ಸಂದರ್ಶನ ಎದುರಿಸುವುದು ಹೇಗೆ?

ಗುರುವಾರ , ಜೂನ್ 20, 2019
27 °C

ಸಂದರ್ಶನ ಎದುರಿಸುವುದು ಹೇಗೆ?

Published:
Updated:
Prajavani

ನಾನು ಮಾಹಿತಿ ವಿಜ್ಞಾನದಲ್ಲಿ 2017ರಲ್ಲಿ ಎಂಜಿನಿಯರಿಂಗ್‌ ಮಾಡಿದ್ದೇನೆ. ಕ್ಯಾಂಪಸ್‌ ಆಯ್ಕೆ ಆಗಲಿಲ್ಲ. ಹೊರಗಡೆ ಯತ್ನಿಸಿದಾಗ ರಾತ್ರಿ ಪಾಳಿಯ ಕೆಲಸ ಸಿಕ್ತು. ಆದರೆ ಕೆಲಸಕ್ಕೆ ಹೋಗಲು ಮನೆಯಲ್ಲಿ ಬಿಡಲಿಲ್ಲ. ಹೀಗಾಗಿ ಕೆಲವು ತಿಂಗಳು ಮನೆಯಲ್ಲೇ ಇದ್ದೆ. ಮತ್ತೆ ಯಾವುದೋ ಕಂಪನಿಯಲ್ಲಿ ಅಪ್ರೆಂಟಿಸ್ ಆಗಿ ಸೇರಿಕೊಂಡೆ. ಆದರೆ ಒಂದೇ ತಿಂಗಳು ಹೋಗಿ ಬಿಟ್ಟುಬಿಟ್ಟೆ. ಈಗ ಜಾವಾ ಕೋರ್ಸ್‌ ಮಾಡುತ್ತಿದ್ದೇನೆ. ಇನ್ನು ಆರು ತಿಂಗಳಲ್ಲಿ ಪೂರ್ಣವಾಗುತ್ತದೆ. ಆದರೆ ನನಗೆ ಆತ್ಮವಿಶ್ವಾಸದ ಮಟ್ಟ ಕಡಿಮೆಯಾಗುತ್ತಿದೆ. ಸಂದರ್ಶನ ಎದುರಿಸಲು ಭಯವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಂತೆ ಪೋಷಕರು ಹೇಳುತ್ತಿದ್ದಾರೆ. 5–6 ಪರೀಕ್ಷೆಗಳನ್ನು ಬರೆದೆ. ಆದರೆ ಪಾಸ್‌ ಆಗಲಿಲ್ಲ. ಯಾವುದರ ಮೇಲೆ ಗಮನಹರಿಸಬೇಕು ಅಂತ ಗೊಂದಲವಾಗುತ್ತಿದೆ. ‘ಇಷ್ಟು ವರ್ಷಗಳಿಂದ ಏನು ಮಾಡುತ್ತಿದ್ದೀರಿ?’ ಎಂದು ಯಾರಾದರೂ ಕೇಳಿದರೆ ಎದುರಿಸಲು ಕಷ್ಟವಾಗುತ್ತಿದೆ. ಸಹಾಯ ಮಾಡಿ.

ಹೆಸರು, ಊರು ಬೇಡ

ನೀವು ನಿಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅದನ್ನು ಪರಿಹರಿಸಿಕೊಳ್ಳಲು ನೆರವು ಕೇಳಲು ಹೊರಟಿರುವುದು ಒಂದು ಒಳ್ಳೆಯ ಮತ್ತು ಶ್ಲಾಘನೀಯ ನಡೆ. ದಿನನಿತ್ಯ ಅನೇಕ ಯುವಜನರ ಜೊತೆ ನಾನು ಮಾತನಾಡುತ್ತಿರುತ್ತೇನೆ. ನಿಮ್ಮ ಹಾಗೆ ಬಹಳಷ್ಟು ಯುವಕ– ಯುವತಿಯರು ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿರುತ್ತಾರೆ. ಕೆಲವೊಮ್ಮೆ ಇದಕ್ಕಿಂತಲೂ ಕಷ್ಟಕರವಾದ ಸನ್ನಿವೇಶಗಳನ್ನು ಎದುರಿಸುತ್ತಿರುತ್ತಾರೆ. ನೀವು ಭಯಪಡಬೇಕಾಗಿಲ್ಲ. ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಅರ್ಥ ಮಾಡಿಕೊಂಡು, ಸೂಕ್ತ ಯೋಜನೆ ಮತ್ತು ಮಾರ್ಗಸೂಚಿಗಳನ್ನು ಹಾಕಿಕೊಂಡು ಅನುಷ್ಠಾನಗೊಳಿಸಿದರೆ ನೀವು ಈ ಪರಿಸ್ಥಿತಿಯಿಂದ ಹೊರಬರಬಹುದು.

ಮೊದಲನೆಯದಾಗಿ ನೀವು ಮುಂದೆ ಏನನ್ನು ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ನೀವು ಹೇಳಿರುವ ಪ್ರಕಾರ ನಿಮ್ಮಲ್ಲಿ ಗೊಂದಲವಿದ್ದು ಅದರ ಪರಿಣಾಮವಾಗಿ ಎರಡು ವರ್ಷ ಕಳೆದಿರುವುದು ಕಾಣುತ್ತದೆ. ಈ ಗೊಂದಲದ ಪರಿಹಾರಕ್ಕಾಗಿ ಮೊದಲು ನಿಮ್ಮನ್ನು ನೀವು ತಿಳಿಯುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ಸಮಯ ವಿನಿಯೋಗಿಸಿ. ಗಂಭೀರವಾಗಿ ಆಲೋಚಿಸಿ ನಿಮ್ಮ ಆಸಕ್ತಿ, ಸಾಮರ್ಥ್ಯ, ಈ ಸಂದರ್ಭದಲ್ಲಿ ನಿಮಗಿರುವ ಅವಕಾಶಗಳು ಮತ್ತು ಮಿತಿಗಳಲ್ಲಿ ಯಾವ ಆಯ್ಕೆಗಳಿವೆ ಎಂಬುದರ ಕುರಿತು ಆಲೋಚಿಸಿ. ಆ ಪ್ರಕಾರ ನಿಮ್ಮ ಮುಂದಿನ ಯೋಜನೆ ರೂಪಿಸಿಕೊಳ್ಳಿ.

ಸದ್ಯ ಸರ್ಕಾರಿ ಕೆಲಸಗಳ ಕುರಿತ ಸಾಧ್ಯತೆ ಮತ್ತು ಅವಕಾಶಗಳನ್ನು ನೋಡಿದರೆ ಕೆಲಸ ಮಾಡುತ್ತ ಓದಿಕೊಳ್ಳುವುದು ಉತ್ತಮ. ಕೆಲಸ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದೀರಿ ಎಂದಾದರೆ ನಿಮ್ಮ ಜಾವಾ ಕೋರ್ಸ್‌ ಅನ್ನು ಚೆನ್ನಾಗಿ ಓದಿ ಪೂರ್ಣಗೊಳಿಸಿಕೊಂಡು ಅದರ ಆಧಾರದ ಮೇಲೆ ಕೆಲಸಗಳನ್ನು ನೋಡಿ. ಮೊದಲಿಗೆ ಸಂಬಳ, ಪಾಳಿ, ಸ್ಥಳ ಯಾವುದನ್ನೂ ನೋಡಬೇಡಿ, ಕೆಲಸಕ್ಕೆ ಸೇರಿ ಅನುಭವ ಮತ್ತು ಕೌಶಲ ಗಳಿಸಿಕೊಳ್ಳಿ. ಇದರ ಜೊತೆಗೆ ಬಿಡುವಿನ ಸಮಯದಲ್ಲಿ ಸರ್ಕಾರಿ ಪರೀಕ್ಷೆಗಳ ತಯಾರಿಗೆ ಯೋಜನೆ ರೂಪಿಸಿಕೊಂಡು ಓದಬಹುದು. ಒಂದು ವೇಳೆ ಸರ್ಕಾರಿ ಕೆಲಸ ಸಿಗದಿದ್ದರೂ ಕೆಲಸದ ಅನುಭವದ ಆಧಾರದ ಮೇಲೆ ನಿಮ್ಮ ವೃತ್ತಿ ಜೀವನವನ್ನು ಮುಂದುವರಿಸಬಹುದು. ಇದು ಕಾರ್ಯಸಾಧ್ಯವಾದ ಒಂದು ಮಾರ್ಗ ಅಷ್ಟೆ. ಆದರೆ ನಿಮ್ಮ ನಿರ್ಧಾರವನ್ನು ನಿಮ್ಮ ಅನುಕೂಲ ಮತ್ತು ಪರಿಸ್ಥಿತಿಯ ಆಧಾರದ ಮೇಲೆ ನೀವೇ ನಿರ್ಧರಿಸಿಕೊಳ್ಳಿ. ಮುಂದೆ ಏನನ್ನು ಮಾಡಲು ಹೊರಡುತ್ತಿರೋ ಅದನ್ನು ಸ್ಥಿರ ಮನಸ್ಸಿನಿಂದ ಮುಂದುವರಿಸಿ. ಪದೇ ಪದೇ ನಿಮ್ಮ ಗುರಿಯನ್ನು ಬದಲಿಸಬೇಡಿ.

ನಿಮ್ಮ ಬಗ್ಗೆ ನೀವೇ ನಕರಾತ್ಮಕವಾದ ವಿಶ್ಲೇಷಣೆ ಮಾಡಿಕೊಳ್ಳಬೇಡಿ. ನೀವು ಬರೆದ ಪರೀಕ್ಷೆಗಳನ್ನು ಪಾಸು ಮಾಡಿಕೊಳ್ಳದಿರುವುದಕ್ಕೆ ನಿಮ್ಮನ್ನು ಹೊಣೆಯಾಗಿಸಿಕೊಂಡು ಬೇಸರಪಡುವುದಕ್ಕಿಂತ ನಿಮ್ಮ ಪರೀಕ್ಷಾ ತಯಾರಿಯಲ್ಲಿನ ಯಾವ ಲೋಪಗಳಿಂದ ಪರೀಕ್ಷೆ ಪಾಸಾಗಲಿಲ್ಲ ಎಂದು ಆಲೋಚಿಸಿ. ಅದನ್ನು ಮುಂದೆ ಹೇಗೆ ಸರಿಪಡಿಸಿಕೊಳ್ಳಬಹುದು ಎಂದು ಆಲೋಚಿಸಿ.

ಹಾಗೆ ನಿಮ್ಮ ಸಂದರ್ಶನಗಳ ಬಗ್ಗೆಯೂ ಆತಂಕಪಟ್ಟುಕೊಳ್ಳಬೇಡಿ. ಹಿಂದೆ ಕಳೆದು ಹೋಗಿರುವ ಸಮಯ ಮತ್ತು ಸನ್ನಿವೇಶಗಳು ಎಲ್ಲವೂ ವಾಸ್ತವ. ಅದೆಲ್ಲವನ್ನೂ ಒಪ್ಪಿಕೊಳ್ಳಿ ಮತ್ತು ಅದನ್ನೇ ನಿಮ್ಮ ಸಂದರ್ಶನಗಳಲ್ಲಿ ಹೇಳಿ. ಈಗ ನೀವು ಕಲಿಯುತ್ತಿರುವ ಜಾವಾದ ಬಗ್ಗೆ ನಿಮಗಿರುವ ಜ್ಞಾನ ಮತ್ತು ಕೌಶಲವನ್ನು ಸಂದರ್ಶನಗಳಲ್ಲಿ ತೋರ್ಪಡಿಸಿ, ಸಮರ್ಥವಾಗಿ ಮತ್ತು ಬದ್ಧತೆಯಿಂದ ಕೆಲಸ ಮಾಡಬಲ್ಲೆ ಎಂದು ಭರವಸೆ ಮೂಡಿಸಿ. ಆಗ ಉಳಿದೆಲ್ಲವೂ ಗೌಣವಾಗುತ್ತದೆ. ಆಲ್ ದಿ ಬೆಸ್ಟ್!

* ನಾನು ದ್ವಿತೀಯ ವರ್ಷದ ಬಿ.ಇ. (ಎಲೆಕ್ಟ್ರಾನಿಕ್ಸ್‌) ಓದುತ್ತಿದ್ದೇನೆ. ನನ್ನ ಮೊದಲ ಗುರಿ ಐಎಎಸ್‌/ ಕೆಎಎಸ್‌ ಆಗಿದೆ. ನಾನು ಪಿಯುಸಿ ಆದ ಮೇಲೆ 2–3 ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದೇನೆ. ನಾನು ಈಗ ಸರ್ಕಾರಿ ನೌಕರಿ ಪಡೆದು ಡಿಗ್ರಿಯನ್ನು ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾಡಬೇಕು ಎಂದುಕೊಂಡಿದ್ದೇನೆ. ಸರ್ಕಾರಿ ಉದ್ಯೋಗ ಸಿಕ್ಕಮೇಲೆ ಬಿ.ಇ.ಯನ್ನು ಸಂಜೆ ಕಾಲೇಜಿನಲ್ಲಿ ಮಾಡಬಹುದೇ? ಅಥವಾ ಎಂಜಿನಿಯರಿಂಗ್‌ ಬಿಟ್ಟು ಕರಸ್ಪಾಂಡೆನ್ಸ್‌ನಲ್ಲಿ ಡಿಗ್ರಿ ಮಾಡಲೇ? ದಯವಿಟ್ಟು ತಿಳಿಸಿಕೊಡಿ.

ಯಲ್ಲಪ್ಪ, ರಾಯಚೂರು

ಪಿ.ಯು.ಸಿ. ಆಧಾರದ ಮೇಲೆ ಸರ್ಕಾರಿ ನೌಕರಿ ದೊರೆತರೆ ಮಧ್ಯದಲ್ಲಿ ರೆಗ್ಯುಲರ್‌ ಶಿಕ್ಷಣ ಬಿಡುವುದೋ ಅಥವಾ ಬೇಡವೊ ಅನ್ನೋ ವಿಚಾರದಲ್ಲಿ ನಿಮ್ಮ ಜೀವನದ ಪರಿಸ್ಥಿತಿ, ಗುರಿ, ಲಭ್ಯವಿರುವ ಆಯ್ಕೆ ಮತ್ತು ಅವಕಾಶಗಳ ಕುರಿತು ನಿಮಗೇ ಹೆಚ್ಚು ತಿಳಿದಿರುವುದರಿಂದ ನೀವೇ ನಿರ್ಧರಿಸುವುದು ಉತ್ತಮ. ಕೇವಲ ಸಾಧ್ಯತೆಗಳ ಬಗೆಗಷ್ಟೆ ನಾವಿಲ್ಲಿ ಚರ್ಚೆ ಮಾಡಬಹುದು

ನೀವು ತಿಳಿಸಿರುವಂತೆ ನಿಮ್ಮ ಪ್ರಮುಖ ಗುರಿ ಐ.ಎ.ಎಸ್. ಅಥವಾ ಕೆ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಆ ಹುದ್ದೆಗಳನ್ನು ಪಡೆಯುವುದು. ಅದಕ್ಕಾಗಿ ಪದವಿ ಹೊಂದುವುದು ಕನಿಷ್ಠ ಶೈಕ್ಷಣಿಕ ಅರ್ಹತೆ. ಈಗಾಗಲೇ ನೀವು ಎರಡು ವರ್ಷ ಓದಿರುವುದರಿಂದ ಮತ್ತು ಇನ್ನೆರಡು ವರ್ಷಗಳಲ್ಲಿ ನಿಮ್ಮ ಎಂಜಿನಿಯರಿಂಗ್ ಪದವಿ ಮುಗಿಯುವುದರಿಂದ ಅದನ್ನು ಪೂರ್ಣಗೊಳಿಸುವುದು ಉತ್ತಮ. ಆಗ ನೀವು ಐ.ಎ.ಎಸ್. ಅಥವಾ ಕೆ.ಎ.ಎಸ್. ಪರೀಕ್ಷೆ ಬರೆಯಲು ಒಂದು ವರ್ಷ ಬೇಗ ಅರ್ಹರಾಗುತ್ತೀರಿ. ಪಿ.ಯು.ಸಿ. ಶಿಕ್ಷಣದ ಆಧಾರದ ಮೇಲೆ ಮಾತ್ರವಲ್ಲದೆ ನಿಮ್ಮ ಪದವಿ ಶಿಕ್ಷಣದ ಆಧಾರದ ಮೇಲೆಯೂ ಕರೆಯಲಾಗುವ ಬೇರೆ ಬೇರೆ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನೂ ಕೂಡ ಎದುರಿಸಲು ಆಗುವುದರಿಂದ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತವೆ. ಸಂಜೆ ಕಾಲೇಜುಗಳು ಬೆಂಗಳೂರು, ಮಂಗಳೂರು, ಮೈಸೂರಿನಂತಹ ಇತರ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಇದ್ದು ನಿಮಗೆ ದೊರಕುವ ಸರ್ಕಾರಿ ಕೆಲಸದ ಸ್ಥಳದಲ್ಲಿ ಸಂಜೆ ಕಾಲೇಜುಗಳ ಲಭ್ಯತೆ ಇದ್ದರೆ ಮಾಡಬಹುದು.

ಜೀವನ ನಿರ್ವಹಣೆಗೆ ಸರಕಾರಿ ನೌಕರಿ ಸಿಕ್ಕರೆ ಅದಕ್ಕೇ ಸೇರಿಕೊಂಡು ಮುಂದಿನ ಶಿಕ್ಷಣವನ್ನು ದೂರ ಶಿಕ್ಷಣದಲ್ಲಿ ಪೂರೈಸಿಕೊಂಡು ಆ ಮೂಲಕ ನಿಮ್ಮ ಗುರಿ ತಲುಪಬಹುದು ಎಂಬ ವಿಶ್ವಾಸ ಇದ್ದರೆ ನಿಮ್ಮ ಇಚ್ಛೆಯಂತೆ ಮಾಡಿ. ಬಿಹಾರದ ಕೇಶವೇಂದ್ರ ಕುಮಾರ್, ಕುಮಾರ್ ರವಿಕಾಂತ ಸಿಂಗ್ ಅವರಂತಹವರು ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಓದಿಯೂ ಐ.ಎ.ಎಸ್. ಹುದ್ದೆಗಳನ್ನು ಪಡೆದು ಸಾಧಿಸಿ ತೋರಿಸಿದ್ದಾರೆ.

* ಸರ್, ನಾನು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ದೂರಶಿಕ್ಷಣದ ಮೂಲಕ ಪದವಿ ಮಾಡುತ್ತಿದ್ದೇನೆ. ನನಗೆ ಮುಂದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಲು ಯಾವುದೇ ತೊಂದರೆ ಇಲ್ಲವೇ ಹಾಗೂ ಈ ವಿಶ್ವವಿದ್ಯಾಲಯವು ಯುಜಿಸಿ ಮಾನ್ಯತೆ ಪಡೆದಿದೆಯೇ?

ಅರ್ಜುನ್‌, ಮುತ್ತತ್ತಿ

ಹೆಚ್ಚಿನ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅವುಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆ ಹೊಂದಿರುವುದು ಮುಖ್ಯವಾಗುತ್ತದೆಯೇ ಹೊರತು ದೂರ ಶಿಕ್ಷಣದಲ್ಲಿ ಅಥವಾ ರೆಗ್ಯುಲರ್‌ ಶಿಕ್ಷಣದಲ್ಲಿ ಮಾಡಿದ್ದಾರೆಯೇ ಎನ್ನುವುದು ಮುಖ್ಯವಾಗುವುದಿಲ್ಲ. ಹೀಗಾಗಿ ನೀವು ದೂರ ಶಿಕ್ಷಣದಲ್ಲಿ ಓದಿದರೂ ಹೆಚ್ಚಿನ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಸಿವಿಲ್ ಸರ್ವೀಸ್‌ ಪರೀಕ್ಷೆಗಳು, ಬ್ಯಾಂಕಿಂಗ್, ಎಸ್.ಎಸ್.ಸಿ. ಪರೀಕ್ಷೆಗಳು, ರಾಜ್ಯ ಸರ್ಕಾರದ ಕೆ.ಎ.ಎಸ್., ಎಫ್.ಡಿ.ಎ., ಎಸ್.ಡಿ.ಎ. ಮತ್ತು ಇತರ ಅನೇಕ ನೇಮಕಾತಿಗಳಿಗೆ ದೂರ ಶಿಕ್ಷಣದಲ್ಲಿ ಓದಿದವರು ಅರ್ಹರಾಗಿರುತ್ತಾರೆ. ಕೆಲವು ನಿರ್ದಿಷ್ಟ ಹುದ್ದೆಗಳಿಗೆ ಮಾತ್ರ ರೆಗ್ಯುಲರ್ ವಿಧಾನದಲ್ಲಿ ಪದವಿ ಹೊಂದಿರಬೇಕು ಎಂದು ಸ್ಪಷ್ಟಪಡಿಸಿರುತ್ತಾರೆ ಮತ್ತು ಆಗ ಅಂತಹ ಹುದ್ದೆಗಳಿಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಆ ಬಗ್ಗೆ ಆಯಾ ಪರೀಕ್ಷಾ ನೋಟಿಫಿಕೇಶನ್‌ಗಳಲ್ಲಿ ಪರಿಶೀಲಿಸಿಕೊಳ್ಳಬೇಕು.

ಧಾರವಾಡ ವಿಶ್ವವಿದ್ಯಾಲಯವು ಯುಜಿಸಿಯ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯವಾಗಿದ್ದು ಆ ಬಗ್ಗೆ ನಿಮಗೆ ಗೊಂದಲ ಬೇಡ. ಆದರೆ ನೀವು ಓದುತ್ತಿರುವ ಪದವಿ ಕೋರ್ಸ್‌ ಯುಜಿಸಿ ಮಾನ್ಯತೆ ಹೊಂದಿದೆಯೇ ಇಲ್ಲವೇ ಎಂಬುದರ ಬಗ್ಗೆ ಗೊಂದಲವಿದ್ದರೆ ವಿಶ್ವವಿದ್ಯಾಲಯದ ಕಚೇರಿಯಲ್ಲಿಯೇ ಆ ಬಗ್ಗೆ ಒಮ್ಮೆ ಪರಿಶೀಲಿಸಿಕೊಳ್ಳಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !