ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಗಣಿತದ ಟಿಸಿಲುಗಳ ಬೇರು ರಾಮಾನುಜನ್‌

Last Updated 22 ಡಿಸೆಂಬರ್ 2020, 5:50 IST
ಅಕ್ಷರ ಗಾತ್ರ
ADVERTISEMENT
""

ಶೂನ್ಯ ಹಾಗೂ ದಶಮಾಂಶ ಪದ್ಧತಿಯನ್ನು ಜಗತ್ತಿಗೆ ನೀಡಿದ ಭಾರತ ಗಣಿತ ಕ್ಷೇತ್ರದಲ್ಲಿ ಸ್ಮರಣೀಯ ಸಾಧನೆ ಮಾಡಿದೆ. ಆದರೆ ಶ್ರೀನಿವಾಸ ರಾಮಾನುಜನ್‌ ಅವರಂತಹ ಅಭಿಜಾತ ಪ್ರತಿಭೆಯ ನಂತರ ಗಣಿತದಲ್ಲಿಯ ಸಾಧನೆಗಳು ಒಂದು ಹಂತ ಬಿಟ್ಟು ಆವಿಷ್ಕಾರದವರೆಗೆ ಮೇಲೇರುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ.

ಆರ್ಯಭಟ, ಬ್ರಹ್ಮಗುಪ್ತ, ವರಾಹಮಿಹಿರ, ಭಾಸ್ಕರ- 2 , ಶ್ರೀನಿವಾಸ ರಾಮಾನುಜನ್‌, ಪಿ.ಸಿ. ಮಹಾಲನೋಬಿಸ್‌, ಶ್ರೀಧರಾಚಾರ್ಯ, ಶಕುಂತಲಾ ದೇವಿ, ಸತ್ಯೇಂದ್ರನಾಥ್‌ ಬೋಸ್‌, ಸಿ.ಆರ್‌. ರಾವ್‌, ಡಿ.ಆರ್‌. ಕಪ್ರೇಕರ್‌, ಹರೀಶ್‌ಚಂದ್ರ, ನರೇಂದ್ರ ಕರ್ಮರ್‌ಕರ್‌... ಹೀಗೆ ಹಲವು ಭಾರತೀಯ ಗಣಿತಜ್ಞರು ಜಗತ್ಪ್ರಸಿದ್ಧರು. ಕೇವಲ 32 ವರ್ಷಗಳ ಕಾಲ ಬದುಕಿದ ತಮಿಳುನಾಡಿನ ಶ್ರೀನಿವಾಸ ರಾಮಾನುಜನ್‌ ಅವರ ಗಣಿತದ ಪ್ರತಿಭೆ ಅಸಾಧಾರಣ. ಆದರೆ ಅದು ಬೆಳಗಲು ಅವರು ಇಂಗ್ಲೆಂಡ್‌ಗೆ ಹೋಗಬೇಕಾಯಿತು. ತೀವ್ರ ಬಡತನದಲ್ಲಿಯೂ, ಯಾವುದೇ ತರಬೇತಿಗಳು ಇಲ್ಲದೆಯೇ ರಾಮಾನುಜನ್‌ ಅವರಲ್ಲಿ ಗಣಿತದ ಹೊಸ ಹೊಳಹುಗಳು ಕಾಣಿಸಿಕೊಂಡಿದ್ದನ್ನು ಅವರ ಜೀವನಚರಿತ್ರೆಯಲ್ಲಿ ಕಾಣಬಹುದು. ಗಣಿತ ಬಿಟ್ಟರೆ ಉಳಿದ ವಿಷಯಗಳಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. ಹೀಗಾಗಿ ಅವರು ದೇಶದಲ್ಲಿ ಅಷ್ಟಾಗಿ ಸಾಧನೆ ಮಾಡಲು ಸಾಧ್ಯವಾಗಲಿಲ್ಲ ಎಂಬ ಸಂಗತಿಯೂ ಯೋಚನೆಗೆ ಹಚ್ಚುವ ಸಂಗತಿ.

ಮೂಲ ವಿಜ್ಞಾನ ಹಾಗೂ ಸಂಶೋಧನೆಗಳ ಕಡೆ ಯುವಜನರ ಚಿತ್ತ ಅಷ್ಟಾಗಿ ಹರಿಯುತ್ತಿಲ್ಲವಾದ ಕಾರಣ ಗಣಿತ ಕ್ಷೇತ್ರವೂ ಮುಂದೆ ಸೊರಗುವ ಅಪಾಯವನ್ನು ತಜ್ಞರು ಗುರುತಿಸಿದ್ದಾರೆ. ಈಗಾಗಲೇ ಗಣಿತ ಎಂದರೆ ಕಬ್ಬಿಣದ ಕಡಲೆ ಎಂಬ ಮನೋಭಾವ ಶೈಕ್ಷಣಿಕ ವಲಯದಲ್ಲಿ ಕಂಡು ಬಂದಿರುವುದನ್ನು ಕಾಣಬಹುದು. ‘ಗಣಿತದಲ್ಲಿ ಸಂಶೋಧನೆ ಮಾಡುತ್ತೇನೆ’ ಎಂಬ ಮಾತು ಕೇಳಿ ಬರುವುದೇ ಅಪರೂಪವಾಗಿದೆ. ಎಂಜಿನಿಯರಿಂಗ್‌ ಮಾಡಿ ವಿದೇಶಕ್ಕೆ ಹೋಗಿ ಗಳಿಸುವುದರಲ್ಲೇ ಹೆಚ್ಚಿನ ಪೋಷಕರ ಆಸಕ್ತಿ ಇರುವುದರಿಂದ ಪ್ರತಿಭೆಗಳಿದ್ದರೂ ಕಮರುವ ಸಾಧ್ಯತೆಗಳೇ ಹೆಚ್ಚಾಗಿವೆ. ದೇಶದ ಶೈಕ್ಷಣಿಕ ಪದ್ಧತಿಯ ಬಗ್ಗೆಯೂ ‘ಗಣಿತ ದಿನಾಚರಣೆ’ಯಂದು ಪುನರ್ವಿಮರ್ಶೆ ಮಾಡುವ ಕಾಲ ಬಂದಿದೆ.

ವಿಜ್ಞಾನಕ್ಕೆ ದೇಶದ ಕೊಡುಗೆಗಳ ಬಗ್ಗೆ ಹಿನ್ನೋಟ ಹರಿಸಿದಾಗ ಗಣಿತ ಕ್ಷೇತ್ರದಲ್ಲೇ ಹೆಚ್ಚಿನ ಹಾಗೂ ಮಹತ್ವದ ಸಾಧನೆಗಳು ಕಂಡು ಬಂದಿವೆ. ಉಳಿದೆಲ್ಲ ವಿಜ್ಞಾನದ ಶಾಖೆಗಳ ಸಂಶೋಧನೆಗಳಿಗೂ ಅಡಿಪಾಯದಂತಿರುವ ಗಣಿತದ ಹಲವು ಮೂಲ ಸಿದ್ಧಾಂತಗಳನ್ನು ಸಂಶೋಧಿಸಿದವರು ಭಾರತೀಯರು ಎಂಬ ಅಂಶ ಹೆಮ್ಮೆಯ ಸಂಗತಿ.

ಶ್ರೀನಿವಾಸ ರಾಮಾನುಜನ್‌

ಗಣಿತ ಸಂಶೋಧನೆಗೆ ಪ್ರೋತ್ಸಾಹ

ದೇಶದಲ್ಲಿ ಸದ್ಯ ಗಣಿತದ ಸಂಶೋಧನೆಗಳಿಗೆ ಸ್ಫೂರ್ತಿದಾಯಕ ಹೆಸರು ತಮಿಳುನಾಡಿನ ಶ್ರೀನಿವಾಸ ರಾಮಾನುಜನ್‌ ಅವರ ಹೆಸರು. ಅವರ ಹೆಸರಿನಲ್ಲೇ ಈಗ ಹಲವಾರು ಸಂಘ–ಸಂಸ್ಥೆಗಳು ಕೆಲಸ ಮಾಡತೊಡಗಿವೆ. ಡಿ. 22ರಂದು ಅವರ ಜನ್ಮದಿನವನ್ನು ‘ರಾಷ್ಟ್ರೀಯ ಗಣಿತ ದಿನಾಚರಣೆ’ ಎಂದು 2012ರಲ್ಲಿ ಘೋಷಿಸಲಾಗಿದೆ.

1907ರಲ್ಲಿ ಇಂಡಿಯನ್‌ ಮೆಥೆಮೆಟಿಕಲ್‌ ಸೊಸೈಟಿಯನ್ನು ಅಂದಿನ ಮದ್ರಾಸ್‌ ಪ್ರಾಂತ್ಯದ ವಿ.ರಾಮಸ್ವಾಮಿ ಅಯ್ಯರ್‌ ಅವರು ಉಳಿದ 20 ಸದಸ್ಯರ ಸಹಕಾರದೊಂದಿಗೆ ಸ್ಥಾಪಿಸಿದರು. ಪುಣೆಯಲ್ಲಿ ಇದರ ಕೇಂದ್ರ ಇದ್ದು, ಅದರ ಪ್ರಥಮ ಅಧ್ಯಕ್ಷರಾದವರು ಬಿ. ಹನುಮಂತ ರಾವ್‌. ಗಣಿತದ ಸಂಶೋಧಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಇದರ ಮೂಲ ಉದ್ದೇಶ. ಇದು ದೇಶದ ಅತ್ಯಂತ ಹಳೆಯ ಗಣಿತಜ್ಞರ ಸಂಸ್ಥೆಯಾಗಿದೆ. ಕಳೆದ ವರ್ಷದ ಅಂಕಿ–ಅಂಶಗಳ ಪ್ರಕಾರ ಇದರ ಆಜೀವ ಸದಸ್ಯರು 3,500. ‘ದಿ ಜರ್ನಲ್‌ ಆಫ್‌ ದಿ ಇಂಡಿಯನ್‌ ಮೆಥೆಮೆಟಿಕಲ್‌ ಸೊಸೈಟಿ’ ಎಂಬ ಜರ್ನಲ್‌ 3 ತಿಂಗಳಿಗೊಮ್ಮೆ ಪ್ರಕಟವಾಗುತ್ತದೆ. 2015ರಿಂದ ಆನ್‌ಲೈನ್‌ ಮೂಲಕವೂ ಈ ಜರ್ನಲ್‌ ಲಭ್ಯವಿದೆ. 1933ರಿಂದ ‘ದಿ ಮೆಥೆಮೆಟಿಕ್ಸ್‌ ಸ್ಟುಡೆಂಟ್‌’ ಎಂಬ ಜರ್ನಲ್ ಸಹ ಪ್ರಕಟಿಸಲಾಗುತ್ತಿದೆ. ಇಂಥ ಪ್ರಕಟಣೆಗಳನ್ನು ಶಾಲೆ–ಕಾಲೇಜು ವಿದ್ಯಾರ್ಥಿಗಳಿಗೆ ನಿಯಮಿತವಾಗಿ ತಲುಪಿಸುವ ಕಾರ್ಯ ಮಾಡಬೇಕಿದೆ.

1985ರಲ್ಲಿ ರಾಮಾನುಜನ್‌ ಮೆಥೆಮೆಟಿಕಲ್‌ ಸೊಸೈಟಿಯನ್ನು ತಿರುಚಿರಾಪಳ್ಳಿಯಲ್ಲಿ ಆರಂಭಿಸಲಾಗಿದೆ. ಚೆನ್ನೈನ ಕೆ.ಎಸ್. ಪದ್ಮನಾಭನ್‌ ಇದರ ಸೃಷ್ಟಿಗೆ ಕಾರಣೀಕರ್ತರು. ಜಿ.ಶಂಕರನಾರಾಯಣನ್‌ ಅವರು ಪ್ರಥಮ ಅಧ್ಯಕ್ಷರು. ಇದಕ್ಕೆ 1,500 ಆಜೀವ ಸದಸ್ಯರು ಇದ್ದಾರೆ. ಶಿಕ್ಷಣದ ಎಲ್ಲ ಹಂತಗಳಲ್ಲೂ ಗಣಿತಕ್ಕೆ ಪ್ರೋತ್ಸಾಹ ನೀಡುವುದೇ ಇದರ ಧ್ಯೇಯೋದ್ದೇಶ.

ತಮಿಳುನಾಡಿನ ಅಳಗಪ್ಪ ವಿಶ್ವವಿದ್ಯಾಲಯದಲ್ಲಿ 2006ರಲ್ಲಿ ‘ರಾಮಾನುಜನ್‌ ಸೆಂಟರ್‌ ಫಾರ್‌ ಹೈಯರ್‌ ಮೆಥೆಮೆಟಿಕ್ಸ್‌’ ಆರಂಭಿಸಲಾಗಿದೆ. ಗಣಿತ ಸಂಶೋಧನೆ ಹಾಗೂ ಶಿಕ್ಷಣ ಇದರ ಉದ್ದೇಶ.

ಆಂಧ್ರಪ್ರದೇಶದ ಕುಪ್ಪಂನಲ್ಲಿ ಅಗಸ್ತ್ಯ ಇಂಟರ್‌ನ್ಯಾಷನಲ್‌ ಫೌಂಡೇಶನ್‌ ಹಾಗೂ ಜ್ಞಾನೋಂ ಫೌಂಡೇಶನ್‌ಗಳ ಸಹಯೋಗದಲ್ಲಿ ‘ರಾಮಾನುಜನ್‌ ಮ್ಯಾಥ್‌ ಪಾರ್ಕ್‌’ ಸ್ಥಾಪಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಲ್ಲಿರುವ ಗಣಿತ ಜ್ಞಾನವನ್ನು ಪೋಷಿಸುವುದೇ ಇದರ ಪ್ರಮುಖ ಗುರಿ. 172 ಎಕರೆಯ ಈ ಸಂಸ್ಥೆಯ ಆವರಣದಲ್ಲಿ ಗಣಿತ ಕಲಿಕಾ ಉಪಕರಣಗಳನ್ನು ಸ್ಥಾಪಿಸಲಾಗಿದೆ. ಪ್ರಾಕ್ಟಿಕಲ್‌ ಕಲಿಕೆಗೆ ಇಲ್ಲಿ ಪ್ರಾಮುಖ್ಯ ನೀಡಲಾಗಿದೆ.

ಕಲ್ಕತ್ತಾ ಮೆಥೆಮೆಟಿಕಲ್‌ ಸೊಸೈಟಿ, ಕೇರಳ ಮೆಥೆಮೆಟಿಕಲ್‌ ಸೊಸೈಟಿ, ಭಾರತ ಗಣಿತ ಪರಿಷತ್‌, ವಿಜ್ಞಾನ ಪರಿಷತ್‌ ಸೇರಿದಂತೆ ಇನ್ನೂ ಹಲವು ಸಂಘ–ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಅಧ್ಯಯನ ಪೀಠಗಳು ಗಣಿತದ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿವೆ. ಇಲ್ಲಿಯ ಮಕ್ಕಳ ಗಣಿತಜ್ಞಾನದ ಮಟ್ಟವೂ ಜಗತ್ತಿನಲ್ಲೇ ಶ್ರೇಷ್ಠ ಎನ್ನಲಾಗುತ್ತದೆ. ಆದರೆ, ಅದು ಇನ್ನಷ್ಟು ಪರಿಣಾಮಕಾರಿಯಾಗಬೇಕಲ್ಲದೇ ಗಣಿತ ಕ್ಷೇತ್ರದ ಆವಿಷ್ಕಾರಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಯುವ ಅವಶ್ಯಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT