ಶಾಲೆ ‘ಗುಮ್ಮ’ ಹೇಗಾಯ್ತಮ್ಮ!

7

ಶಾಲೆ ‘ಗುಮ್ಮ’ ಹೇಗಾಯ್ತಮ್ಮ!

Published:
Updated:
Prajavani

ಬೆಳಿಗ್ಗೆ ಎದ್ದೊಡನೇ ಮತ್ತದೇ ಹಾಡು... ಅದೇ ಹಟ...

ನಂಗೆ ಶಾಲೆ ಬೇಡ, ಮನೇಲೇ ಓದ್ಕೋತಿನಿ...

ಕಾರಣ ಕೇಳಿದರೆ ಹೇಳಲೊಲ್ಲ. ದಿನಕ್ಕೊಂದು ಆಮಿಷ ತೋರಿಸಿ ಕಳಿಸಿದರೆ ಒಂದು ಗಂಟೆಯಲ್ಲೆಲ್ಲ ಮತ್ತೆ ಶಾಲೆಯಿಂದ ಫೋನು... ಮಗೂಗೆ ಹುಷಾರಿಲ್ಲ, ವಾಂತಿ ಮಾಡ್ಕೊಂಡ. ಬಂದು ಕರ್ಕೊಂಡ್ ಹೋಗಿ...

ಉಫ್‌...ಏನಪ್ಪ ಮಾಡೋದು. ಇದಕ್ಕೆ ಶಾಲೆ ಬಗ್ಗೆ ಒಲವು ಬೆಳೆಸೊ ಬಗೆ ಹೇಗೆಂದು ಗೂಗಲ್‌ನಲ್ಲಿ ತಡಕಾಡಿ ಸಾಕಾಯ್ತು ಅವರಿಗೆ. ಯಾರೊ ಸಲಹೆ ಕೊಟ್ಟರು ಮಕ್ಕಳ ವೈದ್ಯರ ಬಳಿ ಹೋಗಿ, ಕೌನ್ಸೆಲಿಂಗ್‌ ಕೊಡಿಸಿ ಅಂತ. ವೈದ್ಯರು ಅದಕ್ಕೊಂದು ಹೆಸರಿಟ್ಟರು ‘ಸ್ಕೂಲ್‌ಫೋಬಿಯಾ’. ತನಗೇನೊ ಆಗಿದೆ ಎನ್ನುವ ಗುಮ್ಮ ಮಗುವಿನ ಮನಸ್ಸಿನೊಳಗೆ. ನನ್ನ ಮಗ ಎಲ್ಲರಂತಿಲ್ಲ ಅನ್ನುವ ಅಳುಕು ಹೆತ್ತವರ ಎದೆಯೊಳಗೆ... 

***

ಹಾಗೆ ನೋಡಿದರೆ ಇದು ವ್ಯಾಧಿಯಲ್ಲ. ಇದೊಂದು ಸಾಮಾನ್ಯ, ಸರ್ವೆಸಾಧಾರಣ ಸಮಸ್ಯೆ. ನೀವು–ನಿಮ್ಮ ಮಗು, ಶಿಕ್ಷಕವರ್ಗ ನೀವಷ್ಟೇ ಸರಿಪಡಿಸಬಹುದಾದ ಸಣ್ಣ ತೊಡಕು. ಮಗುವನ್ನು ಈ ‘ಒಲ್ಲದ ವರ್ತುಲ’ದಿಂದ ಆಚೆ ತರಬಹುದು. ವೈದ್ಯರ ಮಾತು ಕೊನೆಯಲ್ಲಿರಲಿ.

ಹೌದು, ಶಾಲೆಯ ನಿರಾಕರಣೆ ಒಂದು ಸಣ್ಣ ಸಮಸ್ಯೆಯಷ್ಟೆ. ಬೆಳೆಯಗೊಟ್ಟರೆ ಮಾತ್ರ ಬೆಳೆಯುತ್ತದೆ. ಮಕ್ಕಳಿಗಷ್ಟೇ ಅಲ್ಲ, ಹೆತ್ತವರಿಗೂ ಒತ್ತಡವನ್ನುಂಟು ಮಾಡುತ್ತದೆ. ನಿಮ್ಮ ಹಾಗೂ ಕಂದನ ನಡುವೆ ಕಂದಕ ಸೃಷ್ಟಿಸುತ್ತದೆ. ಶೈಕ್ಷಣಿಕ ಜೀವನದುದ್ದಕ್ಕೂ ಮಗುವಿನ ಬೆಂಬತ್ತಿ ಹೋಗುತ್ತದೆ. ಸಾಮಾಜಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ. ಹೀಗಾಗಬಾರದು ಅಂತಿದ್ದರೆ ಆರಂಭದಲ್ಲಿಯೇ ಅದಕ್ಕೊಂದು ಪರಿಹಾರ ಕಂಡುಕೊಳ್ಳಿ. 

ಪ್ರತಿ ವರ್ಷ, ಸರಿಸುಮಾರು ಶೇ 2ರಿಂದ 5ರಷ್ಟು ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಶಾಲೆ ಎನ್ನುವ ಪದವೇ ಅವರಲ್ಲಿ ಆತಂಕವನ್ನು ಹುಟ್ಟುಹಾಕುತ್ತದೆ. ಶಾಲೆಗೆ ಹೋಗಲಾಗದ ಮನಸ್ಥಿತಿ, ಹೋಗಲೇಬೇಕೆನ್ನುವ ಒತ್ತಡ ಮತ್ತಷ್ಟು ಖಿನ್ನತೆಯ ಆಳಕ್ಕೆ ಎಳೆದೊಯ್ಯುತ್ತದೆ. ಸಮಸ್ಯೆ ಎಲ್ಲಿದೆ, ಅದಕ್ಕೆ ಪರಿಹಾರ ಏನು ಎನ್ನುವುದನ್ನರಿಯದೇ ಬರೀ ಒತ್ತಾಯದಿಂದ, ಹೆದರಿಸಿ, ಬೆದರಿಸಿ ಶಾಲೆಗೆ ಕಳಿಸುವುದು ಪರಿಹಾರವಾಗುವುದಿಲ್ಲ.

ಯಾವಾಗಿಂದ ಆರಂಭವಾಗುತ್ತದೆ...
ಇದು ರಾತ್ರೋರಾತ್ರಿ ಹುಟ್ಟಿಕೊಳ್ಳುವ ಸಮಸ್ಯೆ ಏನೂ ಅಲ್ಲ. ಮೊದಲ ದಿನ ಶಾಲೆ ಎನ್ನುವ ಅರಿಯದ ಲೋಕಕ್ಕೆ ಕಾಲಿಟ್ಟಾಗ ಕಂದನ ಮನದೊಳಗೆ ಏನೊ ತಳಮಳ, ಅವ್ಯಕ್ತ ಭಯ, ಆತಂಕವಿದ್ದರೂ ಒಂದು ಸಣ್ಣ ಕುತೂಹಲ, ಆಸಕ್ತಿಯೂ ಜತೆಗಿರುತ್ತದೆ. ಆದರೆ ಅಲ್ಲಿನ ಪರಿಸರ, ವಾತಾವರಣ, ಸಹಪಾಠಿಗಳು, ಶಿಕ್ಷಕರು, ಕೆಲವು ವಿಷಯಗಳು... ಹೀಗೆ ಯಾವುದೊ ಒಂದು ಸಂಗತಿ ಅಥವಾ ಒಟ್ಟಾರೆ ಸ್ಥಿತಿ ಅವರಲ್ಲಿನ ಕುತೂಹಲ, ನಿರೀಕ್ಷೆಗಳನ್ನು ಒಡೆದುಹಾಕಿ ಭಯ–ಆತಂಕಗಳನ್ನಷ್ಟೇ ಉಳಿಸುತ್ತದೆ. ಶಾಲೆಯನ್ನು ನಿರಾಕರಿಸುವ, ತಪ್ಪಿಸಿಕೊಳ್ಳುವ ಮನಸ್ಥಿತಿಗೆ ಮಕ್ಕಳನ್ನು ದೂಡುವಲ್ಲಿ ಅನೇಕ ಸಂಗತಿಗಳು ಕಾರಣವಾಗಿರುತ್ತವೆ. ಅಮ್ಮನಿಂದ ಬೇರ್ಪಡುವ ದುಃಖ, ಶಾಲೆಯಲ್ಲಿ ಕೀಟಲೆ, ಉಪಟಳ, ನಿಂದನೆ, ಪ್ರತ್ಯೇಕತೆ, ಸಾಮಾಜಿಕ ಅಭದ್ರತೆ, ಅವಮಾನ...ಯಾವುದೊ ಒಂದು ಅಥವಾ ಎಲ್ಲವೂ.

ಬಾಲ್ಯದಲ್ಲಿ ಅಮ್ಮ ಅಥವಾ ಅಜ್ಜಿಯ ಮಡಿಲಲ್ಲಿ, ಮನೆಯೆಂಬ ಸುರಕ್ಷಿತ ತಾಣದಲ್ಲಿ, ಬೇಕಾದಾಗ ಆಡಿಕೊಂಡು, ಬೇಕಾದ್ದನ್ನು ತಿಂದು, ನಿದ್ರೆ ಬಂದಾಗ ಮಲಗೆದ್ದು ರಾಜ/ರಾಣಿಯಂತಿರುತ್ತವೆ ಮಕ್ಕಳು. ಶಾಲೆಯ ವಾತಾವರಣ ಭಿನ್ನವಾಗಿರುತ್ತದೆ. ಅಲ್ಲಿನ ಬಿಗುಮಾನ, ಶಿಸ್ತು, ಸ್ಪರ್ಧೆ, ಜವಾಬ್ದಾರಿಗಳು ಮಕ್ಕಳ ಮನದಲ್ಲಿ ‌ಹೆದರಿಕೆ–ಹೇವರಿಕೆಗಳನ್ನು ಹುಟ್ಟಿಸುತ್ತವೆ. ಕೆಲವು ಮಕ್ಕಳು ಬೇಗ ಈ ಪರಿಸರಕ್ಕೆ ಹೊಂದಿಕೊಂಡರೆ, ಕೆಲವು ಪ್ರತ್ಯೇಕಗೊಂಡು ಸಮಸ್ಯೆಗೆ ಸಿಲುಕುತ್ತವೆ. ಶಾಲೆ, ಶಿಕ್ಷಕರು–ಸಹಪಾಠಿಗಳೊಂದಿಗೆ ಒಂದು ಆಪ್ತವಲಯ ಸೃಷ್ಟಿಯಾಗದೇ ಹೋದಾಗಲೂ ಇಂತಹ ತೊಡಕುಗಳುಂಟಾಗುತ್ತವೆ. ಕೆಲ ಮಕ್ಕಳನ್ನು ಮಾತ್ರ ಮುಂಚೂಣಿಯಲ್ಲಿ ನಿಲ್ಲಿಸುವುದು, ಹೊಗಳುವುದು; ಇನ್ನೂ ಕೆಲವರನ್ನು ನಿರ್ಲಕ್ಷಿಸುವುದು, ಅವಮಾನಿಸುವುದು, ಅವಹೇಳನ ಮಾಡುವುದು... ಶಿಕ್ಷಕರ, ಸಹಪಾಠಿಗಳ ಇಂತಹ ವರ್ತನೆಯ ಪಾಲೂ ಇದೆ‌.

ನೀವೇನು ಮಾಡಬೇಕು?
ಮಗು ಶಾಲೆಗೆ ಹೆಜ್ಜೆ ಇಟ್ಟ ಮೊದಲ ದಿನದಿಂದಲೇ ಪಾಲಕರ ಕರ್ತವ್ಯ ಆರಂಭವಾಗಬೇಕು. ಶಾಲೆಯಲ್ಲಿ ನಡೆವ ಘಟನೆಗಳು, ನೆಚ್ಚಿನ ಸ್ನೇಹಿತರು, ಇಷ್ಟದ ಶಿಕ್ಷಕ/ಶಿಕ್ಷಕಿ, ಅಚ್ಚುಮೆಚ್ಚಿನ ವಿಷಯ, ಇಷ್ಟದ ಆಟೋಟ ಎಲ್ಲದರ ಬಗೆಗೂ ತಿಳಿದುಕೊಳ್ಳಿ. 

ಹುಟ್ಟುಹಬ್ಬ, ರಜಾದಿನಗಳು, ಹಬ್ಬ–ಹರಿದಿನಗಳಲ್ಲಿ ಮಕ್ಕಳ ಸ್ನೇಹಿತರನ್ನು ಆಹ್ವಾನಿಸಿ. ಸಾಧ್ಯವಾದರೆ ಅವರ ಪಾಲಕರನ್ನೂ ಕರೆಯಿರಿ. ಇದರಿಂದ ಮಕ್ಕಳ ಸ್ನೇಹವಲಯ ಮತ್ತಷ್ಟು ಆಪ್ತವಾಗುತ್ತದೆ.

ಶಾಲಾ ಶಿಕ್ಷಕ ವರ್ಗವನ್ನೂ ಆಗಾಗ ಭೇಟಿ ಮಾಡಿ. ಪಾಲಕರ ಸಭೆಗಳ ಹೊರತಾಗಿಯೂ ಅವರೊಂದಿಗೆ ಮಾತಾಡಿ ಮಕ್ಕಳ ಬಗ್ಗೆ ತಿಳಿದುಕೊಳ್ಳಿ. 

ಮಗು ಶಾಲೆಗೆ ಹೋಗಲು ನಿರುತ್ಸಾಹ ತೋರಿದ ದಿನವೇ ಕಾರ್ಯಪ್ರವೃತ್ತರಾಗಿ. ಕಾರಣ ಶಾಲೆಯಲ್ಲಿದೆಯೊ, ಶಿಕ್ಷಕರಲ್ಲಿದೆಯೊ, ಸಹಪಾಠಿಗಳಲ್ಲಿದೆಯೊ ಗುರುತಿಸಿ, ಸರಿಪಡಿಸಿ. ಸಾಧ್ಯವಾಗದಿದ್ದರೆ ಶಾಲೆ ಬದಲಾಯಿಸಿದರೂ ಪರವಾಗಿಲ್ಲ. (ಆಗಾಗ ಶಾಲೆಗಳನ್ನು ಬದಲಾಯಿಸಿದರೂ ಸಹ ಮಕ್ಕಳ ಆಸಕ್ತಿಯ ಮೇಲೆ ಹೊಡೆತ ಬೀಳಬಹುದು.)

ಇದ್ಯಾವುದಕ್ಕೂ ಸರಿ ಹೋಗದೇ ಇದ್ದಾಗ ವೈದ್ಯರನ್ನು ಕಾಣಲು ತಡಮಾಡಬೇಡಿ. ಅವರು ತಮ್ಮದೇ ಆದ ತಂತ್ರ, ಕೌಶಲ ಹಾಗೂ ಅನುಭವದ ಆಧಾರದ ಮೇಲೆ ಚಿಕಿತ್ಸೆ ಆರಂಭಿಸುತ್ತಾರೆ. ಶಾಲೆಯ ಭಯದಿಂದ ಹೊರಬರಲು, ವರ್ತನೆಯನ್ನು ಬದಲಿಸಿಕೊಳ್ಳಲು ನೆರವಾಗುತ್ತಾರೆ. ಕೌನ್ಸೆಲಿಂಗ್‌, ಥೆರಪಿ ಮೂಲಕ ಅವರಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುತ್ತಾರೆ. ಶಾಲೆ ಎನ್ನುವ ಭಯದ ಭೂತ ಬಹಳ ದಿನ ಬೆನ್ನು ಹತ್ತದಂತೆ ನೋಡಿಕೊಳ್ಳಿ. ಇದು ಒಬ್ಬರ ಜವಾಬ್ದಾರಿ ಅಲ್ಲ. ಎಲ್ಲರೂ ಕೈಜೋಡಿಸಬೇಕು. ಕಲಿಕೆ ಎನ್ನುವುದು ಮಗುವಿಗೆ ಆನಂದದ ಅನುಭೂತಿಯಾಗಬೇಕು. ಅಂತಹ ವಾತಾವರಣ ಸೃಷ್ಟಿಸುವುದು ಪಾಲಕರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿಯ ಒಟ್ಟು ಹೊಣೆಗಾರಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !