ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿದ್ದರೆ ತಿದ್ದಿ, ಶಿಕ್ಷಿಸಬೇಡಿ

Last Updated 5 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಕೆಲವು ದಶಕಗಳ ಹಿಂದೆ ಮಕ್ಕಳನ್ನು ಬೆಳೆಸುವ ರೀತಿಯೊಂದಿತ್ತು. “Spare the rod; spoil the child” ಎಂದು ಎಲ್ಲರೂ ಒಪ್ಪಿಕೊಂಡು ಇದನ್ನು ಪಾಲಿಸುತ್ತಿದ್ದರು. ಆದರೆ ಈ ಮೂಲಕ ಮಕ್ಕಳು ತಪ್ಪು ಮಾಡುವುದನ್ನು ತಡೆಯುವುದು, ಸಂಪೂರ್ಣವಾಗಿ ತಿದ್ದುವುದು ಎರಡೂ ಆಗಲಿಲ್ಲ. ಇದರ ಪರಿಣಾಮವೋ ಎಂಬಂತೆ ಬಹಳ ಬೇಗ ಈ ಅಭಿಪ್ರಾಯ ಬದಲಾಗಿ ಇಂದಿನ ಶಿಕ್ಷಣ ಕ್ಷೇತ್ರ ಇದನ್ನು ಅಲ್ಲಗಳೆಯುತ್ತಿದೆ. ಮಕ್ಕಳ ತಪ್ಪಿಗೆ ಶಿಕ್ಷೆಗಿಂತ ಭಿನ್ನವಾಗಿ ತಿದ್ದುವ ಕೆಲಸ ಆಗಬೇಕಿದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. ಅಲ್ಲದೇ ಇದು ಶಿಕ್ಷೆಗಿಂತ ಹೆಚ್ಚು ಪರಿಣಾಮಕಾರಿ ಕೂಡ ಎನ್ನುತ್ತಿದ್ದಾರೆ ತಜ್ಞರು.

ಬಹಳಷ್ಟು ಸಲ ಪುಟ್ಟ ಮಕ್ಕಳಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ಅರಿವಾಗುವುದಿಲ್ಲ. ಐದಾರು ವರ್ಷಗಳ ಮೇಲಿನ ಮಕ್ಕಳಿಗೆ ಸ್ವಲ್ಪ ಮಟ್ಟಿಗೆ ಅರಿವಾಗುವುದಾದರೂ ಅಷ್ಟರಲ್ಲಿ ತಪ್ಪು ನಡೆದು ಹೋಗಿರುತ್ತದೆ. ಕಾರಣ ಸರಳ; ಆ ವಯಸ್ಸಿನಲ್ಲಿ ಸ್ವ-ನಿಯಂತ್ರಣ ಶಕ್ತಿ ಬಹಳ ಕಡಿಮೆ. ತಪ್ಪು ಮಾಡಿದ ಮಗುವಿನಲ್ಲಿ ಕಾಣಬೇಕಾದ್ದು ಪಶ್ಚಾತ್ತಾಪವೇ ಹೊರತು ಭಯವಲ್ಲ. ಸರಿಯಾದ ಮಾರ್ಗದರ್ಶನದ ಮೂಲಕವಷ್ಟೇ ಅದನ್ನು ಸಾಧಿಸಲು ಸಾಧ್ಯ. ಅಸಲಿಗೆ ಪುಟ್ಟ ಮಕ್ಕಳು ಘೋರ ತಪ್ಪನ್ನೇನೂ ಮಾಡಿರುವುದಿಲ್ಲ. ಆದ್ದರಿಂದ ತಪ್ಪು ಮಾಡಿದ ಪುಟಾಣಿಗಳಿಗೆ ಕೊಡಬೇಕಾದ್ದು ಶಿಕ್ಷಣವೇ ಹೊರತು ಶಿಕ್ಷೆಯಲ್ಲ. ಅಷ್ಟಕ್ಕೂ ಶಿಕ್ಷೆಯು ಮಕ್ಕಳಿಗೆ ಏನು ಮಾಡಬಾರದು ಎಂದು ಹೇಳಬಹುದಲ್ಲದೆ ಏನು ಮಾಡಬೇಕು ಎಂದು ಹೇಳುವುದಿಲ್ಲ. ಇದು ಇಂದು ನಾವು ಮನಗಾಣಬೇಕಾದ ಮಹತ್ತರ ಅಂಶ.

ಸುಳ್ಳು ಹೇಳಬಹುದು..

ಎಲ್ಲಕ್ಕಿಂತ ದೊಡ್ಡ ಅಪಾಯವೆಂದರೆ, ಶಿಕ್ಷೆಯ ಬಗ್ಗೆ ಭಯ ಹುಟ್ಟಿಸಿಕೊಂಡ ಮಗು ಪಾರಾಗುವ ಸುಲಭೋಪಾಯವೆಂದು ಸುಳ್ಳು ಹೇಳುವುದನ್ನು ಕಲಿಯಬಹುದು. ಕ್ರಮೇಣ ಇದು ಮಗುವಿನ ವ್ಯಕ್ತಿತ್ವದ ಭಾಗವೇ ಆಗಿ ಬದುಕಿನಲ್ಲಿ ಸಂತೋಷ, ಯಶಸ್ಸು ದೂರವೇ ಉಳಿಯುವ ಎಲ್ಲ ಸಾಧ್ಯತೆಗಳೂ ಇಲ್ಲದಿಲ್ಲ. ಹಾಗಂತ ತಪ್ಪುಗಳಾದರೆ ಆಗಲಿ ಬಿಡು ಎಂದು ಸುಮ್ಮನುಳಿಯುವುದೂ ಆಗದು. ಅದು ಕೂಡ ಮಗುವಿನ ವ್ಯಕ್ತಿತ್ವದ ಬೆಳವಣಿಗೆಗೆ ಮಾರಕ. ತಿದ್ದಿ ತೀಡಿ ಮೂರ್ತಿಗೊಂದು ಮುದ್ದಾದ ರೂಪ ಕೊಡಲೇಬೇಕು.

ಈ ನಿಟ್ಟಿನಲ್ಲಿ ಯೋಚಿಸುವುದಾದರೆ ಪೋಷಕರು ತಮ್ಮ ಭಾವಾಭಿವ್ಯಕ್ತಿಯ ಮೇಲೆ ಗಮನ ಇರಿಸಿಕೊಳ್ಳಬೇಕಾದ್ದು ಮುಖ್ಯ. ಮಕ್ಕಳ ಮನಸಿನ ಮೇಲೆ ಗಾಢ ಪರಿಣಾಮ ಬೀರುವುದೆಲ್ಲವೂ ಮನೆಯೆಂಬ ಮೊದಲ ಶಾಲೆಯ ಪಾಠಗಳು. ತಪ್ಪು ನಡೆದುದಕ್ಕೆ ಸಿಟ್ಟು ಮಾಡಿಕೊಳ್ಳದೇ ನಿಯಂತ್ರಿಸಿಕೊಂಡು ಮಗುವನ್ನು ಕರೆದು ಮಾತಾಡಿಸಿ ಕಾರಣದ ಬಗ್ಗೆ ಮಾತಿಗಿಳಿಯುವುದು ಬಹಳ ಪರಿಣಾಮಕಾರಿ. ಮೇಲ್ನೋಟಕ್ಕೆ ಇದು ಭ್ರಾಮಕ ಎನಿಸುವುದುಂಟು. ಆದರೆ ನಮ್ಮ ತಪ್ಪಿಗೆ ಇನ್ಯಾರೋ ಬೈದು ಅವಮಾನಿಸಿದ ಸಂದರ್ಭ ನೆನೆದರೆ ದೃಷ್ಟಿಕೋನ ಬದಲಾಗುತ್ತದೆ.

ತಪ್ಪು ಮಾಡಿದ ಮಗುವಿನೆಡೆಗೆ ದನಿಯೆತ್ತುವ ಮುನ್ನ ಅರೆ ಕ್ಷಣ ಮಕ್ಕಳ ಸ್ಥಾನದಲ್ಲಿ ನಿಂತು ಯೋಚಿಸುವುದು ಅಗತ್ಯ. ಇದು ಸ್ವಲ್ಪ ಕಷ್ಟವೆನಿಸಿದರೂ ಪರಿಣಾಮದ ದೃಷ್ಟಿಯಿಂದ ನೋಡಿದಾಗ ಅನಿವಾರ್ಯ. ಮಗುವಿನ ಜತೆಗೆ ನಾವು ಆಧಾರವಾಗಿ ನಿಂತು ಆದ ತಪ್ಪನ್ನು ಸರಿಪಡಿಸುವ/ ತಿದ್ದುವ ಪ್ರಕ್ರಿಯೆಗೆ ಹೆಚ್ಚು ಗಮನ ಕೊಡಬೇಕು. ಬೋಗುಣಿಯಲ್ಲಿ ತುಂಬಿಟ್ಟಿದ್ದ ಅಕ್ಕಿ ಮಗುವಿನ ಕೈಯಿಂದ ಬಿದ್ದು ಚೆಲ್ಲಿದಾಗ ಎರಡೇಟು ಕೊಟ್ಟು ಸಹಾಯ ಮಾಡಲು ಬರುವ ಮಗುವನ್ನು ದೂರವೇ ಇರಿಸಿ ‘ಅದೊಂದು ರಾಮಾಯಣ ಮಾಡಬೇಡ, ನಾನಿದನ್ನ ಬಳೀತೀನಿ, ನೀ ಒಂದ್ಕಡೆ ಕೂತ್ಕೋ’ ಅನ್ನುವ ಬದಲು ಜತೆಗೆ ಸೇರಿಸಿಕೊಂಡು ಸ್ವಚ್ಛ ಮಾಡಬಹುದು. ತಾನು ಮಾಡಿದ ತಪ್ಪಿನ ಪರಿಣಾಮ ಅರಿವಾಗುವುದಲ್ಲದೇ ಮುಂದೆ ಇಂಥ ಸಂದರ್ಭದಲ್ಲಿ ಮಾಡಬೇಕಾದ್ದೇನು ಎಂಬುದರ ಸ್ಪಷ್ಟ ಚಿತ್ರಣ ಮಗುವಿಗೆ ಸಿಕ್ಕಿರುತ್ತದೆ. ಆದರೆ ಮಗುವಿಗೆ ಕಲಿಸುವ ಭರಾಟೆಯಲ್ಲಿ ಗಾಜಿನ ವಸ್ತುವೊಂದು ಬಿದ್ದು ಚೂರಾದರೆ ಸ್ವಚ್ಛಗೊಳಿಸುವ ಕೆಲಸಕ್ಕೆ ಮಗುವನ್ನು ಕರೆಯುವ ಮುನ್ನ ಯೋಚಿಸುವ ಪ್ರಜ್ಞಾವಂತಿಕೆ ಕೂಡ ದೊಡ್ಡವರಿಗೆ ಬೇಕು!

ಶಿಸ್ತು ಬೆಳೆಸಿ

ಮಿತಿಗಳನ್ನು ಮೊದಲೇ ಗೊತ್ತುಪಡಿಸುವುದು ಅದ್ಭುತವಾಗಿ ಕೆಲಸ ಮಾಡುವ ಪ್ರಕ್ರಿಯೆ ಎನ್ನುತ್ತವೆ ಸಂಶೋಧನೆಗಳು. Children are creatures of habit ಎಂಬ ಮಾತು ಸುಳ್ಳಲ್ಲ. ಹುಟ್ಟಿದಾರಭ್ಯ ಶಿಸ್ತು ದಿನಚರಿಯ ಭಾಗವಾಗುವಂತೆ ನೋಡಿಕೊಂಡರೆ ತಿದ್ದುವ ಕೆಲಸಗಳು ಬಹಳ ಕಡಿಮೆಯಾಗುತ್ತವೆ. ಇದಕ್ಕೂ ದೊಡ್ಡವರೇ ಮಾದರಿಯಾಗುವುದು ಮುಖ್ಯ. ಓದಿದ ನಂತರ ದಿನ ಪತ್ರಿಕೆಯನ್ನು ಎಲ್ಲೆಲ್ಲೋ ಬಿಸಾಕಿ ಮಗುವಿನ ಬಳಿ ಮಾತ್ರ ‘ಹೋಮ್ ವರ್ಕ್ ಮುಗಿಸಿದ ಮೇಲೆ ಎಲ್ಲವನ್ನೂ ಅದರದರ ಜಾಗದಲ್ಲಿ ಇಡ್ಬೇಕು ಅಂತ ಗೊತ್ತಾಗಲ್ವಾ?’ ಎಂದು ಕೇಳಿದರೆ ಅದು ಶುದ್ಧ ಮೂರ್ಖತನ. ಮನೆಯ ಹಿರಿಯರು ಹೇಳಿದ್ದನ್ನು ಮಾಡದ ಮಕ್ಕಳು ಅವರು ಮಾಡಿದ್ದನ್ನಂತೂ ಮರೆಯದೇ ಮಾಡುತ್ತಾರೆ.

ಸಾಮ, ದಾನ, ಬೇಧಗಳ್ಯಾವುದೂ ಫಲಿಸದ ಕೆಲವೊಂದು ಸಂದರ್ಭಗಳಲ್ಲಿ ದಂಡ ಕೂಡ ಬೇಕಾಗುತ್ತದೆ ಎಂಬುದನ್ನು ಪೂರ್ತಿ ಅಲ್ಲಗಳೆಯಲೂ ಆಗದು. ಆಗ ಸಿಟ್ಟು ಬಂದದ್ದು ಅನಪೇಕ್ಷಿತ ತಪ್ಪಿನ ಮೇಲೇ ಹೊರತು ಮಗುವಿನ ಮೇಲಲ್ಲ, ತಪ್ಪು ಮಾಡಿದ ಕಾರಣಕ್ಕೆ ಮಗುವನ್ನು ದೂರವಿರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸುವುದು ಅತ್ಯವಶ್ಯ. ‘ಪೆಟ್ಟು ಕೊಟ್ಟಿದ್ದು ನಿನ್ನ ಕೆಟ್ಟ ಬುದ್ಧಿಗೆ, ನಿಂಗಲ್ಲ. ನೀ ಯಾವತ್ತೂ ನನ್ನ ಮುದ್ದು ಮಗಳೇ’ ಎಂದು ಅಮ್ಮ ಅಂದಿದ್ದು ಇನ್ನೂ ನೆನಪಿದೆ. ತಪ್ಪುಗಳಾದಾಗ ನಮ್ಮ ಮೇಲೆ ಅನವಶ್ಯಕ ಸಿಟ್ಟು ಬಾರದಂತೆ ತಡೆದು ಆತ್ಮ ಸ್ಥೈರ್ಯ ಕೆಡದಂತೆ ಕಾಪಾಡುತ್ತದೆ. ಇದನ್ನು ನಮ್ಮ ಮಕ್ಕಳಿಗೂ ದಾಟಿಸಬೇಕಿದೆ. ಅದಕ್ಕೆ ಬೇಕಾದ ತಾಳ್ಮೆ, ಸಹನೆಯನ್ನು ನಾವು ರೂಢಿಸಿಕೊಳ್ಳೋಣವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT