ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೇ ಆಗಲಿ ಮಕ್ಕಳಿಗೆ ಪಾಠಶಾಲೆ!

Last Updated 10 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನಿಂದಾಗಿ ಶಾಲೆಗಳನ್ನು ಮುಚ್ಚಿ ಒಂದು ತಿಂಗಳೇ ಕಳೆದಿದೆ. ರಜೆ ಮುಂಚಿತವಾಗಿ ಸಿಕ್ಕರೂ ಮಕ್ಕಳು ಖುಷಿಪಡುವ ಹಾಗಿಲ್ಲ. ಬೇಸಿಗೆ ಶಿಬಿರ, ಮನೆಪಾಠ, ಮೈದಾನದಲ್ಲಿ ಆಟ, ಪ್ರವಾಸ, ಪಿಕ್ನಿಕ್‌, ಅಜ್ಜಿಯ ಊರು.. ಎಂದೆಲ್ಲ ಓಡಾಡಿಕೊಂಡು ಇರುತ್ತಿದ್ದ ಮಕ್ಕಳೀಗ ಮನೆಯೊಳಗೇ ಕೂರಬೇಕಾಗಿದೆ.

ನಗರದಲ್ಲಿ ಹಲವು ಶಾಲೆಗಳು ದೂರ ಶಿಕ್ಷಣ ಅಥವಾ ಇ ಲರ್ನಿಂಗ್‌ ಆರಂಭಿಸಿದ್ದರೂ (ರಾಜ್ಯ ಶಿಕ್ಷಣ ಇಲಾಖೆ ಕೂಡ ಯುಟ್ಯೂಬ್‌ ಶಿಕ್ಷಣ ಚಾನೆಲ್‌ ಆರಂಭಿಸಲು ನಿರ್ಧರಿಸಿದೆ) ಅವು ಕೆಲವೇ ಗಂಟೆಗಳ ಕಾಲ ಮಾತ್ರ. ಜೊತೆಗೆ ಈ ಡಿಜಿಟಲ್‌ ಕಲಿಕೆ ಹಳ್ಳಿಗಳಲ್ಲಂತೂ ಸಾಧ್ಯವಿಲ್ಲ. ಹಾಗೆಯೇ ನಗರಗಳ ಕಡಿಮೆ ಆದಾಯವಿರುವ ಕುಟುಂಬಗಳಿಗೂ ಕೂಡ ಅಂತರ್ಜಾಲ ನಿರ್ವಹಣೆಗೆ ಡೇಟಾ ಪೂರೈಸುವುದು ಕನಸಿನ ಮಾತು.

ನಿರಂತರ ಕಲಿಕೆ

ಇವೆಲ್ಲ ಅಡೆತಡೆಗಳಿಂದಾಗಿ ಪೋಷಕರೇ ಮಕ್ಕಳ ಅಧ್ಯಯನ ಸಾಮಗ್ರಿಗಳನ್ನೆಲ್ಲ ಒಂದೆಡೆ ಸೇರಿಸಿಕೊಂಡು, ದಿನದ ವೇಳಾಪಟ್ಟಿ ತಯಾರಿಸಿಕೊಂಡು ಬೋಧನೆಗೆ ತಯಾರಿ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಮನೆಯಲ್ಲೇ ಪಾಠ ಮಾಡಿ ಮಕ್ಕಳ ನಿರಂತರ ಕಲಿಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಮೂಲಕ ಮತ್ತೆ ತರಗತಿಗಳು ಆರಂಭವಾಗುವ ಹೊತ್ತಿಗೆ ಅವರನ್ನು ಸಂಪೂರ್ಣವಾಗಿ ಸಜ್ಜುಗೊಳಿಸುವ ಹೊಣೆ ಪೋಷಕರದ್ದೇ. ಜೊತೆಗೆ ಮಕ್ಕಳು ಬ್ಯುಸಿಯಾಗಿರುವಂತೆ ನೋಡಿಕೊಳ್ಳಬಹುದು.

ಮಕ್ಕಳು ಶಾಲೆಗೆ ಹೋಗುವಾಗ ಡಬ್ಬಿ ಕಟ್ಟಿಕೊಡುವ, ಅವರನ್ನು ಮನೆಪಾಠಕ್ಕೆ ಒಯ್ಯುವ ಜಂಜಾಟವಿತ್ತು. ಪರೀಕ್ಷೆ ಸಮೀಪಿಸಿದಾಗ ತಾವೂ ನಿದ್ದೆಗೆಟ್ಟು ಓದಿಸಬೇಕಿತ್ತು. ಈಗಿನ ಪರಿಸ್ಥಿತಿಯಲ್ಲಿ ಅವೆಲ್ಲದರಿಂದ ಮುಕ್ತಿ ಎಂದು ನಿರಾಳವಾಗಿದ್ದವರು, ಈ ರಜೆ ಸುದೀರ್ಘವಾಗಬಹುದು ಎಂಬ ಸುದ್ದಿಯಿಂದ ಎಚ್ಚೆತ್ತುಕೊಂಡು ಮಕ್ಕಳ ಕಲಿಕೆಗೆ ಅಡ್ಡಿಯಾಗದಂತೆ ಮನೆ ಶಾಲೆ ಅಥವಾ ‘ಹೋಂ ಸ್ಕೂಲಿಂಗ್‌’ಗೆ ಅಣಿಯಾಗಬೇಕಿದೆ.

ಹೋಂ ಸ್ಕೂಲಿಂಗ್‌

ಮಕ್ಕಳಲ್ಲಿ ಕಲಿಕೆ ನಿರಂತರವಾಗಿರುವಂತೆ ನೋಡಿಕೊಳ್ಳಲು ‘ಹೋಂ ಸ್ಕೂಲಿಂಗ್‌ ’ ವಿಧಾನ ಅತ್ಯಂತ ಉಪಯುಕ್ತ. ಈ ಹೋಂ ಸ್ಕೂಲಿಂಗ್‌ ಅಥವಾ ಮನೆಯಲ್ಲೇ ಪಾಠ ಮಾಡುವ ಕ್ರಮ ಹೊಸದೇನಲ್ಲ. ಇತ್ತೀಚೆಗಂತೂ ಈ ವಿಧಾನ ದೊಡ್ಡ ದೊಡ್ಡ ನಗರಗಳಲ್ಲಿ ಜನಪ್ರಿಯವಾಗಿದೆ. ಸಾಂಪ್ರದಾಯಿಕ ಶಾಲಾ ಶಿಕ್ಷಣಕ್ಕಿಂತ ಇದು ಸಂಪೂರ್ಣ ಬೇರೆಯಾಗಿಯೇ ನಿಲ್ಲುತ್ತದೆ.

ಮನೆಯಲ್ಲಿ ಶಾಲಾ ವಾತಾವರಣವನ್ನು ಮೂಡಿಸುವ ಅಗತ್ಯವೇನೂ ಇಲ್ಲ. ಅಂತಹ ವಾತಾವರಣವನ್ನು ಸಂಪೂರ್ಣವಾಗಿ ಮೂಡಿಸಲು ಸಾಧ್ಯವೂ ಇಲ್ಲ ಬಿಡಿ. ಶಾಲೆಗಳಲ್ಲಿರುವ ಕಠಿಣ ಶಿಸ್ತು ಅಥವಾ ನಿಯಮಗಳಿಲ್ಲದ, ಆದರೆ ಹೊಸ ರೀತಿಯ ಅಂಶಗಳನ್ನು ಒಳಗೊಂಡ ಕಲಿಕೆಯನ್ನು ಮಕ್ಕಳು ಖುಷಿಯಿಂದ ಅನುಭವಿಸುವುದಂತೂ ನಿಶ್ಚಿತ.

ಮಕ್ಕಳಲ್ಲಿ ಕಲಿಕಾ ಶಿಸ್ತನ್ನು ಕೆಲವುಮಟ್ಟಿಗೆ ತರಲು ನಿಮ್ಮದೇ ಆದ ನಿಯಮಗಳನ್ನು ರೂಪಿಸಿ, ಮಕ್ಕಳಿಗೂ ಅದನ್ನು ಅನುಸರಿಸುವಂತೆ ಹೇಳಬಹುದು. ಬೆಳಿಗ್ಗೆ ಏಳುವ ಸಮಯದಿಂದ ಹಿಡಿದು, ಉಪಾಹಾರ, ಸ್ನಾನ, ಊಟ, ಟಿವಿ ನೋಡುವ ಸಮಯ, ಮನೆಯಲ್ಲಿಯೇ ಆಡುವ ಕೆಲವು ಒಳಾಂಗಣ ಆಟಗಳು, ನಿದ್ದೆ... ಹೀಗೆ ಎಲ್ಲದಕ್ಕೂ ವೇಳಾಪಟ್ಟಿ ತಯಾರಿಸಿ ಶಿಸ್ತಿಗೆ ಒಳಪಡಿಸಬಹುದು. ಶಿಕ್ಷಿಸುವ ರೀತಿಯಲ್ಲಿ ಈ ನಿಯಮಗಳಿರದಂತೆ ನೋಡಿಕೊಳ್ಳಿ. ಆದರೆ ಮಕ್ಕಳಿಗೆ ಬೋಧಿಸುವ ವಿಷಯ ಉಪಯುಕ್ತವಾಗಿರಲಿ.

ಬೋಧನೆ ಸರಳವಾಗಿರಲಿ

ಶಾಲೆಯಲ್ಲಾದರೆ ಶಿಕ್ಷಕರು ಮರುದಿನದ ಪಾಠದ ಬಗ್ಗೆ ತಯಾರಿ ನಡೆಸುತ್ತಾರೆ. ಮನೆಯಲ್ಲಿ ಅವೆಲ್ಲ ಇರುವುದಿಲ್ಲವಲ್ಲ. ಆದರೆ ತೊಂದರೆಯಿಲ್ಲ. ನಿಮ್ಮ ಹಾಗೂ ಮಕ್ಕಳ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಒಂದಿಷ್ಟು ತಯಾರಿ ಮಾಡಿಕೊಳ್ಳುವುದು ಸೂಕ್ತ.

ಮೊದಲು ಮಕ್ಕಳ ಪಠ್ಯವನ್ನೇ ತೆಗೆದುಕೊಂಡು ಅಲ್ಲಿಂದಲೇ ಆರಂಭಿಸಿ. ಪಾಠವನ್ನು ಓದಿ ಹೇಳಿ. ಮಕ್ಕಳು ಹೇಗೂ ರಜೆ, ಇದಕ್ಕೆಲ್ಲ ಏನು ಲಕ್ಷ್ಯ ಕೊಡುವುದು ಎಂದು ಆರಂಭದಲ್ಲಿ ಅಷ್ಟು ಗಂಭೀರವಾಗಿ ತೆಗೆದುಕೊಳ್ಳದಿದ್ದರೂ ಇದು ನಿತ್ಯದ ಆಗುಹೋಗಿನಲ್ಲಿ ಸೇರಿದಾಗ ರೂಢಿಸಿಕೊಳ್ಳಲು ಮುಂದಾಗುತ್ತಾರೆ. ಪಾಠದ ಬಗ್ಗೆ ಉತ್ಸಾಹ ತೋರಿಸಲು ಆರಂಭಿಸಿದಾಗ ಅವರಿಂದಲೇ ಓದಿಸಿ. ಪ್ರಶ್ನೆಗಳನ್ನು ಕೇಳಿ.

ತೀರಾ ಕಟ್ಟುನಿಟ್ಟಾಗಿ ವರ್ತಿಸಬೇಡಿ. ಆದರೆ ನಿಮ್ಮ ಪ್ರಯತ್ನ ಬಿಡಬೇಡಿ. ಪುಟ್ಟ ಮಕ್ಕಳಿಗೆ ಶಬ್ದ ಭಂಡಾರ, ವಾಕ್ಯಗಳ ರಚನೆ, ಸಣ್ಣಪುಟ್ಟ ಲೆಕ್ಕಗಳು, ಸರಳ ವಿಜ್ಞಾನ ಮೊದಲಾದವುಗಳನ್ನು ಕಲಿಸಿ. ಮಕ್ಕಳಿಗೆ ಪಾಠವನ್ನು ಹೇಳುವಾಗ ಮುಖ ನೋಡಿಕೊಂಡು ಕಲಿಸಿ. ಯಾವುದೋ ಕೆಲಸ ಮಾಡುತ್ತ ಕಲಿಸುವುದರಿಂದ ಮಕ್ಕಳು ಏಕಾಗ್ರತೆಯಿಂದ ಗಮನ ಕೊಡುವುದಿಲ್ಲ. ಪದೆಪದೆ ಸೂಚನೆ ನೀಡಿದರೆ ಮಕ್ಕಳಿಗೂ ಕಿರಿಕಿರಿ.

ಸ್ವಲ್ಪ ದೊಡ್ಡ ಮಕ್ಕಳಾದರೆ ಶಾಲೆಗಳು ನಡೆಸುವ ಡಿಜಿಟಲ್‌ ತರಗತಿಗೆ ಹೊಂದಿಕೊಳ್ಳುತ್ತಾರೆ. ಡಿಜಿಟಲ್‌ ತರಗತಿಗೆ ಒಂದಿಷ್ಟು ಕೌಶಲವೂ ಬೇಕಾಗುತ್ತದೆ. ಆದರೆ ಪುಟ್ಟ ಮಕ್ಕಳಿಗೆ ಪೋಷಕರೇ ಜವಾಬ್ದಾರಿ ತೆಗೆದುಕೊಂಡು ಕಲಿಸಬೇಕಾಗುತ್ತದೆ.

ಮಧ್ಯೆ ಮಧ್ಯೆ ಬಿಡುವು ಕೊಡಿ

ಅರ್ಧ ತಾಸಿನ ಕಾಲ ಪಾಠ ಹೇಳಿ, 10– 15 ನಿಮಿಷಗಳ ಕಾಲ ಮಕ್ಕಳಿಗೆ ಕುಣಿದಾಡಲು, ಯಾವುದಾದರೂ ಆಟವಾಡಲು, ನೀರು ಕುಡಿಯಲು ಬಿಡಿ. ಆದರೆ ಆನ್‌ಲೈನ್‌ನಲ್ಲಿ ಗೇಮ್‌ ಆಡಲು ಅಥವಾ ಕಾರ್ಟೂನ್‌ ನೋಡಲು ಈ ಬಿಡುವು ಸೂಕ್ತವಲ್ಲ. ಅದೇನಿದ್ದರೂ ದಿನದ ಕೊನೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT