ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ರಂಗಸವಾಲು ಎದುರಿಸುವುದು ಹೇಗೆ?

Last Updated 3 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಶಿಕ್ಷಣ ವಿದ್ಯಾರ್ಥಿಗಳನ್ನು ತಮ್ಮ ಬದುಕಿನ ಗುರಿಯತ್ತ ಕೊಂಡೊಯ್ಯುವ ಹಾಗೂ ಸ್ವಾವಲಂಬಿಗಳನ್ನಾಗಿ ಮಾಡುವ ಗುರುತರ ಧ್ಯೇಯದೊಂದಿಗೆ ಸಾಗುತ್ತದೆ. ತರಗತಿಯ ಶಿಕ್ಷಣ ಒಂದು ಹಂತದ ತನಕ ವಿದ್ಯಾರ್ಥಿಗಳನ್ನು ತಮ್ಮ ಉದ್ದೇಶ ಸಾಧನೆಯ ಗುರಿ ತಲುಪಿಸುವಲ್ಲಿ ನೆರವಾಗುತ್ತದೆ. ಆದರೆ ಔದ್ಯೋಗಿಕ ಬದುಕಿನ ನೈಜ ಸ್ಥಿತಿಯ ಅನೇಕ ಸನ್ನಿವೇಶಗಳನ್ನು ಅಲ್ಲಿ ಕಲಿಸಿಕೊಡಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಣ ತರಗತಿಯೊಳಗಿನ ಜ್ಞಾನ ಸಂವರ್ಧನೆಯ ಏಕಮುಖ ಗುರಿ ಹೊಂದಿರದೆ ತಮ್ಮ ಔದ್ಯೋಗಿಕ ಬದುಕಿನಲ್ಲಿ ಬಹಳ ಯಶಸ್ಸು ಗಳಿಸಬೇಕಾದರೆ ಪಡೆದ ಶಿಕ್ಷಣದ ಫಲಶ್ರುತಿಯಾಗಿ ಅದು ಎಷ್ಟು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಲ್ಲಿ ನೆಲೆಗೊಂಡಿದೆ ಎನ್ನುವುದೂ ಬಹು ಮುಖ್ಯ.

ಸವಾಲುಗಳು

ಯಾವುದೇ ಉದ್ಯೋಗದಾತ ಪರಿಗಣಿಸುವ ಕೆಲವೊಂದು ಪ್ರಾಥಮಿಕ ವಿಚಾರಗಳನ್ನು ಶಿಕ್ಷಣ ಮುಗಿಸಿ ಉದ್ಯೋಗ ಗಳಿಸಬೇಕೆಂದಿರುವವರು ಸದಾ ಗಮನಹರಿಸಬೇಕು ಹಾಗೂ ಆ ವಿಚಾರದಲ್ಲಿ ಪರಿಣತಿ ಪಡೆಯುವತ್ತ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಉದ್ಯೋಗದಾತರಿಗೆ ಒಂದೇ ಸ್ಥಾನಕ್ಕೆ ಅನೇಕ ಅಭ್ಯರ್ಥಿಗಳ ಆಯ್ಕೆ ಇದ್ದಾಗ ಅವರಲ್ಲಿ ಯಾರನ್ನು ಆರಿಸಬೇಕೆನ್ನುವ ಸೂಕ್ತ ನಿರ್ಣಯವನ್ನು ವಿವಿಧ ಮಾನದಂಡಗಳ ಆಧಾರದ ಮೇಲೆ ಆಡಳಿತ ವರ್ಗ ತೆಗೆದುಕೊಳ್ಳುತ್ತದೆ. ಶಿಕ್ಷಣ ಇಂದು ಅಂಕಗಳನ್ನು ಆಧಾರವಾಗಿಟ್ಟು ಎಷ್ಟು ಪ್ರತಿಸ್ಪರ್ಧೆಯನ್ನು ಒಡ್ಡುತ್ತದೋ ಅಷ್ಟೇ ಮಹತ್ವದ ಸವಾಲು ಒಬ್ಬ ವ್ಯಕ್ತಿ ಉದ್ಯೋಗ ರಂಗಕ್ಕೆ ಸೇರುವಾಗ, ಮುಂದಿನ ಹಂತಕ್ಕೆ ಭಡ್ತಿಯಾದಾಗ ಅಥವಾ ನಂತರದ ಹಂತಕ್ಕೆ ಕ್ರಮಿಸುವಾಗಲೂ ಅನೇಕ ಸವಾಲುಗಳು ಇರುತ್ತವೆ.

ಕೆಲವೊಮ್ಮೆ ಅಪೇಕ್ಷೆಗಿಂತ ಅಧಿಕ ವರಮಾನ ನೀಡುವ ಉದ್ಯೋಗವಿದ್ದರೂ ಅದನ್ನು ಅಭ್ಯರ್ಥಿಗಳು ದಕ್ಕಿಸಿಕೊಳ್ಳಲಾರದ ಸ್ಥಿತಿಯಲ್ಲಿರುತ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ ಹಾಗೂ ಉದ್ಯೋಗ ಜಗತ್ತು ಕೂಡಾ ಅಷ್ಟೇ ನಿರೀಕ್ಷೆಗಳನ್ನಿಟ್ಟು ತಮ್ಮ ಭಾವೀ ಉದ್ಯೋಗಿಗಳನ್ನು ಅಗತ್ಯ ಸ್ಥಾನಕ್ಕೆ ಭರ್ತಿ ಮಾಡುತ್ತದೆ. ಹೀಗಾಗಿ ಉದ್ಯೋಗಾರ್ಥಿಗಳಿಗೆ ಇರಬೇಕಾದ ಉತ್ಸುಕತೆ, ನಿರ್ಧಾರಗಳ ಬಗೆಗಿನ ಖಚಿತತೆ, ಕರ್ತವ್ಯ ಪ್ರಜ್ಞೆ, ಸನ್ನಿವೇಶಕ್ಕೆ ಹೊಂದಿಕೊಂಡು ಜವಾಬ್ದಾರಿ ತೆಗೆದುಕೊಳ್ಳುವ ಪ್ರಗತಿಶೀಲ ಸ್ವಭಾವ ಇತ್ಯಾದಿ ಗುಣಲಕ್ಷಣಗಳು ನಿಮ್ಮಲ್ಲಿದ್ದರೆ ಉದ್ಯೋಗ ನೀಡುವವರನ್ನು ಸೆಳೆಯುವಲ್ಲಿ ನೀವು ಬಹುತೇಕ ಯಶಸ್ವಿ ಎಂದೇ ಅರ್ಥ.

ಏನಿದು ಉದ್ಯೋಗ ಕೌಶಲ?

ಉದ್ಯೋಗ ಕೌಶಲ ಹೇಳಿ ಕೇಳಿ ಬರುವಂಥದ್ದಲ್ಲ. ಕೇವಲ ಓದು ಬರಹದಿಂದಲೂ ಇದು ಬರುವುದಿಲ್ಲ. ನೈಜ ಸನ್ನಿವೇಶಗಳ ಸರಿಯಾದ ಅರಿವು, ನಿರ್ವಹಣೆ, ಮಾರ್ಗದರ್ಶನದಿಂದ ರೂಢಿಗೊಳ್ಳುವ ಕಲೆ ಇದು. ನಿಮ್ಮ ಕೆಳ ಹಂತದ ಹಾಗೂ ಮೇಲ್ವರ್ಗದ ಸಹೋದ್ಯೋಗಿಗಳನ್ನು, ನಿಮ್ಮ ಸಂಸ್ಥೆಯ ಗ್ರಾಹಕರನ್ನು, ಪೂರೈಕೆದಾರರನ್ನು, ಆಡಳಿತ ವರ್ಗದವರನ್ನು, ಸಂಸ್ಥೆಯ ಧ್ಯೇಯೋದ್ದೇಶ ಸಾಧನೆಯ ಹಿನ್ನೆಲೆಯಲ್ಲಿ ವಿಶ್ವಾಸಯುತವಾಗಿ ನಡೆಸಿಕೊಂಡು ಹೋಗುವ ಕಲೆಯನ್ನೇ ಸ್ಥೂಲವಾಗಿ ಉದ್ಯೋಗ ಕೌಶಲವೆನ್ನಬಹುದು. ಹೊಸದಾಗಿ ಪದವಿ ಪಡೆದ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲಕರವಾಗುವ ಕೆಲವು ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ನಿರಂತರ ಕಲಿಕೆ

ಕಾಲೇಜು ಶಿಕ್ಷಣ ಕೊನೆಗೊಂಡಂತೆ ಪುಸ್ತಕಗಳಿಗೆ ವಿದಾಯ ಹೇಳುವವರು ಅನೇಕ ಮಂದಿ ಇದ್ದಾರೆ. ಆದರೆ ಇವತ್ತಿನ ಬದಲಾಗುತ್ತಿರುವ ಸನ್ನಿವೇಶದಲ್ಲಿ ನಿರಂತರ ಅಧ್ಯಯನ ಅತಿ ಅಗತ್ಯ. ಉದ್ಯೋಗದಾತರಿಗೆ ದಿನನಿತ್ಯದ ವಹಿವಾಟು, ಜಗತ್ತಿನಲ್ಲಾಗುತ್ತಿರುವ ಬದಲಾವಣೆಗಳನ್ನು ಮನನ ಮಾಡಿ ನಿರ್ಧಾರ ಕೈಗೊಳ್ಳುವವರು ಬೇಕು. ಪ್ರತಿಯೊಂದಕ್ಕೂ ತರಬೇತಿ ಕೊಡಲು ಸಮಯಾವಕಾಶದ ಕೊರತೆ ಇರುತ್ತದೆ. ಹೀಗಾಗಿ ನಮ್ಮಲ್ಲಿ ಯಾವತ್ತೂ ಒಂದು ಜ್ಞಾನ ಚಕ್ಷು ಸದಾ ತೆರೆದಿರಬೇಕು, ಹೊಸತನದ ಹುಡುಕಾಟದಲ್ಲಿ ನಿರತವಾಗಿರಬೇಕು. ಹೀಗಾಗಿ ನಿಮ್ಮ ಉದ್ಯೋಗಕ್ಕೆ ಉಪಯುಕ್ತವಾದ ಯಾವುದಾದರೂ ಅಲ್ಪಾವಧಿ ಕೋರ್ಸ್‌ಗಳಿಗೆ ಸೇರಬಹುದು ಅಥವಾ ಆನ್‍ಲೈನ್‍ನಲ್ಲೂ ಸ್ವಅಧ್ಯಯನ ಮುಂದುವರಿಸಬಹುದು.

ಉತ್ಸುಕತೆ ಹಾಗೂ ದಕ್ಷತೆ

ಯಾವುದೇ ಕೆಲಸ ಮಾಡುವುದಕ್ಕೂ ಉತ್ಸುಕತೆ ಹಾಗೂ ದಕ್ಷತೆ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಉತ್ಸುಕತೆ ಕೇವಲ ತನ್ನೊಳಗಷ್ಟೇ ಅಲ್ಲ, ತನ್ನೊಡನೆ ಕೆಲಸ ಮಾಡುವ ಸಹೋದ್ಯೋಗಿಗಳಲ್ಲೂ ಉತ್ಸಾಹ ಕುಂದದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಉದ್ಯೋಗಿಯಲ್ಲೂ ಇರಬೇಕಾದ ಅಗತ್ಯ ಲಕ್ಷಣ. ಕೊಟ್ಟ ಜವಾಬ್ದಾರಿಯನ್ನು ಉತ್ಸುಕತೆಯಿಂದ ಸಮರ್ಥವಾಗಿ ನಿರ್ವಹಿಸಿದಾಗಲಷ್ಟೇ ಕಾರ್ಪೊರೇಟ್ ವಲಯದಲ್ಲಿ ಮುನ್ನಡೆಯಲು ಸಾಧ್ಯ. ಯಾವುದೇ ಸಂಸ್ಥೆಯಲ್ಲಿ ಪ್ರತಿ ವಿಭಾಗಗಳೂ ಒಂದಕ್ಕೊಂದು ಹೊಸೆದು ಕಾರ್ಯ ನಿರ್ವಹಿಸುವುದರಿಂದ ಪ್ರತಿಯೊಂದು ವಿಭಾಗದ ಉದ್ಯೋಗಿಗಳ ಕಾರ್ಯವಿಧಾನವೂ ಒಟ್ಟು ಫಲಿತಾಂಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು. ಅಂತಹ ಉದ್ಯೋಗಿಗಳ ತಂಡ ನಿಜಕ್ಕೂ ಆಸ್ತಿ ಇದ್ದಂತೆ.

ಸಕಾರಾತ್ಮಕ ಪ್ರವೃತ್ತಿ

ಸಕಾರಾತ್ಮಕ ಮನೋಭಾವವು ವ್ಯವಹಾರ ವೃತ್ತಿಪರತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ನೀವು ಯಾವುದೇ ಮಟ್ಟದ ಕೆಲಸ ಅಥವಾ ಸ್ವಂತ ಉದ್ಯೋಗ ಮಾಡುತ್ತಿದ್ದರೂ, ಸಕಾರಾತ್ಮಕ ಮನೋವೃತ್ತಿ ಇರದ ಹೊರತು ಯಾವ ಸಮಸ್ಯೆಯನ್ನೂ ಬಗೆಹರಿಸಲಾಗದು. ಸಮಸ್ಯೆಗಳು ತನ್ನಂತೆ ತಾವಾಗಿ ಸರಿಯಾಗುತ್ತವೆ ಅಥವಾ ಅದು ತನ್ನ ಪರಿಧಿಗೆ ಬರದಿರುವ ವಿಚಾರ ಎಂದು ತನ್ನಷ್ಟಕ್ಕೆ ಇರಗೊಡದೆ ರಚನಾತ್ಮಕ ಪರಿಹಾರಗಳ ಬಗ್ಗೆ ಸಕ್ರಿಯವಾಗಿ ಯೋಚಿಸುವ ಮತ್ತು ಅವುಗಳನ್ನು ಸಾಧಿಸಿ ತೋರುವ ಶಕ್ತಿ ತೋರಿದಾಗ ಮಾತ್ರ ಎಲ್ಲರಿಗೂ ಭರವಸೆ ಮೂಡುತ್ತದೆ. ನಿಮ್ಮ ಬಗ್ಗೆ ಸದಭಿಪ್ರಾಯ ಮೂಡಿಸುವ ಯಾವುದೇ ರೀತಿಯ ಸಕಾರಾತ್ಮಕ ಕ್ರಿಯೆ-ಪ್ರತಿಕ್ರಿಯೆ ಹೆಚ್ಚು ಪರಿಣಾಮಕಾರಿಯಾಗುವುದು.
ಸ್ವಯಂ ನಿಯಂತ್ರಣ

ಸ್ವಯಂ ನಿಯಂತ್ರಿತ ಉದ್ಯೋಗಿ ವಿಭಿನ್ನ ವ್ಯಕ್ತಿಗಳೊಂದಿಗೆ ಕೆಲಸ ಮಾಡಲು ಸಾಧ್ಯ. ಶಿಸ್ತುಬದ್ಧ ವ್ಯಕ್ತಿಯು ಉನ್ನತಾಧಿಕಾರಿಗಳಿಂದ ನಿರಂತರವಾಗಿ ಮೇಲ್ವಿಚಾರಣೆಗೆ ಒಳಗಾಗದೆ ತಮ್ಮ ಕೆಲಸವನ್ನು ತಾನೇ ಮಾಡುತ್ತಾನೆ. ಸಮಯಪ್ರಜ್ಞೆ, ಸಮಯಕ್ಕೆ ಸರಿಯಾಗಿ ಕಾರ್ಯಗಳನ್ನು ಪೂರ್ಣಗೊಳಿಸುವುದು ಮತ್ತು ಕೇಳದೆ ಕೆಲಸ ಮಾಡುವುದು ಇದರಲ್ಲಿ ಸೇರಿದೆ. ಈ ಗುಣಲಕ್ಷಣಗಳನ್ನು ಹೊಂದಿರುವ ಜನರು ಯಾವುದೇ ಸಂಸ್ಥೆಯ ಅಭಿವೃದ್ಧಿಗೆ ನಿಜವಾದ ರೂವಾರಿಗಳು ಮತ್ತು ಅಲ್ಲಿನ ವಾತಾವರಣವನ್ನು ಆಹ್ಲಾದಕರ ಮತ್ತು ಉತ್ಪಾದಕ ಸ್ಥಳವನ್ನಾಗಿ ಮಾಡುತ್ತಾರೆ.

ನಾಯಕತ್ವ ಗುಣ

ಯಾವುದೇ ವ್ಯಕ್ತಿಯ ನಾಯಕತ್ವ ಗುಣ ಎಲ್ಲರನ್ನೂ ಆಕರ್ಷಿಸುವಂತಿದ್ದರೆ ಸಹೋದ್ಯೋಗಿಗಳು ಇಷ್ಟಪಟ್ಟು ಕೆಲಸ ಮಾಡುತ್ತಾರೆ. ನಾಯಕತ್ವಕ್ಕೆ ಸರಿದೂಗುವ ಜ್ಞಾನವೂ ಇದ್ದಾಗ ಹಿರಿಯ ಕಿರಿಯರೆನ್ನದೆ ಎಲ್ಲ ವರ್ಗದ ಜನರೊಡನೆ ಸಮರ್ಪಕ ರೀತಿಯಲ್ಲಿ ವ್ಯವಹರಿಸುವುದು ಸುಲಭ. ಜನರನ್ನು ನಿರ್ವಹಣೆ ಮಾಡುವುದು ಮತ್ತು ನಾಯಕತ್ವ ಗುಣ ಎರಡೂ ಬೇರೆ ಬೇರೆ ವಿಚಾರಗಳು. ಕಾರಣ, ನಿರ್ವಾಹಕನಾದವನು ಇಷ್ಟಪಡದ ಕೆಲಸಗಳನ್ನು ಮಾಡಲು ಮನವೊಲಿಸುತ್ತಾನೆ, ಆದರೆ ನಾಯಕನಾದವನು, ಸಹೋದ್ಯೋಗಿಗಳ ಯೋಚನೆಗೂ ನಿಲುಕದ ಕೆಲಸಗಳನ್ನು ವಿಭಿನ್ನ ಶೈಲಿಯಲ್ಲಿ, ಹೊಸತನ ಉಲ್ಲಾಸ ಮೂಡುವಂತೆ ಮಾಡಲು ಪ್ರೇರಣೆ ನೀಡುತ್ತಾನೆ. ಇಂದಿನ ಬಹುತೇಕ ಉದ್ಯೋಗಗಳಲ್ಲಿ ಅಗತ್ಯವಾಗಿ ಬೇಕಾಗಿರುವುದು ಹೊಸತನ ಹಾಗೂ ಗುರಿ ಸಾಧಿಸುವ ಬಗೆಗಿನ ಸರಿಯಾದ ಮಾರ್ಗದರ್ಶನ. ವಿಭಿನ್ನ ವಿಭಾಗದ ನಾನಾ ರೀತಿಯ ಔದ್ಯೋಗಿಕ ಅನುಭವ ಇರುವ ಸಹೋದ್ಯೋಗಿಗಳನ್ನು ಸುಲಭದಲ್ಲಿ ತನ್ನ ತೆಕ್ಕೆಗೆ ಸೇರಿಸಲು ನಾಯಕತ್ವ ಗುಣ ಹೆಚ್ಚು ಪ್ರಸ್ತುತತೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT