ಭಾನುವಾರ, ಜನವರಿ 19, 2020
21 °C

ವಿದ್ಯಾರ್ಥಿಗಳ ನೆಟ್‌ವರ್ಕ್‌ ಎಷ್ಟು ಲಾಭದಾಯಕ?

ಶಂತನು ರೂಜ್ Updated:

ಅಕ್ಷರ ಗಾತ್ರ : | |

Prajavani

ಬಹುತೇಕ ಹಳೆಯ ವಿದ್ಯಾರ್ಥಿ ಸಂಘಗಳು ಹಾಗೂ ನೆಟ್‌ವರ್ಕ್‌ಗಳು ಪ್ರಸಕ್ತ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತಿವೆ. ವಿದ್ಯಾರ್ಥಿ ವೇತನ, ಪ್ರಾಯೋಜಕತ್ವ, ವೃತ್ತಿ ತರಬೇತಿ ಹಾಗೂ ಉದ್ಯೋಗದ ಮಾರ್ಗದರ್ಶನಕ್ಕೆ ಕೈಜೋಡಿಸುತ್ತಿವೆ. ಇಂತಹ ನೆಟ್‌ವರ್ಕ್‌ಗಳ ಜೊತೆ ಸಂಪರ್ಕ ಸಾಧಿಸುವುದು ಹೇಗೆ?

ಖ್ಯಾತ ಕೃತಿ ‘ರಿಚ್ ಡ್ಯಾಡ್ ಅಂಡ್ ಪೂರ್ ಡ್ಯಾಡ್‌’ನಲ್ಲಿ ಅದರ ಲೇಖಕ ರಾಬರ್ಟ್ ಕಿಯೊಸಕಿ ಬರೆದಿರುವ ಒಂದು ವಾಕ್ಯ ಕುತೂಹಲ ಮೂಡಿಸುವಂತಹದ್ದು. ‘ನೀವು ಎಲ್ಲಿಗಾದರೂ ಹೋಗಬೇಕೆಂದು ಬಯಸಿದರೆ, ಅಲ್ಲಿ ಈಗಾಗಲೇ ಇರುವ ಯಾರನ್ನಾದರೂ ಮೊದಲು ಕಂಡುಹಿಡಿಯಿರಿ’ ಎಂದು. ಇದು ಶೈಕ್ಷಣಿಕ ಸಂಸ್ಥೆಗಳ ವಿಷಯದಲ್ಲಿ ನೂರಕ್ಕೆ ನೂರರಷ್ಟು ಸತ್ಯ. ಸಾಮಾನ್ಯವಾಗಿ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ (ಅಲುಮ್ನಿ) ವಿರುತ್ತದೆ. ಈ ಸಂಘದ ನೆಟ್‌ವರ್ಕ್‌ ಅನ್ನು ಸಮರ್ಪಕವಾಗಿ ಬಳಸಿಕೊಂಡರೆ ಅದು ಸಂಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯುಕ್ತ ಎಂಬುದು ಹಲವು ಅನುಭವಗಳಿಂದ ವೇದ್ಯ.

ಹಲವು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ತಮ್ಮ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್‌ ಹಾಗೂ ಸಂಘಗಳನ್ನು ಹೊಂದಿದ್ದು, ಇವುಗಳಿಂದ ಸಾಮಾನ್ಯವಾಗಿ ಹಾಲಿ ವಿದ್ಯಾರ್ಥಿಗಳಿಗೆ ಹಲವು ಪ್ರಯೋಜನ, ಪ್ರೋತ್ಸಾಹ ಹಾಗೂ ಅವಕಾಶಗಳು ಲಭ್ಯ. ಈ ಸಂಘಗಳು ಒಂದು ರೀತಿ ದ್ವಿಮುಖ ಪಥಗಳಿದ್ದಂತೆ. ಹೀಗಾಗಿ ಹಾಲಿ ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿ ನೆಟ್‌ವರ್ಕ್‌ ಅನ್ನು ಅವಕಾಶಗಳಿಗಾಗಿ ಬಳಸಿಕೊಳ್ಳುವುದಲ್ಲದೇ ಅದರ ಜೊತೆ ನಿರಂತರ ಸಂಪರ್ಕ ಇರಿಸಿಕೊಳ್ಳುವುದು ಒಳ್ಳೆಯದು. ಇದಕ್ಕೆ ಹಲವು ಮಾರ್ಗಗಳಿವೆ.

ನೆಟ್‌ವರ್ಕ್‌ ವಿಸ್ತರಣೆಗೆ ನೆರವು

ವಿದ್ಯಾರ್ಥಿಗಳು ತಮ್ಮ ವೃತ್ತಿಗೆ ಅಗತ್ಯವಿರುವ ಹೂಡಿಕೆಯಂತೆ ಈ ನೆಟ್‌ವರ್ಕ್‌ ಅನ್ನು ಬಳಸಿಕೊಳ್ಳಬಹುದು. ಈ ಮೂಲಕ ಭವಿಷ್ಯದಲ್ಲಿ ಯಶಸ್ಸನ್ನು ಸಾಧಿಸಲು ಮೆಟ್ಟಲನ್ನಾಗಿ ಬಳಸಿಕೊಳ್ಳಬಹುದು. ಹಳೆಯ ವಿದ್ಯಾರ್ಥಿಗಳ ಸಂಘಗಳು ವೃತ್ತಿ ಕುರಿತಂತೆ ಸಂಪರ್ಕದ ಅತಿದೊಡ್ಡ ಜಾಲವನ್ನು ಹೊಂದಿರುತ್ತವೆ. ಇದು ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ಇರುವ ಸೇತು ಎಂದು ಕರೆಯಬಹುದು.

ಶಿಕ್ಷಣ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಹಾಲಿ ವಿದ್ಯಾರ್ಥಿಗಳು ತಮ್ಮ ಪರಿಚಯ ಹಾಗೂ ಸಂಪರ್ಕವನ್ನು ಹಳೆಯ ವಿದ್ಯಾರ್ಥಿಗಳ ಜತೆ ಬೆಳೆಸಿಕೊಳ್ಳಬಹುದು ಹಾಗೆಯೇ ಇದು ಅವರ ವೃತ್ತಿಪರ ಬದುಕಿಗೂ ವಿಸ್ತರಿಸಿಕೊಳ್ಳಲು ಸೂಕ್ತ ವೇದಿಕೆ ಎಂದು ಹೇಳಬಹುದು. ಹಳೆಯ ವಿದ್ಯಾರ್ಥಿಗಳಲ್ಲಿ ಬಹುತೇಕರು ಪ್ರಸ್ತುತ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ನೆರವಾಗಲು ಮುಂದೆ ಬರುವುದಲ್ಲದೇ ಈ ಮೂಲಕ ಸಂಸ್ಥೆಯ ಹೆಸರನ್ನು ಉನ್ನತ ಸ್ಥಾನಕ್ಕೇರಿಸುವಲ್ಲಿ ಕೈಜೋಡಿಸುವುದು ಸಾಮಾನ್ಯ. ಹೀಗಾಗಿ ಇಂತಹ ವಿದ್ಯಾರ್ಥಿ ಸಂಘಗಳಿಗೆ ಸೇರುವುದು ಅವಕಾಶಗಳ ದೃಷ್ಟಿಯಿಂದ ಒಳಿತು.

ತಜ್ಞರಿಂದ ಕಲಿಕೆ

ಬಹುತೇಕ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಕಾಲೇಜಿನ ತಮ್ಮ ನಂತರದ ಬ್ಯಾಚ್‌ನ ವಿದ್ಯಾರ್ಥಿಗಳು ಯಶಸ್ಸು ಕಾಣಬೇಕು ಎಂಬ ಉದ್ದೇಶವಿಟ್ಟುಕೊಂಡು ಆ ನಿಟ್ಟಿನಲ್ಲಿ ಅವರಿಗೆ ನೆರವಾಗಲು ಬಯಸುವುದು ಸಾಮಾನ್ಯ. ಅದರಲ್ಲಿ ಯಶಸ್ವಿಯಾದರೆ ಮತ್ತೊಬ್ಬ ಹಳೆಯ ವಿದ್ಯಾರ್ಥಿ, ಹಾಲಿ ವಿದ್ಯಾರ್ಥಿ ಹಾಗೂ ಒಟ್ಟಾರೆ ಸಂಸ್ಥೆಗೆ ನೆರವಾಗಬಹುದು ಎಂಬ ನಿರೀಕ್ಷೆ ಕೆಲವರಲ್ಲಿ. ಕೆಲವು ಪ್ರತಿಭಾನ್ವಿತ ಹಳೆಯ ವಿದ್ಯಾರ್ಥಿ ಸಂಘಗಳು ಉದ್ಯೋಗ ಮೇಳಗಳನ್ನು ಹಾಗೂ ರೆಸ್ಯುಮ್‌ ಸಿದ್ಧಪಡಿಸುವ ಕಾರ್ಯಾಗಾರಗಳನ್ನು ಆಯೋಜಿಸುವುದು, ಪ್ರಸ್ತುತವೆನಿಸುವ ಉದ್ಯೋಗಾವಕಾಶಗಳನ್ನು ಪರಿಚಯಿಸುವುದು, ವಿಚಾರ ಸಂಕಿರಣಗಳನ್ನು ಏರ್ಪಡಿಸುವುದಲ್ಲದೇ ಉದ್ಯೋಗ ಮಾರ್ಗದರ್ಶಿಯಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿವೆ. ಇವು ನಿಮ್ಮ ವೃತ್ತಿ ಬದುಕನ್ನು ಬೆಳೆಸಿಕೊಳ್ಳಲು ಸೂಕ್ತ ಸಾಧನ ಎನ್ನಬಹುದು. ಹಾಗೆಯೇ ಇದರಿಂದ ನಿಮ್ಮ ಔದ್ಯೋಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ.

ವಿದ್ಯಾರ್ಥಿ ವೇತನ

ಬಹುತೇಕ ವಿದ್ಯಾರ್ಥಿಗಳು ಪದವಿ ಪಡೆದ ಬಳಿಕವೂ ಹಳೆಯ ವಿದ್ಯಾರ್ಥಿಗಳ ಜತೆ ಸಂಪರ್ಕವನ್ನು ಮುಂದುವರಿಸಲು, ಆ ಮೂಲಕ ತಾವು ಕಲಿತ ಶಿಕ್ಷಣ ಸಂಸ್ಥೆಯ ಜೊತೆಗೆ ಗುರುತಿಸಿಕೊಳ್ಳಲು ಬಯಸುವುದು ಸಾಮಾನ್ಯ. ಹೀಗಾಗಿ ಇಂತಹ ಸಂಘಗಳು ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮಗಳನ್ನು ಆಯೋಜಿಸುವುದು, ತಾವು ಓದಿದ ಶಿಕ್ಷಣ ಸಂಸ್ಥೆಯಲ್ಲಿ ಹಲವು ಕಾರ್ಯಕ್ರಮಗಳಿಗೆ ಪ್ರಾಯೋಜಕರನ್ನು ಹುಡುಕಿಕೊಡುವ ಕೆಲಸ ಮಾಡುವುದಿದೆ. ಜೊತೆಗೆ ಅರ್ಹ ವಿದ್ಯಾರ್ಥಿಗಳಿಗೆ ಪ್ರಾಯೋಜಕತ್ವ ಹಾಗೂ ವಿದ್ಯಾರ್ಥಿ ವೇತನವನ್ನು ಕೊಡಿಸುವಂತಹ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಳೆಯ ವಿದ್ಯಾರ್ಥಿ ಸಂಘಗಳೇ ದೇಣಿಗೆ ನೀಡಿದ ನಿದರ್ಶನಗಳೂ ಇವೆ.

ಮಾರ್ಗದರ್ಶನ

ಕೆಲವು ಹಳೆಯ ವಿದ್ಯಾರ್ಥಿ ನೆಟ್‌ವರ್ಕ್‌ ಹಾಗೂ ಸಂಘಗಳು ಪ್ರಸ್ತುತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ದೇಣಿಗೆ, ಇತರ ಕಾರ್ಯಚಟುವಟಿಕೆಗಳಿಗೆ ಬೆಂಬಲ ಅಥವಾ ಪ್ರಶಸ್ತಿಗಳನ್ನು ಗೆಲ್ಲಲು ನೆರವು ನೀಡುವ ಮೂಲಕ ಉತ್ತೇಜನ ನೀಡುತ್ತಿವೆ. ನೀವು ಉದ್ಯೋಗಕ್ಕೆ ಸೇರಿಕೊಳ್ಳುವಾಗ, ಉದ್ಯೋಗವನ್ನು ಬದಲಾಯಿಸುವಾಗ ಅಥವಾ ಬಡ್ತಿ ಪಡೆಯಲು ಇಲ್ಲವೇ ನಿಮ್ಮದೇ ಕಂಪನಿಯಲ್ಲಿ ತಂಡದ ಹೊಸ ಸದಸ್ಯರನ್ನು ನೇಮಿಸಿಕೊಳ್ಳಲು ಇಂತಹ ನೆಟ್‌ವರ್ಕ್‌ಗಳು ನೆರವಾಗಬಹುದು! ಇಂತಹ ಬಹುತೇಕ ನೆಟ್‌ವರ್ಕ್‌ಗಳು ಉದ್ಯೋಗ ಮಾಹಿತಿ, ರೆಸ್ಯುಮ್‌ ಪರಾಮರ್ಶೆ, ಪರಸ್ಪರ ಪರಿಚಯ ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ಪ್ರಸ್ತುತ ವಿದ್ಯಾರ್ಥಿಗಳಿಗಾಗಿ ಅಥವಾ ತಮ್ಮದೇ ಹಳೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸುವುದು ಕೂಡ ಉಪಯುಕ್ತ ಎನಿಸುತ್ತವೆ.

ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಕೂಡಾ ಈ ಹಳೆಯ ಹಾಗೂ ಪ್ರಸಕ್ತ ವಿದ್ಯಾರ್ಥಿಗಳ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಬಹುದು. ಹಳೆಯ ವಿದ್ಯಾರ್ಥಿಗಳು ಕೇವಲ ದೇಣಿಗೆ ಅಥವಾ ಪ್ರಾಯೋಜಕತ್ವವನ್ನು ನೀಡುವ ‘ಬ್ಯಾಂಕ್‌’ ಇದ್ದಂತೆ ಎಂದು ನೋಡುವ ಬದಲಾಗಿ ಉಪಯುಕ್ತ ಹಾಗೂ ಮೌಲಿಕ ಎಂದು ಪರಿಗಣಿಸಬಹುದು. ಯುಜಿಸಿ ಕೂಡ ‘ವಿದ್ಯಾರ್ಥಿಗಳ ವೃತ್ತಿ ಅವಕಾಶಗಳು ಮತ್ತು ಹಳೆಯ ವಿರ್ದ್ಯಾರ್ಥಿಗಳ ನೆಟ್‌ವರ್ಕ್‌’ ಬಗ್ಗೆ ಚೌಕಟ್ಟನ್ನು ರೂಪಿಸುವ ಸಲುವಾಗಿ ಕಾರ್ಯಪಡೆಯೊಂದನ್ನು ರಚಿಸಿದೆ. ಈ ಮೂಲಕ ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ತಮ್ಮ ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸಲು ಮತ್ತು ನಿರ್ವಹಿಸಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಮುಂದೆ ಬಂದಿದೆ. ಹೀಗಾಗಿ ಶೈಕ್ಷಣಿಕ ಸಂಸ್ಥೆಗಳು ಕೂಡ ಈ ಅವಕಾಶವನ್ನು ಹೊರೆ ಎಂದು ಪರಿಗಣಿಸದೆ, ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗೆ ಅವಕಾಶದ ಬಾಗಿಲು ಎಂದು ಪರಿಗಣಿಸುವ ಅಗತ್ಯವಿದೆ.

(ಲೇಖಕರು ಸ್ಕೂಲ್‌ಗುರು ಎಜ್ಯುಸರ್ವ್‌ನ ಸಂಸ್ಥಾಪಕ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು