ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ಪ್ರವೇಶ ಸಿಗದೇ ವಿದ್ಯಾರ್ಥಿಗಳು ಅತಂತ್ರ

ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳ ವಿಳಂಬ ನೀತಿ
Last Updated 5 ಜುಲೈ 2018, 13:56 IST
ಅಕ್ಷರ ಗಾತ್ರ

ಶಿವಮೊಗ್ಗ:ಕಾಲೇಜುಗಳು ಆರಂಭವಾಗಿ ತಿಂಗಳು ಕಳೆದರೂ ಹಾಸ್ಟೆಲ್‌ಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ವಿದ್ಯಾರ್ಥಿಗಳು ನೆಲೆ ಇಲ್ಲದೇ ಅತಂತ್ರರಾಗಿದ್ದಾರೆ. ಜಿಲ್ಲೆಯ ಪದವಿಪೂರ್ವ ಕಾಲೇಜುಗಳು, ಕುವೆಂಪು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳು, ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು 2018–19ನೇ ಸಾಲಿಗೆ ಪ್ರವೇಶ ಪಡೆದಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಹಾಸ್ಟೆಲ್‌ಗಳು ಆರಂಭವಾಗದೇ ಕಾಲೇಜಿಗೆ ಹೋಗಲು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಕೇಂದ್ರದಿಂದ ದೂರದಲ್ಲಿ ಇರುವ ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನ ಕುಗ್ರಾಮಗಳ ಬಹುತೇಕ ವಿದ್ಯಾರ್ಥಿಗಳು ನಿತ್ಯವೂ ತಮ್ಮ ಮನೆಗಳಿಂದಲೇ ಕಾಲೇಜಿಗೆ ಬಂದು ಹೋಗುತ್ತಿದ್ದಾರೆ. ಮಲೆನಾಡಿನಲ್ಲಿ ಮೂಲೆಗಳಲ್ಲಿ ಇರುವ ಗ್ರಾಮಗಳಿಗೆ ಸರಿಯಾದ ಸಾರಿಗೆ ಸೌಕರ್ಯ ಇಲ್ಲ. ಹಾಗಾಗಿ, ಆರಂಭದಲ್ಲೇ ಕಾಲೇಜಿಗೆ ಗೈರು ಹಾಜರಾಗವ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಗಿದೆ.

ಬಹುತೇಕ ವಿದ್ಯಾರ್ಥಿನಿಯರು ವಾಸ್ತವ್ಯಕ್ಕೆ ಅವಕಾಶ ಇಲ್ಲದ ಕಾರಣ ಕಾಲೇಜುಗಳತ್ತ ಮುಖ ಮಾಡಿಲ್ಲ. ವಿಜ್ಞಾನ, ತಂತ್ರಿಕ ವಿಷಯಗಳನ್ನು ಆಯ್ಕೆಮಾಡಿಕೊಂಡ ವಿದ್ಯಾರ್ಥಿಗಳು ಸರಿಯಾಗಿ ಪಾಠ, ಪ್ರವಚನ ಕೇಳದೇ ಸಾಕಷ್ಟು ಅನನುಕೂಲವಾಗಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾತರಕಲ್ಯಾಣ ಇಲಾಖೆ ಅಡಿ ಜಿಲ್ಲೆಯಲ್ಲಿ ಒಟ್ಟು 226 ಹಾಸ್ಟೆಲ್‌ಗಳಿವೆ.

ಪರಿಶಿಷ್ಟರಿಗಿಲ್ಲ ತೊಂದರೆ:

ಸಮಾಜ ಕಲ್ಯಾಣ ಇಲಾಖೆ ಅಡಿ 51 ಮೆಟ್ರಿಕ್ ಪೂರ್ವ, 25 ಮೆಟ್ರಿಕ್‌ ನಂತರ ಹಾಗೂ 4 ಗಿರಿಜನರ ಹಾಸ್ಟೆಲ್‌ಗಳಿವೆ. ಪ್ರತಿ ವರ್ಷ 6 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಗಿರಿಜನ ವಿದ್ಯಾರ್ಥಿಗಳಲ್ಲಿ ಅರ್ಜಿ ಹಾಕಿದ ಎಲ್ಲರಿಗೂ ಪ್ರವೇಶ ನೀಡುವುದು ಕಡ್ಡಾಯ. ಇಲ್ಲಿ ಆಯ್ಕೆ ಪ್ರಕ್ರಿಯೆ ಸರಳವಾಗಿರುವ ಕಾರಣ ಅಂತಹ ಸಮಸ್ಯೆ ಎದುರಾಗಿಲ್ಲ.

ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಅಲೆದಾಟ:ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರ ಇಲಾಖೆ ಅಡಿ ಬರುವ ಹಾಸ್ಟೆಲ್‌ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅಲೆದಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿ 132 ಹಾಸ್ಟೆಲ್‌ಗಳಿವೆ. ಅವುಗಳಲ್ಲಿ 60 ಮೆಟ್ರಿಕ್‌ ಪೂರ್ವ, 72 ಮೆಟ್ರಿಕ್‌ ನಂತರ ಹಾಗೂ 7 ವಸತಿ ಶಾಲೆಗಳಿವೆ. 10,756 ವಿದ್ಯಾರ್ಥಿಗಳಿಗೆ ಈ ವರ್ಷ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಅವರಲ್ಲಿ 7,059 ಕಾಲೇಜು ವಿದ್ಯಾರ್ಥಿಗಳು. ಅಲ್ಪ ಸಂಖ್ಯಾತರ ಇಲಾಖೆ ಅಡಿ 13 ಹಾಸ್ಟೆಲ್‌ಗಳಿವೆ. ನಾಲ್ಕು ವಸತಿ ಶಾಲೆಗಳು. 850 ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷ ಪ್ರವೇಶ ನೀಡಲಾಗುತ್ತಿದೆ.

ಆಯ್ಕೆ ಪ್ರಕ್ರಿಯೆ ವಿಳಂಬ:ಹಾಸ್ಟೆಲ್‌ಗಳಿಗೆ ಪ್ರವೇಶ ನೀಡಲು ಅರ್ಜಿ ಆಹ್ವಾನಿಸಿದ ನಂತರ ಆಯಾ ತಾಲ್ಲೂಕುಗಳ ಶಾಸಕರ ಅಧ್ಯಕ್ಷತೆಯ ಸಮಿತಿ ಸಭೆ ಸೇರಿ ಮೆರಿಟ್‌ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಸಾಕಷ್ಟು ತಡವಾಗಿ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 20ರ ವರೆಗೂ ಅವಕಾಶ ನೀಡಲಾಗಿದೆ. ಈ ಅವಧಿ ಮುಗಿದ ನಂತರ ಆಯ್ಕೆ ಪ್ರಕ್ರಿಯೆಗೆ ಸಭೆ ಸೇರಲು ಶಾಸಕರು ಹೇಳಿದ ದಿನ ನಿಗದಿ ಮಾಡಬೇಕು. ನಂತರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಪಟ್ಟಿ ಪ್ರಕಟಿಸಲು ಕನಿಷ್ಠ 20 ದಿನವಾದರೂ ಬೇಕು. ಅಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಪರದಾಟ ತಪ್ಪಿದ್ದಲ್ಲ.

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಶಾಸಕರು ಸಮಯ ನೀಡಬೇಕಿದೆ. ಅವರು ಅಧಿವೆಶನದಲ್ಲಿ ಇರುವ ಕಾರಣ ಸಭೆ ನಡೆದಿಲ್ಲ. ಆಯ್ಕೆ ಪ್ರಕ್ರಿಯೆ ಮುಗಿದಿಲ್ಲ! ‘ಕಳೆದ ತಿಂಗಳು ಅರ್ಜಿ ಸಲ್ಲಿಸಿದ್ದೆವು. ಇದುವರೆಗೂ ಪ್ರವೇಶ ಪಟ್ಟಿ ಪ್ರಕಟವಾಗಿಲ್ಲ. ಕಾಲೇಜಿಗೆ ಪ್ರವೇಶ ಪಡೆದಿದ್ದೇವೆ. ಇಲ್ಲಿ ಯಾರು ಬಂಧುಗಳಿಲ್ಲ. ಮೆರಿಟ್ ಇರುವ ಕಾರಣ ಹಾಸ್ಟೆಲ್ ಸಿಗುತ್ತದೆ. ಅಲ್ಲಿಯವರೆಗೂ ವಾರಕ್ಕೆ ಒಂದೆರಡು ದಿನ ಬಂದು ಹೋಗುತ್ತಿದ್ದೇವೆ. ಸೆಮಿಸ್ಟರ್ ಪದ್ಧತಿ ಇರುವ ಕಾರಣ ಪಾಠ ಕೇಳದೇ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಸಾಗರದ ವಿದ್ಯಾರ್ಥಿನಿಯರಾದ ಅರ್ಪಿತಾ, ಅಕ್ಷತಾ.

ಕಾಲೇಜುಗಳಲ್ಲಿ ಹಾಜರಾತಿ ಕೊರತೆ:

‘ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ದೂರದ ಗ್ರಾಮೀಣ ಪ್ರದೇಶದಿಂದ ಬಂದಿದ್ದಾರೆ. ನಿತ್ಯವೂ ಕಡಿಮೆ ಹಾಜರಾತಿ ಇರುತ್ತದೆ. ಈ ಕುರಿತು ಪ್ರಶ್ನಿಸಿದಾಗ ಹಾಸ್ಟೆಲ್‌ ಪ್ರವೇಶಕ್ಕೆ ಕಾಯುತ್ತಿದ್ದಾರೆ. ಹಾಗಾಗಿ, ಗೈರು ಹಾಜರಾಗಿದ್ದಾರೆ ಎಂಬ ಸಂಗತಿ ಗೊತ್ತಾಯಿತು’ ಎಂದು ಮಾಹಿತಿ ನೀಡುತ್ತಾರೆ ಸಹ್ಯಾದ್ರಿ ಕಾಲೇಜು ಸಹ ಪ್ರಾಧ್ಯಾಪಕ ಡಾ. ಮೋಹನ್‌ ಚಂದ್ರಗುತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT