ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Last Updated 26 ಜೂನ್ 2019, 9:55 IST
ಅಕ್ಷರ ಗಾತ್ರ

ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಒಳ್ಳೆಯ ಶಿಕ್ಷಣ ಸಂಸ್ಥೆಯಲ್ಲಿ ಬಯಸಿದಂತಹ ಕೋರ್ಸ್‌ನಲ್ಲಿ ಶಿಕ್ಷಣ ಪೂರೈಸುವುದು ಆರ್ಥಿಕ ದೃಷ್ಟಿಯಿಂದ ಕಷ್ಟವೇ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಯ ನೆರವಿಗೆ ಬರುವುದು ಶಿಕ್ಷಣ ಸಾಲ. ಆನ್‌ಲೈನ್‌ ಅರ್ಜಿಗಳು, ಅರ್ಜಿಯ ಕ್ಷಿಪ್ರ ವಿಲೇವಾರಿ, ತಜ್ಞರ ಸಲಹೆ ಶೈಕ್ಷಣಿಕ ಸಾಲವನ್ನು ವಿದ್ಯಾರ್ಥಿಸ್ನೇಹಿಯನ್ನಾಗಿಸಿದರೂ ಇದರಲ್ಲಿ ಕೆಲವು ಜಟಿಲತೆಗಳೂ ಅಡಗಿವೆ.

***

ಶಿಕ್ಷಣ ಎಂಬುದು ಸದ್ಯಕ್ಕೆ ದುಬಾರಿ ಬಾಬ್ತು. ಅದರಲ್ಲೂ ವಿದೇಶದಲ್ಲಿ ಉನ್ನತ ಶಿಕ್ಷಣವೆಂದರಂತೂ ವಿದ್ಯಾರ್ಥಿಗಳ ಪೋಷಕರಲ್ಲಿ ಹಿಂಜರಿಕೆ ಸಹಜ. ನಿಮ್ಮ ಮಕ್ಕಳ ಕನಸನ್ನು ನನಸು ಮಾಡುವುದಕ್ಕೆ ಆರ್ಥಿಕ ಸ್ಥಿತಿ ಕೈಕೊಡಬಹುದು. ಈಗಂತೂ ಮಕ್ಕಳ ಎಲ್‌ಕೆಜಿ ಪ್ರವೇಶಕ್ಕೇ ಲಕ್ಷಗಟ್ಟಲೆ ಹಣವನ್ನು ಶುಲ್ಕವಾಗಿ ನೀಡಬೇಕಾಗುತ್ತದೆ. ಜೊತೆಗೆ ಸಮವಸ್ತ್ರ, ವಾಹನ ವ್ಯವಸ್ಥೆ, ವಿಶೇಷ ದಿನಗಳು ಎಂದೆಲ್ಲ ಮೇಲು ಖರ್ಚು ಇದ್ದೇ ಇರುತ್ತದೆ. ಇನ್ನು ಮಕ್ಕಳು ಹೈಸ್ಕೂಲ್‌ನಲ್ಲಿದ್ದಾಗಲೇ ಭವಿಷ್ಯದ ಶೈಕ್ಷಣಿಕ ಖರ್ಚು ಕಾಡತೊಡಗುತ್ತದೆ. ಹಣದ ಕೊರತೆಯಿದ್ದರೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸುವುದು ಸಾಧ್ಯವಿಲ್ಲ ಎಂಬುದಂತೂ ನಿಜ. ಇಂತಹ ಸಂದರ್ಭದಲ್ಲಿ ನೆರವಿಗೆ ಬರುವುದು ಶಿಕ್ಷಣ ಸಾಲ.

ಭಾರತೀಯ ಬ್ಯಾಂಕುಗಳು ನೀಡುವ ಶಿಕ್ಷಣ ಸಾಲ ವಿದ್ಯಾರ್ಥಿಗಳ ಟ್ಯೂಷನ್‌ ಶುಲ್ಕದ ಭಾರವನ್ನು ಕಡಿಮೆ ಮಾಡಬಲ್ಲದು. ಕೆಲವು ಬ್ಯಾಂಕುಗಳು ನೀಡುವ ಸಾಲವನ್ನು ವಿದ್ಯಾರ್ಥಿಗಳ ವಸತಿ ವೆಚ್ಚ, ಪುಸ್ತಕ, ಇತರ ಪಾಠೋಪಕರಣದ ಖರ್ಚಿಗೂ ಬಳಸಬಹುದು. ವಿದೇಶಗಳಿಗೆ ಹೋಗುವುದಾದರೆ ಹೋಗಿ ಬರುವ ವೆಚ್ಚ ಹಾಗೂ ವಿಮಾ ಹಣಕ್ಕೂ ಈ ಸಾಲವನ್ನು ಬಳಸಬಹುದು. ಈ ಬಗ್ಗೆ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.

ಆದರೆ ಶಿಕ್ಷಣ ಸಾಲವನ್ನು ಪಡೆಯಬೇಕಾದರೆ ಕೆಲವು ಮಹತ್ವದ ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ. ಸಾಲದ ಮೇಲಿನ ಬಡ್ಡಿದರ, ಮರುಪಾವತಿ ಮಾಡುವ ದಿನಾಂಕ, ಪೂರ್ವಪಾವತಿ ಶುಲ್ಕ, ಭದ್ರತೆ ಅಥವಾ ಜಾಮೀನು, ಎಲ್ಲಕ್ಕಿಂತ ಮುಖ್ಯವಾಗಿ ಸಾಲದ ಅರ್ಜಿಯ ಕ್ಷಿಪ್ರ ವಿಲೇವಾರಿ ಇವುಗಳನ್ನು ಪರಿಶೀಲಿಸಿ. ಶಿಕ್ಷಣ ಮುಗಿಸುವುದು ಅಥವಾ ಉದ್ಯೋಗಕ್ಕೆ ಸೇರುವುದು ವಿಳಂಬವಾದರೆ ಸಾಲ ಮರುಪಾವತಿಗೆ ಅವಧಿ ವಿಸ್ತರಿಸಲು ಸಾಧ್ಯವೇ ಎಂಬುದನ್ನೂ ನೋಡಿಕೊಳ್ಳಬೇಕು.

ಭಾರತದಲ್ಲಿ ಬಹುತೇಕ ರಾಷ್ಟ್ರೀಯ ಹಾಗೂ ಖಾಸಗಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಶಿಕ್ಷಣ ಸಾಲವನ್ನು ನೀಡುತ್ತಿವೆ. ವಿದ್ಯಾರ್ಥಿ ಸಲ್ಲಿಸಿದ ಅರ್ಜಿಯನ್ನು ಶೀಘ್ರ ಪರಿಶೀಲಿಸಿ ಪ್ರಕ್ರಿಯೆ ಪೂರ್ಣಗೊಳಿಸಲು ಆರ್‌ಬಿಐ ಕೂಡ ನಿರ್ದೇಶನ ನೀಡಿದೆ.

ಭದ್ರತಾ ಸಾಲ

ಶೈಕ್ಷಣಿಕ ಸಾಲದಲ್ಲಿ ಎರಡು ರೀತಿಯಿದೆ– ಭದ್ರತಾ ಸಾಲ (ಸೆಕ್ಯುರ್ಡ್‌) ಹಾಗೂ ಭದ್ರತೆಯಿಲ್ಲದ ಸಾಲ (ಅನ್‌ಸೆಕ್ಯುರ್ಡ್‌). ಸಾಮಾನ್ಯವಾಗಿ 50 ಸಾವಿರ ರೂಪಾಯಿಯಿಂದ ನಾಲ್ಕು ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಯಾವುದೇ ಭದ್ರತೆಯ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಮಾರ್ಜಿನ್‌ ಕೂಡ ಇರುವುದಿಲ್ಲ. ಅಂದರೆ ಪೂರ್ಣ ಮೊತ್ತವನ್ನು ಬ್ಯಾಂಕ್‌ ನೀಡುತ್ತದೆ. ಇದಕ್ಕೆ ಅನ್‌ಸೆಕ್ಯುರ್ಡ್‌ ಅಥವಾ ಭದ್ರತೆಯಿಲ್ಲದ ಸಾಲವೆಂದು ಪರಿಗಣಿಸಲಾಗುವುದು. ಇದಕ್ಕೆ ಬಡ್ಡಿದರ ಕೊಂಚ ಜಾಸ್ತಿ ಇರಬಹುದು. ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪೋಷಕರನ್ನು ಜಂಟಿ ಸಾಲಗಾರರೆಂದು ಪರಿಗಣಿಸುತ್ತವೆ. ವಿದ್ಯಾರ್ಥಿ ಸಾಲ ಮರುಪಾವತಿ ಮಾಡಲು ವಿಫಲನಾದರೆ ಪೋಷಕರೇ ಅದಕ್ಕೆ ಜವಾಬ್ದಾರರು. ₹4 ಲಕ್ಷದಿಂದ ₹7.5 ಲಕ್ಷದವರೆಗಿನ ಸಾಲಕ್ಕೆ ಮೂರನೇ ಪಾರ್ಟಿ ಜಾಮೀನುದಾರರಾಗಬೇಕಾಗುತ್ತದೆ ಅಥವಾ ಭದ್ರತೆ ನೀಡಬೇಕಾಗುತ್ತದೆ. ಇದು ಸೆಕ್ಯುರ್ಡ್‌ ಅಥವಾ ಭದ್ರತಾ ಸಾಲ. ಸಾಲದ ಮೊತ್ತ ₹7.5 ಲಕ್ಷಕ್ಕಿಂತ ಅಧಿಕವಿದ್ದರೆ ಅದಕ್ಕೆ ಆಸ್ತಿ (ಮನೆ, ಕೃಷಿಯೇತರ ಭೂಮಿ, ವಿಮೆ, ಭದ್ರತಾ ಠೇವಣಿ ಮೊದಲಾದವು) ಯನ್ನು ಒತ್ತೆ ಇಡಬೇಕಾಗುತ್ತದೆ.

ಸಾಲ ನೀಡುವಾಗ ವಿದ್ಯಾರ್ಥಿಯ ಮೆರಿಟ್‌ ಕೂಡ ಲೆಕ್ಕಕ್ಕೆ ಬರುತ್ತದೆ. ಮೆರಿಟ್‌ ಅಧಿಕ ಇರುವ ವಿದ್ಯಾರ್ಥಿ ಭದ್ರತೆಯಿಲ್ಲದ ಸಾಲ ಪಡೆಯಲು ಅರ್ಹ ಎಂದು ಕೆಲವು ಬ್ಯಾಂಕುಗಳು ಪರಿಗಣಿಸಬಹುದು. ಅದು ಆಯಾ ಬ್ಯಾಂಕ್‌ಗಳಿಗೆ ಬಿಟ್ಟ ವಿಷಯ.

ಬ್ಯಾಂಕ್‌ ಕೇಳುವ ಸೂಕ್ತ ದಾಖಲೆಗಳು, ಅಂದರೆ ಕೆವೈಸಿ, ಶೈಕ್ಷಣಿಕ ಅಹರ್ತೆ ಕುರಿತ ದಾಖಲೆಗಳು, ಪ್ರವೇಶ ಪಡೆಯುವ ಶೈಕ್ಷಣಿಕ ಸಂಸ್ಥೆಯ ವಿವರ, ಶುಲ್ಕ, ಪ್ರವೇಶ ಪತ್ರ ಮೊದಲಾದವುಗಳನ್ನು ನೀಡಬೇಕು.

ಸಾಲದ ಮರುಪಾವತಿ

ಸಾಮಾನ್ಯವಾಗಿ ಶಿಕ್ಷಣ ಸಾಲದ ಮರುಪಾವತಿಯು ‘ಮರುಪಾವತಿ ರಜೆ’ ಅಂದರೆ ಶಿಕ್ಷಣ ಮುಗಿದ ಒಂದು ವರ್ಷದ ನಂತರ ಅಥವಾ ಉದ್ಯೋಗಕ್ಕೆ ಸೇರಿದ ಆರು ತಿಂಗಳ ನಂತರ ಆರಂಭವಾಗುತ್ತದೆ. ಇವೆರಡರಲ್ಲಿ ಯಾವುದು ಮೊದಲೋ ಅದನ್ನು ಪರಿಗಣಿಸಲಾಗುತ್ತದೆ. ಇಎಂಐ ಶುರುವಾಗುವ ಮೊದಲೇ ಮರುಪಾವತಿಗೆ ಯೋಜನೆ ರೂಪಿಸಿಕೊಂಡರೆ ಉತ್ತಮ.

ಸಾಲಗಾರ ಅಂದರೆ ಇಲ್ಲಿ ವಿದ್ಯಾರ್ಥಿಗೆ ಹಲವು ರಿಯಾಯ್ತಿಗಳು ಸಿಗುವುದರಿಂದ ಮರುಪಾವತಿಯನ್ನು ಆರಾಮವಾಗಿ ಮಾಡಬಹುದು.

ನಿಮ್ಮ ವೆಚ್ಚವನ್ನು ಆದಷ್ಟು ಕಡಿಮೆ ಮಾಡಿ. ಸಾಮಾನ್ಯವಾಗಿ ಕೆಲವು ಬ್ಯಾಂಕುಗಳಲ್ಲಿ ಒಟ್ಟು ವೆಚ್ಚದ ಶೇ 5– 15ರಷ್ಟು ಹಣವನ್ನು ನೀವೇ ಹಾಕಿಕೊಳ್ಳಬೇಕು ಎಂಬ ನಿಯಮವಿದೆ. ಭಾರತದಲ್ಲೇ ಓದಿದರೆ ಶೇ 5, ವಿದೇಶದಲ್ಲಾದರೆ ಶೇ 15ರಷ್ಟು ಹಣವನ್ನು ನೀವು ಹೊಂದಿಸಬೇಕು. ಉಳಿದ ವೆಚ್ಚವನ್ನು ಬ್ಯಾಂಕ್‌ ಸಾಲರೂಪದಲ್ಲಿ ನೀಡುತ್ತದೆ. ಈ ನಿಯಮಗಳ ಪ್ರಕಾರ, ಕೆಲವು ಬ್ಯಾಂಕುಗಳಲ್ಲಿ ಒಟ್ಟು ಸಾಲದ ಮೊತ್ತ ನಾಲ್ಕು ಲಕ್ಷ ರೂಪಾಯಿಗಿಂತ ಮೇಲಿರಬೇಕು ಎಂದು ನಮೂದಿಸಲಾಗಿದೆ.

ಕೆಲವು ಬ್ಯಾಂಕ್‌ಗಳಲ್ಲಿ ಮಹಿಳೆಯರಿಗೆ ಬಡ್ಡಿದರದಲ್ಲಿ ಶೇ 0.5ರಷ್ಟು ರಿಯಾಯ್ತಿ ಇದೆ. ಆರ್ಥಿಕವಾಗಿ ಹಿಂದುಳಿದವರಿಗೆ, ಅಂಗವಿಕಲರಿಗೆ ಕೂಡ ರಿಯಾಯ್ತಿ ಇದೆ. ಸಾಧ್ಯವಾದರೆ ಇಡೀ ಸಾಲದ ಮೊತ್ತವನ್ನು ಒಂದೇ ಬಾರಿ ಪಡೆಯಬೇಡಿ. ಕಂತಿನಲ್ಲಿ ಪಡೆದರೆ ಬಡ್ಡಿ ದರದ ಹೊರೆ ಕಡಿಮೆಯಾಗುತ್ತದೆ.

ಮರುಪಾವತಿಗೆ ಸಮಯಾವಕಾಶ ಇರುವುದರಿಂದ ಮೂಲಧನ ಕ್ರೋಢೀಕರಿಸಿ. ಈ ಹಣವನ್ನು ಇಎಂಐ ಪಾವತಿಸಲು ಬಳಸಬಹುದು. ಅಥವಾ ಅವಕಾಶವಿದ್ದರೆ ಭಾಗಶಃ ಮರುಪಾವತಿಗೂ ಬಳಸಬಹುದು. ವಿದ್ಯಾಭ್ಯಾಸದ ಸಂದರ್ಭದಲ್ಲೂ ಬಡ್ಡಿ ಪಾವತಿಸಿದರೆ ಇಎಂಐ ಕಡಿಮೆಯಾಗುತ್ತದೆ. ಪ್ರತಿಯೊಂದು ಶೈಕ್ಷಣಿಕ ವರ್ಷದ ಆರಂಭದಲ್ಲಿ ಬ್ಯಾಂಕ್‌ ಸಾಲದ ಹಣವನ್ನು ನೀಡುತ್ತದೆ. ಅಂದಿನಿಂದಲೇ ಬಡ್ಡಿಯನ್ನೂ ಹಾಕುತ್ತ ಹೋಗುತ್ತದೆ. ಹೀಗಾಗಿ ಸಾಲದ ಹೊರೆ ಹೆಚ್ಚಾಗುವುದು ಸಹಜ. ಶೈಕ್ಷಣಿಕ ಅವಧಿಯಲ್ಲೇ ಅಸಲಿನ ಮೇಲೆ ಬಡ್ಡಿ ಪಾವತಿಸಿದರೆ ಕೆಲವು ಬ್ಯಾಂಕ್‌ಗಳು ಶೇ 1ರಷ್ಟು ಬಡ್ಡಿದರ ರಿಯಾಯ್ತಿ ನೀಡುತ್ತವೆ.

ಸಾಮಾನ್ಯವಾಗಿ ಶೈಕ್ಷಣಿಕ ಸಾಲದ ಅವಧಿ 5–7 ವರ್ಷಗಳು. ಆದರೆ ಮಾರುಕಟ್ಟೆ ನಿಧಾನ ಗತಿಯಲ್ಲಿದ್ದರೆ, ವಿದ್ಯಾರ್ಥಿ ಉದ್ಯೋಗ ಗಿಟ್ಟಿಸುವುದು ತಡವಾದರೆ ಕೆಲವು ಪ್ರಕರಣಗಳಲ್ಲಿ ಮರುಪಾವತಿ ಅವಧಿಯನ್ನು ಒಂದೆರಡು ವರ್ಷಗಳಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಜೊತೆಗೆ ವಿದ್ಯಾರ್ಥಿ ಒಂದು ಕೋರ್ಸ್‌ ಮುಗಿಸಿದ ತಕ್ಷಣವೇ ಉನ್ನತ ಶಿಕ್ಷಣಕ್ಕೆ ಹೋದರೆ ಕೂಡ ಈ ಮರುಪಾವತಿ ಅವಧಿ ವಿಸ್ತರಿಸಬಹುದು. ಕೆಲವು ಬಾರಿ ಅನಿವಾರ್ಯ ಕಾರಣಗಳಿಂದ ಕೋರ್ಸ್‌ ಮುಗಿಸುವುದು ವಿಳಂಬವಾದರೆ ಕೂಡ ಈ ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದು. 80ಇ ಅಡಿ ತೆರಿಗೆ ವಿನಾಯ್ತಿ ಸಿಗಬಹುದು.

ಒಂದು ಅಂಶ ಗಮನದಲ್ಲಿಡಿ. ಕೆಲವು ನಿಯಮಗಳು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸವಾಗಬಹುದು. ಹೀಗಾಗಿ ಕೂಲಂಕಷವಾಗಿ ಮಾಹಿತಿ ಪರಿಶೀಲಿಸಿದ ನಂತರ ನಿರ್ಧಾರ ಕೈಗೊಳ್ಳಿ.ಜೊತೆಗೆ ಸಂಬಂಧಪಟ್ಟ ವಿದ್ಯಾರ್ಥಿ ವೇತನಕ್ಕೆ ಪ್ರಯತ್ನಿಸಿ. ಇದು ನಿಮ್ಮ ಶೈಕ್ಷಣಿಕ ವೆಚ್ಚಕ್ಕೆ ಹೆಚ್ಚುವರಿ ಹಣವನ್ನು ಒದಗಿಸಬಲ್ಲದು.

ಗಮನಿಸಬೇಕಾದ ಅಂಶಗಳು

* ಶಿಕ್ಷಣ ಸಾಲವೆಂಬುದು ಹೂಡಿಕೆಯಿದ್ದಂತೆ. ಹೆಚ್ಚು ಮೊತ್ತ, ಕಡಿಮೆ ಬಡ್ಡಿದರ, ಮರುಪಾವತಿಗೆ ಸಾಕಷ್ಟು ಅವಕಾಶ ಬೋನಸ್‌ ಇದ್ದಂತೆ. ಹೀಗಾಗಿ ಸಾಲ ಬೇಕೆಂದರೆ ಪ್ರತಿಯೊಂದು ಅಂಶವನ್ನೂ ಕೂಲಂಕಷವಾಗಿ ಪರಿಶೀಲಿಸಿ. ವಿವಿಧ ಬ್ಯಾಂಕುಗಳು ನೀಡುವ ಆಫರ್‌ಗಳನ್ನು ನೋಡಿಕೊಂಡು ಆಯ್ಕೆ ಮಾಡಿ.

* ಸಾರ್ವಜನಿಕ ವಲಯದ ಬ್ಯಾಂಕುಗಳು ಆರ್ಥಿಕವಾಗಿ ಹಿಂದುಳಿದವರಿಗೆ ಬಡ್ಡಿದರದಲ್ಲಿ ರಿಯಾಯ್ತಿ ನೀಡುತ್ತಿವೆ. ಇದರ ಲಾಭವನ್ನು ಪಡೆದುಕೊಳ್ಳಬೇಕಾದರೆ ಸೂಕ್ತ ಪರಿಶೀಲನೆ ಅಗತ್ಯ.

* ಬಹುತೇಕ ಬ್ಯಾಂಕ್‌ಗಳು ಸಾಲದ ಮೊತ್ತವನ್ನು ಶಿಕ್ಷಣ ಸಂಸ್ಥೆಯ ಖಾತೆಗೆ ನೇರವಾಗಿ ಹಾಕುತ್ತದೆ. ಇದು ಪ್ರತಿ ಸೆಮಿಸ್ಟರ್‌ ಅಥವಾ ಶೈಕ್ಷಣಿಕ ವರ್ಷದ ಆರಂಭದಲ್ಲಿ ನಡೆಯುವ ಪ್ರಕ್ರಿಯೆ.

* ಸಾಮಾನ್ಯವಾಗಿ ಪದವಿ, ಸ್ನಾತಕೋತ್ತರ, ಪಿಎಚ್‌.ಡಿ. ಅಧ್ಯಯನಕ್ಕೆ ಈ ಸಾಲವನ್ನು ನೀಡಲಾಗುತ್ತದೆ. ಅದೂ ಒಳ್ಳೆಯ ಹೆಸರಿರುವ ಶಿಕ್ಷಣ ಸಂಸ್ಥೆಯಾಗಿರಬೆಕು. ಅಲ್ಪಾವಧಿ ಕೋರ್ಸ್‌ಗಳಿಗೆ ಅಂದರೆ ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಇದು ಲಭ್ಯವಿಲ್ಲ. ಈ ಬಗ್ಗೆ ಬ್ಯಾಂಕ್‌ನಲ್ಲಿ ಕೇಳಿ ದೃಢಪಡಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT