ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌತುಕದ ಕಿಂಡಿ ‘ಕಲಿಕಾ ಕಾನು’

Last Updated 17 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಈ ಮಕ್ಕಳು ವಿಜ್ಞಾನಿಗಳಲ್ಲ, ಜೀವವೈವಿಧ್ಯ ದಾಖಲುಕಾರರೂ ಅಲ್ಲ. ಪರಿಸರ ತಜ್ಞರೆಂಬ ಬಿರುದು ಹೊತ್ತವರಂತೂ ಅಲ್ಲವೇ ಅಲ್ಲ. ಪಠ್ಯದ ಪಾಠವನ್ನು ಕಾನನದಲ್ಲಿ ಕಲಿಯುತ್ತ ಪ್ರಕೃತಿಯ ಗೆಳೆಯರಾಗಿರುವ ಇವರು, ಕಾಡಿನ ಸಸ್ಯ ಪ್ರಭೇದಗಳನ್ನು ತಜ್ಞರಿಗೂ ಪರಿಚಯಿಸಬಲ್ಲರು. ಗಿಡ–ಮರಗಳ ಆತ್ಮಚರಿತ್ರೆ ಹೇಳಬಲ್ಲರು. ಇದು ಹೂಡ್ಲಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿಣ್ಣರ ಪ್ರತಿಭೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೂಡ್ಲಮನೆಯ ಈ ಶಾಲೆಯನ್ನು ನೋಡಲು ಹೊರ ಜಿಲ್ಲೆ, ಹೊರ ರಾಜ್ಯಗಳ ಜನರು ಬರುತ್ತಾರೆ. ‘ಈ ಅಕ್ಷರ ಮಂದಿರವನ್ನು ಒಂದು ಸುತ್ತು ಸುತ್ತಲು ಒಂದಿಡೀ ದಿನ ಮೀಸಲಿಡಬೇಕು’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದ್ದರು. ಅದೇ ಕುತೂಹಲದಿಂದ ಶಾಲೆಯೆಡೆಗೆ ಹೊರಟೆ.

ಶಿರಸಿಯಿಂದ 22 ಕಿ.ಮೀ ದೂರದಲ್ಲಿರುವ ಪುಟ್ಟ ಹಳ್ಳಿ ಹೂಡ್ಲಮನೆ. ಹಸಿರು ಹಾದಿಯಲ್ಲಿ ಸಾಗಿದರೆ, ಒಮ್ಮೆಲೇ ಬೆತ್ತಲಾಗುವ ಕಾಡು, ಅಲ್ಲೇ ಸಣ್ಣ ಬಯಲು ಪ್ರದೇಶದಲ್ಲಿ ರಸ್ತೆಯಂಚಿನಲ್ಲಿ ಈ ಶಾಲೆಯಿದೆ. ಇಲ್ಲಿ ಮನೆಗಳ ಸಂಖ್ಯೆ ವಿರಳ. ಹೀಗಾಗಿ, ಅಂಗಳದಲ್ಲಿರುವ ಗೋಳ(globe)ವೇ ಈ ಶಾಲೆಯನ್ನು ಗುರುತಿಸುವ ಮೊದಲ ಸಂಕೇತ.

ಈ ಶಾಲಾ ಕಟ್ಟಡಕ್ಕಿಂತ ಒಂದೆರಡು ಮಾರು ಹಿಂದೆ ಮೊತ್ತೊಂದು ಶಾಲೆಯಿದೆ. ಅದು ಗೋಡೆಗಳ ಬಂಧವಿಲ್ಲದ, ಸಿದ್ಧ ಮಾದರಿಯ ಡೆಸ್ಕು, ಬೆಂಚುಗಳಿಲ್ಲದ ನಿಸರ್ಗ ನಿರ್ಮಿತ ‘ಕಲಿಕಾ ಕಾನು’. ಇಲ್ಲಿ ಮಕ್ಕಳು ಗಿಡ, ಮರ, ವನಜೀವಿಗಳ ಜೊತೆ ಪುಸ್ತಕದೊಳಗಿನ ಪಾಠ ಓದುತ್ತಾರೆ, ಬಳ್ಳಿ ಹಿಡಿದು ಆಟವಾಡುತ್ತಾರೆ. ಪರಿಸರದೊಂದಿಗೆ ಅನುಸಂಧಾನ ನಡೆಸುತ್ತಾರೆ.

ನೈಸರ್ಗಿಕ ಕಾಡಿನ ಎರಡು ಎಕರೆ ಪ್ರದೇಶದಲ್ಲಿ ಕಲಿಕಾ ಕಾನು ರೂಪುಗೊಂಡಿದೆ. ಅಲ್ಲಿನ ಜೀವ ಪರಿಸರವೇ ಮಕ್ಕಳ ಅಧ್ಯಯನ ವಸ್ತು. ಸಸ್ಯಗಳಲ್ಲಿ ನಡೆಯುವ ದ್ಯುತಿಸಂಶ್ಲೇಷಣ ಕ್ರಿಯೆ, ಭಾಷ್ಪವಿಸರ್ಜನೆ, ಮರಗಳ ಬೆಳವಣಿಗೆ, ಕಾಡುಹಣ್ಣು, ಮಣ್ಣುಗುಬ್ಬಿ ಇವೆಲ್ಲ ಈ ಶಾಲೆಯ ಮಕ್ಕಳಿಗೆ ಪಠ್ಯದಲ್ಲಿರುವ ಅಮೂರ್ತ ಚಿತ್ರಗಳಲ್ಲ. ಎಲ್ಲವನ್ನೂ ಪ್ರಾಯೋಗಿಕವಾಗಿ ಕಲಿತಿರುವ ಮಕ್ಕಳು, ಅರಳು ಹುರಿದಂತೆ ಪಟಪಟನೆ ಅದರ ವಿವರಣೆ ಕೊಡುತ್ತಾರೆ.

ಅಲ್ಲೇ ಇದ್ದ ಸಸ್ಯವೊಂದನ್ನು ತೋರಿಸಿ ಇದೇನೆಂದು ಕೇಳಿದೆ. ವಿವರಣೆ ಕೊಡಲು ಪುಟಾಣಿಗಳ ನಡುವೆ ಪೈಪೋಟಿಯೇ ಏರ್ಪಟ್ಟಿತ್ತು. ಅಲ್ಲಿದ್ದ ಗುರಿಗೆಗಳ ಬಗ್ಗೆ ಬಾಲಕ ವಿವೇಕ ಹೇಳುತ್ತಿದ್ದರೆ, ತುಸು ಮುಂದೆ ನಿಂತಿದ್ದ ಹರ್ಷಿತಾ, ಮುಂದಿನದನ್ನು ತಿಳಿಸಲು ಚಡಪಡಿಸುತ್ತಿದ್ದಳು.

ಕಾಡಿನ ನಾಡಿಮಿಡಿತವನ್ನು ಅರಿತ ಡಾಕ್ಟರಂತೆ, ಹೆಜ್ಜೆ ಹೆಜ್ಜೆಗೂ ಒಂದೊಂದು ವಿಸ್ಮಯವನ್ನು ಗುರುತಿಸುತ್ತ, ಪರಿಸರ ಪ್ರಯೋಗಶಾಲೆ ಪರಿಚಯಿಸುವ ಮಕ್ಕಳ ಪರಿ ದಿಗ್ಬ್ರಮೆ ಹುಟ್ಟಿಸುತ್ತದೆ. ಇಲ್ಲಿ ಕಲಿಯುವ ಪ್ರತಿ ಮಗು ಸರಾಸರಿ 35ರಿಂದ 40 ಮರಗಳನ್ನು ಗುರುತಿಸುತ್ತದೆ.

‘ಒಂದರಿಂದ ಏಳನೇ ತರಗತಿವರೆಗಿನ ಪರಿಸರಕ್ಕೆ ಸಂಬಂಧಿಸಿದ ಪಠ್ಯಾಂಶಗಳನ್ನು ಕಲಿಕಾ ಕಾನಿನಲ್ಲಿ ಅಧ್ಯಯನಕ್ಕೆ ಅಳವಡಿಸಲಾಗಿದೆ. ವಿಜ್ಞಾನ ವಿಷಯವಷ್ಟೇ ಅಲ್ಲ, ಭಾಷೆ, ಸಮಾಜ ವಿಜ್ಞಾನ ಪಾಠಗಳಲ್ಲಿ ಬರುವ ಪರಿಸರ ವಿಚಾರಗಳನ್ನು ಮಕ್ಕಳು ಇಲ್ಲಿ ತಿಳಿದುಕೊಳ್ಳುತ್ತಾರೆ. ಪರಿಸರ ವಿಜ್ಞಾನ ತರಗತಿಗಳು ಮರದ ನೆರಳಿನಲ್ಲೇ ನಡೆಯುತ್ತವೆ. ನೆಲದ ಜ್ಞಾನ, ಪರಿಸರ ವಿಜ್ಞಾನ ಎರಡನ್ನೂ ಒಟ್ಟಿಗೆ ಕಲಿಯುವ ಮಕ್ಕಳಲ್ಲಿ ಪ್ರಶ್ನಿಸುವ, ತರ್ಕಿಸುವ ಮನೋಭಾವ ಬೆಳೆಯುತ್ತದೆ. ಪಾಠದ ವಿಷಯಗಳು ದೃಷ್ಟಿಗೆ ನಿಲುಕದ ಕಾಲ್ಪನಿಕ ಸಂಗತಿಗಳಲ್ಲ, ಅವು ನಮ್ಮ ಬದುಕಿನ ಭಾಗ ಎಂಬುದನ್ನು ಮಕ್ಕಳಿಗೆ ತಿಳಿಸುವುದೇ ಕಲಿಕಾ ಕಾನಿನ ಮುಖ್ಯ ಆಶಯ’ ಎಂದು ಶಾಲೆಯ ಪರಿಸರ ಅಧ್ಯಯನದ ಪರಿಕಲ್ಪನೆಗೆ ಬೆನ್ನೆಲುಬಾಗಿರುವ ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ ಹೇಳುತ್ತಿದ್ದರು.

ಇಂಗ್ಲಿಷ್‌ ಸಲೀಸು

ಈ ಶಾಲೆ ಅಚ್ಚರಿಯ ಆಗರ. ಪ್ರತಿ ಹೆಜ್ಜೆಯಲ್ಲೂ ಒಂದೊಂದು ಕುತೂಹಲವನ್ನು ಅನಾವರಣಗೊಳಿಸುತ್ತಾರೆ ಮಕ್ಕಳು. ಶಾಲೆಯ ವಿಶೇಷತೆಗಳ ಬಗ್ಗೆ ಮಾಹಿತಿ ನೀಡುವವರು ಕೂಡ ಮಕ್ಕಳೇ. ಕನ್ನಡದಷ್ಟೇ ಸಲೀಸಾಗಿ ಇಂಗ್ಲಿಷ್ ಮಾತನಾಡುವ ಇವರು, ಇಂಗ್ಲಿಷಿನಲ್ಲೇ ಶಾಲೆಯನ್ನು ಪರಿಚಯಿಸುತ್ತಾರೆ.

ಇಂಗ್ಲಿಷ್ ಕಾರ್ನರ್‌ನಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪೀಕಿಂಗ್ ಸ್ಕಿಲ್‌ ಬೆಳೆಸುವ ಮಾದರಿಗಳು, ಉಚ್ಛಾರ ಸ್ಪಷ್ಟಗೊಳಿಸುವ ಪದಗಳು, ಚಿತ್ರಪಟಗಳು, ಕತೆಗಳು ಇವೆ. ಸಮಾಜ ವಿಜ್ಞಾನ ಕೊಠಡಿಯಲ್ಲಿ 70ಕ್ಕೂ ಹೆಚ್ಚು ನಕಾಶೆಗಳಿವೆ. ಸಾಕ್ಷಾತ್ ವರದಿ ನೀಡಿದಷ್ಟೇ ಸುಲಭದಲ್ಲಿ ಮಕ್ಕಳುರಸ್ತೆ, ರೈಲ್ವೆ ಮಾರ್ಗ, ನದಿಗಳ ಬಗ್ಗೆ ಮಾತನಾಡುತ್ತಾರೆ. ಪ್ರಯೋಗಾಲಯದ ಮಧ್ಯೆ ವಿಜ್ಞಾನ ಕ್ಲಾಸ್ ನಡೆಯುತ್ತದೆ.

‘ಎಲ್ಲ ಶಾಲೆಲಿ ಗಣಿತವನ್ನ ಬೋರ್ಡ್ ಮೇಲೆ ಬಿಡಿಸ್ತಾರೆ. ನಮ್ ಶಾಲೆಲಿ ಗಣಿತ ಪಾರ್ಕ್ ಮಾಡಿದಾರೆ. ನಾವು ವೃತ್ತ, ತ್ರಿಭುಜ, ಕೋನ ಎಲ್ಲದನ್ನೂ ನೋಡಿ ಕಲಿತೇವೆ. ಕಲಿಕಾ ಕಾನಿಗೆ ಹೋಗುದಂತೂ ಮತ್ತೂ ಖುಷಿ. ನಮ್ಮೂರ ಗುಡ್ಡ ಎತ್ತರ ಉಂಟು ಹೇಳಿ ಎಲ್ಲರೂ ಹೇಳ್ತಿದ್ರು. ನಾವು ಅದನ್ನ ಶಾಲೆಯ ಟೊಫೊಗ್ರಫಿ ನಕಾಶೆಲಿ ನೋಡಿದಾಗ್ಲೆ ನಮಗೆ ಗೊತ್ತಾದದ್ದು’ ಎಂದು ಮುದ್ದು ಮಾತಿನಲ್ಲಿ ಹೇಳಿದಳು ಧನ್ಯಾ.

ಅಂಗಳದಲ್ಲಿ ಭಾರತ ದೇಶ, ಕರ್ನಾಟಕ ರಾಜ್ಯ, ಉತ್ತರ ಕನ್ನಡ ಜಿಲ್ಲೆ, ಸಿದ್ದಾಪುರ ತಾಲ್ಲೂಕು, ಉಂಬಳಮನೆ–ಬಿದ್ರಮನೆ ಗ್ರಾಮದ ಟೊಫೊಗ್ರಫಿಯಿದೆ. ತಂಬಿಗೆಯಲ್ಲಿ ನೀರು ತಂದ ಬಾಲಕ ಕರ್ನಾಟಕದ ನಕ್ಷೆಗೆ ಸುರಿದು ರಾಜ್ಯದಲ್ಲಿ ಹರಿವ ನದಿಗಳನ್ನು ದಿಕ್ಕನ್ನು ಪರಿಚಯಿಸಿದ. ಪ್ರವೀಣ ಹೆಗಡೆ ಕೊಡುಗೆ ನೀಡಿರುವ ಬೃಹತ್ ಗ್ಲೋಬ್, ಜಲಾನಯನ ಪ್ರದೇಶ ಮಾದರಿ, ಮಳೆ ನೀರು ಇಂಗುಗುಂಡಿ, ಎರೆಹುಳು ಗೊಬ್ಬರ ತಯಾರಿಕೆ, ಬಯೊಗ್ಯಾಸ್, ತರಕಾರಿ ಹಿತ್ತಲು ಎಲ್ಲದಕ್ಕೂ ಮಕ್ಕಳೇ ರೂವಾರಿಗಳು.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯೊಂದು ಕೌತುಕದ ಕೇಂದ್ರವಾಗಿ ರೂಪುಗೊಂಡಿದ್ದು ಸರ್ಕಾರದ ವಿಶೇಷ ಅನುದಾನದಿಂದಲ್ಲ, ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗಡೆ, ಇಂಗ್ಲಿಷ್ ಶಿಕ್ಷಕಿ ಸಂಶಿಯಾ, ಸಮಾಜ ವಿಜ್ಞಾನ ಶಿಕ್ಷಕ ವಿ.ಟಿ.ಹೆಗಡೆ, ವಿಜ್ಞಾನ ಶಿಕ್ಷಕ ಜಿ.ಎಂ.ನಾಯ್ಕ ಹಾಗೂ ಊರವರು, ಬಾಲಚಂದ್ರ ಸಾಯಿಮನೆ ಅವರ ಕಳಕಳಿಯಿಂದ, ನೆಲಮೂಲದ ಜ್ಞಾನ ಉಳಿಸುವ ತುಡಿತದಿಂದ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT