ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಮುಚ್ಚದಂತೆ ತಡೆಯುವುದು ಹೇಗೆ?

Last Updated 6 ಜೂನ್ 2020, 20:13 IST
ಅಕ್ಷರ ಗಾತ್ರ

ಶಿಕ್ಷಣ ವ್ಯವಸ್ಥೆಯ ಕುರಿತ ಚಿಂತನೆಗಳು, ಚರ್ಚೆಗಳು ನಡೆದಾಗಲೆಲ್ಲ ‘ನಮ್ಮ ಸರ್ಕಾರಿ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ’ ಎನ್ನುವ ಮಾತುಗಳು ಹೆಚ್ಚಾಗಿ ಕೇಳಿಬರುತ್ತವೆ. ಆದರೆ, ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಕಡಿಮೆ ಎನ್ನುವುದರಲ್ಲಿ ನಿಜಾಂಶವಿದೆಯಾದರೂ ಅದನ್ನು ಪೂರ್ಣವಾಗಿ ಒಪ್ಪಿಕೊಳ್ಳಲಾಗದು. ಈ ಮಾತಿಗೆ ಪುಷ್ಟಿಯೆಂಬಂತೆ ಹಲವು ಸರ್ಕಾರಿ ಶಾಲೆಗಳು ತಮ್ಮ ಗುಣಮಟ್ಟವನ್ನು ಕಾಯ್ದುಕೊಂಡು ಉತ್ತಮ ಸಾಧನೆ ಮಾಡುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ವರದಿಯಾಗಿವೆ. ಬೆಂಗಳೂರು ಮತ್ತಿತರ ನಗರ-ಮಹಾನಗರಗಳಿಗಿಂತ ಗ್ರಾಮೀಣ ಕರ್ನಾಟಕದಲ್ಲಿ ಇಂತಹ ಶಾಲೆಗಳು ಹೆಚ್ಚಾಗಿ ಕಂಡುಬರುತ್ತಿರುವುದು ಇನ್ನಷ್ಟು ಅಚ್ಚರಿ ಹಾಗೂ ಸಂತಸದ ಸಂಗತಿ.

ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ ಕೆಲವು ಸರ್ಕಾರಿ ಶಾಲೆಗಳು ವರ್ಷಾರಂಭದಲ್ಲೇ ನೂರಾರು ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸಿಕೊಂಡು ವಿಶೇಷ ಸಾಧನೆ ಮಾಡಿವೆ. ಗುಣಮಟ್ಟದ ಶಿಕ್ಷಣಕ್ಕಾಗಿ ಇಲಾಖೆಯಿಂದ ‘ಎ’ ಗ್ರೇಡ್ ಪಡೆದು ರಾಜ್ಯದ ಅತ್ಯುತ್ತಮ ಶಿಕ್ಷಣ ಸಂಸ್ಥೆಯೆಂಬ ಹೆಗ್ಗಳಿಕೆ ಹಾಗೂ ಉತ್ತಮ ಶಾಲಾ ರಾಜ್ಯಪ್ರಶಸ್ತಿ ಗಳಿಕೆ, ಕಳೆದ ಎಂಟು-ಹತ್ತು ವರ್ಷಗಳಿಂದ ಶೇಕಡಾ ನೂರು ಫಲಿತಾಂಶ, ಒಂದನೇ ತರಗತಿಯಿಂದಲೇ ಇಂಗ್ಲಿಷ್ ಭಾಷಾ ಕಲಿಕೆಗೆ ಅವಕಾಶ ಮುಂತಾದ ಮಾದರಿ ಎನಿಸುವ ಸಾಧನೆಗಳನ್ನು ದಾಖಲಿಸಿವೆ. ಖಾಸಗಿ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಈ ಸರ್ಕಾರಿ ಶಾಲೆಗಳಲ್ಲಿಯೂ ಸಿಗುತ್ತಿರುವುದರಿಂದ ಖಾಸಗಿ ಶಾಲೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳು-ಪೋಷಕರು ಸರ್ಕಾರಿ ಶಾಲೆಗಳತ್ತ ಚಿತ್ತ ಹರಿಸುತ್ತಿದ್ದಾರೆಂಬುದು ಧನಾತ್ಮಕ ಬೆಳವಣಿಗೆಯೇ ಸರಿ.

ಈ ಹಿಂದೆಯೂ ಇಂತಹ ಕೆಲವು ಮಾದರಿ ಸರ್ಕಾರಿ ಶಾಲೆಗಳ ಬಗ್ಗೆ ವರದಿಯಾಗಿದ್ದುಂಟು. ಹತ್ತಾರು ವರ್ಷಗಳಿಂದ ಅನುಕರಣೀಯವೆನಿಸುವ ಉತ್ತಮ ಸಾಧನೆಯನ್ನು ಇವು ಮಾಡುತ್ತಿರುವುದು ಗಮನಾರ್ಹ. ಕೆಲವು ಶಾಲೆಗಳಂತೂ ಸರ್ಕಾರದ ಅನುದಾನದ ಹೊರತಾಗಿ ತಾವೇ ಉತ್ತಮ ಗುಣಮಟ್ಟದ ಶಿಕ್ಷಣ, ಆಂಗ್ಲ ಭಾಷಾ ಕಲಿಕೆಗೆ ಅವಕಾಶ, ಶಾಲಾ ಕಟ್ಟಡಗಳ ನವೀಕರಣ, ಕೊಠಡಿಗಳ ನಿರ್ಮಾಣ, ಶಾಲಾ ವಾಹನಗಳ ವ್ಯವಸ್ಥೆ ಮುಂತಾದವನ್ನು ಕಲ್ಪಿಸಿಕೊಂಡಿರುವುದು ಶ್ಲಾಘನೀಯ. ಇಲ್ಲಿ ಮೆಚ್ಚಬೇಕಾದ ಇನ್ನೊಂದು ಅಂಶವೆಂದರೆ, ಇಂತಹ ಸಾಧನೆಗೈದ ಬಹುತೇಕ ಶಾಲೆಗಳಲ್ಲಿ ಪಠ್ಯ ಮತ್ತು ಪಠ್ಯೇತರ ಶಿಕ್ಷಣದ ಜೊತೆ ಶಾಲಾ ಮುಖ್ಯಸ್ಥರ ಹಾಗೂ ಶಿಕ್ಷಕವೃಂದದ ಹೊಣೆಯರಿತ ಸಹಕಾರ, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಹಾಗೂ ಸದಸ್ಯರ ಪರಿಶ್ರಮ, ಸ್ಥಳೀಯ ವ್ಯಕ್ತಿಗಳ, ದಾನಿಗಳ ಹಾಗೂ ಸಂಘ-ಸಂಸ್ಥೆಗಳ ಶ್ರಮದಾನ ಮತ್ತು ಅನುದಾನವೂ ಈ ಶಾಲೆಗಳಿಗೆ ಬಲ ತಂದುಕೊಟ್ಟಿವೆ ಎಂಬುದು.

ವಿದ್ಯಾರ್ಥಿಗಳ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಇತ್ತೀಚಿನ ಸಂದರ್ಭದಲ್ಲಿ, ಮಕ್ಕಳು-ಪೋಷಕರು ಬಯಸುತ್ತಾರೆಂಬ ನೆಪವೊಡ್ಡಿ, ಗುಣಮಟ್ಟದ ಶಿಕ್ಷಣವೆಂಬ ಹಣೆಪಟ್ಟಿಯೊಂದಿಗೆ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಸರ್ಕಾರಿ ಆಂಗ್ಲ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸುತ್ತಿರುವ ಹಾಗೂ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನೂ ತೆರೆಯುತ್ತಿರುವ ಈ ಹೊತ್ತಿನಲ್ಲಿ, ಇಂತಹ ಬೆಳವಣಿಗೆಗಳು ನಿಜಕ್ಕೂ ಮಹತ್ವವಾದುವು. ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಅಸಹನೆ, ನಿರ್ಲಕ್ಷ್ಯ ತೋರುವವರಿಗೆ ಇವು ಕಣ್ಣು ತೆರೆಸಬೇಕಾದ ಸಂಗತಿಗಳೇ ಸರಿ. ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದ್ದರೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಖಂಡಿತವಾಗಿಯೂ ಹಿಂಜರಿಯಲಾರರು ಎಂಬುದಕ್ಕೆ ಈ ಶಾಲೆಗಳೇ ಸಾಕ್ಷಿ. ಯಾರೂ ದುಬಾರಿ ಹಣ ತೆತ್ತು ಖಾಸಗಿ ಶಾಲೆಗಳ ಮೆಟ್ಟಿಲು ಹತ್ತಲು ಸಿದ್ಧರಿರುವುದಿಲ್ಲ. ಒಂದು ವೇಳೆ ಹಾಗೆ ಹೋಗಬೇಕಾದರೆ ಅದಕ್ಕೆ ಕಾರಣ, ಸರ್ಕಾರಿ ಶಾಲೆಗಳು ನಿರೀಕ್ಷಿತ ಮಟ್ಟದ ಶಿಕ್ಷಣ ನೀಡುತ್ತಿಲ್ಲವೆನ್ನುವುದು ಅಥವಾ ಆ ಶಾಲೆಗಳಲ್ಲಿ ಕಲಿಯುವುದು ತಮ್ಮ ಪ್ರತಿಷ್ಠೆಗೆ ಕುಂದು ತರುತ್ತದೆನ್ನುವುದು ಅಷ್ಟೆ.

ಈ ಹಿನ್ನೆಲೆಯಲ್ಲಿ, ಇಂತಹ ಕೆಲವೇ ಶಾಲೆಗಳನ್ನು ಬಿಟ್ಟು ಇನ್ನುಳಿದ ಶಾಲೆಗಳಲ್ಲಿನ ಕಳಪೆ ಅಥವಾ ಶೂನ್ಯ ಸಾಧನೆಗೆ ಕಾರಣವೇನೆಂಬ ಕುರಿತು ಸರ್ಕಾರ ಚಿಂತಿಸಬೇಕಾಗಿದೆ. ಸರ್ಕಾರಿ ಶಾಲೆಗಳಿಗೆ ನೈತಿಕ ಬಲವನ್ನು ತುಂಬಬೇಕಾಗಿದೆ. ಮಕ್ಕಳ ಹಾಜರಾತಿ ಕೊರತೆಯ ನೆಪವೊಡ್ಡಿ ತನ್ನ ಶಾಲೆಗಳನ್ನು ಮುಚ್ಚುವಂತಹ ಹಾಗೂ ಪ್ರಾಥಮಿಕ ಹಂತದಲ್ಲೇ ಆಂಗ್ಲ ಮಾಧ್ಯಮದ ಶಿಕ್ಷಣ ನೀಡುವಂತಹ ಅತಾರ್ಕಿಕ ನಿಲುವನ್ನು ಸರ್ಕಾರ ಕೈಬಿಡಬೇಕು. ಸಾಕಷ್ಟು ಪ್ರಮಾಣದ ಅನುದಾನ, ಉತ್ತಮ ಶಾಲಾ ಕಟ್ಟಡ, ಅಗತ್ಯವಿರುವಷ್ಟು ಬೋಧಕ-ಬೋಧಕೇತರ ಸಿಬ್ಬಂದಿ ನೇಮಕಾತಿ ಹಾಗೂ ಅವರಿಗೆ ಸರಿಯಾದ ತರಬೇತಿ, ಆಧುನಿಕ ಶಿಕ್ಷಣ ಸೌಲಭ್ಯಗಳ ಪೂರೈಕೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವುಗಳಿಗೆ ಉಸಿರು ನೀಡುವ ಕೆಲಸವಾಗಬೇಕು. ಇಲ್ಲಿ ನಿಗದಿತ ಪಠ್ಯಗಳ ಜೊತೆ ಪಠ್ಯೇತರ ಕಲಿಕೆಗೂ ವಿಶೇಷವಾದ ಆದ್ಯತೆ ಲಭಿಸಬೇಕು.

ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯಗಳು, ಕಂಪ್ಯೂಟರ್ ತರಬೇತಿ ತರಗತಿಗಳು, ಆಧುನಿಕ ಶೈಕ್ಷಣಿಕ ತಂತ್ರಜ್ಞಾನದ ಅಳವಡಿಕೆ, ಇಂಗ್ಲಿಷ್ ಭಾಷಾ ಕಲಿಕೆಗೆ ಅವಕಾಶ, ಮಕ್ಕಳಿಗೆ ಕ್ರೀಡೆ, ಯೋಗ, ಸ್ಕೌಟ್ಸ್-ಗೈಡ್ಸ್‌ನಂತಹ ದೈಹಿಕ ಚಟುವಟಿಕೆಗಳು, ಮಕ್ಕಳ ಸುಪ್ತಪ್ರತಿಭೆಯ ಅನಾವರಣಕ್ಕೆ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದವುಗಳಿಗೆ ಅವಕಾಶವಿರಬೇಕು. ಸರ್ಕಾರವು ಶಾಲಾ ಮುಖ್ಯಸ್ಥರ ಹಾಗೂ ಅಧ್ಯಾಪಕ ವೃಂದದ ಶ್ರಮಭರಿತ ಪೂರ್ಣಪ್ರಮಾಣದ ಸಹಕಾರವನ್ನು ಪಡೆಯಬೇಕು. ಸ್ಥಳೀಯ ವ್ಯಕ್ತಿಗಳ ಹಾಗೂ ಸಂಘ-ಸಂಸ್ಥೆಗಳ ಸಹಾಯ, ಸಹಭಾಗಿತ್ವವನ್ನು ಪಡೆಯುವ ನಿಟ್ಟಿನಲ್ಲೂ ಯೋಚಿಸಬೇಕು. ಇನ್ನೊಂದು ವಿಶೇಷವೆಂದರೆ, ಸರ್ಕಾರಿ ಶಾಲಾ ಶಿಕ್ಷಕರು ಖಾಸಗಿ ಶಾಲೆಗಳ ಶಿಕ್ಷಕರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾರೆ ಎಂಬ ಅಭಿಪ್ರಾಯಗಳು ಅನೇಕ ಸಂದರ್ಭಗಳಲ್ಲಿ ವ್ಯಕ್ತವಾಗಿವೆ; ಅವು ಸಾಬೀತಾಗಿವೆ ಕೂಡ. ಅವರನ್ನು ಬೋಧಕೇತರ ಕೆಲಸಗಳಿಂದ ಮುಕ್ತಗೊಳಿಸಿ ಅಗತ್ಯ ಸೌಕರ್ಯಗಳನ್ನು ನೀಡಿದರೆ ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಸ್ಪರ್ಧೆ ಒಡ್ಡುವ ಎಲ್ಲ ಸಾಮರ್ಥ್ಯ ಸರ್ಕಾರಿ ಶಾಲೆಗಳಿಗಿವೆ.

ಸರ್ಕಾರಿ ಶಾಲೆಗಳ ಸಬಲೀಕರಣ, ಉನ್ನತೀಕರಣ, ಜೊತೆಗೆ ಕನ್ನಡೀಕರಣವೂ ಆಗಬೇಕಾದ ಅನಿವಾರ್ಯತೆ ಇಂದು ಹೆಚ್ಚಾಗಿದೆ. ಸರ್ಕಾರ ತಕ್ಷಣದಿಂದಲೇ ಈ ವಿಚಾರಗಳತ್ತ ಗಮನ ಹರಿಸಿ, ವ್ಯವಸ್ಥಿತ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸಿದರೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಕಷ್ಟವೇನಲ್ಲ. ಖಾಸಗಿ ಶಾಲೆಗಳಿಗೆ ಹಾಕುವ ಮಣೆಯನ್ನು ಸರ್ಕಾರಿ ಶಾಲೆಗಳತ್ತ ಚಾಚಿದರೆ ಖಂಡಿತವಾಗಿಯೂ ಸರ್ಕಾರಿ ಶಾಲೆಗಳು ಉಳಿಯುತ್ತವೆ, ಬೆಳೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT