ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ: ವಿಷಯದ ಆಯ್ಕೆ ಹೇಗೆ?

Last Updated 16 ಜುಲೈ 2019, 19:30 IST
ಅಕ್ಷರ ಗಾತ್ರ

ಪಿ ಎಚ್‌.ಡಿ. ಪಡೆಯಬೇಕಾದರೆ ಸ್ನಾತಕೋತ್ತರ ಪದವಿ ಪಡೆದ ನಂತರ ಎನ್‌.ಇ.ಟಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು; ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದರೆ ಗೇಟ್‌ ಪರೀಕ್ಷೆಗೆ ಕೂರಬೇಕು; ಹೆಸರಾಂತ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಸೇರಬೇಕು; ಮಾರ್ಗದರ್ಶನಕ್ಕೆ ಒಳ್ಳೆಯ ಪ್ರಾಧ್ಯಾಪಕರು ಸಿಗಬೇಕು; ಸಂಶೋಧನ ಮೆಥಡಾಲಜಿ ಕರಾರುವಕ್ಕಾಗಿರಲು ಎಷ್ಟೆಲ್ಲ ಕಷ್ಟಪಡಬೇಕು; ಸಂಶೋಧನ ಪ್ರಬಂಧವನ್ನು ಹೇಗೆ ಅಚ್ಚುಕಟ್ಟಾಗಿ ಬರೆಯಬೇಕು; ಪ್ರಬಂಧವನ್ನು ಖ್ಯಾತ ಜರ್ನಲ್‌ಗಳಲ್ಲಿ ಪ್ರಕಟಿಸಿ ಹೆಸರು ಮಾಡಬೇಕು; ಸಾಧ್ಯವಾದರೆ ಅಂತರರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಬೇಕು... ಇವೆಲ್ಲವೂ ಸರಿಯೇ. ಆದರೆ ಸಂಶೋಧನೆ ಆರಂಭಿಸುವುದಕ್ಕೂ ಮುನ್ನ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು, ಅದಕ್ಕೆ ಆಕರ ಗ್ರಂಥಗಳನ್ನು ಹುಡುಕಿಕೊಳ್ಳುವುದು.. ಇವೇ ಮೊದಲಾದ ಸಂಗತಿಗಳು ಬಹಳ ಮುಖ್ಯ.

ವಿಷಯವು ಮಹತ್ವದ್ದಾಗಿರಲಿ. ಆಸಕ್ತಿ ಹುಟ್ಟಿಸುವಂತಿರಲಿ. ಹೆಚ್ಚು ಮಾಹಿತಿಯನ್ನು ನೀಡುವಂತಿರಲಿ. ಅಂತಿಮ ಪ್ರಬಂಧ ಹೀಗೇ ಇರಬೇಕು ಎಂಬ ಮುನ್ನೋಟವನ್ನು ಇಟ್ಟುಕೊಂಡು ವಿಷಯವನ್ನು ಆಯ್ಕೆ ಮಾಡಿ.

ಬಹಳ ವಿದ್ಯಾರ್ಥಿಗಳು ಮಾಡುವ ತಪ್ಪೇನೆಂದರೆ ಯಾವ ವಿಷಯದ ಮೇಲೆ ಹೆಚ್ಚು ಸಂಶೋಧನ ಪ್ರಬಂಧಗಳು ಮಂಡನೆಯಾಗಿವೆಯೋ, ಪಿಎಚ್‌.ಡಿ. ಪಡೆಯಲಾಗಿದೆಯೋ ಅದಕ್ಕೆ ಸಮೀಪದ ವಿಷಯವನ್ನೇ ಆಯ್ಕೆ ಮಾಡಿಕೊಳ್ಳುವುದು. ಆದರೆ ಇಂತಹ ವಿಷಯಗಳನ್ನು ಕೈ ಬಿಟ್ಟು, ಹೊಸದೆನಿಸುವಂತಹ ವಿಷಯಕ್ಕೆ ಒತ್ತು ಕೊಡಿ.

ಸಾಮಾನ್ಯ ಮಾಹಿತಿಗೆ ಹೆಚ್ಚು ಓದಿ

ಎರಡು ಅಥವಾ ಮೂರು ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದರ ಕುರಿತ ಮಾಹಿತಿಯನ್ನು ಓದಲು ಶುರು ಮಾಡಿ. ಹೆಚ್ಚಾಗಿ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲಿ ಸಮಗ್ರ ಮಾಹಿತಿ ಲಭ್ಯ. ಇದರ ಆನ್‌ಲೈನ್‌ ಆವೃತ್ತಿಯಲ್ಲಿ ಸರಿಯಾದ ಕೀ ವರ್ಡ್‌ ಹಾಕಿ ಹುಡುಕುವ ಜಾಣ್ಮೆ ಇರಬೇಕು. ಹೀಗಾಗಿ ಮೊದಲೇ ಅದಕ್ಕೆ ಅಗತ್ಯವಿರುವ ಕೀ ವರ್ಡ್‌ಗಳ ಪಟ್ಟಿ ಮಾಡಿಕೊಳ್ಳಿ. ಓದುತ್ತ ಹೋದಂತೆ ಸ್ಥೂಲ ಮುನ್ನೋಟವೊಂದು ನಿಮಗೆ ಸಿಕ್ಕಿ ಬಿಡುತ್ತದೆ. ವಿಷಯ ವಿಸ್ತೃತವಾಗಿದೆಯೇ ಅಥವಾ ಸಂಕುಚಿತವಾಗಿದೆಯೇ ಅಥವಾ ಅದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಇದೆಯೇ ಎಂಬುದು ಗೊತ್ತಾಗುತ್ತದೆ. ಜೊತೆಗೆ ಇನ್ನಷ್ಟು ಕೀ ವರ್ಡ್‌ಗಳು ಸಿಗುತ್ತವೆ. ನಿಮಗೆ ಬೇಕಾದ ಲೇಖನ ಸಿಗದಿದ್ದರೆ ಗ್ರಂಥಪಾಲಕರ ನೆರವು ಪಡೆಯಿರಿ. ಲೇಖನ ಹಾಗೂ ವೆಬ್‌ಸೈಟ್‌ ಲಿಂಕ್‌ಗಳನ್ನು ಎನ್‌ಸೈಕ್ಲೋಪೀಡಿಯಾದಲ್ಲಿ ಕೊಟ್ಟಿರುತ್ತಾರೆ. ದೈನಿಕಗಳು, ನಿಯತಕಾಲಿಕಗಳು, ಜರ್ನಲ್‌ಗಳಲ್ಲಿ ನಿಮಗೆ ಬೇಕಾದ ಲೇಖನಗಳನ್ನು ಓದಿ.

ಸಂಶೋಧನೆಗೆ ಆಯ್ಕೆ ಮಾಡಿಕೊಂಡ ವಿಷಯವನ್ನು ನಿಭಾಯಿಸಲು ಸಾಧ್ಯವೇ ಎಂಬುದನ್ನು ತಿಳಿದುಕೊಳ್ಳಿ. ಅದರ ವ್ಯಾಪ್ತಿ ತೀರಾ ಹೆಚ್ಚಿದ್ದರೂ ಕಷ್ಟ, ಕಡಿಮೆಯಿದ್ದರೂ ಕಷ್ಟವೇ. ಆಗ ವಿಸ್ತಾರವಾಗಿರುವ ವಿಷಯವನ್ನು ಕಡಿಮೆ ಮಾಡಿಕೊಳ್ಳಬಹುದು. ಉದಾಹರಣೆಗೆ: ಪರಿಸರದ ಮೇಲೆ ನೀವು ಸಂಶೋಧನೆ ನಡೆಸುವುದಾದರೆ ಅದನ್ನು ಒಂದು ಪ್ರದೇಶಕ್ಕೆ ಸೀಮಿತಗೊಳಿಸಿಕೊಳ್ಳಿ. ಅವಧಿಯನ್ನು ನಮೂದಿಸಿ. ಅಂದರೆ 10, 20 ವರ್ಷಗಳು. ತೀರಾ ಸ್ಥಳೀಯ ವಿಷಯ ಕೈಗೆತ್ತಿಕೊಂಡರೆ ನಿಮಗೆ ಸಾಕಷ್ಟು ಮಾಹಿತಿ ಸಿಗುವುದು ಕಷ್ಟ. ಆದರೆ ಜನಪ್ರಿಯ ಲೇಖಕರು, ಸೆಲೆಬ್ರಿಟಿಗಳು, ಸಾಧಕರ ಬಗ್ಗೆ ನಿಮಗೆ ಬೇಕಾದಷ್ಟು ಮಾಹಿತಿ ಲಭ್ಯವಿರುತ್ತದೆ.

ಸಂಶೋಧನೆ ಮಾಡುವಾಗ ವಿಷಯವನ್ನು ಬದಲಾಯಿಸುವುದು ಕಷ್ಟ. ಆದರೆ ಅದರ ವ್ಯಾಪ್ತಿಯನ್ನು ಹೆಚ್ಚು– ಕಡಿಮೆ ಮಾಡಬಹುದು. ಸಂಶೋಧನ ಪ್ರಬಂಧದ ಗಾತ್ರ, ಆಕರ ಗ್ರಂಥಗಳ ಪಟ್ಟಿ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡು ವಿಷಯವನ್ನು ಪರಿವರ್ತಿಸುವ ಕೆಲಸಕ್ಕೆ ಕೈ ಹಾಕಬಹುದು.

ಪ್ರಶ್ನೆಯ ಕೊಂಡಿ

ನಿಮ್ಮ ಸಂಶೋಧನ ವಿಷಯವನ್ನು ಮಹತ್ವದ ಪ್ರಶ್ನೆಯನ್ನಾಗಿ ಬದಲಾಯಿಸಿ. ಉದಾಹರಣೆಗೆ: ಪಶ್ಚಿಮ ಘಟ್ಟಗಳ ಮೇಲೆ ಪರಿಸರ ಮಾಲಿನ್ಯದ ಪರಿಣಾಮಗಳೇನು? ಇಂತಹ ಪ್ರಶ್ನೆಗೆ ನೀವು ಉತ್ತರಿಸುವಷ್ಟು ಸಮಗ್ರ ಮಾಹಿತಿಯನ್ನು ಕಲೆ ಹಾಕಬೇಕಾಗುತ್ತದೆ.

ನಿಮ್ಮ ಸಂಶೋಧನೆಯ ಇನ್ನೊಂದು ಪ್ರಮುಖ ಅಂಶವೆಂದರೆ ನೀವು ಆರಂಭದಲ್ಲಿ ರೂಪಿಸಿದ ಪ್ರಶ್ನೆಗೆ ಒಂದೆರಡು ವಾಕ್ಯಗಳಲ್ಲಿ ಉತ್ತರ ನೀಡಬೇಕಾಗುತ್ತದೆ. ಇದು ನಿಮ್ಮ ಪ್ರೌಢ ಪ್ರಬಂಧದ ಪ್ರಮುಖ ಹೇಳಿಕೆ ಎಂದೇ ಪರಿಗಣಿಸಲಾಗುತ್ತದೆ. ಈ ಹೇಳಿಕೆಯ ಸಮರ್ಥನೆಯೆಂದರೆ ಇಡೀ ನಿಮ್ಮ ಸಂಶೋಧನ ಪ್ರಬಂಧ.

ಮಾಹಿತಿ ಹುಡುಕಾಟ

ಮಾಹಿತಿ ಹುಡುಕುವುದು ಅತ್ಯಂತ ಪ್ರಯಾಸದಾಯಕ ಕೆಲಸವೇನಲ್ಲ. ಆದರೆ ಅಂತರ್ಜಾಲದಲ್ಲಿ ಹುಡುಕಾಡುವಾಗ ವಿಭಿನ್ನ ಮಾಹಿತಿಗಳು ದೊರಕುತ್ತವೆ. ಕೆಲವೊಮ್ಮೆ ಕರಾರುವಕ್ಕಾದ ಮಾಹಿತಿ ಸಿಗದೇ ಕೀ ವರ್ಡ್‌ಗಳಿಗಾಗಿ ತಡಕಾಡಬೇಕಾಗುತ್ತದೆ. ಹೀಗಾಗಿ ಕೆಲವೊಂದು ಮಾಹಿತಿ ಆಕರಗಳ ನೆರವು ಪಡೆಯಿರಿ.

ಗ್ರಂಥಾಲಯದ ಕೆಟಲಾಗ್‌: ಪುಸ್ತಕಗಳು, ನಿಯತಕಾಲಿಕಗಳ ಮಾಹಿತಿ ಇರುತ್ತದೆ.

ಲೇಖನಗಳ ಡೇಟಾಬ್ಯಾಂಕ್‌: ವಿದ್ವತ್‌ಪೂರ್ಣ ಲೇಖನಗಳಿಗಾಗಿ ಹಾಗೂ ಅಕಾಡೆಮಿಕ್‌ ಜರ್ನಲ್‌ ಲೇಖನಗಳಿಗಾಗಿ.

ಮಾಹಿತಿ ಸಂಪನ್ಮೂಲ: ಎನ್‌ಸೈಕ್ಲೋಪೀಡಿಯ, ನಿಘಂಟು

ಸರ್ಚ್‌ ಎಂಜಿನ್‌: ಗೂಗಲ್ ವೆಬ್‌ಸೈಟ್‌

ಮಾಹಿತಿಯ ಮೌಲ್ಯಮಾಪನ

ನೀವು ಕ್ರೋಢೀಕರಿಸಿದ ಮಾಹಿತಿಯ ಮೌಲ್ಯಮಾಪನ ಮಾಡುವ ಕೌಶಲವಿರಬೇಕು. ಗ್ರಂಥಾಲಯ ಅಥವಾ ಅಂತರ್‌ಜಾಲದಲ್ಲಿ ದೊರಕಿದ ಮಾಹಿತಿ ವಿವಿಧ ಮೂಲಗಳಿಂದ ಪಡೆದಿರುವಂತಹದ್ದು.

ಗ್ರಂಥಾಲಯದಲ್ಲಿ ಸಾಮಾನ್ಯವಾಗಿ ಪುಸ್ತಕಗಳನ್ನು ಕೆಲವು ಮಾನದಂಡದ ಮೇಲೆ ಖರೀದಿಸಿ ಇಟ್ಟಿರುತ್ತಾರೆ. ಉತ್ತಮ ಗುಣಮಟ್ಟದ ಪುಸ್ತಕಗಳನ್ನು ನೀವು ಪರಿಶೀಲಿಸಬಹುದು.

ಆದರೆ ಅಂತರ್ಜಾಲದಲ್ಲಿ ಯಾರು ಬೇಕಾದರೂ ಮಾಹಿತಿಯನ್ನು ಸೇರಿಸಬಹುದು. ಕೆಲವು ನಂಬಲು ಅರ್ಹವಲ್ಲದ ಮಾಹಿತಿಯೂ ಸೇರಿಕೊಂಡು ಬಿಟ್ಟಿರುತ್ತದೆ. ಹೀಗಾಗಿ ನಿಮ್ಮ ಸಾಮರ್ಥ್ಯದ ಮೇಲೆಯೇ ಇವುಗಳ ಸತ್ಯಾಸತ್ಯತೆಯನ್ನು ಕಂಡು ಹಿಡಿಯಬೇಕಾಗುತ್ತದೆ. ಲೇಖಕರು ಯಾರು ಎಂಬುದರ ಮೇಲೆಯೂ ಇದು ಅವಲಂಬಿಸಿರುತ್ತದೆ.

ದಾಖಲೀಕರಣ

ನೀವು ಕ್ರೋಢೀಕರಿಸಿದ ಮಾಹಿತಿಯ ಮೂಲಗಳನ್ನು ದಾಖಲಿಸುವುದು ಅತ್ಯಂತ ಮಹತ್ವದ ಕೆಲಸ. ಮೂಲ ಯಾವುದು ಎಂಬುದಕ್ಕೆ ನೀವು ಅವರ ಹೆಸರನ್ನು ಉಲ್ಲೇಖಿಸಬೇಕು. ಇದರಿಂದ ಬೇರೆಯವರಿಗೂ ಸಹ ಆ ಮಾಹಿತಿಯನ್ನು ಪಡೆಯಲು ಅನುಕೂಲವಾಗುತ್ತದೆ. ಜೊತೆಗೆ ನೀವು ಅವರ ಹೆಸರನ್ನು ನೀಡದಿದ್ದರೆ ಕಾನೂನು ಸಮಸ್ಯೆಯಾಗಬಹುದು.

ವಿಷಯ ಆಯ್ಕೆಗೆ ಗಮನಿಸಬೇಕಾದ ಅಂಶಗಳು

ಸಂಶೋಧನೆಗೆ ಒಳ್ಳೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನೂ ಈಗ ಬಹು ಮುಖ್ಯವಾದ ಕೌಶಲವೆಂದೇ ಪರಿಗಣಿಸಲಾಗಿದೆ. ನಿಮಗೆ ಮಾರ್ಗದರ್ಶನ ನೀಡುವ ಪ್ರಾಧ್ಯಾಪಕರು ವಿಷಯವನ್ನು ಕೊಡಬಹುದು. ಆದರೆ ನಿಮಗೆ ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಕೆಲವೊಂದು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

* ಉದ್ದೇಶದ ಕುರಿತು ಸ್ಪಷ್ಟ ಕಲ್ಪನೆ

* ವಿಷಯದ ಕುರಿತ ಸಾಹಿತ್ಯ– ಸಂಗ್ರಹವನ್ನು ಓದಿ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ

* ವಿಷಯದ ಲಭ್ಯತೆ ಮತ್ತು ನಿರ್ವಹಣೆ

* ಪ್ರಸ್ತುತತೆ

* ಸಂದರ್ಭ ಬಂದಾಗ ಬದಲಾವಣೆಯ ಸಾಧ್ಯತೆ

* ವಿಷಯವನ್ನು ಮಹತ್ವದ ಸಂಶೋಧನೆಯಾಗಿ ಅರ್ಥೈಸುವ ಸಾಮರ್ಥ್ಯ

* ವಿಷಯವನ್ನು ಗ್ರಂಥಾಲಯ ಅಥವಾ ವೆಬ್‌ಸೈಟ್‌ನಲ್ಲಿ ಹುಡುಕಿ ಓದಲು ಕೀ ವರ್ಡ್‌

* ಸಂಶೋಧನೆಯ ನಿರೂಪಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT