ಶುಕ್ರವಾರ, ಮೇ 27, 2022
29 °C

ಪತ್ರಿಕೋದ್ಯಮ: ವಿದ್ಯಾರ್ಹತೆಜೊತೆ ಕೌಶಲ ಮುಖ್ಯ

ಹರೀಶ್‌ ಶೆಟ್ಟಿ ಬಂಡ್ಸಾಲೆ Updated:

ಅಕ್ಷರ ಗಾತ್ರ : | |

Prajavani

ನಾನು ದ್ವಿತೀಯ ಪಿ.ಯು.ಸಿ. ಮುಗಿಸಿದ್ದೇನೆ. ಮುಂದೆ ಪತ್ರಿಕೋದ್ಯಮದಲ್ಲಿ ಮುಂದುವರೆಯ ಬೇಕೆಂಬ ಆಸೆ ಇದೆ. ನಾನು ಇದರಲ್ಲಿ ಮುಂದುವರೆಯಲು ಯಾವ ವಿದ್ಯಾರ್ಹತೆ ಹೊಂದಿರಬೇಕು?

ಹೆಸರು, ಊರು ಬೇಡ

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಸೂಕ್ತ ಶೈಕ್ಷಣಿಕ ವಿದ್ಯಾರ್ಹತೆ, ಜ್ಞಾನ, ಕೌಶಲ ಮತ್ತು ಸೂಕ್ಷ್ಮತೆ ಬಹಳ ಮುಖ್ಯವಾದ ಅರ್ಹತೆಗಳು. ಶೈಕ್ಷಣಿಕ ವಿದ್ಯಾರ್ಹತೆಯ ಭಾಗವಾಗಿ ಪಿ.ಯು.ಸಿ ಮುಗಿಸಿದ ನಂತರ ಪತ್ರಿಕೋದ್ಯಮದ ವಿಷಯ ಇರುವ ಪದವಿಯನ್ನು ಅಧ್ಯಯನ ಮಾಡಬೇಕು. ಕೆಲವು ಕಾಲೇಜುಗಳಲ್ಲಿ ಮಾಸ್ ಕಮ್ಯುನಿಕೇಶನ್ ಅಥವಾ ಪತ್ರಿಕೋದ್ಯಮದಲ್ಲಿ ಪದವಿ ಕೋರ್ಸುಗಳು ಇದ್ದರೆ, ಕೆಲವು ಕಾಲೇಜುಗಳಲ್ಲಿ ಪತ್ರಿಕೋದ್ಯಮ, ಮನಃಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ, ಇಂಗ್ಲಿಷ್ ಇತ್ಯಾದಿ ವಿಷಯಗಳನ್ನು ಹೊಂದಿರುವ ಬಿ.ಎ. ಪದವಿ ಇರುತ್ತದೆ. ಯಾವುದನ್ನು ವ್ಯಾಸಂಗ ಮಾಡಿದರೂ ಮಂದೆ ಪತ್ರಿಕೋದ್ಯಮದಲ್ಲಿ ಉದ್ಯೋಗ ಅಥವಾ ಮಾಸ್ ಕಮ್ಯುನಿಕೇಶನ್ ಮತ್ತು ಜರ್ನಲಿಸಮ್ (ಎಂ.ಸಿ,ಜೆ) ಅಥವಾ ಎಂ.ಎ. ಇನ್ ಮೀಡಿಯಾ ಎಂಡ್ ಮಾಸ್ ಕಮ್ಯುನಿಕೇಶನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿಕೊಳ್ಳಬಹುದು.

ಪ್ರಾಕ್ಟಿಕಲ್ ಅನುಭವವನ್ನು ಕೊಡಮಾಡುವ ಸಂಸ್ಥೆಯನ್ನು ಆಯ್ದುಕೊಂಡಷ್ಟೂ ನಿಮ್ಮ ಕೌಶಲ ಅಭಿವೃದ್ದಿ ಆಗುತ್ತದೆ. ಈ ಕೋರ್ಸುಗಳಿರುವ ನಿಮ್ಮ ಹತ್ತಿರದ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬಹುದು. ದೇಶದ ಪ್ರತಿಷ್ಠಿತ ಕಾಲೇಜುಗಳಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜರ್ನಲಿಸಂ ಅಂಡ್ ನ್ಯೂ ಮೀಡಿಯಾ, ಬೆಂಗಳೂರು, ಕ್ರೈಸ್ಟ್ ಕಾಲೇಜು ಬೆಂಗಳೂರು, ಸ್ಕೂಲ್ ಆಫ್ ಕಮ್ಯುನಿಕೇಷನ್, ಮಣಿಪಾಲ್, ಸಿಂಬಯಾಸಿಸ್ ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಅಂಡ್ ಕಮ್ಯುನಿಕೇಷನ್, ಪುಣೆ ಅಥವಾ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಪಡೆಯಬಹುದು.

ನೀವೇ ಸ್ವತಃ ಕೌಶಲ ಮತ್ತು ಜ್ಞಾನವನ್ನು ಅಭಿವದ್ಧಿ ಪಡಿಸಿಕೊಳ್ಳಬಹುದು. ಮೊದಲಿಗೆ ಪತ್ರಿಕೋದ್ಯಮದಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂದು ಕಂಡುಕೊಳ್ಳಿ. ಆ ಕ್ಷೇತ್ರಕ್ಕೆ ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ಪಟ್ಟಿಮಾಡಿ ಅವುಗಳನ್ನು ಬೆಳೆಸಿಕೊಳ್ಳಿ. ಉದಾಹರಣೆಗೆ ಲಿಖಿತ ಮಾಧ್ಯಮವಾದರೆ ನಿಮ್ಮ ಬರವಣಿಗೆಯ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು, ದೃಶ್ಯ ಮಾಧ್ಯಮವಾದರೆ ಮಾತಿನ ಕೌಶಲವನ್ನು ಬೆಳೆಸಿಕೊಳ್ಳಬೇಕು.

ನಿಮ್ಮ ಆಸಕ್ತಿಯ ವಿಷಯಗಳಾದ ಕ್ರೀಡೆ, ರಾಜಕೀಯ, ಸಂಸ್ಕೃತಿ, ಸಿನಿಮಾ, ಇತ್ಯಾದಿಗಳ ಕುರಿತು ಓದಿಕೊಳ್ಳಬೇಕು. ಯಾವುದೇ ಕ್ಷೇತ್ರ ಮತ್ತು ವಿಷಯವನ್ನು ಆಯ್ದಕೊಂಡರೂ ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಎಲ್ಲ ಕ್ಷೇತ್ರಗಳ ಕುರಿತಾಗಿ ಸಾಮಾನ್ಯ ಜ್ಞಾನ ಹಾಗೂ ಸಂಶೋಧನ ಮತ್ತು ಪ್ರಗತಿಪರ ದೃಷ್ಟಿಕೋನ ಇರಬೇಕು.

ಓದುವಾಗಲೇ ಚಿಕ್ಕ ಪುಟ್ಟ ಸ್ಥಳೀಯ ಪತ್ರಿಕೆ, ಕಾಲೇಜು ಪತ್ರಿಕೆ ಅಥವಾ ಚಾನೆಲ್‌ಗಳಲ್ಲಿ ಸ್ವಯಂಸೇವೆಯಿಂದ ಅನುಭವ ಗಿಟ್ಟಿಸಿಕೊಂಡರೆ ಉದ್ಯೋಗ ಪಡೆಯುವ ಅವಕಾಶ ಮತ್ತು ಮುಂದೆ ಅದನ್ನು ನಿರ್ವಹಿಸಲು ಬೇಕಾದ ಸಾಮರ್ಥ್ಯ ಪಡೆಯುವಲ್ಲಿ ಸಹಕಾರಿಯಾಗುತ್ತದೆ. ಪತ್ರಿಕೋದ್ಯಮಕ್ಕೆ ಕೇವಲ ಕಾಲೇಜು ಕಲಿಕೆ ಮಾತ್ರವಲ್ಲದೆ ಸರ್ವತೋಮುಖವಾದ ವ್ಯಕ್ತಿತ್ವ ಬೇಕಿರುವುದರಿಂದ ಅಂತಹ ಅವಕಾಶಗಳನ್ನು ಬಳಸಿಕೊಳ್ಳಿ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ವರದಿಗಾರರಾಗಿ, ವಿಶೇಷ ವರದಿಗಾರರಾಗಿ, ಅಂಕಣಕಾರರಾಗಿ, ಸಂಪಾದಕರಾಗಿ, ವರದಿ ಓದುಗರಾಗಿ, ವಿಡಿಯೋ ವರದಿ ಮತ್ತು ಮತ್ತು ಫೋಟೋ ವರದಿಗಾರರಾಗಿ, ವಿಶ್ಲೇಷಕರಾಗಿ, ಸಂಶೋಧಕರಾಗಿ ಕಾರ್ಯನಿರ್ವಹಿಸಬಹುದು.

ನಾನು ಪಿಯುಸಿ ಮುಗಿಸಿದ್ದೇನೆ. ಈವಾಗ ಕೃಷಿಯಲ್ಲಿ ಡಿಪ್ಲೊಮ ಮಾಡಬೇಕು ಅಂದುಕೊಂಡಿದ್ದೇನೆ. ಈ ಕುರಿತ ಕೋರ್ಸ್‌ ಮತ್ತು ಉದ್ಯೋಗದ ಬಗ್ಗೆ ತಿಳಿಸಿ.

ಚೆನ್ನಕೇಶವ, ಊರು ಬೇಡ

ಡಿಪ್ಲೊಮ ಕೋರ್ಸುಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಅರ್ಹತೆ ಆಗಿರುವುದರಿಂದ ನೀವು ಹತ್ತನೇ ತರಗತಿ ಅಥವಾ ಪಿ.ಯು.ಸಿ ಆದ ನಂತರ ಕೃಷಿ ಮತ್ತು ಕೃಷಿ ತಂತ್ರಜ್ಞಾನದಲ್ಲಿ ಡಿಪ್ಲೊಮ ಮಾಡಬಹುದು.

ಕೃಷಿ ಡಿಪ್ಲೊಮ ಮತ್ತು ಕೃಷಿ ತಂತ್ರಜ್ಞಾನ ಡಿಪ್ಲೊಮ ಎರಡು ವರ್ಷದ ಕೋರ್ಸುಗಳಾಗಿದ್ದು ಕರ್ನಾಟಕದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಲಭ್ಯವಿದೆ. ಎಸ್.ಎಸ್.ಎಲ್.ಸಿ ಯಲ್ಲಿ ಕನಿಷ್ಠ ಶೇ. 40 ಅಂಕ ಪಡೆದು ತೇರ್ಗಡೆ ಹೊಂದಿದ್ದರೆ ಆಯಾ ವಿಶ್ವವಿದ್ಯಾನಿಲಯದ ವೆಬ್‌ಸೈಟಿನಲ್ಲಿ ಅರ್ಜಿ ಸಲ್ಲಿಸಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ತಯಾರಿಸಿ ಅರ್ಹರಿಗೆ ಪ್ರವೇಶಾತಿ ಕಲ್ಪಿಸಲಾಗುತ್ತದೆ.

ಕೃಷಿ ಪದವಿ ಅಥವಾ ಡಿಪ್ಲೊಮ ಪ್ರವೇಶಾತಿಯಲ್ಲಿ ಕೃಷಿ ಆಧಾರಿತ ಕುಟುಂಬಗಳನ್ನು ಬಲಪಡಿಸುವ ಉದ್ದೇಶದಿಂದ ಕೃಷಿ ಕುಟುಂಬದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಶೇ. 40 ರಷ್ಟು ಮೀಸಲಾತಿ ಇರುತ್ತದೆ. ನೀವು ಕೃಷಿಕರ ಅಥವಾ ಕೃಷಿ ಕಾರ್ಮಿಕರ ಮಕ್ಕಳಾಗಿದ್ದಲ್ಲಿ ಈ ಮೀಸಲಾತಿ ಪಡೆಯಲು ಅರ್ಹರಾಗಿದ್ದು ಅದರ ಪ್ರಯೋಜನವನ್ನು ಪಡೆಯಬಹುದು.

ಡಿಪ್ಲೊಮ ಶಿಕ್ಷಣದ ನಂತರ ನೀವು ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗವಕಾಶವನ್ನು ಪಡೆಯಬಹುದು. ಸರಕಾರಿ ಕೃಷಿ ಇಲಾಖೆಗಳಲ್ಲಿ, ಸರಕಾರಿ ಬ್ಯಾಂಕಗಳಲ್ಲಿ, ತೋಟಗಾರಿಕ ಸಂಸ್ಥೆಗಳಲ್ಲಿ, ರಸಗೊಬ್ಬರ ತಯಾರಿಕೆ ಕೈಗಾರಿಕೆಗಳಲ್ಲಿ, ಸಾವಯವ ಕೃಷಿ ಸಂಸ್ಥೆಗಳಲ್ಲಿ ಮತ್ತು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಸರಕಾರೇತರ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳು ಇರುತ್ತವೆ. ಬಂಡವಾಳ ಹಾಗೂ ಕೃಷಿ ಭೂಮಿ ಹೊಂದಿರುವ ಅವಕಾಶಗಳು ಇದ್ದಲ್ಲಿ ಸ್ವಂತ ಕೃಷಿ ಮತ್ತು ಕೃಷಿ ಉತ್ಪನ್ನ ಆಧಾರಿತ ಉದ್ಯಮಗಳನ್ನು ನಡೆಸಬಹುದು.

ನಾನು ಪಿಯುಸಿಯಲ್ಲಿ ಪಿಸಿಎಂಸಿ ತೆಗೆದುಕೊಂಡಿದ್ದೇನೆ. ಈಗ ಕೃಷಿಯಲ್ಲಿ ಬಿ.ಎಸ್‌ಸಿ. ಮಾಡಬಹುದೇ?

ಹೆಸರು, ಊರು ಬೇಡ

ಕರ್ನಾಟಕದ ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಬಿ.ಎಸ್ಸಿ. (ಕೃಷಿ) ಪದವಿಗೆ ಪ್ರವೇಶಾತಿ ಪಡೆಯಲು ಪಿ.ಯು.ಸಿ ಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ (ಪಿ.ಸಿ.ಎಮ್.ಬಿ) ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ.ಎ.) ನಡೆಸುವ ಅರ್ಹತಾ ಪರೀಕ್ಷೆ ಸಿ.ಇ.ಟಿ. ಬರೆದು, ಆ ಮೂಲಕ ಪ್ರವೇಶಾತಿ ಪಡೆಯಬೇಕು. ಕೃಷಿ ಕೋಟಾದ ಮೀಸಲಾತಿ ಪಡೆಯಲು ಇಚ್ಚಿಸಿದಲ್ಲಿ ಸಿ.ಇ.ಟಿ ಜೊತೆಗೆ ಪ್ರತ್ಯೇಕವಾಗಿ ಪ್ರಾಕ್ಟಿಕಲ್ ಪರೀಕ್ಷೆ ಎದುರಿಸಬೇಕು. ಮಿಸಲಾತಿಗೆ ಅರ್ಹರಾಗಲು ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಕನಿಷ್ಠ ಶೇ. 50 ಅಂಕವನ್ನು ಗಳಿಸಿರಬೇಕು. ಕೃಷಿ ಕೋಟದ ವಿದ್ಯಾರ್ಥಿಗಳ ಮೇರಿಟ್ ಪಟ್ಟಿಯನ್ನು ಪಿ.ಯು.ಸಿ.ಯ ಪಿ.ಸಿ.ಎಮ್.ಬಿ ವಿಷಯಗಳ ಅಂಕ (ಶೇ.25), ಸಿ.ಇ.ಟಿ ಯ ಅಂಕ (ಶೇ.25) ಮತ್ತು ಪ್ರಾಕ್ಟಿಕಲ್ ಪರೀಕ್ಷೆಯ ಅಂಕದ (ಶೇ.50) ಅಧಾರದಲ್ಲಿ ತಯಾರಿಸಲಾಗುವುದು. ಇತರೆ ವಿದ್ಯಾರ್ಥಿಗಳ ಮೆರಿಟ್ ಪಟ್ಟಿಯನ್ನು ಪಿ.ಯು.ಸಿ.ಯ ಪಿ.ಸಿ.ಎಮ್.ಬಿ ವಿಷಯಗಳ ಅಂಕ (ಶೇ.50) ಸಿ.ಇ.ಟಿ ಯ ಅಂಕದ ( ಶೇ. 50) ಆಧಾರದ ಮೇಲೆ ತಯಾರಿಸಲಾಗುವುದು.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿ.ಎಸ್ಸಿ. ಅಗ್ರಿಕಲ್ಷರ್ ಮಾತ್ರವಲ್ಲದೆ, ಅದಕ್ಕೆ ಹತ್ತಿರವಾಗಿರುವ ಬಿ.ಟೆಕ್. ಅಗ್ರಿಕಲ್ಚರಲ್ ಎಂಜಿನಿಯರಿಂಗ್, ಬಿ.ಎಸ್ಸಿ. ಅಗ್ರಿ ಮಾರ್ಕೆಟಿಂಗ್ ಎಂಡ್ ಕೋ ಆಪರೇಶನ್, ಫಿಶರೀಶ್, ತೋಟಗಾರಿಕೆ, ಸಿರಿಕಲ್ಚರ್, ಫುಡ್‌ ಟೆಕ್ನಾಲಜಿ, ಪಶು ಸಂಗೋಪನೆ ಇತ್ಯಾದಿ ವಿಷಯಗಳಲ್ಲಿ ಪದವಿ ಓದಬಹುದು. ಆದರೆ ಎಲ್ಲಾ ಪದವಿಗಳಿಗೂ ಮೇಲಿನ ಅರ್ಹತೆ ಮತ್ತು ಪ್ರಕ್ರಿಯೆ ಕಡ್ಡಾಯವಾಗಿ ಅನ್ವಯಿಸುತ್ತದೆ.

ಬಿಇ (ಇಸಿಇ) ಯನ್ನು 2018ರಲ್ಲಿ ಪೂರ್ಣಗೊಳಿಸಿದ್ದೇನೆ. ಈಗ ರಾಜ್ಯಶಾಸ್ತ್ರದಲ್ಲಿ ಎಂ.ಎ. ಮಾಡಬೇಕು. ನಾನು ಎಂಜಿನಿಯರಿಂಗ್‌ ಮಾಡಿದ್ದರಿಂದ ಎಂ.ಎ. ಮಾಡಲು ಅರ್ಹತೆ ಇದೆಯೇ?

ಹೆಸರು, ಊರು ಬೇಡ

ನಿಮ್ಮ ಪ್ರಶ್ನೆಯಲ್ಲಿ ನೀವು ದೂರ ಶಿಕ್ಷಣದಲ್ಲಿ ಓದಲು ಇಚ್ಛಿಸುತ್ತೀರೋ ಅಥವಾ ಕಾಲೇಜಿನಲ್ಲಿ ರೆಗ್ಯುಲರ್ ಆಗಿ ಓದಲು ಇಚ್ಛಿಸುತ್ತೀರೋ ಎಂದು ಸ್ಪಷ್ಟಪಡಿಸದೆ ಇರುವುದರಿಂದ ಆ ಎರಡೂ ಅವಕಾಶಗಳ ಬಗ್ಗೆ ತಿಳಿಯೋಣ. ಪದವಿಯಲ್ಲಿ ಯಾವ ವಿಷಯ ಓದಿದ್ದರೂ ಸಹ ದೂರ ಶಿಕ್ಷಣದಲ್ಲಿ ರಾಜ್ಯಶಾಸ್ತ್ರ ಎಂ.‌ಎ. ಓದಬಹುದು. ಹೀಗಾಗಿ ನಿಮ್ಮ ಎಂಜಿನಿಯರಿಂಗ್ ಹಿನ್ನೆಲೆ ಎಂ.ಎ ರಾಜ್ಯಶಾಸ್ತ್ರ ಮಾಡಲು ತೊಡಕಾಗದು. ಆದರೆ ರೆಗ್ಯುರಲ್ ಆಗಿ ಓದಲು ಇಚ್ಛಿಸುವುದಾದರೆ ಹೆಚ್ಚಿನ ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದಬೇಕಾದರೆ ಬಿ.ಎ. ಪದವಿ ಓದಿರಬೇಕು ಮತ್ತು ಬಿ.ಎ.ನಲ್ಲಿ ರಾಜ್ಯಶಾಸ್ತ್ರ ವಿಷಯವನ್ನು ಮೇಜರ್ ಅಥವಾ ಐಚ್ಚಿಕ್ ವಿಷಯವಾಗಿ ಓದಿ ಶೇ. 45 ರಷ್ಟು ಅಂಕದೊಂದಿಗೆ ಉತ್ತೀರ್ಣರಾಗಿರಬೇಕು.

ಯಾವ ಮಾಧ್ಯಮದಲ್ಲಿ ಓದಬೇಕು ಎನ್ನುವುದು ಯಾವ ಕಾರಣಕ್ಕಾಗಿ ಓದಲು ಇಚ್ಚಿಸುತ್ತೀರಿ‌ ಎನ್ನುವುದರ ಮೇಲೆ ನಿರ್ಧರಿತವಾಗುತ್ತದೆ. ಹೀಗಾಗಿ ಮೊದಲು ಯಾವ ಕಾರಣಕ್ಕಾಗಿ ಓದಲು ಬಯಸುತ್ತಿದ್ದೀರಿ ಎಂದು ಸ್ಪಷ್ಟಪಡಿಸಿಕೊಳ್ಳಿ. ನೀವು ಕೇವಲ ಆಸಕ್ತಿ ಮತ್ತು ರಾಜ್ಯಶಾಸ್ತ್ರದ ಕುರಿತಾದ ಜ್ಞಾನ ಪಡೆಯುವ ಸಲುವಾಗಿ ಮಾಡಲು ಇಚ್ಛಿಸುತ್ತೀರಾದರೆ ದೂರ ಶಿಕ್ಷಣದಲ್ಲಿ ಎಂ.ಎ. ರಾಜ್ಯಶಾಸ್ತ್ರ ಓದಬಹುದು. ಆದರೆ ನೀವು ಉದ್ಯೋಗ ಅವಕಾಶಕ್ಕಾಗಿ ಅಥವಾ ರಾಜ್ಯಶಾಸ್ತ್ರ ವಿಷಯದಲ್ಲಿ ನಿಮ್ಮ ಮುಂದಿನ ವೃತ್ತಿಜೀವನವನ್ನು ಕಳೆಯಲು ಇಚ್ಛಿಸುವಿರಾದರೆ ಈ ನಿರ್ಧಾರದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗುತ್ತದೆ. ಎಂಜಿನಿಯರಿಂಗ್ ಕ್ಷೇತ್ರಕ್ಕೆ ಹೋಲಿಸಿದಾಗ ರಾಜ್ಯಶಾಸ್ತ್ರ ಕ್ಷೇತ್ರದಲ್ಲಿ ಬಹಳ ಕಡಿಮೆ ಉದ್ಯೋಗ ಅವಕಾಶಗಳಿವೆ ಮತ್ತು ಹೆಚ್ಚು ಆದಾಯ ಗಳಿಸುವ ಅವಕಾಶಗಳು ಕಡಿಮೆ. ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆಯಲು ಒಳ್ಳೆಯ ವಿಶ್ವವಿದ್ಯಾಲಯಗಳಿಂದ ರೆಗ್ಯುಲರ್ ಆಗಿ ಓದಿರುವುದು ಕೂಡ ಮುಖ್ಯವಾಗುತ್ತದೆ.

ಆದರೆ ನೀವು ನಿಜವಾಗಿಯೂ ರಾಜ್ಯಶಾಸ್ತ್ರ ವಿಷಯದ ಕುರಿತು ಆಸಕ್ತಿ ಹೊಂದಿರುವವರಾಗಿದ್ದು ಸವಾಲುಗಳನ್ನು ಎದುರಿಸಿ ಶಿಕ್ಷಣ ಪಡೆಯುವಿರಾದರೆ ಪ್ರಯತ್ನಿಸಬಹುದು. ನಿಮ್ಮಲ್ಲಿ ಈ ಕುರಿತಾಗಿ ಬದ್ಧತೆ ಇದ್ದು, ಸಮಯ ಮತ್ತು ಆರ್ಥಿಕ ಪರಿಸ್ಥಿತಿಯ ಸಮಸ್ಯೆಗಳು ಇಲ್ಲದಿದ್ದರೆ ಮುಂದುವರಿಯಬಹುದು. ದೂರ ಶಿಕ್ಷಣದಲ್ಲಿ ಬಿ.ಎ. ಪದವಿ ಮಾಡಿ ಮುಂದೆ ರೆಗ್ಯುಲರ್‌ ರಾಜ್ಯಶಾಸ್ತ್ರದ ಎಂ. ಎ. ಮಾಡಲು ಪ್ರಯತ್ನಿಸಬಹುದು ಅಥವಾ ದೂರ‌ ಶಿಕ್ಷಣದಲ್ಲಿ ಎಂ. ಎ. ಪದವಿ ಪಡೆದು, ಪಿಎಚ್.ಡಿ ಓದಲು ಪ್ರಯತ್ನಿಸಬಹುದು. ಇದುವರೆಗೆ ವಿಜ್ಞಾನ ವಿಷಯಗಳನ್ನು ಓದಿರುವ ನಿಮಗೆ ಥಿಯರಿ ವಿಷಯಗಳನ್ನು ಓದುವುದು ಮೊದಲಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ಅದಕ್ಕಾಗಿ ಜ್ಞಾನ ಸಂಪಾದನೆಯ ಗುರಿ‌, ಗಂಭೀರವಾದ ಓದು, ಕಠಿಣ ಸಿದ್ಧತೆ ಮತ್ತು ರಿಸ್ಕ್ ತೆಗೆದುಕೊಳ್ಳ ಲು ತಯಾರಿದ್ದರೆ ಸಾಧ್ಯವಾಗುವುದು. ನೀವು ಮನಸ್ಸು ಮಾಡಿ ಪರಿಶ್ರಮ ಪಟ್ಟಲ್ಲಿ ಸಾಧಿಸುವುದು ಅಸಾಧ್ಯವೇನಲ್ಲ.‌

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.