ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ | ಗರಿಷ್ಠ ಅಂಕ ಗಳಿಕೆ ಹೇಗೆ?

Last Updated 11 ಜೂನ್ 2020, 19:30 IST
ಅಕ್ಷರ ಗಾತ್ರ

ಇಂಗ್ಲಿಷ್‌ ಪ್ರಶ್ನೆಪತ್ರಿಕೆಯಲ್ಲಿ ಬೇರೆ ಬೇರೆ ರೀತಿಯ ಪ್ರಶ್ನೆಗಳಿರುತ್ತವೆ. ಇವಕ್ಕೆಲ್ಲ ಬೇರೆ ಬೇರೆ ವಿಧಾನದಲ್ಲಿಯೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಪಠ್ಯವನ್ನು ಓದಿ ಸಿದ್ಧತೆ ಮಾಡಿಕೊಳ್ಳುವುದು ಒಂದು ಬಗೆಯಾದರೆ, ವ್ಯಾಕರಣ(ಗ್ರಾಮರ್‌) ವನ್ನು ಅರ್ಥ ಮಾಡಿಕೊಂಡು ಆ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಕೆಲವು ಕಡೆ ಉದ್ದುದ್ದ ಉತ್ತರಗಳನ್ನು ನಿರೀಕ್ಷಿಸಿದರೆ ಇನ್ನು ಕೆಲವು ಪ್ರಶ್ನೆಗಳಿಗೆ ಸಂಕ್ಷಪ್ತವಾಗಿ ಉತ್ತರ ನೀಡಿದರೆ ಸಾಕು.

ಈಗ ಪ್ರಶ್ನೆಪತ್ರಿಕೆಯಲ್ಲಿರುವ ಓದಿ ಉತ್ತರಿಸುವ ವಿಭಾಗದಲ್ಲಿ ಪೂರ್ಣ ಅಂಕಗಳನ್ನು ಹೇಗೆ ಗಳಿಸುವುದು ಎಂಬುದರ ಕುರಿತು ಚಿತ್ತ ಹರಿಸೋಣ. ಕೊಟ್ಟ ವಿಷಯವನ್ನು ಪೂರ್ತಿ ಓದಲು ಬಹಳಷ್ಟು ಸಮಯ ಬೇಕು. ಹೀಗಾಗಿ ಮೊದಲು ಈ ವಿಭಾಗಕ್ಕೆ ಪ್ರಾಧಾನ್ಯತೆ ನೀಡಿ. ಮೊದಲನೆಯದಾಗಿ ಪೂರ್ತಿಯಾಗಿ ಪ್ಯಾರಾಗ್ರಾಫ್ ಓದುವ ಬದಲು ಕೇಳಿದ ಪ್ರಶ್ನೆಗಳನ್ನು ಓದಿದ ನಂತರವಷ್ಟೇ ಪ್ಯಾರಾಗ್ರಾಫ್ ಅನ್ನು ಓದುವುದು ಒಳ್ಳೆಯ ವಿಧಾನ. ಈ ರೀತಿ ಮಾಡುವುದರಿಂದ ಉತ್ತರ ಕೂಡ ಸುಲಭವಾಗಿ ದೊರೆಯುತ್ತದೆ. ಅಂದರೆ ಪ್ರಶ್ನೆಗಳು ಗೊತ್ತಾದ ನಂತರ ಅದಕ್ಕೆ ಎಲ್ಲಿ ಉತ್ತರವಿದೆ ಎಂಬುದು ಸುಲಭವಾಗಿ ಸಿಕ್ಕಿ ಬಿಡುತ್ತದೆ. ಜೊತೆಗೆ ನಿಮ್ಮ ಅಮೂಲ್ಯವಾದ ಸಮಯವು ಕೂಡ ಉಳಿಯುತ್ತದೆ.

ಇದಾದ ನಂತರ ಉದ್ದುದ್ದ ಉತ್ತರ ಬರೆಯುವ ವಿಭಾಗ ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ಇದರಲ್ಲಿ ಯೋಚನೆ ಮಾಡಿ ಉತ್ತರಿಸುವ ಅವಶ್ಯಕತೆ ಇರುತ್ತದೆ. ಕೊನೆಯದಾಗಿ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಮೀಸಲಿಡಿ.

ಉತ್ತರಿಸುವ ವಿಧಾನ
ಹಾಗೆಯೇ ಪ್ರತಿಯೊಬ್ಬರೂ ಕೂಡ ಇದೇ ವಿಧಾನವನ್ನು ಅನುಸರಿಸಬೇಕೆಂಬುದು ಕಡ್ಡಾಯವೇನಲ್ಲ. ಇಲ್ಲಿ ನೀಡಿರುವುದು ಕೇವಲ ಒಂದು ಉದಾಹರಣೆ ಅಷ್ಟೇ. ನೀವು ಅನುಸರಿಸಬೇಕಾದ ವಿಧಾನ ಯಾವುದೆಂದರೆ ನೀವು ಹಳೆಯ ಅಥವಾ ಮಾದರಿ ಪ್ರಶ್ನೆಪತ್ರಿಕೆಗಳನ್ನು ಯಾವ ರೀತಿ ಅಭ್ಯಾಸ ಮಾಡಿರುತ್ತೀರಿ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಅದರಲ್ಲಿ ನೀವು ಯಾವುದನ್ನು ಮೊದಲು ಉತ್ತರಿಸಬೇಕು, ಕೊನೆಗೆ ಯಾವುದನ್ನು ಉತ್ತರಿಸಬೇಕು, ಸಮಯ ಯಾವುದಕ್ಕೆ ಸಾಕಾಗುತ್ತಿಲ್ಲ, ಯಾವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ, ಯಾವ ಪ್ರಶ್ನೆಯನ್ನು ಸಹಪಾಠಿಗಳೊಂದಿಗೆ ಅಥವಾ ಶಿಕ್ಷಕರೊಂದಿಗೆ ಚರ್ಚಿಸಬೇಕು.. ಇವೇ ಮೊದಲಾದ ಪ್ರಶ್ನೆಗಳಿಗೆ ವ್ಯಾಪಕ ಉತ್ತರ ದೊರಕಿಬಿಡುತ್ತದೆ.

ಸಮಯ ನಿಗದಿ ಹೇಗೆ?
ಉದ್ದವಾದ ಉತ್ತರ (ಪ್ಯಾಸೇಜ್‌)ಗಳನ್ನು ಬರೆಯುವಾಗ ಸ್ವತಃ ನೀವೇ ನಿರ್ದಿಷ್ಟ ಸಮಯ ನಿಗದಿಪಡಿಸಿಟ್ಟುಕೊಂಡಿರಿ ಹಾಗೂ ಆ ಸಮಯದಲ್ಲೇ ಉತ್ತರಿಸುವುದನ್ನು ಪೂರ್ತಿಗೊಳಿಸಲು ಪ್ರಯತ್ನಿಸಿ. ಈ ರೀತಿ ಮಾಡಿದರೆ ಮಾತ್ರ ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯ. ಅದರಲ್ಲೂ ಭಾಷೆಗಳ ವಿಷಯಗಳಲ್ಲಿ ಸಮಯದ ನಿರ್ವಹಣೆ ಬಹುಮುಖ್ಯ. ಪ್ಯಾಸೇಜ್‌ಗಳನ್ನು ಬರೆಯುತ್ತಾ ಕಾಲಹರಣ ಮಾಡದಿರಿ. ಇವುಗಳನ್ನು ಬರೆಯುವಾಗ ವಿಷಯದ ಮೇಲೆ ನೇರವಾಗಿ ನಿಮ್ಮ ಬರವಣಿಗೆ ಕೇಂದ್ರೀಕೃತವಾಗಿರಲಿ. ಇದಲ್ಲದೆ ಅಗತ್ಯ ಎನಿಸಿದಲ್ಲಿ ಉಲ್ಲೇಖ (ಕೋಟ್ಸ್)ಗಳು, ಉದಾಹರಣೆಗಳನ್ನು ಸೇರಿಸಿ ಹಾಗೂ ಉತ್ತರವನ್ನು ಪೂರ್ತಿ ಒಂದೇ ಪ್ಯಾರಾಗ್ರಾಫ್ ಮಾಡದೆ ಅವಶ್ಯವಿದ್ದಲ್ಲಿ ಮುಖ್ಯಾಂಶಗಳನ್ನು ಕೂಡ ಸೇರಿಸಿ.

ಇದು ಪರಿಪೂರ್ಣ ಉತ್ತರ ಆಗುವುದರೊಂದಿಗೆ ಗರಿಷ್ಠ ಅಂಕಗಳನ್ನು ಪಡೆಯಲು ಸಹಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT