ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ವ್ಯಾಕರಣ ಕಲಿಕೆಗೆ ಸರಳ ವಿಧಾನ

Last Updated 10 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹಿಂದಿ ಭಾಷೆಯನ್ನು ರಾಜ್ಯದಲ್ಲಿ ಪ್ರಥಮ ಮತ್ತು ತೃತೀಯ ಭಾಷೆಯಾಗಿ ಅಧ್ಯಯನ ಮಾಡಲಾಗುತ್ತಿದೆ. ಅದರಲ್ಲೂ ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಹಿಂದಿ ಎಂದರೆ ಸ್ವಲ್ಪ ಹಿಂಜರಿಕೆ ಇದೆ. ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿಯೇ ಹಿಂದಿಯನ್ನು ಚೆನ್ನಾಗಿ ಕಲಿತರೆ, ಹತ್ತನೇ ತರಗತಿಯಲ್ಲಿ ಈ ಭಾಷೆ ಕಷ್ಟವೆನಿಸದು. ಹಿಂದಿ ಮಾತ್ರವಲ್ಲ, ಯಾವುದೇ ವಿಷಯವಾದರೂ ಅಷ್ಟೆ.

ಆದರೆ ಬಹುತೇಕ ವಿದ್ಯಾರ್ಥಿಗಳು ಮಾಡುತ್ತಿರುವ ತಪ್ಪೆಂದರೆ ಪ್ರಾಥಮಿಕ ಹಂತದಲ್ಲಿ ಅಂದರೆ 6, 7 ಮತ್ತು 8ನೇ ತರಗತಿಯಲ್ಲಿ ಹಿಂದಿಯನ್ನು ಆಸಕ್ತಿಯಿಂದ ಕಲಿಯದೇ ಇರುವುದು. ಅಕ್ಷರ ಮತ್ತು ಕಾಗುಣಿತದಲ್ಲಿ ಕನ್ನಡ ಮತ್ತು ಹಿಂದಿಗೆ ಅಂತರವಿದ್ದರೂ ಅಷ್ಟೇನೂ ವ್ಯತ್ಯಾಸ ಕಾಣಿಸದು. ಕನ್ನಡವನ್ನು ಸರಿಯಾಗಿ ಓದಲು, ಬರೆಯಲು ಬಂದ ವಿದ್ಯಾರ್ಥಿಗಳಿಗೆ ಹಿಂದಿ ಕಷ್ಟವೆನಿಸದು. ಕಲಿಯುವ ವಯಸ್ಸು, ಮನಸ್ಸು ಮತ್ತು ಸಮಯವಿದ್ದಾಗ ಕಲಿತರೆ ಮುಂದಿನ ಹಂತಗಳಲ್ಲಿ ಕಷ್ಟವಾಗದು.

ಕೆಲವರು ಹಿಂದಿ ಸಿನಿಮಾ, ಹಿಂದಿ ಟಿವಿ ಚಾನೆಲ್‌ಗಳನ್ನು ನೋಡಿಯೇ ಭಾಷೆಯನ್ನು ಚೆನ್ನಾಗಿ ಕಲಿತಿರುತ್ತಾರೆ. ಆದರೆ ಮಾತನಾಡಲು ಬಂದರೂ ತಪ್ಪಿಲ್ಲದೆ ಓದಿ ಬರೆಯುವುದು ಇಂಥವರಿಗೆ ಕಷ್ಟವಾಗಬಹುದು.

ಹಿಂದಿ ಕಲಿಕೆಗೆ ತೊಂದರೆಗಳು

ಪೋಷಕರು ಮತ್ತು ಶಿಕ್ಷಕರು ಒಂದು ಭಾಷೆಯಾಗಿ ಹಿಂದಿ ಕಲಿಕೆಯ ಮಹತ್ವವನ್ನು ತಿಳಿಸದೇ ಇರುವುದು.

ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಹಿಂದಿ ಕಷ್ಟ ಎನಿಸುವ ಭಾವನೆ.

ಹಿಂದಿ ಕೆಲವು ಕಡೆ ವಿದ್ಯಾರ್ಥಿಗಳಿಗೆ ಗೊಂದಲ ಮೂಡಿಸುವ ಭಾಷೆ. ಹಿಂದಿಯಲ್ಲಿ ಎಲ್ಲಾ ನಾಮಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗವೆಂದು ವಿಭಾಗಿಸಿರುವುದು ಮತ್ತು ನಪುಂಸಕಲಿಂಗ ಇಲ್ಲದೇ ಇರುವುದು. ಇದರಿಂದ ಹಿಂದಿಯಲ್ಲಿ ಕಾ, ಕಿ, ಕೆ ಪ್ರಯೋಗ ಗೊಂದಲವಾಗುತ್ತಿರುವುದು. ಉದಾ : ಪಾನಿ (ಪುಲ್ಲಿಂಗ) ನದಿ (ಸ್ತ್ರೀಲಿಂಗ)

ಹ್ರಸ್ವ ಮತ್ತು ದೀರ್ಘ ಸ್ವರಾಕ್ಷರಗಳಲ್ಲಿ ಗೊಂದಲವಾಗುತ್ತಿರುವುದು. ಉದಾ: ಪ್ರಕೃತಿ ಪದದಲ್ಲಿ ಅಂತ್ಯಾಕ್ಷರ ಹ್ರಸ್ವವಾಗಬೇಕು ಅದನ್ನು ಹಿಂದಿಯಲ್ಲಿ ಪ್ರಕೃತೀ ಎಂದು ಬರೆಯಬಾರದು. ರಾಜಾ ಪದವನ್ನು ರಾಜ್ ಎಂದು ಬರೆಯಬಾರದು ಮತ್ತು ಉಚ್ಚಾರ ಮಾಡಬಾರದು. ಪ್ರಕೃತಿ ಪದದಲ್ಲಿ ಅಂತ್ಯಾಕ್ಷರ ಇ ಕಾರವಿದೆ. ಅದನ್ನು ಈ ಕಾರ ಮಾಡುವಂತಿಲ್ಲ ಏಕೆಂದರೆ ಮೂಲ ಸಂಸ್ಕೃತ ಪದಗಳು ಹ್ರಸ್ವವಾಗೇ ಇರುತ್ತವೆ. ಅವು ದೀರ್ಘವಾಗಿರುವುದಿಲ್ಲ. ಉಳಿದ ಪದಗಳು ಸಾಮಾನ್ಯವಾಗಿ ದೀರ್ಘವಾಗಿರುತ್ತವೆ.

ಅಲ್ಪಪ್ರಾಣ ಮತ್ತು ಮಹಾಪ್ರಾಣ ಅಕ್ಷರಗಳು ಹಿಂದಿಯಲ್ಲಿ ಗೊಂದಲವಾಗುತ್ತದೆ ಎನ್ನುತ್ತಾರೆ. ಆದರೆ ಯಾವ ವಿದ್ಯಾರ್ಥಿಗೆ ಕನ್ನಡದಲ್ಲಿ ಅಲ್ಪಪ್ರಾಣ ಮತ್ತು ಮಹಾಪ್ರಾಣಾಕ್ಷರಗಳ ಜ್ಞಾನವಿರುತ್ತದೆಯೊ ಅಂತಹವರಿಗೆ ಹಿಂದಿಯಲ್ಲಿ ಗೊಂದಲವಾಗಲಾರದು.

ಸುಲಭವಾಗಿ ಕಲಿಯುವ ವಿಧಾನ

ಹಿಂದಿಯನ್ನು ಆಸಕ್ತಿಯಿಂದ ಕಲಿಯುವ ಭಾವನೆಯನ್ನು ಪ್ರಾಥಮಿಕ ಹಂತದಲ್ಲಿಯೇ ಬೆಳೆಸಿಕೊಳ್ಳುವುದು. ಹಿಂದಿ ನನಗೆ ಕಷ್ಟ ಎಂಬ ಭಾವನೆಯನ್ನು ಮನಸ್ಸಿನಿಂದ ತೆಗೆದು ಹಾಕಬೇಕು.

ಕನ್ನಡ ಭಾಷೆಯಲ್ಲಿನ ದೀರ್ಘಾಕ್ಷರ, ಹ್ರಸ್ವಾಕ್ಷರ ಮತ್ತು ಅಲ್ಪಪ್ರಾಣ ಮತ್ತು ಮಹಾಪ್ರಾಣ ಅಕ್ಷರಗಳ ಜ್ಞಾನವನ್ನು ಬೆಳೆಸಿಕೊಂಡರೆ ಹಿಂದಿ ಕಷ್ಟವಾಗಲಾರದು. ನಿರಂತರವಾಗಿ ಓದುವ, ಬರೆಯುವ ಅಭ್ಯಾಸ ಮಾಡಬೇಕು.

ಕನ್ನಡ ಪದಗಳನ್ನು ಬರೆದುಕೊಂಡು ಅದನ್ನು ಹಿಂದಿಯಲ್ಲಿ ಬರೆಯುವ ಪ್ರಯತ್ನ ಮಾಡಬೇಕು.

ಹಿಂದಿಯಲ್ಲಿ ಪುಲ್ಲಿಂಗ - ಸ್ತ್ರೀಲಿಂಗ ಪದಗಳನ್ನು ಗುರುತಿಸಲು ಶಿಕ್ಷಕರು ಹೇಳಿಕೊಡುವ ಉಪಾಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಉದಾ : ಹಿಂದಿಯಲ್ಲಿ ಆ, ಈ, ಊಕಾರಾಂತ್ಯ ಪದಗಳು ಸಾಮಾನ್ಯವಾಗಿ ಸ್ತ್ರೀಲಿಂಗಗಳಾಗಿರುತ್ತವೆ ಅ ಮತ್ತು ಉ ಕಾರಾಂತ ಪದಗಳು ಪುಲ್ಲಿಂಗವಾಗಿರುತ್ತವೆ. ಆದರೆ ಇದರಲ್ಲಿಯೂ ಅಪವಾದಗಳಿದ್ದು, ಈ ಕುರಿತಾಗಿ ಶಿಕ್ಷಕರ ಸಲಹೆಯನ್ನು ಪಡೆಯುವುದು ಉತ್ತಮ.

ಹಿಂದಿ ಭಾಷೆಯಲ್ಲಿ ಸಂಸ್ಕೃತ, ಅರೆಬಿಕ್, ಉರ್ದು, ಫಾರ್ಸಿ ಪದಗಳು ಹೆಚ್ಚು ಇರುವುದರಿಂದ ಪುಲ್ಲಿಂಗ/ ಸ್ತ್ರೀಲಿಂಗ ಪದಗಳನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಆದ್ದರಿಂದ ಒಂದು ಉತ್ತಮ ಹಿಂದಿ ಶಬ್ದಕೋಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಇದರಲ್ಲಿ ಆ ಪದ ಯಾವ ಭಾಷೆಯದು, ಅದು ಪುಲ್ಲಿಂಗವೇ ಅಥವಾ ಸ್ತ್ರೀಲಿಂಗವೇ, ವಿಶೇಷಣವೇ ಹೀಗೆ ಎಲ್ಲ ಮಾಹಿತಿ ಸಿಗುತ್ತದೆ.

ಹಿಂದಿಯನ್ನು ಪ್ರತಿದಿನ ಒಂದು ಪುಟವನ್ನಾದರೂ ಓದುವ ಬರೆಯುವ ಅಭ್ಯಾಸ ಮಾಡಬೇಕು. ಆಗಾಗ ಹಿಂದಿಗೆ ಸಂಬಂಧಪಟ್ಟ ಮನರಂಜನಾ ಕಾರ್ಯಕ್ರಮಗಳನ್ನು (ಸಿನಿಮಾ, ರಿಯಲಿಟಿ ಶೋ) ನೋಡುತ್ತಿರಬೇಕು.

ಬ್ಯಾಂಕ್ ಚಲನ್, ಅಂಚೆ ಇಲಾಖೆಯ ಚಲನ್‌ಗಳು, ರೈಲು ಬುಕಿಂಗ್ ಫಾರಂ, ಟಿಕೆಟ್‌ಗಳಲ್ಲಿರುವ ಹಿಂದಿ ಪದಗಳನ್ನು ಪರಿಚಯ ಮಾಡಿಕೊಳ್ಳಬೇಕು. ಈ ಕುರಿತಾಗಿ ಹಿಂದಿ ಶಿಕ್ಷಕರು ಅಥವಾ ಹಿಂದಿ ಬಲ್ಲವರ ಸಲಹೆ ಪಡೆದುಕೊಳ್ಳುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT