಡುವ ಆಸೆ ಇತ್ತು. ಆದರೆ ಮನೆಯಲ್ಲಿ ಬಿಕಾಂ ಮಾಡು ಎಂದು ಹೇಳಿದ್ದಕ್ಕೆ ಸೇರಿಕೊಂಡೆ. ಆದರೆ ಅನಿವಾರ್ಯವಾಗಿ ಕೊನೆಯ ವರ್ಷ ಓದಲಿಲ್ಲ. ಈಗ ಒಂದು ಕಡೆ ಉದ್ಯೋಗ ಮಾಡುತ್ತಿದ್ದೇನೆ. ಪ್ರಸಕ್ತ ಬಿ.ಎಡ್‌. ಓದಬೇಕು ಎನಿಸುತ್ತಿದೆ. ಇದಕ್ಕೆ ನಿಮ್ಮ ಮಾರ್ಗದರ್ಶನ ಬೇಕು.

–ಹೆಸರು, ಊರು ಬೇಡ

ಅನಿವಾರ್ಯ ಕಾರಣದಿಂದ ಕಾಲೇಜು ಬಿಡುವ ಸಂದರ್ಭ ಬಂದಿದ್ದರೂ ಈಗ ನೀವು ಶಿಕ್ಷಣವನ್ನು ಮುಂದುವರಿಸಲು ಮತ್ತು ನಿಮ್ಮ ಆಸಕ್ತಿಯ ಕ್ಷೇತ್ರಕ್ಕೆ ಹೋಗಲು ನಿರ್ಧರಿಸಿರುವುದು ಸಂತೋಷದ ವಿಷಯ. ಬಿ.ಎಡ್. ಶಿಕ್ಷಣ ಪಡೆಯಲು ಪದವಿ ಪಡೆದಿರುವುದು ಕಡ್ಡಾಯವಾದ್ದರಿಂದ ಮೊದಲಿಗೆ ನೀವು ನಿಮ್ಮ ಪದವಿ ಶಿಕ್ಷಣವನ್ನು ಮುಂದುವರಿಸಿ ಪೂರ್ಣಗೊಳಿಸಬೇಕು. ನಂತರ ಎರಡು ವರ್ಷದ ಬಿ.ಎಡ್. ಪದವಿಯನ್ನು ಮಾಡಬೇಕು.

ಮೊದಲನೆಯ ಆಯ್ಕೆ- ನಿಮ್ಮ ಬಿಕಾಂ ಶಿಕ್ಷಣವನ್ನು ಮುಂದುವರಿಸಲು ಆಸಕ್ತಿ ಇದ್ದಲ್ಲಿ ಅದನ್ನೇ ಪೂರ್ಣಗೊಳಿಸಿ. ನಂತರ ಬಿ.ಎಡ್. ಶಿಕ್ಷಣಕ್ಕೆ ದಾಖಲಾಗಬಹುದು. ಸಾಮಾನ್ಯವಾಗಿ ಒಬ್ಬ ವಿದ್ಯಾರ್ಥಿಗೆ ಪದವಿ ಪೂರೈಸಲು 6 ವರ್ಷಗಳ ಕಾಲ ಸಮಯವಿದ್ದು ಒಂದು ವೇಳೆ ನೀವು ಪದವಿಗೆ ದಾಖಲಾಗಿ 6 ವರ್ಷಗಳಿಗಿಂತ ಕಡಿಮೆ ಆಗಿದ್ದರೆ ನಿಮ್ಮ ಶಿಕ್ಷಣವನ್ನು ರೆಗ್ಯುಲರ್‌ ಪದ್ಧತಿಯಲ್ಲಿಯೇ ಮುಂದುವರಿಸಬಹುದು ಅಥವಾ ಬಿಕಾಂ ಪದವಿಯ ಮೊದಲ ಎರಡು ವರ್ಷಗಳನ್ನು ಪೂರ್ಣಗೊಳಿಸಿದಲ್ಲಿ ಮೂರನೇ ವರ್ಷವನ್ನು ದೂರ ಶಿಕ್ಷಣದಲ್ಲಿ ಪೂರೈಸಬಹುದು. ಆದರೆ ನೀವು ಯಾವ ವಿಶ್ವವಿದ್ಯಾಲಯದಲ್ಲಿ ಮತ್ತು ಯಾವಾಗ ನಿಮ್ಮ ಬಿ.ಕಾಂ. ಪದವಿಯಿಂದ ಹೊರಬಂದಿದ್ದೀರಿ ಎಂದು ತಿಳಿಸದ ಕಾರಣ ಬಿ.ಕಾಂ. ಪದವಿಯನ್ನು ಹೇಗೆ ಪುನರಾರಂಭಿಸಬಹುದು ಎಂದು ನಿಮಗೆ ನಿಖರವಾಗಿ ಮಾಹಿತಿ ನೀಡಲು ಬರುವುದಿಲ್ಲ. ಹೀಗಾಗಿ ನಿಮ್ಮ ಕಾಲೇಜನ್ನು ಸಂಪರ್ಕಿಸಿ ನಿಮ್ಮ ವಿಶ್ವವಿದ್ಯಾಲಯದ ನಿಯಮಾಳಿಗಳನ್ನು ತಿಳಿಯಿರಿ. ಈ ಆಯ್ಕೆ ನಿಮ್ಮ ಸಮಯವನ್ನು ಉಳಿಸುತ್ತದೆ ಮತ್ತು ಮುಂದಿನ ವರ್ಷವೇ ನೀವು ಬಿ.ಎಡ್. ಪದವಿಗೆ ಪ್ರವೇಶಾತಿ ಪಡೆಯಬಹುದು. ಆದರೆ ಕಾಮರ್ಸ್ ಕ್ಷೇತ್ರದಲ್ಲಿ ಉಪನ್ಯಾಸಕರಾಗಲು ಬಿಕಾಂ ಬಿ.ಎಡ್. ಜೊತೆಗೆ ಎಂ.ಕಾಂ. ಕೂಡ ಮಾಡಬೇಕಾಗುತ್ತದೆ ಮತ್ತು ಆಗ ಪದವಿ ಹಾಗೂ ಪದವಿಪೂರ್ವ ಹಂತದ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡಲು ಅರ್ಹತೆ ಹೊಂದುತ್ತೀರಿ.

ಎರಡನೆಯ ಆಯ್ಕೆ- ನೀವು ಈಗ ಕೆಲಸ ಮುಂದುವರಿಸುತ್ತ, ದೂರ ಶಿಕ್ಷಣದಲ್ಲಿ ಬಿ.ಎ. ಪದವಿ ಪೂರ್ಣಗೊಳಿಸಿ. ನಂತರ ರೆಗ್ಯುಲರ್‌ ಶಿಕ್ಷಣದಲ್ಲಿ ಬಿ.ಎಡ್. ಪದವಿ ಪೂರ್ಣಗೊಳಿಸಿ. ಬಿ.ಎ., ಬಿ.ಎಡ್. ಶಿಕ್ಷಣದ ನಂತರ ನೀವು ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಅಥವಾ ಭಾಷಾ ವಿಷಯಗಳನ್ನು ಬೋಧಿಸಬಹುದು. ಮುಂದೆ ಎಂ.ಎ. ಮಾಡಿಕೊಂಡರೆ ಪದವಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೂ ಬೋಧಿಸಬಹುದು.

ಇದಕ್ಕೆ ಕೆಲಸದ ಜೊತೆಗೆ ಸಮಯ ಮತ್ತು ಓದುವ ಶ್ರಮವನ್ನು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗಿರುವುದರಿಂದ ಕ್ರಮಬದ್ಧವಾದ ಯೋಜನೆ ಮತ್ತು ವೇಳಾಪಟ್ಟಿ ತಯಾರಿಸಿಕೊಂಡು ಬದ್ಧತೆಯಿಂದ ಪ್ರಯತ್ನಿಸಿದರೆ ನಿಮ್ಮ ಆಶಯ ನೇರವೇರುತ್ತದೆ. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ!

ನಾನು ಬಿ.ಎಸ್‌ಸಿ. (ಪಿ.ಸಿ.ಎಂ.) ಮುಗಿಸಿದ್ದು ನನಗೆ ಯಾವ ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಅವಕಾಶಗಳಿವೆ ಎಂಬುದನ್ನು ತಿಳಿಸಿ.

–ಹೆಸರು, ಊರು ಬೇಡ

ಕೇಂದ‍್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ವಿಶ್ವವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆಗಳಲ್ಲಿ ಭೌತ ಮತ್ತು ರಸಾಯನ ವಿಜ್ಞಾನ ಕ್ಷೇತ್ರಗಳ ಸಂಶೋಧನ ಸಹಾಯಕನಾಗಿ ಕಾರ್ಯನಿರ್ವಹಿಸಬಹುದು. ಇದಕ್ಕಾಗಿ ಆಯಾ ಸಂಸ್ಥೆಯ ವೆಬ್‌ಸೈಟ್‌ಗಳನ್ನು ಪರಿಶೀಲಿಸಿ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಗಳಂತಹ ಸಂಸ್ಥೆಗಳಲ್ಲಿ ಲ್ಯಾಬ್‌ ಸಹಾಯಕನಾಗಿ, ಐಐಟಿ, ಎನ್.ಐ.ಟಿ., ರಾಜಾ ರಾಮಣ್ಣ ಸೆಂಟರ್ ಫಾರ್ ಅಡ್ವಾನ್ಸ್ಡ್ ಟೆಕ್ನಾಲಜಿ (RRCAT)ಗಳಂತಹ ಸಂಸ್ಥೆಯಲ್ಲಿ ಸಂಶೋಧನ ಸಹಾಯಕರಾಗಿ ಕಾರ್ಯನಿರ್ವಹಿಸಬಹುದು. ಸರ್ಕಾರಿ ರಾಸಾಯನಿಕ ಮತ್ತು ರಸಗೊಬ್ಬರ ಕೈಗಾರಿಕೆ ಸಂಸ್ಥೆಗಳಲ್ಲೂ ಕಾರ್ಯ ನಿರ್ವಹಿಸಬಹುದು. ಬಿ.ಎಸ್‌ಸಿ. ಜೊತೆಗೆ ಬಿ.ಎಡ್. ಶಿಕ್ಷಣ ಪಡೆದುಕೊಂಡರೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮತ್ತು ಕೇಂದ್ರಿಯ ವಿದ್ಯಾಲಯಗಳಲ್ಲಿ ವಿಜ್ಞಾನ ಅಥವಾ ಗಣಿತ ವಿಷಯದ ಶಿಕ್ಷಕನಾಗಿ ಕಾರ್ಯನಿರ್ವಹಿಸಬಹುದು.

ಇದಲ್ಲದೆ ಎಲ್ಲ ವಿಷಯಗಳಲ್ಲಿ ಪದವಿ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಬಹುದಾದ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಬಹುದು. ನಿಮಗೆ ಆಸಕ್ತಿ ಇದ್ದಲ್ಲಿ ಪದವಿ ಆಧಾರದ ಮೇಲೆ ಭಾರತ ಸರ್ಕಾರದ ಐ.ಎ.ಎಸ್. ಮತ್ತು ಕರ್ನಾಟಕ ಸರ್ಕಾರದ ಕೆ.ಎ.ಎಸ್. ಪರೀಕ್ಷೆ ಬರೆದು ಆಡಳಿತಾತ್ಮಕ ಹುದ್ದೆಗಳನ್ನು ಪಡೆಯಬಹುದು. ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಯಾವುದೇ ಪದವಿಯಾಗಿದ್ದರೂ ಕೂಡ ಪ್ರಯತ್ನಿಸಬಹುದು. ಇದಕ್ಕಾಗಿ ಐ.ಬಿ.ಪಿ.ಎಸ್. ಬೋರ್ಡ್ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಎಸ್.ಬಿ.ಐ. ಮತ್ತು ಆರ್.ಬಿ.ಐ. ಬ್ಯಾಂಕ್‌ಗಳಲ್ಲಿ ಹುದ್ದೆ ಪಡೆಯಬಹುದು. ಕರ್ನಾಟಕ ಸರ್ಕಾರದ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಪ್ರಯತ್ನಿಸಬಹುದು. ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್.ಎಸ್.ಸಿ.) ವಿವಿಧ ಹುದ್ದೆಗಳಿಗೆ ನಡೆಸುವ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಯತ್ನಿಸಬಹುದು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾಲ ಕಾಲಕ್ಕೆ ಪದವಿ ಆಧಾರದ ಮೇಲೆ ಕರೆಯುವ ಇನ್ನೂ ಅನೇಕ ಉದ್ಯೋಗವಕಾಶಗಳ ಬಗ್ಗೆ ಹೆಚ್ಚು ತಿಳಿದು ಅರ್ಜಿ ಸಲ್ಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT