ಅನ್ವೇಷಣಾ ಕಲಿಕೆ

ಶನಿವಾರ, ಏಪ್ರಿಲ್ 20, 2019
31 °C

ಅನ್ವೇಷಣಾ ಕಲಿಕೆ

Published:
Updated:
Prajavani

ಜಾಗತಿಕವಾಗಿ ಇಂದಿನ ಹಾಗೂ ಮುಂಬರುವ ಸಮಸ್ಯೆಗಳನ್ನು ಎದುರಿಸುವ ಸಲುವಾಗಿ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಸ್ವತಂತ್ರವಾಗಿ ಯೋಚಿಸುವ ಹಾಗೂ ಹೊಸದನ್ನು ಅನ್ವೇಷಿಸುವ ಸಾಕಷ್ಟು ಅವಕಾಶಗಳನ್ನು ಒದಗಿಸಬೇಕಾಗಿದೆ. ಅನ್ವೇಷಣಾ ಕಲಿಕೆಗೆ ಬೇಕಾಗಿರುವುದು ಬೆಲೆ ಬಾಳುವ ಉಪಕರಣಗಳಲ್ಲ, ಬದಲಾಗಿ ದೃಢ ಮನಸ್ಸು, ಸಾಧಿಸುವ ಛಲ, ಏಕಾಗ್ರತೆ, ಕುತೂಹಲ, ಆತ್ಮವಿಶ್ವಾಸಗಳೆಂಬ ಉಪಕರಣಗಳು. ವಿಜ್ಞಾನದ ಮೂಲ ತತ್ವಗಳು ಕೇವಲ ಉಪಕರಣಗಳಲ್ಲ, ಸ್ವತಂತ್ರವಾಗಿ ಆಲೋಚಿಸುವುದು ಹಾಗೂ ಶ್ರಮದ ದುಡಿಮೆಯಾಗಿದೆ.

ಯೋಚಿಸುವುದೆಂದರೇನು? ಯಾವುದಾದರೊಂದು ವಿಷಯದ ಕುರಿತು ಕಲ್ಪನೆಯನ್ನು ರೂಪಿಸುವ ಸಾಮರ್ಥ್ಯ, ಆ ಕಲ್ಪನೆಯನ್ನು ಪರೀಕ್ಷಿಸುವುದು, ಪರೀಕ್ಷಿಸಿದ ನಂತರ ಅಂತಹುದೇ ಇತರ ಪರಿಕಲ್ಪನೆಗಳೊಂದಿಗೆ ಜೋಡಿಸುವುದು, ಕಾರಣಗಳನ್ನು ಹುಡುಕುವುದು, ಮನನ ಮಾಡುವುದನ್ನು ಒಳಗೊಂಡಿರುತ್ತದೆ. ಆದರೆ ಇತ್ತೀಚಿಗೆ ಬಹಳಷ್ಟು ಸಂಖ್ಯೆಯ ಮಕ್ಕಳು ಯಾವುದೇ ಒಂದು ವಿಜ್ಞಾನದ ಪರಿಕಲ್ಪನೆಗಳನ್ನು ಹೇಳಿದಾಗ, ಆ ಪರಿಕಲ್ಪನೆ ಕುರಿತಂತೆ ತಾವೇ ಸ್ವಂತ ಯೋಚನೆ ಅಥವಾ ಅನ್ವೇಷಣೆಯಲ್ಲಿ ಆಸಕ್ತರಾಗುತ್ತಿಲ್ಲ. ಬದಲಾಗಿ ಪಠ್ಯಪುಸ್ತಕದಲ್ಲಿ ಕೇವಲ ಉತ್ತರಗಳನ್ನು ಹುಡುಕಿ ಬರೆದು, ಹೇಗಾದರೂ ಮಾಡಿ ಅತೀ ಹೆಚ್ಚು ಅಂಕಗಳನ್ನು ಪಡೆದರೆ ಸಾಕು ಎಂಬ ಮನೋಭಾವನೆಗೆ ಬಂದಿರುವುದು ದುರದೃಷ್ಟಕರ ಸಂಗತಿ.

ಉದಾಹರಣೆಗೆ- ಬೆಳಕಿನ ಪ್ರತಿಫಲನ ಎಂದರೇನು? ಎಂಬ ಪ್ರಶ್ನೆಗೆ ‘ವಸ್ತುವಿನ ಮೇಲೆ ಬಿದ್ದ ಬೆಳಕು ಹಿಂದಿರುಗಿ ಬರುವುದನ್ನು ಪ್ರತಿಫಲನ ಎನ್ನುವರು’ ಎಂಬ ಉತ್ತರ ಹುಡುಕಿ ಬರೆದರೆ ಸಾಕೇ? ಇಂತಹ ಪರಿಕಲ್ಪನೆಗಳನ್ನು ಆಳವಾಗಿ ಯೋಚಿಸಲು ಅವಕಾಶ ಒದಗಿಸುವುದಾದರೂ ಹೇಗೆ ಎಂದು ಯೋಚಿಸಿದಾಗ ನಮ್ಮ ನಿತ್ಯ ಜೀವನದಲ್ಲಿ ಬೆಳಕಿನ ಪ್ರತಿಫಲನದ ಮಹತ್ವವೇನು? ಬೆಳಕಿನ ಪ್ರತಿಫಲನವಿಲ್ಲದೇ ಹೋಗಿದ್ದರೆ ಏನಾಗುತ್ತಿತ್ತು? ಹೀಗೆ ಹಲವಾರು ಪ್ರಶ್ನೆಗಳ ಮೂಲಕ ಯೋಚಿಸುವ ಅವಕಾಶವನ್ನು ಮಕ್ಕಳಿಗೆ ಒದಗಿಸಬಹುದು. ಆಗ ಅವರು ನೂರೆಂಟು ಊಹೆಗಳು ಹಾಗೂ ಪ್ರಶ್ನೆಗಳ ಮೂಲಕ ತಾವು ಈಗಾಗಲೇ ತಿಳಿದುಕೊಂಡಿರುವ ಜ್ಞಾನವನ್ನು ಅನ್ವಯಿಸಿ ಅದಕ್ಕೆ ಉತ್ತರ ಹುಡುಕಿ ಹೀಗೆ ಹೇಳಲು ಸಾಧ್ಯ.

ನಿತ್ಯ ಜೀವನದಲ್ಲಿ ಅದರ ಮಹತ್ವ
ಮೊಟ್ಟ ಮೊದಲಿಗೆ ಜಗತ್ತಿನ ಈ ಎಲ್ಲ ಸುಂದರ ಸೌಂದರ್ಯವನ್ನು ವೀಕ್ಷಿಸಲು ಸಾಧ್ಯವಾಗಿರುವುದೇ ಬೆಳಕಿನ ಪ್ರತಿಫಲನದಿಂದ. ರಾತ್ರಿ ಹೊತ್ತಿನಲ್ಲಿ ಚಂದ್ರನ ಬೆಳದಿಂಗಳು ಸಾಧ್ಯವಾಗುತ್ತಿರುವುದು ಬೆಳಕಿನ ಪ್ರತಿಫಲನದಿಂದ. ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು, ಪ್ರತಿಫಲನಗೊಳ್ಳುವುದರಿಂದಲೇ ಚಂದ್ರನಿಂದ ಬೆಳಕನ್ನು ಪಡೆಯಲು ಸಾಧ್ಯವಾಗಿದೆ. ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬ ನೋಡುವುದು, ಪತ್ರಿಕೆ ಓದುವುದು, ಫೋನ್ ಕಾಲ್ ಮಾಡುವಾಗ ಯಾವ ಬಟನ್‌ಗಳನ್ನು ಒತ್ತುತ್ತಿರುವುದಾಗಿ ನೋಡುವುದು, ಸೂಕ್ಷ್ಮದರ್ಶಕ, ಖಗೋಳ ದೂರದರ್ಶಕ, ದಂತವೈದ್ಯರು ಹಲ್ಲನ್ನು ಪರೀಕ್ಷಿಸುವುದು, ಓ.ಹೆಚ್.ಪಿ ಪೆರಿಸ್ಕೋಪ್, ಕೆಲಿಡಿಯೋಸ್ಕೋಪ್ ಮುಂತಾದವು. ಹಾಗಾದರೆ ಪ್ರತಿಫಲನದ ಮಹತ್ವವಿಲ್ಲದ ಕ್ಷೇತ್ರವೇ ಇಲ್ಲವೆನ್ನಬಹುದು. ಪ್ರತಿಫಲನವಿಲ್ಲದ ಜಗತ್ತನ್ನು ಊಹಿಸುವುದು ಕಷ್ಟ.

ಬಾಯಿಪಾಠಕ್ಕೆ ಸೀಮಿತವಲ್ಲ
ಹೀಗೆ ಇಲ್ಲಿ ಸರಿಯಾದ ಉತ್ತರ ಪಡೆಯುವುದಕ್ಕಿಂತಲೂ, ಆ ಉತ್ತರ ಪಡೆಯಲು ಕ್ರಮಿಸಿದ ದಾರಿ, ತಾರ್ಕಿಕ ಆಲೋಚನೆ, ಅನುಭವಿಸಿದ ಮಾನಸಿಕ ಪ್ರಕ್ರಿಯೆಗಳು, ಮಗುವಿನ ಶೈಕ್ಷಣಿಕ ಪ್ರಗತಿಯಲ್ಲಿ ಹೆಚ್ಚು ಪ್ರಮುಖವಾಗಿವೆ. ಒಂದು ವೇಳೆ ಮಾನಸಿಕ ಪ್ರಕ್ರಿಯೆಗೂ, ಅಂತಿಮ ಉತ್ತರಕ್ಕೂ ಅನ್ಯೋನ್ಯ ಸಂಬಂಧವಿಲ್ಲದಿದ್ದರೆ ಪಡೆದ ಜ್ಞಾನವನ್ನು ಮಗುವು ಅಂತಹುದೇ ಇನ್ನೊಂದು ಸಂದರ್ಭದಲ್ಲಿ ಉಪಯೋಗಿಸಲಾರದು. ಅಂದರೆ ವಿಜ್ಞಾನದ ಪರಿಕಲ್ಪನೆಗಳನ್ನು ಬಾಯಿಪಾಠ ಮಾಡಿ ಬರೆದು ಕೇವಲ ಅಂಕ ಗಳಿಕೆಗಷ್ಟೇ ಮಾತ್ರ ಉಪಯೋಗಿಸಿದ ಮಗು, ಆ ಪರಿಕಲ್ಪನೆಗಳನ್ನು ನಮ್ಮ ನಿತ್ಯಜೀವನಕ್ಕೆ ಉಪಯೋಗಿಸುವಲ್ಲಿ ವಿಫಲವಾಯಿತೆಂದು ಹೇಳಬಹುದು. ಅನ್ವೇಷಣಾ ಕಲಿಕೆಯು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ತುಂಬಾ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳಿಗೆ ವಿಷಯದ ಕಡೆಗೆ ಆಸಕ್ತಿ, ಅಭಿಪ್ರೇರಣೆ ಹುಟ್ಟಿಸುವುದರ ಮೂಲಕ ಅವರನ್ನು ಭಾರತದ ಮುಂದಿನ ಯುವ ವಿಜ್ಞಾನಿಗಳನ್ನಾಗಿ ನಿರ್ಮಿಸಲು ಸಾಧ್ಯವಾಗುತ್ತದೆ.

ಕಲಿಕಾ ಪ್ರಕ್ರಿಯೆಯಲ್ಲಿ ಮಗುವನ್ನು ಸ್ವಯಂ ಚಿಂತನೆಗೆ ಹಚ್ಚುವುದು ಹಾಗೂ ಕಲ್ಪನಾ ಶಕ್ತಿಯನ್ನು ಚೈತನ್ಯಗೊಳಿಸುವಂತೆ ಮಾಡುವುದು ಅತೀ ಅಗತ್ಯ. ಈ ಅನ್ವೇಷಣಾ ಕಲಿಕೆಯಲ್ಲಿ ಪ್ರಯತ್ನ ಮತ್ತು ಪ್ರಮಾದಗಳಿಂದ ಕಲಿಕೆ ನಡೆಯುತ್ತಾ ಸಾಗುತ್ತದೆ. ತಕ್ಷಣದಿಂದಲೇ ಪ್ರಶ್ನೆಗೆ ಉತ್ತರ ಸಿಗದೇ ಹೋದರೂ, ಕ್ರಮೇಣ ದೋಷಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಿ, ಸಮಸ್ಯೆಗೆ ಪರಿಹಾರದ ಸಂಭವನೀಯತೆ ಹೆಚ್ಚುತ್ತದೆ.

ಪ್ರಶ್ನೆ ಕೇಳುವ ಅಭ್ಯಾಸ
ಅನ್ವೇಷಣಾ ಹಾದಿಯಲ್ಲಿ ಹೋಗುವ ವಿದ್ಯಾರ್ಥಿಗಳು ಅಸಂಖ್ಯಾತ ಪ್ರಶ್ನೆಗಳನ್ನು ಕೇಳುವ, ಸರಿಯಾದ ಉತ್ತರವನ್ನು ಊಹಿಸುವ ಸಾಮರ್ಥ್ಯವನ್ನು ಪಡೆಯಬೇಕಾಗುತ್ತದೆ. ಈ ಕಲಿಕೆಯಲ್ಲಿ ಶಿಕ್ಷಕರು ತಮ್ಮ ಅಭಿಪ್ರಾಯವನ್ನು ವಿದ್ಯಾರ್ಥಿಗಳ ಮೇಲೆ ಹೇರದೆ, ವಿದ್ಯಾರ್ಥಿಗಳು ತಾವೇ ಒಂದಾದ ನಂತರ ಒಂದು ಕಲಿಕೆಯ ಹಂತವನ್ನು ಏರುತ್ತಾರೆ. ಅಭಿಪ್ರಾಯವನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು, ಆದರೆ ಅಂತಿಮ ನಿರ್ಧಾರಕ್ಕೆ ಬಂದು, ನಿಯಮವೊಂದನ್ನು ರೂಪಿಸಿ, ಆ ನಿಯಮವನ್ನು ಇತರ ಸಂದರ್ಭಗಳಿಗೆ ಹೋಲಿಸಿ ತಾಳೆ ನೋಡುವ ಮೂಲಕ ಸತ್ಯಾ ಸತ್ಯತೆಯನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದುತ್ತಾರೆ.

ಇನ್ನೂ ಹೆಚ್ಚಿಗೆ ಹೇಳು. ಆ ನಿರ್ಣಯಕ್ಕೆ ಹೇಗೆ ತಲುಪಿದೆ? ಸಾರಾಂಶ ರೂಪದಲ್ಲಿ ಹೇಳು? ಮತ್ತೆ ಯಾರಾದರೂ ಏನಾದರೂ ಬಿಟ್ಟು ಹೋಗಿರುವ ಸಂಗತಿಯನ್ನು ಸೇರಿಸುತ್ತೀರಾ? ಎಲ್ಲರ ಸಹಮತವಿದೆಯೇ? ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಹೇಳಿರಿ. ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಆಳವಾದ ವಿಷಯ ಸಂಗ್ರಹವನ್ನು ಶ್ರೀಮಂತಗೊಳಿಸಬಹುದಾಗಿದೆ. ಒಟ್ಟಿನಲ್ಲಿ ಕೇವಲ ಹೇಳಿದ್ದನ್ನು ಮರೆಯಬಹುದು, ತೋರಿಸಿದ್ದನ್ನು ಕೇವಲ ನೆನಪಿನಲ್ಲಿಟ್ಟುಕೊಳ್ಳಬಹುದು, ತೊಡಗಿಸಿಕೊಂಡು ನಿರ್ವಹಿಸಿದಾಗ ಅದು ಅರ್ಥವಾಗುವುದರ ಜೊತೆಗೆ ಹೊಸ ಅನ್ವೇಷಣೆಗೆ ಪ್ರೇರೇಪಿಸುವ ಮೂಲಕ ವಿದ್ಯಾರ್ಥಿಗಳನ್ನು ಮಹಾನ್ ವಿಜ್ಞಾನಿಗಳನ್ನಾಗಿ ರೂಪಿಸುತ್ತದೆ.

-(ಲೇಖಕರು ಸಹ ಸಂಪಾದಕರು, ಜೀವನಶಿಕ್ಷಣ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !