ಭಾನುವಾರ, ಆಗಸ್ಟ್ 25, 2019
26 °C

ಆನ್‌ಲೈನ್‌ ಪರೀಕ್ಷೆ ಎದುರಿಸುವುದು ಹೇಗೆ?

Published:
Updated:
Prajavani

ತಂತ್ರಜ್ಞಾನವು ಶಿಕ್ಷಣದಲ್ಲಿ ಮಾಡಿದ ಬದಲಾವಣೆ ಊಹೆಗೂ ನಿಲುಕದ್ದು.

ಇ– ಲರ್ನಿಂಗ್‌, ಆನ್‌ಲೈನ್‌ ಶಿಕ್ಷಣ ಒಂದು ರೀತಿಯ ಕ್ರಾಂತಿಯನ್ನೇ ಉಂಟು ಮಾಡಿದೆ. ಕಾಲೇಜುಗಳಲ್ಲಿ ಮಾತ್ರವಲ್ಲ, ಪ್ರೌಢಶಾಲೆಗಳಲ್ಲೂ ಕೂಡ ಕೃತಕ ಬುದ್ಧಿಮತ್ತೆಯನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಶಾಲೆ– ಕಾಲೇಜುಗಳಲ್ಲಿ ವಿದ್ಯುನ್ಮಾನ ಪರಿಕರಗಳ ಮೂಲಕ ಬೋಧನೆ ಮತ್ತು ಕಲಿಕೆ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಹಾಜರಾತಿ ಹಾಗೂ ಪರೀಕ್ಷೆಗಳು ಕೂಡಾ ನಡೆಯುತ್ತಲಿವೆ. ಅದರಲ್ಲೂ ಇತ್ತಿಚಿನ ದಿನಗಳಲ್ಲಿ ಪ್ರವೇಶ ಪರೀಕ್ಷೆ, ಅರ್ಹತಾ ಪರೀಕ್ಷೆ, ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು ಆನ್‌ಲೈನ್‌ನಲ್ಲಿಯೇ ನಡೆಯುತ್ತಿವೆ. ವಿದೇಶಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಗಿಟ್ಟಿಸಬೇಕಾದರೆ ನಡೆಯುವ ಅರ್ಹತಾ ಪರೀಕ್ಷೆಗಳು, ಸಂದರ್ಶನ, ಭಾಷಾ ಪರೀಕ್ಷೆಗಳು ಕೂಡ ಆನ್‌ಲೈನ್‌ನಲ್ಲೇ ನಡೆಯುತ್ತಿರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಹೀಗಾಗಿ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ ಕುರಿತು ತಿಳಿದುಕೊಳ್ಳುವುದು ಹೆಚ್ಚು ಸೂಕ್ತ.

ಆನ್‌ಲೈನ್‌ ಪರೀಕ್ಷೆಯೆಂದರೆ ಅಭ್ಯರ್ಥಿಗಳಿಗೆ ನಿಗದಿತ ಸಮಯವನ್ನು ನೀಡಿ ಅಂತರ್ಜಾಲವನ್ನು ಅಳವಡಿಸಿದ ಕಂಪ್ಯೂಟರ್‌ಗಳ ಮೂಲಕ ಪರೀಕ್ಷೆ ನಡೆಸುವುದು. ಇದರಲ್ಲಿ ಪಠ್ಯಕ್ರಮ ಆಧರಿಸಿ ಬಹು ಆಯ್ಕೆ ಪ್ರಶ್ನೆಗಳು ಇರಬಹುದು ಅಥವಾ ದೀರ್ಘವಾಗಿ ವಿವರಿಸಿ ಬರೆಯುವ ಪ್ರಶ್ನೆಗಳು ಇರಬಹುದು, ಕಂಪ್ಯೂಟರ್‌ ಪರದೆಯ ಮೇಲೆ ನೋಡಿ ಕೊಟ್ಟ ಉತ್ತರಗಳಲ್ಲಿ ಒಂದು ಉತ್ತರವನ್ನು ಆಯ್ಕೆ ಮಾಡುವುದೋ ಅಥವಾ ವಿವರವಾಗಿ ಉತ್ತರ ಬರೆಯುವುದೋ ಮಾಡಬೇಕಾಗುತ್ತದೆ. ಒಟ್ಟು ಪ್ರಶ್ನೆಪತ್ರಿಕೆಯನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಲಾಗಿರುತ್ತದೆ. ಅಭ್ಯರ್ಥಿಗಳು ಉತ್ತರಿಸಿದ ಹಾಗೆ ಒಂದಾದ ನಂತರ ಒಂದು ಪ್ರಶ್ನೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಕೆಲವು ಕಡೆ ಮಧ್ಯೆ ಮಧ್ಯೆ ಸಮಯದ ಬಗ್ಗೆ ಎಚ್ಚರಿಕೆ ನೀಡುವ ವ್ಯವಸ್ಥೆಯೂ ಇರುತ್ತದೆ. ಉತ್ತರಿಸಿದ ನಂತರ ಸಬ್‌ಮಿಟ್‌ ಬಟನ್‌ ಒತ್ತಿದರೆ ಆಯಿತು ಅಥವಾ ನಿಗದಿತ ಸಮಯದ ನಂತರ ಸ್ವಯಂ ಚಾಲಿತವಾಗಿ ಪರೀಕ್ಷೆ ಪೂರ್ಣಗೊಳ್ಳುವುದು.

ಪರೀಕ್ಷೆ ಹೇಗಿರುತ್ತದೆ?

ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ಅಭ್ಯರ್ಥಿಗೆ ಪ್ರತ್ಯೇಕ ಕಂಪ್ಯೂಟರ್‌ ಒದಗಿಸಲಾಗುವುದು. ಪರೀಕ್ಷಾ ಪದ್ಧತಿಗೆ ಅನುಗುಣವಾಗಿ ಈ ರೀತಿಯ ವ್ಯವಸ್ಥೆಗಳು ಇರುತ್ತವೆ.

ಪರೀಕ್ಷೆ ಪ್ರಾರಂಭಿಸುವ ಬಗೆಯನ್ನು ತಿಳಿಸಲು ನಿಮಗೆ ಸೂಚನೆಗಳಿರುತ್ತವೆ ಅಥವಾ ಕಂಪ್ಯೂಟರ್‌ ನಿರ್ವಾಹಕರು ಇರುತ್ತಾರೆ.

ಪರೀಕ್ಷೆ ಪ್ರಾರಂಭವಾದ ನಂತರ ಮುಕ್ತಾಯವಾಗಲು ಉಳಿದಿರುವ ಸಮಯವನ್ನು ಕಂಪ್ಯೂಟರ್‌ ಪರದೆಯ ಮೇಲೆ ಕಾಣಬಹುದು.

 ಪರೀಕ್ಷೆಯಲ್ಲಿ ಸಂಖ್ಯಾಶಾಸ್ತ್ರ, ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳಿಗೆ ಉತ್ತರಿಸಲು ಅನುಕೂಲವಾಗುವಂತೆ ಅಭ್ಯರ್ಥಿಗಳಿಗೆ ಚಿತ್ತು ಬರಹಕ್ಕಾಗಿ ಕಾಗದ ಹಾಗೂ ಪೆನ್ನು ಒದಗಿಸುತ್ತಾರೆ.

ಮೌಲ್ಯಮಾಪನ ತುಂಬಾ ಸುಲಭ ಮತ್ತು ಶೀಘ್ರವಾಗಿ ನಡೆಯುತ್ತದೆ.

ಶೀಘ್ರವಾಗಿ ಫಲಿತಾಂಶ ಪ್ರಕಟಿಸಲು ಸಹಾಯಕ.

ಇಡೀ ಪ್ರಕ್ರಿಯೆ ವಿದ್ಯಾರ್ಥಿ ಸ್ನೇಹಿ ಕೂಡ

ಬಹುತೇಕ ಎಲ್ಲಾ ರೀತಿಯ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನೂ ಇದು ಸಪೋರ್ಟ್‌ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲ.

ನೋಂದಣಿ ಹಾಗೂ ಉತ್ತರಿಸುವುದು ಕೂಡ ಸುಲಭ.

ಇದು ವೆಬ್‌ಬೇಸ್‌ ಇರುವುದರಿಂದ ಯಾವುದೇ ಡಿವೈಸ್‌ ಮೂಲಕ ಬರೆಯಬಹುದು.

ನೀವು ಪರೀಕ್ಷೆಯಲ್ಲಿ ಹೇಗೆ ಮಾಡಿದ್ದೀರಿ ಎಂಬುದರ ವಿಶ್ಲೇಷಣೆಯನ್ನೂ ಪಡೆಯಬಹುದು. ಇದರಿಂದ ಈ ವಿಷಯದಲ್ಲಿ ನಿಮ್ಮ ಪ್ರಗತಿಯನ್ನು ಅರಿತುಕೊಳ್ಳಬಹುದು.

ಇದಲ್ಲದೇ ವಿದ್ಯಾರ್ಥಿಗಳಿಗೆ ಬಹು ಆಯ್ಕೆ, ಚಿತ್ರಗಳ ಆಧಾರಿತ, ವಿಡಿಯೊ ಆಧಾರಿತ, ಬಿಟ್ಟ ಸ್ಥಳ ಭರ್ತಿ ಮಾಡುವಂತಹ ಹಲವು ಬಗೆಯ ಪ್ರಶ್ನೆಗಳನ್ನು ಎದುರಿಸುವ ಅವಕಾಶಗಳಿರುತ್ತವೆ.

ಪರೀಕ್ಷೆ ವಿಧಾನ

ಮೊದಲಿಗೆ ಅಭ್ಯರ್ಥಿಗಳು ಸಂಬಂಧಿಸಿದ ಪ್ರವೇಶ ಪರೀಕ್ಷೆ, ಅರ್ಹತಾ ಪರೀಕ್ಷೆ ಹಾಗೂ ನೇಮಕಾತಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿರಬೇಕು.

ಪರೀಕ್ಷಾ ಪ್ರಾಧಿಕಾರವು ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಬಿಡುಗಡೆಗೊಳಿಸಿರುವುದಾಗಿ ಎಸ್.ಎಂ.ಎಸ್. ಇಲ್ಲವೆ ಇ–ಮೇಲ್ ಮೂಲಕ ತಿಳಿಸುತ್ತದೆ.

ಪರೀಕ್ಷಾ ಪ್ರಾಧಿಕಾರದಿಂದ ಪ್ರಶ್ನೆಪತ್ರಿಕೆಯು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರದ ಮುಖ್ಯ ಕಂಪ್ಯೂಟರ್‌ (ಸರ್ವರ್) ಮೂಲಕ ಅಭ್ಯರ್ಥಿಗಳಿಗೆ ಗೊತ್ತುಪಡಿಸಿದ ಕಂಪ್ಯೂಟರ್‌ಗೆ ಬರುತ್ತದೆ.

ಅಭ್ಯರ್ಥಿಗಳು ಒಂದೊಂದಾಗಿ ಪ್ರಶ್ನೆಗಳಿಗೆ ಉತ್ತರಿಸುವುದು ಮುಗಿದ ನಂತರ ಅವರು ತಮ್ಮ ಪರೀಕ್ಷೆಯನ್ನು ಮುಗಿಸಬಹುದು. ಇಲ್ಲವೆ ಪರೀಕ್ಷೆಗೆ ನಿಗದಿಪಡಿಸಿದ ಸಮಯದ ನಂತರ ಪರೀಕ್ಷೆ ತಾನಾಗೇ ಕೊನೆಗೊಳ್ಳುತ್ತದೆ.

ಆನ್‌ಲೈನ್‌ನಲ್ಲಿ ಪರೀಕ್ಷೆ ತೆಗೆದುಕೊಂಡಾಗ, ಅದಕ್ಕೆ ಉತ್ತರಗಳನ್ನು ಅಳವಡಿಸಿದರೆ ಅತೀ ಶೀಘ್ರವಾಗಿ ಫಲಿತಾಂಶ ಪ್ರಕಟವಾಗುತ್ತದೆ. ಇದರಿಂದ ಅಭ್ಯರ್ಥಿಗಳಿಗೆ ಮುಂದಿನ ಸಿದ್ಧತೆಗೆ ಅನುಕೂಲವಾಗುತ್ತದೆ.

ರೈಲ್ವೆ, ಯುಪಿಎಸ್‌ಸಿ, ಬ್ಯಾಂಕ್‌ ಪರೀಕ್ಷೆ, ಯುಜಿಸಿ ನೆಟ್‌, ನೀಟ್‌, ಐಬಿಪಿಎಸ್‌, ಎನ್‌ಪಿಟಿಎಲ್‌, ಬ್ಯಾಂಕ್‌ ಪರೀಕ್ಷೆ ಮೊದಲಾದವುಗಳನ್ನು ಇದರಲ್ಲೇ ನಡೆಸಲಾಗುತ್ತಿದೆ.

ಆನ್‌ಲೈನ್ ಪರೀಕ್ಷೆಯ ಸಮಸ್ಯೆಗಳು

ಕಂಪ್ಯೂಟರ್‌ ಬಳಕೆಯ ಕುರಿತು ಸಾಮಾನ್ಯ ಜ್ಞಾನವಿರುವುದು ಕಡ್ಡಾಯ.

ಪ್ರಶ್ನೆಯನ್ನು ಸಂಪೂರ್ಣವಾಗಿ ನೋಡಬೇಕಾದರೆ ಸಮಯ ವ್ಯಯವಾಗುತ್ತದೆ.

ಕಂಪ್ಯೂಟರ್‌ ಸ್ಕ್ರೀನ್‌ ಮೇಲೆ ವಿವಿಧ ಸೂಚನೆ ನೀಡುವ ಒತ್ತುಗುಂಡಿಗಳಿರುತ್ತವೆ. ಅವು ಅಭ್ಯರ್ಥಿಗಳಿಗೆ ಗೊಂದಲ ಉಂಟು ಮಾಡಬಹುದು.

ಇದರಲ್ಲಿ ಅಭ್ಯರ್ಥಿಗಳು ಪರೀಕ್ಷೆ ಮುಗಿಸಲು ಸಮಯದ ಅಭಾವವನ್ನು ಎದುರಿಸಬಹುದು.

ಪರೀಕ್ಷೆ ಪ್ರಾರಂಭವಾದ ನಂತರ ಕಂಪ್ಯೂಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಪರೀಕ್ಷೆಗೆ ಸಮಯ ವಿಳಂಬವಾಗುತ್ತದೆ ಅಥವಾ ಪರೀಕ್ಷೆಯು ರದ್ದುಗೊಳ್ಳಬಹುದು.

ತಯಾರಿ ಹೇಗೆ?

 ಸಾಮಾನ್ಯ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.

ಆಫ್‌ಲೈನ್ ಪರೀಕ್ಷೆಯಂತೆಯೇ ಪಠ್ಯಕ್ರಮಕ್ಕೆ ಅನುಗುಣವಾಗಿ ಪರೀಕ್ಷಾ ಪೂರ್ವತಯಾರಿ ಮಾಡಿರಬೇಕು.

ಪರೀಕ್ಷಾ ಪ್ರಾಧಿಕಾರವು ನೀಡಿರುವ ಆನ್‌ಲೈನ್ ಪರೀಕ್ಷಾ ಮಾರ್ಗಸೂಚಿಗಳನ್ನು ಗಮನಿಸಬೇಕು.

ಅಂತರ್ಜಾಲವನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್ ಇಲ್ಲವೆ ಕಂಪ್ಯೂಟರ್‌ ಮೂಲಕ ಆನ್‌ಲೈನ್‌ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆಯ ಭಯ ಹಾಗೂ ಗೊಂದಲಗಳು ನಿವಾರಣೆಯಾಗುತ್ತವೆ.

(ಲೇಖಕರು ಉಪನ್ಯಾಸಕರು, ಬಿ.ವಿ.ವಿ.ಎಸ್. ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯ ಮುಧೋಳ)

Post Comments (+)