ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಗುವಿನ ಶಾಲೆಯ ಆಯ್ಕೆ ಹೇಗಿರಬೇಕು?

Last Updated 8 ಜನವರಿ 2020, 3:04 IST
ಅಕ್ಷರ ಗಾತ್ರ

ಪ್ರತಿಯೊಬ್ಬ ಪೋಷಕರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ತಮ್ಮ ಮಗುವಿಗೆ ಯಾವ ಶಾಲೆ, ಯಾವ ವಿಧದ ಪಠ್ಯಕ್ರಮಕ್ಕೆ ಸೇರಿಸಬೇಕೆಂಬುದು. ಆಕರ್ಷಕವಾದ ಜಾಹೀರಾತುಗಳನ್ನು ನೋಡಿ, ಬಗೆಬಗೆಯ ಸಲಹೆ ಸೂಚನೆಗಳನ್ನು ಕೇಳಿ ತೀರ್ಮಾನ ತೆಗೆದುಕೊಳ್ಳಲಾರದೆ ಪೋಷಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಶಾಲೆಗಳಲ್ಲಿರುವ ಪಠ್ಯ ಕ್ರಮ, ಬೋಧನಾ ವಿಧಾನ, ಪರೀಕ್ಷಾ ಪದ್ಧತಿಗಳ ಬಗ್ಗೆ ಅರಿತುಕೊಳ್ಳುವುದು ಹೆಚ್ಚು ಮುಖ್ಯ.

ಈಗಾಗಲೇ ಬೆಂಗಳೂರಿನಂತಹ ಮಹಾನಗರದಲ್ಲಿ ಹಾಗೂ ಇತರ ನಗರ, ಪಟ್ಟಣಗಳಲ್ಲಿ ಚಿಣ್ಣರಿಗೆ ಶಾಲಾ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ತಮ್ಮ ಮಕ್ಕಳಿಗೆ ಸೂಕ್ತ ಶಾಲೆಯನ್ನು ಆಯ್ಕೆ ಮಾಡುವುದು ಪಾಲಕರಿಗೆ ಹರ ಸಾಹಸವೇ ಸರಿ. ಬ್ರೋಷರ್‌ಗಳು, ವೆಬ್‌ಸೈಟ್‌ಗಳ ಸಹಾಯದಿಂದ ಹುಡುಕಾಟಕ್ಕೆ ತೊಡಗಿದರೂ ಗುಣಮಟ್ಟದ ಶಿಕ್ಷಣ, ಉತ್ತಮ ತರಬೇತಿ ಪಡೆದ ಬೋಧಕ ವರ್ಗ, ವ್ಯವಸ್ಥಿತ ಮೂಲಭೂತ ಸೌಲಭ್ಯಗಳು ಪೋಷಕರ ಆದ್ಯತೆ ಪಟ್ಟಿಯಲ್ಲಿವೆ.

ಆದರೆ ಪೋಷಕರಿಗೆ ಶಾಲೆಯ ಪಠ್ಯಕ್ರಮದ ಬಗ್ಗೆ ಸಾಕಷ್ಟು ತಿಳಿವಳಿಕೆ ಇರಬೇಕಾಗುತ್ತದೆ. ಸಿಬಿಎಸ್‌ಇ, ಐಸಿಎಸ್‌ಇ, ಐಜಿಸಿಎಸ್‌ಇ, ಐಬಿ.. ಹೀಗೆ. ಬಹುತೇಕ ಶಾಲೆಗಳು ಪಠ್ಯಕ್ರಮ, ಸಿಲೆಬಸ್‌, ಶೈಕ್ಷಣಿಕ ಬೋರ್ಡ್‌ ಬಗ್ಗೆ ಹೇಳಿಕೊಳ್ಳುತ್ತವೆ. ಆದರೆ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಪಠ್ಯಕ್ರಮ ಹೊಂದುವುದಿಲ್ಲ. ಮಗುವಿನ ಕಲಿಕಾ ಸಾಮರ್ಥ್ಯ, ಆಸಕ್ತಿ, ಅಭಿರುಚಿ, ವಯಸ್ಸು, ಮನಸ್ಸು ಎಲ್ಲವನ್ನೂ ಅರ್ಥಮಾಡಿಕೊಂಡು ಪೋಷಕರು ತಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸಬೇಕೆಂದು ತೀರ್ಮಾನಿಸಬೇಕು.

ಜೊತೆಗೆ ಪೋಷಕರ ಉದ್ಯೋಗದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಉದಾಹರಣೆಗೆ ಪೋಷಕರು ಮುಂದೆ ವಿದೇಶಗಳಿಗೆ ಹೋಗುವ ಉದ್ದೇಶವಿದ್ದರೆ ಅಂತಹವರು ತಮ್ಮ ಮಕ್ಕಳನ್ನು ಐಜಿಸಿಎಸ್‌ಇ ಅಥವಾ ಐಬಿ ಪಠ್ಯಕ್ರಮ ಅಥವಾ ಸಿಬಿಎಸ್‌ಇ– ಅಂತರರಾಷ್ಟ್ರೀಯ ಪಠ್ಯಕ್ರಮವಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡರೆ ವಿದೇಶಗಳ ಶಾಲೆಗಳಲ್ಲಿ ಶಿಕ್ಷಣ ಮುಂದುವರಿಸುವುದು ಮಕ್ಕಳಿಗೆ ಸುಲಭವಾಗುತ್ತದೆ.

ದೇಶದಲ್ಲಿ 30ಕ್ಕೂ ಅಧಿಕ ಪಠ್ಯಕ್ರಮಗಳಿದ್ದರೂ ಪ್ರಸ್ತುತ ನಮ್ಮಲ್ಲಿ ಅತ್ಯಂತ ಸ್ಪರ್ಧಾತ್ಮಕವಾಗಿರುವ ಸಿಲೆಬಸ್‌ಗಳೆಂದರೆ ಸ್ಟೇಟ್‌ ಸಿಲೆಬಸ್‌, ಸಿಬಿಎಸ್‌ಇ (ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಶನ್‌) ಮತ್ತು ಐಸಿಎಸ್‌ಇ (ಇಂಡಿಯನ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಶನ್‌).

ರಾಜ್ಯ ಪಠ್ಯಕ್ರಮ

ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿಯು ರಾಜ್ಯದಲ್ಲಿ ಮಾಧ್ಯಮಿಕ ಶಿಕ್ಷಣ ನೀಡುವ ಹೊಣೆ ಹೊತ್ತ ಸಂಸ್ಥೆಯಾಗಿದೆ. 2016– 17ರವರೆಗೆ ಡಿಎಸ್‌ಇಆರ್‌ಟಿ ಆಯ್ಕೆ ಮಾಡಿದ ತಜ್ಞರ ತಂಡವು ರಾಜ್ಯ ಪಠ್ಯ ಕ್ರಮವನ್ನು ನಿಗದಿಗೊಳಿಸುತ್ತಿತ್ತು. 2017– 18ರಿಂದ ಎನ್‌ಸಿಇಆರ್‌ಟಿ ರಾಷ್ಟ್ರಮಟ್ಟದಲ್ಲಿ ನಿಗದಿಪಡಿಸುವ ಪಠ್ಯಕ್ರಮವನ್ನೇ ನಮ್ಮಲ್ಲಿ 6ರಿಂದ 12ನೇ ತರಗತಿಗೆ ರಾಜ್ಯ ಪಠ್ಯ ವಸ್ತುವಾಗಿ ಅಳವಡಿಸಿಕೊಂಡಿರುವುದು ಗಮನಾರ್ಹ ಅಂಶ.

1–5ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರ ರಾಜ್ಯ ಸರ್ಕಾರದ ಪಠ್ಯ ವಸ್ತುಗಳಿವೆ. 1–3ನೇ ತರಗತಿಗೆ ನಲಿ ಕಲಿ ಎಂಬ ವಿಶಿಷ್ಟ ವಿಧಾನವಿದ್ದು, ಆಡುತ್ತಾ, ಹಾಡುತ್ತಾ, ಚಟುವಟಿಕೆಗಳ ಮೂಲಕ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಆಕರ್ಷಕ ಕ್ರಮ ಇದಾಗಿದೆ. 4 ಮತ್ತು 5ನೇ ತರಗತಿಗೆ ಎರಡು ಭಾಷೆಗಳೊಂದಿಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಎಂಬ ಮೂರು ವಿಷಯಗಳಿರುತ್ತವೆ. 6ರಿಂದ 10ನೆಯ ತರಗತಿಯವರೆಗೆ ಮೂರು ಭಾಷೆಗಳು ಮತ್ತು ಇತರ ಮೂರು ವಿಷಯಗಳು ಇರುತ್ತವೆ.

1–8ನೇ ತರಗತಿವರೆಗೆ ಸೆಮಿಸ್ಟರ್ ಪದ್ಧತಿಯಲ್ಲಿ ಪರೀಕ್ಷೆ ನಡೆಸಿ ಶ್ರೇಣಿಯ ಮೂಲಕ ಫಲಿತಾಂಶ ನೀಡಲಾಗುತ್ತದೆ. 9 ಮತ್ತು 10ನೇ ತರಗತಿಗೆ ವಾರ್ಷಿಕ ಪರೀಕ್ಷಾ ಪದ್ಧತಿ ಇರುತ್ತದೆ.

1ರಿಂದ 9ನೇ ತರಗತಿವರೆಗೆ ಶಾಲಾ ಹಂತದಲ್ಲಿ ಪರೀಕ್ಷೆ ನಡೆಯುತ್ತದೆ. 10ನೇ ತರಗತಿಗೆ ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ.

10ನೇ ತರಗತಿಗೆ ಪ್ರತಿ ವಿಷಯಕ್ಕೆ ಆಂತರಿಕ ಮೌಲ್ಯಮಾಪನಕ್ಕೆ 20 ಅಂಕ, ಬಾಹ್ಯ ಪರೀಕ್ಷೆಗೆ 80 ಅಂಕಗಳಂತೆ ಒಟ್ಟು 100 ಅಂಕಗಳಿಗೆ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರಥಮ ಭಾಷೆಗೆ ಮಾತ್ರ ಒಟ್ಟು 125 ಅಂಕಗಳನ್ನು ನಿಗದಿಪಡಿಸಲಾಗಿದೆ.

ಮೂಲ ಜ್ಞಾನವನ್ನು ಬಹಳ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಲಾಗುತ್ತದೆ. ಉದಾ: ಭಾಷೆಗಳಲ್ಲಿ ವರ್ಣಮಾಲೆ, ಪದ, ವ್ಯಾಕರಣ, ಬರವಣಿಗೆ ಕೌಶಲಕ್ಕೆ ಆದ್ಯತೆ ನೀಡಿದರೆ, ಗಣಿತದಲ್ಲಿ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಇತ್ಯಾದಿ. ಇವು ಭವಿಷ್ಯದಲ್ಲಿ ಅತ್ಯಂತ ಉಪಯುಕ್ತ.

ಭಿನ್ನ ಭಿನ್ನ ಕಲಿಕಾ ಸಾಮರ್ಥ್ಯ ಹೊಂದಿರುವ ಮಕ್ಕಳನ್ನು ಗುರುತಿಸಿ, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಸಲಾಗುತ್ತದೆ. ಇದರಿಂದ ಯಾವ ಮಗುವಿಗೂ ಕಲಿಕೆ ಹೊರೆಯಾಗುವುದಿಲ್ಲ.

ಪಠ್ಯ ವಸ್ತು ಬಹಳ ಸರಳವಾಗಿ, ಆಕರ್ಷಕವಾಗಿ ಇರುತ್ತದೆ. ಆಡುತ್ತಾ, ಹಾಡುತ್ತಾ, ಬಾಲ್ಯವನ್ನು ಅನುಭವಿಸುತ್ತಾ ಆನಂದವಾಗಿ ಕಲಿಕೆ ಸಾಗುತ್ತದೆ.

ರಾಷ್ಟ್ರೀಯ ಪಠ್ಯಕ್ರಮ ಸಿಬಿಎಸ್‌ಇ

ಭಾರತ ಸರ್ಕಾರದಿಂದ ಮಾನ್ಯತೆ ಹೊಂದಿರುವ ಮಾಧ್ಯಮಿಕ ಶಿಕ್ಷಣದ ಕೇಂದ್ರ ಸಂಸ್ಥೆಯಿದು. ಎಲ್ಲಾ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ, ನಿರ್ದೇಶಿಸುವ ಸಂಸ್ಥೆ ಇದಾಗಿದೆ. ಇದರ ಪಠ್ಯಕ್ರಮವನ್ನು ಎನ್‌ಸಿಇಆರ್‌ಟಿ ನಿಗದಿಪಡಿಸುತ್ತದೆ. ಇದು ಹೆಚ್ಚು ವೈಜ್ಞಾನಿಕವಾಗಿ ಪರಿಷ್ಕೃತವಾದ ರಚನಾತ್ಮಕ ಪಠ್ಯ ಕ್ರಮ. ಪಠ್ಯಕ್ರಮವನ್ನು ಹಲವು ಘಟಕಗಳಾಗಿ ವಿಂಗಡಿಸಿ, ಬೋಧನೆ ಮತ್ತು ಕಲಿಕೆಯನ್ನು ಪೂರ್ಣಗೊಳಿಸಲು ಬೇಕಾಗುವ ಅವಧಿಯನ್ನು ನಿಗದಿ ಮಾಡಲಾಗಿದೆ. ಇದರಲ್ಲಿ 8ನೇ ತರಗತಿಯವರೆಗೆ ಮೂರು ಭಾಷೆಗಳಿದ್ದು 9, 10ನೆಯ ತರಗತಿಗೆ ಅವುಗಳಲ್ಲಿ ಯಾವುದಾದರೂ ಎರಡು ಭಾಷೆಗಳ ಆಯ್ಕೆಗೆ ಅವಕಾಶ ಇರುತ್ತದೆ. ಜೊತೆಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪಠ್ಯದಲ್ಲಿರುತ್ತವೆ. ಯೋಗ ಶಿಕ್ಷಣ ಮತ್ತು ಕಂಪ್ಯೂಟರ್ ಕಲಿಕೆ ಕಡ್ಡಾಯ. ಕೇಂದ್ರ ಸರ್ಕಾರವು ಕೇಂದ್ರೀಯ ವಿದ್ಯಾಲಯ ಎಂಬ ಹೆಸರಲ್ಲಿ ನಡೆಸುತ್ತಿರುವ ಶಾಲೆಗಳಲ್ಲಿ ಈ ಪಠ್ಯಕ್ರಮವಿದ್ದು, ಹಲವು ಖಾಸಗಿ ಶಾಲೆಗಳೂ ಇದನ್ನು ಅಳವಡಿಸಿಕೊಂಡಿವೆ.

ಐಸಿಎಸ್‌ಇ

ಆಂಗ್ಲರ ಆಳ್ವಿಕೆಯ ಕಾಲದಲ್ಲಿ ಜಾರಿಯಲ್ಲಿದ್ದ ಆಂಗ್ಲೋ ಇಂಡಿಯನ್ ಬೋರ್ಡ್ ನಡೆಸುತ್ತಿದ್ದ, ಶಿಕ್ಷಣ ಸಂಸ್ಥೆಯ ಮಾದರಿಯದು. 1986ರ ಹೊಸ ಶಿಕ್ಷಣ ನೀತಿಯಿಂದ ಈ ಶಿಕ್ಷಣ ಸಂಸ್ಥೆಗಳು ರೂಪುಗೊಂಡಿವೆ. ಇದು ಸಿಐಎಸ್‌ಸಿಇ (Council for the Indian School Certificate Examinations) ನಿಗದಿಪಡಿಸುವ ಪಠ್ಯಕ್ರಮ ಮತ್ತು ಪರೀಕ್ಷಾ ವಿಧಾನಗಳನ್ನು ಹೊಂದಿರುತ್ತದೆ. ಇಂಗ್ಲಿಷ್ ಎರಡು ಪತ್ರಿಕೆ, ವಿಜ್ಞಾನದಲ್ಲಿ ಮೂರು ವಿಷಯ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರಗಳಿಗೆ ಪ್ರತ್ಯೇಕ ಪುಸ್ತಕ ಮತ್ತು ಪರೀಕ್ಷೆ) ಸಮಾಜ ಶಾಸ್ತ್ರದಲ್ಲಿ ಎರಡು ವಿಷಯ– ಭೂಗೋಳ ಮತ್ತು ಇತಿಹಾಸಗಳಿರುತ್ತವೆ. ಪರಿಸರ ವಿಜ್ಞಾನ ಕಡ್ಡಾಯ ವಿಷಯವಾಗಿರುತ್ತದೆ.

ಇದು 10ನೇ ತರಗತಿ ಎಐಎಸ್‌ಎಸ್‌ಇ ಮತ್ತು 12ನೇ ತರಗತಿಗೆ ಎಐಎಸ್‌ಎಸ್‌ಸಿಇ ಎಂಬ ಪರೀಕ್ಷೆ ನಡೆಸುತ್ತದೆ.

* ಪಠ್ಯಕ್ರಮ ಬಹಳ ಸಂಕೀರ್ಣವಾಗಿರುತ್ತದೆ.

* ಪ್ರತಿಯೊಂದು ವಿಷಯವನ್ನು ಆಳವಾಗಿ ಅಧ್ಯಯನ ಮಾಡುವ ಅವಕಾಶವಿರುತ್ತದೆ.

* ಐಐಟಿ, ಐಎಸ್‌ಎಟಿ, ಐಐಎಸ್‌ಟಿ ಮುಂತಾದ ರಾಷ್ಟ್ರೀಯ, ಅಂತರರಾಷ್ಟ್ರೀಯ ಪರೀಕ್ಷೆ ಎದುರಿಸಲು ಇದು ಅತ್ಯಂತ ಉಪಯುಕ್ತವಾದುದು.

* ಕಲೆ, ವಿಜ್ಞಾನ ಹಾಗೂ ಭಾಷೆಗೆ ಒತ್ತು ನೀಡಲಾಗುತ್ತದೆ.

* ಇಂಗ್ಲಿಷ್ ಭಾಷಾ ಜ್ಞಾನ ಮತ್ತು ಸಂವಹನಾ ಕೌಶಲ ಪ್ರಬುದ್ಧವಾಗಿ ಕರಗತವಾಗುತ್ತದೆ.

ಹಾಗೆಯೇ ಅಂತರರಾಷ್ಟ್ರೀಯ ಪದ್ಧತಿಯ ಶೈಕ್ಷಣಿಕ ವ್ಯವಸ್ಥೆಯೂ ಹೆಚ್ಚು ಜನಪ್ರಿಯವಾಗುತ್ತಿವೆ. ಐಬಿ (ಇಂಟರ್‌ನ್ಯಾಷನಲ್‌ ಬೆಕ್ಕಾಲಾರೇಟ್‌), ಐಜಿಎಸ್‌ಸಿಇ (ಇಂಟರ್‌ನ್ಯಾಷನಲ್‌ ಜನರಲ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಶನ್‌) ಪದ್ಧತಿಯನ್ನು ಕೆಲವು ಶಾಲೆಗಳು ಅನುಸರಿಸುತ್ತಿವೆ. ಇವು ವಿದೇಶಗಳಿಗೆ ತೆರಳುವ ಪೋಷಕರಿಗೆ ಅನುಕೂಲ.

ಸಿಬಿಎಸ್‌ಇ ಪಠ್ಯಕ್ರಮ

* 1–9ನೇ ತರಗತಿವರೆಗೆ ಶಾಲಾ ಹಂತದ ಪರೀಕ್ಷೆ, 10ನೆಯ ಮತ್ತು 12ನೆಯ ತರಗತಿ ಅಂತ್ಯದಲ್ಲಿ ಕೇಂದ್ರ ಸಂಸ್ಥೆಯಿಂದ ವಾರ್ಷಿಕ ಪರೀಕ್ಷೆ ನಡೆಸಿ ಫಲಿತಾಂಶ ನೀಡಲಾಗುತ್ತದೆ.

* ಆಂತರಿಕ ಮೌಲ್ಯಮಾಪನಕ್ಕೆ 20 ಅಂಕ, ಬಾಹ್ಯ ಪರೀಕ್ಷೆಗೆ 80 ಅಂಕ, ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.

* ಇದು ವಿಜ್ಞಾನ ಹಾಗೂ ಗಣಿತ ವಿಷಯಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ.

* ಇದರಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಅನ್ವಯಿಕ ಪ್ರಶ್ನೆಗಳು ಹೆಚ್ಚಾಗಿದ್ದು, ಮಕ್ಕಳಲ್ಲಿ ಸೃಜನಶೀಲತೆ ಅನ್ವಯಿಕ ಜ್ಞಾನ, ಚಿಂತನಾಶೀಲತೆಯನ್ನು ಹೆಚ್ಚಿಸುತ್ತದೆ.

* ಇಂಗ್ಲಿಷ್ ಭಾಷಾ ಕಲಿಕೆಗೆ ಹೆಚ್ಚು ಅವಕಾಶವಿರುತ್ತದೆ.

* ಯಾವುದೇ ರಾಜ್ಯಕ್ಕೆ ಹೋದರೂ ಏಕರೀತಿಯ ಪಠ್ಯಕ್ರಮ ಇರುವುದರಿಂದ ಅಂತರ್‌ರಾಜ್ಯ ವರ್ಗಾವಣೆ ಹೊಂದುವ ಉದ್ಯೋಗಿಗಳ ಮಕ್ಕಳಿಗೆ ಬಹಳ ಸೂಕ್ತವಾದುದು.

ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳೆಲ್ಲಾ ಈ ಪಠ್ಯಕ್ರಮವನ್ನೇ ಆಧರಿಸಿರುತ್ತವೆ. ಎನ್‌ಟಿಎಸ್‌ಇ ಪರೀಕ್ಷೆ, ಐಐಟಿ, ಎನ್‌ಇಇಟಿ ಮುಂತಾದ ಎಲ್ಲಾ ಸ್ಪರ್ಧಾತಕ ಪರೀಕ್ಷೆ ಎದುರಿಸಲು ಇದು ಬಹಳ ಸಹಕಾರಿಯಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT